Wednesday 26 September, 2012

ಪ್ರಕಟಿತ ಪುಸ್ತಕಗಳು- ಜಾನಪದ ಲೇಖನ ಸಂಚಯ



ಜಾನಪದ ಲೇಖನ ಸಂಚಯ 2005 
ಕರಾವಳಿ ಜಾನಪದದ ಉಪಯುಕ್ತ ಆಕರ- ಡಾ.ಜಿ.ಆರ್.ತಿಪ್ಪೇಸ್ವಾಮಿ

     ಜಾಗತೀಕರಣ ಪ್ರಕ್ರಿಯೆಗೆ ಪರ್ಯಾಯವಾಗಿ ಜಾನಪದವನ್ನು ಅರ್ಥೈಸಿಕೊಳ್ಳುತ್ತಿರುವ  ದಿನಗಳಲ್ಲಿ ಶಾಂತಿ ನಾಯಕರ `ಜಾನಪದ ಲೇಖನ ಸಂಚಯ' ಹೊರಬಂದಿದೆ. ಇಲ್ಲಿನ ಹನ್ನೆರಡು ಬರಹಗಳಲ್ಲಿ ಬಹುಪಾಲು ಕಳೆದ ತೊಂಬತ್ತರ ದಶಕದಲ್ಲಿ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕರಾವಳಿ ಪ್ರದೇಶವನ್ನು ಕೇಂದ್ರವಾಗಿಸಿಕೊಂಡ ಕ್ಷೇತ್ರ  ಕಾರ್ಯ ಆಧಾರಿತ ಅಧ್ಯಯನದ ಫಲಿತಗಳಿವು. ಕೃಷಿ, ಅಡುಗೆ, ಕಲೆ, ದೈವ ಮುಂತಾದ ಅಲ್ಲಿಯ ಬದುಕಿನ ಬಹು ಮುಖ್ಯಭಾಗವೆನಿಸಿದ ಮೌಖಿಕ ಪರಂಪರೆಯ ಸಂಗತಿಗಳೆಲ್ಲ ಚರ್ಚೆಗೆ ಒಳಪಟ್ಟಿರುವುದರಿಂದ ಇಲ್ಲಿಯ ಪ್ರತಿಯೊಂದು ಬರಹವು ಶೋಧನಾತ್ಮಕ ಚೌಕಟ್ಟನ್ನು ಹೊಂದಿದೆ. 

ಕೃಷಿಕರ ದೀಪಾವಳಿಯನ್ನು ಕುರಿತು ಬರೆಯುವಾಗ ಶಾಂತಿ ನಾಯಕರು ಅದನ್ನು ಕೇವಲ ಆಚರಣೆಯಾಗಿ ನೋಡುವುದಿಲ್ಲ. ಆರೋಗ್ಯ ಮತ್ತು ಅನ್ನ ನೀಡುವ ಭೂಮಿಯನ್ನು ಪೂಜಿಸುವ ಹಿನ್ನೆಲೆಯ ಅರ್ಥಗಳನ್ನು ಸ್ಪಷ್ಟಪಡಿಸುತ್ತಾರೆ. ಒಗ್ಗರಣೆ, ಜಟಗ, ಕರಾವಳಿಯ ಪ್ರಾಣಿ ವಸತಿ, ನಾಡವರು , ರಂಗೋಲಿ, ಮಾಸ್ತಿ ಜಟಗಗಳ ಮತಾಂತರ , ನನ್ನಿ ಮುಂತಾದ ಬರಹಗಳಲ್ಲಿ ಪದ ನಿಷ್ಪತಿಯಿಂದ ಆರಂಭಗೊಂಡು ಅವುಗಳ ತಲಸ್ಪರ್ಶಿಯಾದ ಅರ್ಥ ಸ್ವರೂಪಗಳನ್ನು ಕಂಡುಕೊಳ್ಳುವ ಹಾದಿಯನ್ನು ಇಲ್ಲಿ ಗುರುತಿಸಬಹುದು. 

ಒಗ್ಗರಣೆ ಬಗೆಗಿನ ಲೇಖನದಲ್ಲಿ ಅಡುಗೆ ಕಲೆಯಲ್ಲಿ ಬಳಕೆಗೊಂಡಿರುವ ಪೊಡ್ಡಣಿಗೆ, ಅಗ್ಗರಣೆ, ವೊಗ್ಗರಣೆ,  ಅಗ್ಗರಿಸು, ಉಕ್ಕರಿಸು, ಒಗ್ಗರಿಸು ಮುಂತಾದ ತಾಂತ್ರಿಕ ಶಬ್ದಗಳನ್ನು ಕುರಿತ ಮಾಹಿತಿ ಇದೆ. ವಿಶೇಷವಾಗಿ ಸೂಪಶಾಸ್ತ್ರ ಹಾಗೂ ಲೋಕೋಪಕಾರ ಗ್ರಂಥಗಳನ್ನು ಆಧರಿಸಿ ಈ ಪದಗಳ ಅರ್ಥದ ಅನನ್ಯತೆಯನ್ನು ಗುರುತಿಸಿರುವ ಪ್ರಯತ್ನ ಮೆಚ್ಚುವಂತಹದು. 

 ಊರಿನ ರಕ್ಷಾ ದೇವತೆ ಎನಿಸಿದ ಜಟಿಗ ಕುರಿತ ಲೇಖನದಲ್ಲಿ ಜಟಿಗನ ಪರಿವಾರ, ಅದು ವೀರದೇವತೆ ಆದದ್ದು ಭೂತಾರಾಧನೆಗೂ ದೈವಾರಾದನೆಗೂ ಇರುವ ಸಂಬಂಧ ಸಂಸ್ಕೃತೀಕರಣಗೊಂಡ ರೀತಿಯನ್ನು ಚರ್ಚಿಸಲಾಗಿದೆ. ಜನಪದ ಸಾಹಿತ್ಯದಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳ ಪಾಠಾಂತರಗಳನ್ನು ಗುರುತಿಸಿ ಮೂಲ ಪಾಠದ ನಿಖರತೆಯನ್ನು ಪತ್ತೆ ಮಾಡುವಂತೆ ಜಾನಪದ ವಿಜ್ಞಾನಿ ಜಾನಪದ ಧರ್ಮ ದೇವರುಗಳಲ್ಲಿಯ ಪ್ರಾದೇಶಿಕ  ವೈಶಿಷ್ಟ್ಯ, ಪ್ರತಿಮೆಗಳ ರೂಪಾಂತರ ಧಾರ್ಮಿಕ ಸ್ಥಿತ್ಯಂತರಗಳನ್ನು ಗುರುತಿಸಿ ಅವುಗಳ ಮೂಲ ಅವಸ್ಥೆಯನ್ನು ಕಂಡುಹಿಡಿಯುವುದು ಅವಶ್ಯಕವಾಗಿದೆ. ಇಂಥ ಉದ್ದೇಶಗಳಿಗೆ ಪ್ರಸ್ತುತ ಬರಹ ಒತ್ತಾಸೆ ಆಗಬಲ್ಲದು. 
      ಕರಾವಳಿಯ ಪ್ರಾಣಿ ವಸತಿಯನ್ನು ಕುರಿತ ಬರಹವಾಗಿದ್ದರೂ ಕೃಷಿಯ ಕಲ್ಪನೆ -ಪ್ರಾಣಿ ಉಪಯೋಗದ ಬಗೆಗೂ ಸೂಕ್ತ ಮಾಹಿತಿ ನೀಡುತ್ತ ಪ್ರಾಣಿ ವಸತಿಯ ಪ್ರಾಚೀನ ಸ್ವರೂಪಗಳತ್ತ ಗಮನ ಸೆಳೆಯುತ್ತದೆ. ಕಟ್ಟಡ ಶೈಲಿ, ಕೊಟ್ಟಿಗೆ ರಚನೆಗಳು ಆರ್ಥಿಕ ಮೂಲವಾಗಿ ಕೆಲಸ ಮಾಡಿದ ರೀತಿ. ವಸತಿ ವ್ಯವಸ್ಥೆಯಲ್ಲಿ ಆದ ಸ್ಥಿತ್ಯಂತರಗಳನ್ನು ಇಲ್ಲಿ ದಾಖಲಿಸಲಾಗಿದೆ. ಕವಿರಾಜ ಮಾರ್ಗಕಾರ ಹೇಳುವ ನಾಡವರಿಗೂ ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿರುವ ನಾಡವರಿಗೂ ಸಂಬಂಧವಿದೆ ಎಂಬ ಪಂಡಿತರ ಪ್ರಸ್ತಾಪವನ್ನು ಕುರಿತಂತ `ನಾಡವರು' ಲೇಖನದಲ್ಲಿ ವಿವರಣೆ ಇದೆ. ಈ ಸಂಬಂಧದಲ್ಲಿ ಅಭಿಪ್ರಾಯ ಭೇದಗಳು ಮೂಡಬಹುದಾದರೂ ಉತ್ತರಕನ್ನಡದ ನಾಡವರ ಮೌಖಿಕ ಪರಂಪರೆ ತಿಳಿಸುವ ಅನುಭವ ಲೋಕದ ಮೂಲಕ ಅವರ ಪೂರ್ವದ ನೆಲೆಗಳನ್ನು ಶೋಧಿಸುವ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ. 
       ಉತ್ತರಕನ್ನಡ ಜಿಲ್ಲೆಯ ಸಮಗ್ರ ಬದುಕನ್ನು ಒಳಗೊಳ್ಳಬಹುದಾದ ಸಾಧ್ಯತೆಯಿಂದ ಹೊರತಾಗಿರುವ ಲೇಖನ ಎಂದರೆ `ಉತ್ತರಕನ್ನಡ ಜಿಲ್ಲೆಯ ಜನಪದ ಸಂಸ್ಕೃತಿ'. ಬದುಕಿನ ಒಂದೆರಡು ಎಳೆಗಳು ಮಾತ್ರ ಇಲ್ಲಿ ನುಸುಳಿರುವುದರಿಂದ ಲೇಖನಕ್ಕೆ ಸಮಗ್ರ ಸ್ವರೂಪ ದಕ್ಕಿಲ್ಲ. ಗಂಧದ ಕೆತ್ತನೆ, ಗಣಪತಿಯ ಕೆತ್ತನೆ, ಅಂತಹ ವಿಶಿಷ್ಟ ಕರಕುಶಲ ಕಲೆಗಳಿಗೆ ಹೆಸರಾದ ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನ ಕರಕುಶಲ ಕಲೆಯ ವೈಶಿಷ್ಟ್ಯಗಳನ್ನು ಉದ್ಯೋಗ ಬದಲಾವಣೆಯ ಪ್ರಕ್ರಿಯೆಗಳ ಹಿನ್ನೆಯಲ್ಲಿ ನಿರೂಪಿಸಲಾಗಿದೆ. 
         ಹಾಗೆಯೇ `ರಂಗೋಲಿ' ಕಲೆಯಲ್ಲಿನ ಆಧುನಿಕ ಪ್ರಕ್ರಿಯೆಗಳನ್ನು ಆ ಸಂಬಂಧವಾದ ಬರಹದಲ್ಲಿ ಗುರುತಿಸಲಾಗಿದೆ. ಕಲೆಯನ್ನು ಅರಿಯಲು ಸಹಾಯವಾಗುವ ಚಾರಿತ್ರಿಕ ದಾಖಲೆಗಳನ್ನು ಒದಗಿಸುವಾಗ ಇತರ ಆಧಾರಗಳನ್ನು ನೀಡಲಾಗದಿದ್ದರೂ ಜನಪದ ಕಥೆ, ಹಾಡು, ಒಗಟು ಮತ್ತು ನಂಬಿಕೆಗಳಲ್ಲಿ ವ್ಯಕ್ತವಾಗುವ ರಂಗೋಲಿಯ ಮಹತ್ವವನ್ನು ಕುರಿತು ಇಲ್ಲಿ ದಾಖಲಿಸಬೇಕಿತ್ತು. ಹಾಗೆಯೇ ಆಧುನಿಕ ಭಾರತದ ಉದ್ದಗಲಕ್ಕೂ ರಂಗೋಲಿ ಹರಡಿಕೊಂಡಿದೆ. ಬುಡಕಟ್ಟುಗಳು, ಹಿಂದುಗಳು, ಜೈನರು ಪಾರ್ಸಿಗಳು ತಮ್ಮ ಪರಂಪರಾಗತ ಧರ್ಮಾಚರಣೆಗಳ ಒಂದು ಅಂಗವಾಗಿ ರಂಗೋಲಿಯನ್ನು ರಚಿಸುತ್ತಿದ್ದಾರೆ. ಇದಕ್ಕೆ ತಕ್ಕ ನಿದರ್ಶನಗಳನ್ನು ಕಲೆಯ ಸಾಂದರ್ಭಿಕ ಮಹತ್ವವನ್ನು ನಿರೂಪಿಸಿದ್ದರೆ. ಲೇಖನಕ್ಕೆ ಸಮಗ್ರ ಸ್ವರೂಪ ಸಿದ್ದಿಸುತ್ತಿತ್ತು. 

      ` ಸಮಾಜ ಶಾಸ್ತ್ರೀಯ ಅಧ್ಯಯನ ನೆಲೆಯ ಜನಪದ ಆಟಗಳು' ಮಾಸ್ತಿ ಜಟಿಗಗಳ ಮತಾಂತರ. ನಮ್ಮ ಆಹಾರ ಪಾನೀಯಗಳು `ನನ್ನಿ' ಈ ಲೇಖನಗಳೂ ಸಮೃದ್ಧ ಮಾಹಿತಿಗಳಿಂದ ಕೂಡಿದ್ದು ಹೊಸ ಒಳ ನೋಟಗಳಿಗೆ ದಾರಿ ಮಾಡಿಕೊಡುತ್ತದೆ. `ನನ್ನಿ ಶಬ್ದದ ಅರ್ಥ ಸಾಧ್ಯತೆಗಳನ್ನು ಕಂಡುಕೊಳ್ಳಲು ಶಾಂತಿ ನಾಯಕರು ಅನುಸರಿಸುವ ಸಂಶೋಧನೆಯ ಹಾದಿ ಕುತೂಹಲಕಾರಿ.
         ದೀಪಾವಳಿ ಜಟಗ ಮುಂತಾದ ಆಚರಣೆಗಳನ್ನು ವೃಕ್ಷಾರಾಧನೆಯ ನೆಲೆಯಲ್ಲಿ ನೋಡುವ ರೀತಿ. ಪ್ರಾಣಿ ವಸತಿ ವ್ಯವಸ್ಥೆ ಮತ್ತು ಕರಕುಶಲ ಕಲೆಗಳನ್ನು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮೌಲಿಕತೆಯನ್ನು ಗುರುತಿಸುವ ರೀತಿ ಗಮನಾರ್ಹ. ಮೌಲಿಕ ಪರಂಪರೆ ಮತ್ತು ಲಿಖಿತ  ಪರಂಪರೆಯ ಸಂಗತಿಗಳನ್ನು ಒಟ್ಟೊಟ್ಟಿಗೆ ತರುವುದರ ಮೂಲಕ ಶಾಂತಿ ನಾಯಕರು ತಮ್ಮ ಬರಹಗಳಿಗೆ ಅಧಿಕೃತತೆ ಉಂಟಾಗಲು ಕಾರಣರಾಗಿದ್ದಾರೆ. ಎಲ್ಲ ಸಂಗತಿಗಳನ್ನು ಆದಷ್ಟು ಪ್ರಸ್ತುತಗೊಳಿಸುತ್ತ ಸಾಗುವ `ಜಾನಪದ ಲೇಖನ ಸಂಚಯ' ಕರಾವಳಿ ಜಾನಪದ ಹಾಗೂ ಅಲ್ಲಿಯ ಸಾಮಾಜಿಕ ಉಪಭಾಷೆಯ ಬಗೆಗೆ ಅಧ್ಯಯನ ಮಾಡುವವರಿಗೆ ಉಪಯುಕ್ತ ಆಕರವಾಗಬಲ್ಲದು.



No comments:

Post a Comment