Saturday 2 June, 2012

ಶೇವಗೆ ಉಪಕರಣ - Shevage Upakarana


ಶೇವಗೆ ಉಪಕರಣ   

ಸಾವಗೆ ಮುಟ್ಟಿ- 





                  ಇದು ಅಡುಗೆ ಮನೆಯಲ್ಲಿ ಸಾವಗೆ-ಸೇವಗೆ ತಯಾರಿಸುವ ಹಳೆಯ ಉಪಕರಣ. ಈ ಹಿಂದೆ ಹಬ್ಬ-ಹರಿದಿನಗಳಲ್ಲಿ, ಮದುವೆ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಸೇವಗೆ ತಯಾರಾಗುತ್ತಿತ್ತು. ಸಾವಿರಾರು ಜನರಿಗೆ ಸೇವಗೆ ಊಟ ಬಡಿಸಲಾಗುತ್ತಿತ್ತು. ಬತ್ತ ಬೆಳೆಯುವ ಕರಾವಳಿಯ ಜನರು ಅಕ್ಕಿಯ ಹಿಟ್ಟಿನಿಂದ ಇದನ್ನುತಯಾರಿಸುತ್ತಿದ್ದರು. 


                  ಬೆಲ್ಲಸೇರಿಸಿದ ಕಾಯಿ ಹಾಲು ಅಂದರೆ ತೆಂಗಿನ ಕಾಯಿಯ ಹಾಲಿನ[ರಸದ] ಜೊತೆ ಇದನ್ನು ಸೇವಿಸುತ್ತಿದ್ದರು. ಚಟ್ನಿ, ಪಲ್ಯದ ಜೊತೆಗೂ ಸೇವಿಸುವದಿತ್ತು. 
 ಮದುವೆಯ ಒಂದು ಅಂಗವಾದ ನೆಂಟರೂಟದ ಸಂದರ್ಭದಲ್ಲಿ ಮದುಮಗನು ತನ್ನ ಗೆಳೆಯರ ಜೊತೆಗೆ  ಮಾವನ ಮನೆಗೆ ಬಂದಿರುವಾಗ ಅವನಿಗೆ ಅವನ ಗೆಳೆಯರಿಗೆ ಮದುಮಗಳ ತವರಿನ ಯುವಕ ಯುವತಿಯರು ತಬ್ಬಿಬ್ಬು ಮಾಡುತ್ತಿದ್ದರು.  ಸಾವಗೆ ಒತ್ತುವ ಸಂದರ್ಭವನ್ನು ಇದಕ್ಕಾಗಿ ಅವರು ಬಳಸುವದಿತ್ತು. ಮದುಮಗನನ್ನು ಕರೆದು ಸಾವಗೆ ಒತ್ತಿ ಒತ್ತಿ ನಮ್ಮ ಕೈ ಸೋತಿವೆ. ಸಹಾಯ ಮಾಡು ಅಳಿಯ ರಾಯಾ ಎಂದು ಆಮಂತ್ರಿಸುತ್ತಿದ್ದರು. ಆತ ಇದೇನು ಮಹಾ ಎಂದು ಕೊಳ್ಳುತ್ತ  ಠೀವಿಯಿಂದ ಮುಂದೆ ಬಂದು ಸಾವಗೆ ಒತ್ತಿದರೆ ಸಾವಗೆ ಕೆಳಗಿಳಿಯುತ್ತಲೇ ಇರಲಿಲ್ಲ. ಅವನ ಗೆಳೆಯರೂ ಕೈಗೂಡಿಸುತ್ತಿದ್ದರು. ಅದರೂ ಸಾವಗೆ ಕೆಳಗಿಳಿಯುತ್ತಲೇ ಇರಲಿಲ್ಲ.  ಅವನ ಬಳಿಯ ಹೆಣ್ಣು ಮಕ್ಕಳು  ಪಿಸಿ ಪಿಸಿ ನಗುತ್ತಿದ್ದರು. ಆಗ ಹಿರಿಯ ಮುದುಕಿಯೊಬ್ಬಳು ಮುಂದೆ ಬಂದು ಹೊಸ ಅಳಿಯನನ್ನು ಯಾಕೆ ಗೋಳು ಹೊಯ್ದು ಕೊಳ್ಳುತ್ತೀರೇ? ಎನ್ನುತ್ತ ಮುಟ್ಟಿಯ ಕೈಯನ್ನು ಎತ್ತಿ ಒರಳಿನಲ್ಲಿ ತನ್ನ ಕೈ ಹಾಕಿ ರೂಪಾಯಿಯ ನಾಣ್ಯವೊಂದನ್ನು ಹೊರ ತೆಗೆಯುತ್ತಿದ್ದಳು. ಮತ್ತೆ ನಗುವಿನ ಅಲೆ ಹೊಮ್ಮುತ್ತಿತ್ತು.



No comments:

Post a Comment