Friday 8 June, 2012

ನಮ್ಮ ಗಿಡ ಮರ ಬಳ್ಳಿಗಳು-ಬಜೆ


ನಮ್ಮ ಗಿಡ ಮರ ಬಳ್ಳಿಗಳು ಈ ಮಾಲಿಕೆಯಲ್ಲಿ ಮಕ್ಕಳಿಗಾಗಿ ಬರೆದ ಸಸ್ಯ ಮಾಹಿತಿಯನ್ನು ಪ್ರಕಟಿಸಲಾಗುವುದು. 

೧. ಬಜೆ    Acorus calamus- sweet flag

    ಸಂಸೃತದಲ್ಲಿ ವಚಾ. ಕೊಂಕಣಿ ಮತ್ತು ಮರಾಠಿಯಲ್ಲಿ ವೆಖಂಡ, ಇಂಗ್ಲಿಷ್ನಲ್ಲಿ ಸ್ವೀಟ್ ಫ್ಲೆಗ ಎಂಬ ಹೆಸರುಗಳಿಂದ ಪರಿಚಿತವಾಗಿರುವ ಕನ್ನಡದ ಬಜೆ ಪ್ರಸಿದ್ಧ ಔಷಧ ಗಿಡವಾಗಿದೆ.
    ಭಾರತದಲ್ಲಿ ಬಜೆ ಗಿಡವನ್ನು ಬಹು ಜನರು ನೋಡಿರಲಾರರು. ಅದರೆ ಇಲ್ಲಿ ಬಜೆ ಗಿಡದ ಬೇರನ್ನು ನೋಡಿರದ ತಾಯಂದಿರು ಅಜ್ಜಿಯರು ಹೆಚ್ಚು ಜನ ಇದ್ದಿರಲಾರರು. ಮಗು ಬಾಳಂತಿಯರು ಮನೆಯಲ್ಲಿರುವಾಗ ಈ ಅಜ್ಜಿಯರಿಗೆ ತಾಯಂದಿರಿಗೆ ಮನೆಯ ಮದ್ದಿನ ಜೊತೆ ಬಜೆ ಗಡ್ಡೆ ಇಲ್ಲದಿದ್ದರೆ ಏನೋ ಕೊರತೆಯೆನಿಸುತ್ತದೆ. ಇತ್ತೀಚೆಗೆ ಹೆರಿಗೆಗಳು ಅಸ್ಪತ್ರೆಯಲ್ಲಿ ನಡೆಯುತ್ತಿವೆಯಾದರೂ ವೈದ್ಯರು ಬಾಳಂತಿಗೆ ಮಗುವಿಗೆ ಮನೆ ಮದ್ದಿನ ಅವಶ್ಯಕತೆಯಿಲ್ಲವೆಂದು ಹೇಳುತ್ತಿರುವರಾದರೂ ಬಾಳಂತಿಯ ಮದ್ದಿನಲ್ಲಿ ಹಾಗೂ ಶಿಶುಗಳ ಮದ್ದಿನಲ್ಲಿ ಹಿರಿಯರು ಬಜೆಯ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇವರು ಇದರ ಮೇಲಿಟ್ಟಿರುವ ನಂಬಿಕೆ ಈ ಗಿಡದ ಕಾಂಡದ ಭಾಗವು ನೆಲದಲ್ಲಿರುತ್ತದೆ. ಇದನ್ನು ಬೇರು, ಗಡ್ಡೆ ಎಂದು ಗುರುತಿಸುತ್ತಾರೆ. ಇದು ಪರಿಮಳಭರಿತವಾಗಿರುತ್ತದೆ.

   ಬಜೆಯ ಬೇರನ್ನು ಮನೆ ಮದ್ದಿನಲ್ಲಿ ಬಳಸುತ್ತಾರೆ. ಇದನ್ನು ಮದ್ದಿನ ರೂಪದಲ್ಲಿ ಸೇವನೆ ಮಾಡುವದರಿಂದ ಮಕ್ಕಳ ಬುದ್ಧಿಶಕ್ತಿ, ಮಾತಾಡುವ ಶಕ್ತಿ ,ಹೆಚ್ಚಾಗುತ್ತದೆ ಯೆಂದು ತಿಳಿಯಲಾಗುತ್ತದೆ. ಶ್ರೀಗಂಧ ತೇಯುವ ಗಂಧದ ಕಲ್ಲಿನ ಮೇಲೆ ನಾಲ್ಕಾರು ಹನಿ ಕಾದಾರಿದ ನೀರನ್ನಾಗಲೀ ಒಂದೆರಡು ಹನಿ ಜೇನುತುಪ್ಪವನ್ನಾಗಲಿ  ಬಿಟ್ಟು ,ಅಲ್ಲಿ ಬಜೆಯ ಬೇರನ್ನು ನಾಲ್ಕು ಸುತ್ತು ತೇದು ಶಿಶುಗಳಿಗೆ ನೆಕ್ಕಿಸುತ್ತಾರೆ. ದೊಡ್ಡವರಿಗೆ ಈ ಪ್ರಮಾಣ ತುಸು ಹೆಚ್ಚಿರುತ್ತದೆ. ಇದನ್ನು ನೀರಿನಲ್ಲಿ ತೇದು ನಾಲಿಗೆಗೆ ಸವರಿದಾಗ ನಾಲಿಗೆ ಮಿರಿಮಿರಿ ಗುಟ್ಟುತ್ತದೆ. ಆದ್ದರಿಂದ ಇದನ್ನು ಹೆಚ್ಚು ತಿನ್ನಲಾಗುವದಿಲ್ಲ. ಬುದ್ಧಿ ಹೆಚ್ಚಾಗಲಿ ಎಂದು ಹಾರೈಸಿ ಒಂದೇ ಬಾರಿಗೆ ಹೆಚ್ಚು ತಿನ್ನಬಾರದು.

   ಇದು ಸಾಮಾನ್ಯ ಜ್ವರ  ತಲೆನೋವು ಕಫ ಅಜೀರ್ಣಾದಿ ರೋಗಗಳಲ್ಲಿಯೂ ಪರಿಣಾಮ ಕಾರಿಯಾಗಿದೆ. ನೆಗಡಿಯ ಜ್ವರ ತಲೆನೋವು ಮೈನೋವು ಇದ್ದಾಗ ಇದನ್ನು ನೀರಿನಲ್ಲಿ ತೇದು ಹಣೆಗೆ ಮೈಗೆ ಹಚ್ಚಿಕೊಳ್ಳುವದರಿಂದ  ಮನಸ್ಸಿಗೆ. ಮೈಗೆ ಹಿತವೆನಿಸುತ್ತದೆ. ಕಫವಿದ್ದಾಗ ಒಂದು ಚಿಟಿಕೆ ಯಷ್ಟು ಇದರ ಬೇರಿನಪುಡಿಯನ್ನು ಅಥವಾ ಅಷ್ಟೇ ಪ್ರಮಾಣದಲ್ಲಿ ಇದರ  ತೇದ ಕಲಕವನ್ನು ಜೇನಿನೊಂದಿಗೆ ಸೇವಿಸುವದು , ಅಜೀರ್ಣವಿದ್ದಾಗ  ಚಿಟಿಕೆಯಷ್ಟು ಈ ಬೇರಿನಪುಡಿ ಮತ್ತು ಶುಂಠಿ ಪುಡಿಯನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವದು ಮನೆಮದ್ದಿನ ಒಂದು ಕ್ರಮವಾಗಿದೆ. 

  ಗಾಯ ಹುಣ್ಣುಗಳ ಮೇಲೆ ಬಜೆ ಬೇರಿನ ಪುಡಿಯನ್ನು ಉದುರಿಸುವದರಿಂದ ಪರಿಣಾಮ ಉತ್ತಮವಾಗಿರುತ್ತದೆ.ತಲೆ ಕೂದಲುದುರುವದು ತಲೆ ಹುಣ್ಣು ಮುಂತಾದ ಸಮಸ್ಯೆಗಳಿದ್ದಲ್ಲಿ ಇದು ಅವುಗಳನ್ನು ನೀಗಲು ಶಕ್ತವಾಗಿದೆಯೆಂದು ತಿಳಿದವರ ಅಭಿಪ್ರಾಯವಾಗಿದೆ. ತಲೆ ಸ್ನಾನದ ಪುಡಿಯೊಂದಿಗೆ ಬಜೆ ಬೇರಿನ ತುಸು ಪುಡಿಯನ್ನು ಸೇರಿಸಿಕೊಳ್ಳುವದು ಇದಕ್ಕೆ ಪರಿಹಾರವಾಗಿದೆ. ಇದು ಸೊಳ್ಳೆ ನಿರೋಧಕವೂ ಅಹುದು. ಮಕ್ಕಳು ಮಲಗುವ ಕೋಣೆಯಲ್ಲಿ ಸೊಳ್ಳೆಗಳು ಒಳಗೆ ಬರುವ ಮೊದಲೇ ತುಸು ಬಜೆ ಬೇರಿನ ಪುಡಿಯನ್ನು ಸಿಂಪಡಿಸಿದರೆ ಸೊಳ್ಳೆಗಳು ಒಳಗೆ ಬರಲು ಮನಸ್ಸು ಮಾಡುವದಿಲ್ಲ. ಇತರ ಕ್ರಿಮಿ ಕೀಟಗಳು ರೋಗಾಣುಗಳು ದೂರ ಸರಿಯುತ್ತವೆ. ಇದರ ಇನ್ನೂ ಅನೇಕ ಪ್ರಯೋಜನಗಳನ್ನು ಹಿರಿಯರಿಂದ ಕೇಳಿ ತಿಳಿಯಿರಿ. ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಹುಡುಕಿ ಓದಿರಿ. ಒಣ ಬೇರುಗಳು ನಾರು ಬೇರುಗಳ ಅಂಗಡಿಗಳಲ್ಲಿ ದೊರೆಯುತ್ತವೆ ಗಮನಿಸಿರಿ. ಇದು ಜವಳು ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ.ಇದನ್ನು ಭಾರತದಲ್ಲಿ ಬೇಸಾಯ ಮಾಡಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. 

    ನೀವು ಮಾಡಬಹುದಾದ ಒಂದು ಉತ್ತಮ ಕೆಲಸವೆಂದರೆ ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಟ್ಟು ಬೆಳೆಸುವದು. ಇದರ ಹಸಿ ಬೇರಿನ ಚಿಕ್ಕ ತುಂಡನ್ನು ಸಂಪಾದಿಸಿರಿ. ಮಣ್ಣಿನ ಮಡಕೆಯಲ್ಲಿ ಮಣ್ಣು ಗೊಬ್ಬರ ತುಂಬಿ ಬೇರನ್ನು ನೆಡಿರಿ. ಸುಂದರ ಅಚ್ಚ ಹಸಿರು ಬಣ್ಣದ, ಸುವಾಸನೆಯ, ಎಲೆಗಳ  ಈ ಗಿಡವನ್ನು ಬೆಳೆಸಿ ಆನಂದಿಸಿರಿ




1 comment:

  1. ಅತ್ಯುಪಯುಕ್ತ ಮಾಹಿತಿ ಮತ್ತು ಮೌಲ್ಯ ಹೊಂದಿದ ಲೇಖನ. ಧನ್ಯವಾದಗಳು.

    ReplyDelete