Sunday 16 September, 2012

ನಮ್ಮ ಗಿಡ ಮರ ಬಳ್ಳಿಗಳು-ಟೊಮೆಟೊ



ಟೊಮೆಟೊ  Solanum lycopersicum



      ಇಂದು ಭಾರತೀಯ ಅಡುಗೆಯಲ್ಲಿ ಹುಣಸೆ ಹಣ್ಣನ್ನು ಹಿಂದಕ್ಕೆ ಹಾಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಟೊಮೆಟೊ ಮೂಲತಃ ಕಾಡಿನ ಬೆಳೆ. ಇದು ದಕ್ಷಿಣ ಅಮೇರಿಕಾ ಮೂಲದ್ದೆಂದು ತಿಳಿಯಲಾಗುತ್ತದೆ,
ಸ್ಪೆನಿಷ್ ವಸಾಹತು ಶಾಹಿಗಳಲ್ಲೊಬ್ಬರಾದ ಕಾರ್ಟೆಜ ಎಂಬುವವರು ತಮಗಾಗಿ ವಸಾಹತು ನೆಲೆಗಳ ಹುಡುಕಾಟದಲ್ಲಿದ್ದಾಗ ಈ ಹಣ್ಣನ್ನು ಅಲ್ಲಿ ಕಂಡರು. ಕೆಂಪು ಕೆಂಪಾದ ಈ ಹಣ್ಣು ತಿನ್ನಲು ಯೋಗ್ಯವಾದದ್ದೆಂದು ಅಲ್ಲಿಯ ಜನರಿಗೆ ಮೊದಲು ಗೊತ್ತಿರಲಿಲ್ಲ. ಅವರು ಇದನ್ನು ವಿಷದ ಹಣ್ಣು ಎಂದು ತಿಳಿದಿದ್ದರು.
    ಕಾರ್ಟೆಜ ಈ ಹಣ್ಣನ್ನು ಗಮನಿಸಿದರು. ಅದರ ಸುತ್ತಮುತ್ತಲ ಜೀವಿಗಳು ಹಕ್ಕಿಗಳು ಈ ಹಣ್ಣನ್ನು ತಿಂದು ಬದುಕುತ್ತಿರುವುದನ್ನು ಪ್ರತ್ಯಕ್ಷವಾಗಿ ಕಂಡುಕೊಂಡರು., ಅದನ್ನು ಈತ ನಾಯಿ, ಬೆಕ್ಕುಗಳಿಗೆ ಹಾಕಿದಾಗ ಈ ಹಣ್ಣನ್ನು ತಿಂದು ಅವು ಸುಖವಾಗಿದ್ದವು. ಬಳಿಕ ಅವರು ಹಾಗೂ ಅವರ ಸಹಚರರು ಅದನ್ನು ಮೆಲ್ಲುತ್ತ ಅದರ ಸವಿಯನ್ನು ಅನುಭವಿಸಿದರು, ಬಳಿಕ ಅಲ್ಲಿನ ಜನರಿಗೆ ಇದನ್ನು ಪರಿಚಯಿಸಿದರು.

       ಕಾರ್ಟೆಜ ಸ್ಪೆನಿಷ್ ವಸಾಹತುಗಳಲ್ಲಿ ಇದರ ಪ್ರಚಾರ ಮಾಡಿದರು. ಇದರಿಂದಾಗಿ 1521ರ ಸುಮಾರಿಗೆ ಯುರೋಪಕ್ಕೆ ಅಲ್ಲಿಂದ 1540 ಸುಮಾರಿಗೆ ಏಶಿಯಾ ಖಂಡಕ್ಕೆ ಬಂದ ಇದು ನಮ್ಮ ದೇಶದ ನಮ್ಮ ನಾಡಿನ ವಿಶಿಷ್ಟ ತರಕಾರಿಯಾಗಿ ನಮ್ಮ ನಡುವೆ ಇದೆ.

     ಇಂದು ಇದು ಇಡೀ ಜಗತ್ತಿಗೆ ಪರಿಚಿತವಾಗಿದೆ. ಜಗತ್ತಿನಲ್ಲಿ ಸುಮಾರು 7500 ಬಗೆಯ ಟೊಮೆಟೊ ತಳಿಗಳಿದ್ದು  ಕಾಮನ ಬಿಲ್ಲಿನಲ್ಲಿರುವ ಎಲ್ಲ ಬಣ್ಣಗಳಲ್ಲಿ ಇವು ಕಂಡುಬರುತ್ತವೆ.  ( ಕರ್ನಾಟಕದಲ್ಲಿ ಬಳ್ಳಿ ಟೊಮೆಟೊ ತಳಿಯಿದೆ; ಇದು ದೇಸಿಯಾಗಿರಬಹುದು) ನಮ್ಮ ದೇಶದಲ್ಲಿ ಬೆಳೆಯುವ ಟೊಮೆಟೊಗಳು ಸುಂದರ ಕೆಂಪು  ಬಣ್ಣದಿಂದ ಕಂಗೊಳಿಸುತ್ತವೆ. 

     ಟೊಮೆಟೋ ಇಂದು ಕೇವಲ ತರಕಾರಿಯಾಗಿ ಉಳಿದಿಲ್ಲ. ಅದು ಶ್ರೇಷ್ಟ ಮಟ್ಟದ ಔಷಧವಾಗಿ ತನ್ನ ಗುಣವನ್ನು ತೋರಿಸಿ ಕೊಟ್ಟಿದೆ. ಅದ್ದರಿಂದ ಇದನ್ನು ತರಕಾರಿಯಂತೆಯಲ್ಲದೆ ನಾವು ತಿನ್ನುವ ಹಣ್ಣುಗಳ ಗುಂಪಿನಲ್ಲಿ ಸೇರಿಸಿಕೊಂಡು ಗೌರವದೊಂದಿಗೆ ಇತರ  ಹಣ್ಣುಗಳಂತೆ ಇದನ್ನು ಮೆಲ್ಲುವ ಯೋಗ್ಯ ಕಾಲ ಒದಗಿ ಬಂದಿದೆ. 
 
ಸುಲಭ ಬೆಲೆಗೆ ಸಿಗುವ ಟೊಮೆಟೋ ಹಣ್ಣು ಕ್ಯಾನ್ಸರಿನಂತಹ ಭಯಾನಕ ರೋಗ ನಿರೋಧಕವಾಗಿದೆ. ಸ್ತನ ಕ್ಯಾನ್ಸರನ್ನು ತಡೆಯ ಬಲ್ಲದು. ಇದರಲ್ಲಿ ಕ್ಯಾನ್ಸರ ನಿರೋಧಕವಾದ ಎಂಟಿ ಒಕ್ಸಿಡೆಂಟ್ ಲಿಕೋಪಿನ ಎಂಬ ಅಂಶ ಹೆಚ್ಚಿದೆ. ಇದು ಈ ತರಕಾರಿಗೆ ಆಕರ್ಷಕ ಕೆಂಪು ಬಣ್ಣವನ್ನು ನೀಡಿದೆ.
ಇದು ಬೊಜ್ಜು ನಿರೋಧಕ. ಪ್ರತಿ ಮುಂಜಾನೆ ಉಪಹಾರಕ್ಕಿಂತ ಮುಂಚೆ ಒಂದೆರಡು ಟೊಮೊಟೋ ತಿಂದು ಬೊಜ್ಜನ್ನು ಇಳಿಸಿಕೊಳ್ಳಬಹುದು. ಹಣ್ಣು ಹೃದಯವನ್ನು ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ  ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ನೀಗುತ್ತದೆ
       
ಇದರಲ್ಲಿ  ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ. ಬಿ. 1, ಬಿ. 2, ಮತ್ತು ಸಿ. ಎ ಮಿಟಾಮಿನಗಳಿವೆ..
ಟೊಮೆಟೋ ರಸ ಹೊಟ್ಟೆಯನ್ನು ಸ್ವಚ್ಛಮಾಡುತ್ತದೆ. ಇದು ಅಜೀರ್ಣ, ವಾಯು, ಮಲಬದ್ಧತೆ ನಿವಾರಕ. ಟೊಮೆಟೊದಲ್ಲಿರುವ ಕಬ್ಬಿಣ ಸುಲಭ ಪಚನಕಾರಿ, ಆದ್ದರಿಂದ ರಕ್ತಹೀನತೆಯಿದ್ದವರು ಟೊಮೆಟೋ ತಿನ್ನಬೇಕು. ಮಕ್ಕಳಿಗೆ ಕಿತ್ತಳೆ ರಸಕ್ಕಿಂತ ಟೊಮೆಟೋ ರಸ ಉತ್ತಮ. ಟೊಮೆಟೋ ರಸಕ್ಕೆ ಬೆಲ್ಲ, ಕಲ್ಲು,ಸಕ್ಕರೆ,ಜೇನು, ಖರ್ಜೂರ ರಸಗಳಲ್ಲೊಂದನ್ನು ಸೇರಿಸಬೇಕು. ಸಾಮಾನ್ಯ ಜ್ವರವಿದ್ದಾಗ ಟೊಮೆಟೋ ಜ್ಯೂಸ ಸಾರುಗಳನ್ನು ಆಹಾರವಾಗಿ ಕೊಡಬಹುದು. ಕಣ್ಣಿನ ತೊಂದರೆಗೆ ಟೊಮೆಟೋ ರಸ ಸೇವಿಸಬೇಕು. ಇದನ್ನು ಹಸಿಯಾಗಿ ತಿನ್ನುವುದು ಯೋಗ್ಯ. ಊಟದ ಹೊತ್ತಿಗೆ ಸವತೆ, ಗಜರಿ, ಉಳ್ಳಾಗಡ್ಡೆಗಳ ತಾಳೆಗಳ ಜೊತೆ ಟೊಮೆಟೋ ತಾಳೆಗಳನ್ನು ಇಟ್ಟು ಅಲಂಕರಿಸಲಾಗುತ್ತದೆ. ಟೊಮೆಟೋ ಗೊಜ್ಜು, ಕೋಸಂಬರಿ ಸಾರುಗಳು ಅಡುಗೆ ಮನೆಯಲ್ಲಿ ತಯಾರಾಗುತ್ತವೆ. ಟೊಮೆಟೋ ಕೆಚಪ್ಪು,  ಟೊಮೆಟೋ ಜಾಮುಗಳನ್ನು ಮನೆಯಲ್ಲಿ ಮಕ್ಕಳೂ ಸಿದ್ಧಪಡಿಸಿ ತಿನ್ನಬಹುದು. ಚಿಪ್ಪಿಕಲ್ಲು ಶೆಟ್ಲಿ ಸಾರುಗಳಿಗೆ  ಟೊಮೆಟೊ ಹಣ್ಣಿನ ಬೆರಕೆ ಮಹತ್ತರ ರುಚಿ ಕೊಡುತ್ತದೆ. ಹೀಗೆ ನಮ್ಮ ನಾಡಿನಲ್ಲಿ ಟೊಮೆಟೊ ಹಣ್ಣಿನಿಂದ ನೂರಾರು ರೀತಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ.  

  ಇಂತಹ ಅಪೂರ್ವ ಟೊಮೆಟೊ ಗಿಡವನ್ನು ಮಕ್ಕಳೂ  ಬೆಳೆಯಬಹುದು. ಶಾಲೆಯಲ್ಲಿ ಶಿಕ್ಷಕರು ಪ್ರತಿ ಮಕ್ಕಳಿಗೊಂದರಂತೆ ಗಿಡ ನೆಡಿಸಿ ಪ್ರತಿ ಗಿಡಕ್ಕೆ ಉದ್ದ ನುಕ್ಕಿ ಕೋಲು ನೆಟ್ಟು ಗೇಣೆತ್ತರದ ರಟ್ಟಿನ ಬೋರ್ಡ ತೂಗಿಸಿ ಅದರ ಮೇಲೆ ಅವರವರ ಹೆಸರು ಬರೆಯಿಸಿ ಈ ಗಿಡ ಬೆಳೆಯಲು ಪ್ರೇರಣೆ ನೀಡಿ ಜಗತ್ತಿಗೆ ಮಾದರಿಯಾಗಬಾರದೆ?. ಒಂದು ಮಾತನ್ನು ಗಮನಿಸಿರಿ. ಟೊಮೆಟೊ ಗಿಡದ ಎಲೆದಂಟುಗಳು ಮನುಷ್ಯರಿಗೆ, ಪ್ರಾಣಿಗಳಿಗೆ ಸೇವನೆಗೆ ಯೋಗ್ಯವಲ್ಲ 

No comments:

Post a Comment