Friday 7 September, 2012

ನಮ್ಮಗಿಡ ಮರ ಬಳ್ಳಿಗಳು-ಮೆಹಂದಿ


ಮದರಂಗಿ ಮೇಹಂದಿ
Lawsonia inermis,Linn.Lythraceae   

ಮದರಂಗಿ ಇದರ ತವರು ಅರಬ್ ಮತ್ತು ಪರ್ಸಿಯಾ ದೇಶವೆಂಬ ಅಭಿಪ್ರಾಯಗಳಿವೆ. ಇದರ ಬಳಕೆ ಉತ್ತರ ಭಾರತದಲ್ಲಿ ಹೆಚ್ಚು ರೂಢಿಯಲ್ಲಿದೆ. ಇದು ದಕ್ಷಿಣ ಭಾರತದಲ್ಲಿಯೂ ಜನಪ್ರಿಯವಾಗುತ್ತಿದೆ. ಇದಕ್ಕೆ ಕನ್ನಡದಲ್ಲಿ ಗೋರಂಟಿ ಎಂಬ ಹೆಸರಿರುವದಾದರೂ ಇದರ ಮದರಂಗಿ, ಮೆಹಂದಿ ಎಂಬ ಹೆಸರುಗಳು ಹೆಚ್ಚು ಜನಪ್ರಿಯವಾಗಿವೆ. ಇಂಗ್ಲಿಷಿನ ಹೆನ್ನಾ ಎಂಬ ಹೆಸರೂ ಇಲ್ಲಿ ಬಳಕೆಯಲ್ಲಿದೆ. ಸಸ್ಯ ಶಾಸ್ತ್ರಜ್ಞರು ಇದನ್ನು ಲೊಸೊನಿಯ ಇನೆರ್ಮಸ್  ಎನ್ನುತ್ತಾರೆ.


    ಈ ಗಿಡವು ತೀರ ಎತ್ತರಕ್ಕೆ ಬೆಳೆಯದೆ ಹಿಂಡಾಗಿ ಪಸರಿಸುತ್ತದೆ. ಇದನ್ನು ಸುತ್ತ ಕತ್ತರಿಸಿ ನಮಗೆ ಇಷ್ಟವಾಗುವ ಆಕಾರ ಕೊಟ್ಟು ಬೆಳಸಬಹುದು. ಈ ಗಿಡದ ಎಲೆಗಳು ಹುಣಸೆ ಎಲೆಗಿಂತ ತುಸು ದೊಡ್ಡವು. ಅಂಚು ಬೋಳಾಗಿರುತ್ತದೆ. ಎಲೆ ಎದುರು ಬದುರಾಗಿರುತ್ತವೆ. ಬಿಳಿ ಮತ್ತು .ತುಸು ಗುಲಾಬಿ ಬಣ್ಣದ ಹೂಗಳು ದೊಡ್ಡ ದೊಡ್ಡ  ಗೊಂಚಲುಗಳಲ್ಲಿ ನೂರಾರು ಸಂಖ್ಯೆಯಲ್ಲಿರುತ್ತದೆ. ಕಾಯಿ, ಹಣ್ಣುಗಳು ಬೋಳಾಗಿದ್ದು ವಾಯು ವಿಳಂಗದ ಫಲವನ್ನು ಹೋಲುತ್ತವೆ. ಫಲದಲ್ಲಿ ಬಹುಬೀಜಗಳಿರುತ್ತವೆ. ಮೇಹಂದಿ ಎಲೆ ದೇಹದ ಬಾಹ್ಯ ಶೃಂಗಾರಕ್ಕೆ ಬಣ್ಣ ನೀಡುತ್ತದೆ. ಮಹಿಳೆಯರು ಇದರ ಎಲೆಯನ್ನು ದೇಹಾಲಂಕಾರದ ನಕ್ಷೆಯ ಬಣ್ಣಕ್ಕಾಗಿ ಬಳಸುವದು ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ. ಹಸಿ ಬೀಜ ಬಿತ್ತಿ ಅಥವಾ ಟೊಂಗೆ ನೆಟ್ಟು ಗಿಡವನ್ನು ಬೆಳೆಸಿಕೊಳ್ಳಬಹುದು.

   ಎಲೆಯನ್ನು ಅರೆದು ಉಗುರು ಹಸ್ತ ಪಾದಗಳಿಗೆ ಹಚ್ಚುತ್ತಾರೆ. ಮೆಹಂದಿ ಎಲೆಯ ಕಲಕಕ್ಕೆ ಲಿಂಬು ರಸ ಚಹದ ಅರ್ಕ ಸೇರಿಸಿ ನಾಲ್ಕಾರು ತಾಸಿನ ಬಳಿಕ ಮೈಗೆ ಉಗುರಿಗೆ ಹಚ್ಚಿಕೊಂಡರೆ ಬಣ್ಣ ಚೆನ್ನಾಗಿ ಮೂಡುತ್ತದೆ. ಮೇಹಂದಿ ಪುಡಿ ಪೇಸ್ಟಗಳಲ್ಲಿಯೂ ಕೃತ್ರಿಮ ರಾಸಾಯನಿಕ ದ್ರವ್ಯಗಳ ಬಳಕೆಯಾಗತೊಡಗಿದೆ. ಆದ್ದರಿಂದ ಮನೆಯಲ್ಲಿ ನೈಸರ್ಗಿಕವಾಗಿ ರೀತಿಯಲ್ಲಿ ತಯಾರಿಸಿದ ಕಲಕವನ್ನು ಬಳಸುವದು ಉತ್ತಮ.
 
ಮೆಹಂದಿಯು ಬಾಹ್ಯ ಅಲಂಕಾರವನ್ನು ಹೆಚ್ಚಿಸುತ್ತದೆಯೆಂದು  ಬಹುಜನರಿಗೆ ಗೊತ್ತು. ಆದರೆ ನಮ್ಮ ಶರೀರಕ್ಕೆ ಆತಂರಿಕವಾಗಿ ಸೌಂದರ್ಯ ನೀಡುವ ಅಂದರೆ ಆರೋಗ್ಯವನ್ನು ಹೆಚ್ಚಿಸುವ ಬಹುದೊಡ್ಡ ಗುಣವನ್ನು ಇದು ಹೊಂದಿದೆ ಎಂಬುದು ಬಹು ಜನರಿಗೆ ಗೊತ್ತಿಲ್ಲ.
 
ಈ ಎಲೆಯನ್ನು ಬಳಸಿ ಬಹಳ ಸುಲಭವಾಗಿ ಸ್ನಾನದ ಪುಡಿಯನ್ನು ತಯಾರಿಸಿಕೊಳ್ಳಬಹುದಾಗಿದೆ. ನೆರಳಿನಲ್ಲಿ ಒಣಗಿಸಿದ ಮೇಹಂದಿ ಎಲೆ ಅಳಲೆ ಕಾಯಿಯ ಸಿಪ್ಪೆಯ ಪುಡಿ, ನೆರಳಲ್ಲಿ ಒಣಗಿಸಿದ ಬೇವಿನೆಲೆ, ಮಾವಿನೆಲೆ ಹಾಗೂ ದಾಳಿಂಬ ಮೊಗ್ಗುಗಳು ಇವನೆಲ್ಲ ಕೂಡಿಸಿ, ಕುಟ್ಟಿ ವಸ್ತ್ರ ಗಾಳಿತ ಮಾಡಿಕೊಳ್ಳಿ, ಸ್ನಾನಕ್ಕೆ ಸಬಕಾರ ಬದಲು ಬಳಸಿರಿ. ಇದಕ್ಕೆ ತುಸು ಅಟ್ಟಲಕಾಯಿ ಮತ್ತು ಸೀಗೆಕಾಯಿ ಪುಡಿ ಸೇರಿಸಬಹುದು.
 
ಬಿಸಿಲಿನಲ್ಲಿ ತಿರುಗಾಡುವದರಿಂದ ಬರುವ ತಲೆನೋವಿಗೆ ಹಾಗೂ ಉತ್ತಮ ನಿದ್ದೆಗೆ ಒಂದು ಹಿಡಿ ಮೇಹಂದಿ ಹೂವನ್ನು ತೊಳೆದು ರಾತ್ರಿ ಒಂದು ಗ್ಲಾಸು ಬಿಸಿ ನೀರಿನಲ್ಲಿ ಹಾಕಿ ಮುಚ್ಚಿಡಿ. ಪ್ರತಿದಿನ ಮುಂಜಾನೆ ಇದನ್ನು ಸೋಸಿ ಕುಡಿಯಿರಿ. ಈ ಚಹಕ್ಕೆ ಒಂದು ಚಮಚ ಜೇನು ಅಥವಾ ಬೆಲ್ಲ ಸೇರಿಸಬಹುದು. ಜ್ವರದ ನೀರಡಿಕೆಗೂ ಇದು ಮದ್ದು. ಒಂದು ಹಿಡಿ ಹೂವನ್ನು ನೀರಿನಲ್ಲಿ ಅರೆದು ತಲೆಗೆ ಹಾಗೂ ಕುತ್ತಿಗೆ ಸುತ್ತ ಲೇಪಿಸಿರಿ ಬಿಸಿಲಿನ ತಲೆನೋವು ದೂರ.
 
ಒಂದು ಹಿಡಿ ಹೂವನ್ನು ನೀರಿನಲ್ಲಿ ಅರೆದು ಸೋಸಿ ಕಲ್ಲುಸಕ್ಕರೆ ಸೇರಿಸಿ ಅನೇಕ ದಿನ ಕುಡಿಯಿರಿ. ದೇಹಕ್ಕೆ ತಂಪೆ ಎನಿಸುತ್ತದೆ. ಹೂವನ್ನು ತಂಪಿನಲ್ಲಿ ಒಣಗಿಸಿಟ್ಟುಕೊಳ್ಳಿರಿ.
ಒಂದು ಚಮಚ ಮೇಹಂದಿ ಬೀಜದ ಪುಡಿಗೆ 1 ಚ. ಬೆಲ್ಲ ಅಥವಾ ಜೇನು ಸೇರಿಸಿ ಕುಡಿದರೆ ತಲೆನೋವು ದೂರವಾಗುತ್ತದೆ. ಒಣ ಅಥವಾ ಹಸಿ ಎಲೆಯನ್ನು ನೀರಿನಲ್ಲಿ ಕುದಿಸಿ ನೀರನ್ನು ಅರ್ಧಕ್ಕಿಳಿಸಿರಿ, ಸೋಸಿದ ಈ ನೀರಿನಿಂದ ಅನೇಕ ಬಾರಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧ ಮತ್ತು ಹುಣ್ಣು ಗುಣವಾಗುತ್ತದೆ. ಒಂದರಿಂದ ಎರಡು ಚಮಚ ಎಲೆಯ ರಸವನ್ನು ದಿನಕ್ಕೆ ಮೂರು ನಾಲ್ಕು ಬಾರಿ ಹಾಲಿನ ಜೊತೆ ಸೇವಿಸಿದರೆ ಅಶಕ್ತತೆಯ ತಲೆ ನೋವು ದೂರವಾಗುತ್ತದೆ. ಒಂದು ಕಪ್ಪು ಅಂದರೆ 100ಗ್ರಾಂ ಎಣ್ಣೆಗೆ ಒಂದೂವರೆ ಹಿಡಿ ಎಲೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಬೇಯುವ ಸಪ್ಪಳ ನಿಂತು ಎಲೆಗಳು ಗರಗರಿಯಾದಾಗ ಇಳಿಸಿರಿ. ಸೋಸಿ ಅಥವಾ ಸೋಸದೆ ಬಾಟ್ಲಿಯಲ್ಲಿ ತುಂಬಿಡಿರಿ. ಪ್ರತಿದಿನ ತಲೆಗೆ ಹಾಕಿ ತಲೆ ತಿಕ್ಕಿರಿ. ತಲೆ ನೋವು ದೂರ, ಕೂದಲು ಆರೋಗ್ಯಕರ.

  ಮೇಹಂದಿ ಎಲೆ, ಲಿಂಬು, ಚಹದ ಅರ್ಕ ಕೂಡಿಸಿ ಅರೆದು ತಲೆಗೆ ಹಚ್ಚಿ, ಮೂರು ತಾಸಿನ ಬಳಿಕ ತೊಳೆಯಿರಿ. ಕೂದಲ ಬಿಳಿ ಬಣ್ಣ ಬದಲಾಗುತ್ತದೆ. ಕರಿ ಕೂದಲು ಆರೋಗ್ಯವನ್ನು ಪಡೆಯುತ್ತದೆ, ಉದ್ದವನ್ನು ಹೆಚ್ಚಿಸಿಕೊಳ್ಳುತ್ತದೆ.

ಎಲೆಯನ್ನು ಹೆಚ್ಚು ನೀರು ಸೇರಿಸದೆ ಗಟ್ಟಿಯಾಗಿ ಅರೆದು ಅದನ್ನು ತೊಳೆಗಳಾಗಿ ತಟ್ಟಿ ಮುಚ್ಚಿದ ಕಣ್ಣಿನ ಮೇಲಿಟ್ಟು ಪಟ್ಟಿ  ಕಟ್ಟಿ ಮಲಗಿದರೆ ಕಣ್ಣು ಕೆಂಪಾಗುವದು ದೂರವಾಗುತ್ತದೆ.
 
ಕಾಮಾಲೆಯಲ್ಲಿ ಮುನ್ನಾ ದಿನ ಮಣ್ಣಿನ ಮಡಕೆಯಲ್ಲಿ ತಯಾರಿಸಿಟ್ಟ ಎಲೆಯ ಅರ್ಕವನ್ನು ಕುಡಿಯಿರಿ
ಮುಂಜಾನೆ ಯವಕ್ಷಾರ ಎರಡು ಗ್ರಾಂ ತಿಂದು ಬಳಿಕ ಮಣ್ಣಿನ ಮಡಕೆಯಲ್ಲಿ ತಯಾರಿಸಿಟ್ಟ ಎಲೆಯ ಅರ್ಕವನ್ನು ಅನೇಕ  ದಿನ ಕುಡಿಯಿರಿ. ಮೂತ್ರದ ಕಲ್ಲು ಹೊರ ಬರುತ್ತದೆ.
 
ಮನೆಯ ಮುಂದೆ ಒಂದು ಮೇಹಂದಿ ಗಿಡವಿದ್ದರೆ ಅದೆಷ್ಟು ಉಪಯುಕ್ತವೆಂಬುದನ್ನು ಅರಿತಿರಲ್ಲವೇ?








 





No comments:

Post a Comment