Tuesday 12 June, 2012

ನಮ್ಮಗಿಡ ಮರಬಳ್ಳಿಗಳು- ಮಜ್ಜಿಗೆ ಹುಲ್ಲು-lemon grass




ನಮ್ಮ ಗಿಡ ಮರ ಬಳ್ಳಿಗಳು  ಈ ಮಾಲಿಕೆಯಲ್ಲಿ ಮಕ್ಕಳಿಗಾಗಿ ಬರೆದ ಸಸ್ಯ ಮಾಹಿತಿ ಇದೆ. 

೩ ಮಜ್ಜಿಗೆ ಹುಲ್ಲಿನ ಗಿಡ-  Cymbopogon citratus-lemon grass)

ಇದರ ಕುಟುಂಬ ಗ್ರಾಮಿನೀ.. ವೈಜ್ಞಾನಿಕ ಹೆಸರು : ಸಿಂಬೋಪೊಗನ ಸಿಟ್ರಾಟಿಸ್. ಇದಕ್ಕೆ ಲೇಮನ್ ಗ್ರಾಸ್ ಇಂಗ್ಲಿಷ) ತಕ್ರತ್ರಣ (ಸಂಸ್ಕೃತ)
ಗವತೀಚಹ(ಮರಾಠಿ)ಎಂಬಹೆಸರುಗಳಿವೆ.ಇದಕ್ಕಿರುವ ಇನ್ನೊಂದು ಹೆಸರು ನೀರುಳ್ಳಿ ಹುಲ್ಲು.  ನೀರುಳ್ಳಿ ಎಂದರೆ ನೀರು ನೀರಾಗಿರುವ ಅತಿಸಾರ ರೋಗ. ಮಜ್ಜಿಗೆ ಹುಲ್ಲು ಈ ರೋಗದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಇದನ್ನು 'ನೀರುಳ್ಳಿ ಹುಲ್ಲು' ಎಂದು ಉ.ಕ ಕರಾವಳಿಯ ಜನರು ಗುರುತಿಸುತ್ತಾರೆ. ಬೆಕ್ಕು ನಾಯಿಗಳು ತಮಗೆ ಅಜೀರ್ಣವಾದಾಗ ಹುಲ್ಲನ್ನು ತಿಂದು  ತಮ್ಮ ರೋಗ ನಿವಾರಣೆ ಮಾಡಿಕೊಳ್ಳುತ್ತವೆ ಅಥವಾ ಮಜ್ಜಿಗೆ ಹುಲ್ಲಿನ ಗಿಡವನ್ನು ಹುಡುಕಿಕೊಂಡು ಹೋಗುತ್ತವೆ. ನಮ್ಮ ದೇಶದ ಪಶ್ಚಿಮ ಘಟ್ಟದಕಾಡುಗಳಲ್ಲಿ ಇದು ದೊರಕುತ್ತದೆ. ಇದರ ಮದ್ದಿನ ಗುಣವನ್ನು ಬಲ್ಲವರು ತಮ್ಮ ಹಿತ್ತಲಿನಲ್ಲಿ ಇದನ್ನು ಬೆಳೆದುಕೊಳ್ಳುತ್ತಾರೆ. ಇದರ ಸುವಾಸನೆಗೆ ಮೆಚ್ಚಿ ಜಗತ್ತಿನ ಅನೇಕ ದೇಶಗಳು ಇದನ್ನು ಬೆಳೆಯುತ್ತಿವೆ.

ಮಜ್ಜಿಗೆ ಹುಲ್ಲು ಬತ್ತದ ಹುಲ್ಲಿನಂತೆ ಕಾಣುತ್ತದೆ. ಪೊದೆಯಂತೆ ಹುಲ್ಲುಗಳು ಹರಡಿಕೊಂಡಿರುತ್ತವೆ. ಬುಡವನ್ನು ಅಗೆದಾಗ ಗಡ್ಡೆಯಂತಹ ಭಾಗ ಕಾಣುತ್ತದೆ. ಈ ಗಡ್ಡೆಯನ್ನು ಉದ್ದಕ್ಕೆ ಸೀಳಿದಾಗ ಗಿಡಗಳು ಬೇರ್ಪಡುತ್ತವೆ. ಬೇರ್ಪಟ್ಟ ಸಸಿಯನ್ನು ಅದಕ್ಕೆ ಅಂಟಿಕೊಂಡಿರುವ ಗಡ್ಡೆಯೊಂದಿಗೆ ನೆಟ್ಟರೆ ಹೊಸ ಗಿಡ ಹುಟ್ಟುತ್ತದೆ.
ಇದರ ಎಲೆಗಳನ್ನು  ನೀರು, ಕಷಾಯ, ತಂಬುಳಿ ಮುಂತಾದ ಅಡುಗೆಯ ರೂಪದಲ್ಲಿ ಸೇವಿಸಲಾಗುತ್ತಿದೆ.ಮಜ್ಜಿಗೆ ಹುಲ್ಲಿನ ನೀರು ಕಷಾಯ, ತಂಬುಳಿಗಳಲ್ಲಿ ಮದ್ದಿನ ಗುಣವಿದ್ದರೂ ಇವು ಸಿದ್ಧಗೊಂಡಾಗ ಮದ್ದೆನಿಸುವುದಿಲ್ಲ. ಇವು ಅಪ್ಪಟ ಆಹಾರವಾಗಿ ಬದಲಾಗುತ್ತವೆ. ಅಜೀರ್ಣ, ಹೊಟ್ಟಯುಬ್ಬರ, ಅತಿಸಾರವಿದ್ದಾಗ ಇದು ಮದ್ದಿನಂತೆಯೂ ಗುಣಮುಖರಾಗುತ್ತಿರುವವರಿಗೆ ಪುಷ್ಟಿದಾಯಕವಾಗಿಯೂ, ನಿರೋಗಿಗಳಿಗೆ ಆಹಾರದಂತೆಯೂ ಪರಿಣಾಮ ಬೀರುತ್ತದೆ.

ನೀರು : ನಾಲ್ಕು ಕಪ್ ನೀರನ್ನು ಕುದಿಸಿ ಕೆಳಗಿಡಿರಿ. ಹತ್ತು ಎಲೆಗಳನ್ನು ಮತ್ತು ಅರ್ಧ ಚಮಚ ಜೀರಿಗೆಯನ್ನು ಅರೆಬರೆ ಜಜ್ಜಿ ಕೆಳಗಿಳಿಸಿದ ನೀರಿಗೆ ಹಾಕಿ ಮುಚ್ಚಿಡಿರಿ.  ಐದು ನಿಮಿಷ ಬಿಟ್ಟು ನೀರನ್ನು ಸೋಸಿಕೊಂಡು ಒಂದೆರಡು ಕಾಳು ಉಪ್ಪು ಸೇರಿಸಿ ಮನಸ್ಸು ಬಯಸುವಷ್ಟು ಕುಡಿಯಿರಿ. ಇದು ದಣಿದ ದೇಹ ಮನಸ್ಸುಗಳಿಗೆ ಮುದ ನೀಡುತ್ತದೆ. ಸಾಮಾನ್ಯ ಅತಿಸಾರವಿರುವಾಗ ಐದೈದು ನಿಮಿಷಕ್ಕೊಮ್ಮೆ ದೇಹ ಬೇಡಿದಷ್ಟು ಕುಡಿಯುತ್ತಿರಿ.ಇದನ್ನು ಬಿಸಿಯಾಗಿ ಅಥವಾ ತಣ್ಣಗಾಗಿಸಿ ಕುಡಿಯಬಹುದು. ರೋಗ ತೀವ್ರವಾಗಿರುವಾಗ ವೈದ್ಯರ ಸಲಹೆ ಪಡೆಯಿರಿ.

ಹಾಲ್ನೀರು : ಪರಿಮಳ ಸೂಸುವ ಈ ಬಿಸಿ ನೀರಿಗೆ ಉಪ್ಪನ್ನು ಸೇರಿಸದೆ ಹಾಲು, ಸಕ್ಕರೆ ಬೆರೆಸಿರಿ, ಅಥವಾ ಕಾಸಿ ತಣಿಸಿದ ಈ ನೀರಿಗೆ ಲಿಂಬೆ ರಸ ಸಕ್ಕರೆ ಬೆರೆಸಿ ಅತಿಥಿಗಳಿಗೆ ಕೊಟ್ಟರೆ ಅದರ ರುಚಿಗೆ ಅವರು ತಲೆದೂಗುತ್ತಾರೆ.

ಕಷಾಯ: ಆರೆಂಟು ಮಜ್ಜಿಗೆಹುಲ್ಲು, ಅರ್ಧ ಚಮಚ ಜೀರಿಗೆ ಜೊತೆಗೆ ಆರೆಂಟು ಕಾಳು ಮೆಣಸು ಅಥವಾ ಚಿಕ್ಕ ಒಣಶುಂಠಿ ಕುಟ್ಟಿರಿ. ನಾಲ್ಕು ಕಪ್ ನೀರು ಹಾಕಿ ಕುದಿಸಿರಿ. ಸುಮಾರು ಮೂರು ಕಪ್ ನೀರು ಉಳಿದಾಗ ಸೋಸಿ ಕುಡಿಯಿರಿ.         ಅಜೀರ್ಣದ ಹೊಟ್ಟನೋವು, ನೆಗಡಿ, ನೆಗಡಿಯ ಜ್ವರ, ಅಜೀರ್ಣದ ಜ್ವರ, ವಾಂತಿಗಳಿಗೆ ಈ ಕಷಾಯ ಸೇವನೆ ಪಥ್ಯ. ಇದರ ಆಕರ್ಷಕ ಪರಿಮಳವು ಮನಸ್ಸನ್ನು ಸಮಾಧಾನಪಡಿಸಿ ವಾಂತಿಯನ್ನು ದೂರ ಮಾಡುತ್ತದೆ. 
ತಂಬುಳಿ: ಮಜ್ಜಿಗೆ ಹುಲ್ಲಿನ  ಆರು ಎಲೆಗಳನ್ನು ಕೊಚ್ಚಿಕೊಳ್ಳಿರಿ.. ಇದಕ್ಕೆ ಹೆಬ್ಬೊಟ್ಟಿನಷ್ಟು ಶುಂಠಿ ಹಾಗೂ ಒಂದು ಕಪ್ಪು ಕಾಯಿಸುಳಿ ಕೂಡಿಸಿ ಅರೆದು ಸೋಸಿ ಒಂದು ಕಪ್ ದಪ್ಪ ಕಡೆದ ಮಜ್ಜಿಗೆ 1 ಚಮಚ ಉಪ್ಪು ಸೇರಿಸಿರಿ. ಮಜ್ಜಿಗೆ ಹುಲ್ಲಿನ ಪರಿಮಳ ಉಳಿಸಿಕೊಳ್ಳುವ ಸಲುವಾಗಿ ಬೇರೆ ಮಸಾಲೆ ಪರಿಕರಗಳನ್ನು ಬಳಸುವ ಅವಶ್ಯವಿಲ್ಲ.
ಮಜ್ಜಿಗೆ ಹುಲ್ಲಿನ ತಂಬುಳಿ, ಜ್ವರಹಾರಿ, ಜಂತುನಾಶಕ, ಜೀರ್ಣಕಾರಿ. ಎಂದು ಅನುಭವಿಗಳು ತಿಳಿಸುತ್ತಾರೆ. ಆದ್ದರಿಂದ ರೋಗಿಗಳಷ್ಟೇ ಅಲ್ಲ, ನಿರೋಗಿಗಳೂ ಇದನ್ನು ಆಗಾಗ ಊಟದಲ್ಲಿ ಬಳಸುತ್ತಾರೆ. ರೋಗ ಅತಿಯಿದ್ದಾಗ ಮಜ್ಜಿಗೆ ಹುಲ್ಲಿನ ಕಷಾಯ, ಮಜ್ಜಿಗೆ ಹುಲ್ಲಿನ ರಸ ಸೇವನೆ ಮಾಡಿ ರೋಗ ತಹಬಂದಿಗೆ ಬಂದ ಬಳಿಕ ಇಡಿಯ ಊಟವನ್ನು ಈ ತಂಬುಳಿಯಲ್ಲಿ ಉಣ್ಣಬಹುದು.

 ಮುದ್ದಾದ ಈ ಗಿಡವು ನಿಮ್ಮ ಮನೆಯಂಗಳದಲ್ಲಿರಲಿ ಅಥವಾ ನಿಮ್ಮಹೂ ಕುಂಡದಲ್ಲಿ ಇದಕ್ಕೆ ಸ್ಥಾನ ಕೊಡಿರಿ.

No comments:

Post a Comment