Saturday 23 June, 2012

ನಮ್ಮ ಗಿಡ ಮರ ಬಳ್ಳಿಗಳು-ಕರಿಪೊಟ್ಲೆ ಹಣ್ಣು


ಕರಿಪೊಟ್ಲೆ ಹಣ್ಣು ( Solanum nigrum -Lenn-Black Night Shade)



       ಕರಿಪೊಟ್ಲೆ ಹಣ್ಣಿನ ಗಿಡವೆಂಬ ಹೆಸರು ಕರ್ನಾಟಕದ ಕನ್ನಡ ಕರಾವಳಿಯಲ್ಲಿ ಕೇಳಿ ಬರುತ್ತದೆ. ಕರ್ನಾಟಕದಲ್ಲಿ  ಈ ಗಿಡಕ್ಕೆ ಇನ್ನೂ ಅನೇಕ ಹೆಸರುಗಳಿವೆ.ಕಾಕಪೊಟ್ಲೆ, ಕಾಗೆ ಸೊಪ್ಪಿನ ಗಿಡ, ಕಾಕಮಾಚಿ,  ಕಾಚಿಸೊಪ್ಪು  ಇತ್ಯಾದಿ. ದಕ್ಷಿಣ ಕರ್ನಾಟಕದಲ್ಲಿ ಇದು ಗಣಿಕೆ ಸೊಪ್ಪು ಎಂಬ ಹೆಸರಿನಲ್ಲಿ ಪರಿಚಿತವಾಗಿರುತ್ತದೆ.ಇಂಗ್ಲಿಷಿನಲ್ಲಿ `ಬ್ಲಾಕ್ ನೈಟ್ ಶೇಡ್ ಎನ್ನುತ್ತಾರೆ. ಸೊಲ್ಯಾನಂ ನೈಗ್ರಂ ಎಂಬುದು ಇದರ ಸಸ್ಯ ಶಾಸ್ರ್ರೀಯ ಹೆಸರಾಗಿದೆ

       ಕರಿಪೊಟ್ಲೆ ಹಣ್ಣಿನ ಗಿಡವು ಬಿತ್ತದೆ ಬೆಳೆಯುವ ಚಿಕ್ಕ ಕಳೆ ಸಸ್ಯ. ಇದು ಭಾರತದ ಎಲ್ಲ ಕಡೆ ಕಂಡುಬರುತ್ತದೆ. ಮಳೆಗಾಲದಲ್ಲಿ ನಿಮ್ಮ ತೋಟದಲ್ಲಿ ಬೇಲಿ ಬದಿಯಲ್ಲಿ, ತಿಪ್ಪೆಯಲ್ಲಿ ತಂತಾನೆ ಹುಟ್ಟಿಕೊಂಡು ಹಣ್ಣು ಕಾಯಿ ಬಿಟ್ಟು ನಳನಳಿಸುತ್ತದೆ. ನೆಲದಲ್ಲಿ ನೀರಿನ ಹಸಿಯಿದ್ದರೆ ಇದು ಬೇಸಿಗೆಯಲ್ಲಿಯೂ ಸೊಂಪಾಗಿ ಬೆಳೆಯುತ್ತದೆ. ಹಣ್ಣುಗಳು ನೇರಳೆ ಬಣ್ಣದಲ್ಲಿರುತ್ತವೆ

 ಗಣಿಕೆ ಸೊಪ್ಪುಗಳಲ್ಲಿಯ ಆಹಾರ ಗುಣ ಔಷಧ ಗುಣವನ್ನು ತಿಳಿದುಕೊಂಡ ಹಿರಿಯರು  ಬಹುಕಾಲದಿಂದ ಈ ಗಿಡವನ್ನು ಅಡುಗೆಯಲ್ಲಿ ತರಕಾರಿ ಸೊಪ್ಪಾಗಿ ಬಳಸುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಬೆರಕೆ ಸೊಪ್ಪು ಮಾರಾಟ ಮಾಡುವವರು ದೊಡ್ಡದೊಡ್ಡ ಚೀಲಗಳಲ್ಲಿ ಗಣಿಕೆಸೊಪ್ಪನ್ನು ಚಿಕ್ಕ ಚಿಕ್ಕ ಬುಟ್ಟಿಗಳಲ್ಲಿ ಇದರ ಕಾಯಿಗಳನ್ನು ತುಂಬಿಕೊಂಡು ಮಾರಾಟಕ್ಕೆ ತರುತ್ತಾರೆ.  ಅಲ್ಲಿ ಸೊಪ್ಪು ಮತ್ತು ಕಾಯಿಗಳನ್ನು ಸಾರು ಹುಳಿ ಪಲ್ಯ ಬತ್ಸಾರು ಮಸ್ಸೊಪ್ಪುಗಳಲ್ಲಿ ಬಳಸಲಾಗುತ್ತದೆ. ಇದರ ಅಡುಗೆಯನ್ನು ಆಯಾ ಸಂದರ್ಭದಲ್ಲಿ ಮನೆ ಮದ್ದಿನಂತೆ ಬಳಸುತ್ತಾರೆ. ದೇಹದಲ್ಲಿ ರಕ್ತದ್ರವ ಕಡಿಮೆಯಿದ್ದಾಗ ಚಿಗುರಿನ ತಂಬುಳಿ ಮಾಡಿ ಕುದಿಸಿ ಅಥವಾ ತಂಪಾಗಿ ತಿಂಗಳಿಗೆ ಒಂದೆರಡು ವಾರ ಸೇವಿಸಬೇಕು. ಬಾಯಿಹುಣ್ಣು ಮಲ ಬದ್ಧತೆಯಿದ್ದಾಗ ಹರಿವೆ ಪಲ್ಯದಂತೆ ಇದರ  ಕುಡಿಗಳನ್ನು ಚಿವುಟಿ ಪಲ್ಯಮಾಡಿ  ಉಣ್ಣಬೇಕು ಎಂದು ಅವರು ತಿಳಿಸುತ್ತಾರೆ.


      ಕರಾವಳಿಯ ಜನರು ಇದನ್ನು ತರಕಾರಿಯಾಗಿ ಗುರುತಿಸುವುದು ಕಡಿಮೆ. ಕೆಲವರು ಇದರ ಎಲೆಯ ತಂಬುಳಿ ಮಾಡಿ ಉಣ್ಣುವದುಂಟು. ಮಕ್ಕಳು ಹಣ್ಣನ್ನು ತಿನ್ನುತ್ತಾರೆ.  


       ಹಣ್ಣುಗಳು ದೇಸಿ ತಳಿಯ ಟೊಮೆಟೊ ಹಣ್ಣಿನ ಗೊಂಚಲ ಹಾಗೆ ಕಾಣುತ್ತವೆ. ಆದರೆ ಆಕಾರದಲ್ಲಿ ಈ ಹಣ್ಣುಗಳು ಚಿಕಣಿಯಾಗಿದೆ. ಟೊಮೆಟೊ ಜೊತೆ ಹೋಲಿಸಿದರೆ ಗಲಿವರ ಲಿಲಿಪುಟ್ ಸಂಬಂಧ. ಕರಿಬಣ್ಣವೆಂದು ಗುರುತಿಸಲಾಗುವ ಕಡುನೀಲಿ ಬಣ್ಣದ ಕಾಳುಮೆಣಸಿನ ಗಾತ್ರದ ಹಣ್ಣುಗಳಲ್ಲಿ ಬೀಜಗಳು ತುಂಬಿರುತ್ತವೆ. ಒತ್ತಿದರೆ ಪಿಚಕ್ಕನೆ ಹಾರುತ್ತವೆ. ಪೊಟ್ಲೆ  ಹಣ್ಣಿನ ಗಿಡದಲ್ಲಿ  ಇನ್ನೊಂದು ಪ್ರಬೇಧವಿದ್ದು ಅದರ ಕಾಯಿ ತುಸು ಹಳದಿಯಾಗಿದ್ದು ಇದನ್ನು ದಕ್ಷಿಣ ಕರ್ನಾಟಕದಲ್ಲಿ ಬಿಳಿಗಣಿಕೆ ಎನ್ನುತ್ತಾರೆ. ಬಿಳಿಗಣಿಕೆ ಗಿಡದ ಎಲೆಗಳು ಕರಿ ಗಣಿಕೆಗಿಂತ ದೊಡ್ಡವು. ಇದರ ಹಣ್ಣುಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.  .
      
ಗಣಿಕೆಯ  ಪ್ರತಿ ಹಣ್ಣು ಔಷಧಯುಕ್ತ ಟೊನಿಕ್ ಗುಳಿಗೆಯಾಗಿದೆ. ಇದರಲ್ಲಿ ಷಡ್ರಸಗಳಿರುತ್ತವೆ. ಹಣ್ಣನ್ನು ತಿನ್ನುವ ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ. ಕಫನಾಶಕವಾಗಿದ್ದು ಹೃದಯ ರೋಗ ತಡೆಯುವ, ಮೂತ್ರಸ್ರಾವ ಉತ್ತೇಜಿಸುವ, ಕೆಮ್ಮು ಹಾಗೂ ನೆಗಡಿಗಳನ್ನು ಹೋಗಲಾಡಿಸುವ ಇತ್ಯಾದಿ ಹಲವಾರು ಔಷಧೀಯ ಗುಣಗಳು ಇದರಲ್ಲಿವೆ. ಹಾಗೆಂದು ಬೊಗಸೆ ಗಟ್ಟಲೆ ಹಣ್ಣನ್ನು ತಿನ್ನಬಾರದು. 

      ಇದು ಆಡುಗೆಯಲ್ಲದೆ ಪ್ರತ್ಯೇಕವಾಗಿ ಔಷಧ ತಯಾರಿಕೆಯಲ್ಲ್ಲಿಯೂ ಬಳಕೆಯಲ್ಲಿದೆ. ಇಡೀ ಗಿಡವನ್ನು ಅರೆದು ಕುದಿಸಿ ತಯಾರಿಸಿದ ಕಷಾಯ ಸೇವನೆಯು ಚರ್ಮರೋಗಕ್ಕೆ, ಮೂಲವ್ಯಾಧಿಗೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವೆಂದು ತಿಳಿದು ಬರುತ್ತದೆ 

      ಇಂತಹ ಅಮೂಲ್ಯವಾದ ಗಿಡವನ್ನು ರಕ್ಷಿಸಿ ಬೆಳೆಸುವ ಹೊಣೆ ನಿಮ್ಮದು. ನಿಮ್ಮ ತೋಟದಲ್ಲಿ ಇದನ್ನು ಹಿರಿಯರ ಸಹಾಯದಿಂದ ಗುರುತಿಸಿರಿ. ತುಸು ಆರೈಕೆ ಮಾಡಿರಿ. ನಿಮ್ಮ ಮನೆಯಂಗಳದ ಒಂದು ಮಾರುದ್ದದ ಜಾಗದಲ್ಲಿ .ನಿಮ್ಮದೇ ಆದ ಚಿಕ್ಕ ಕೈತೋಟ ಮಾಡಿ. ಕೀಟನಾಶಕ ಆರೋಗ್ಯ ಮಾರಕ ಗೊಬ್ಬರ ಬಳಸದೆ ನೀವು ಬೆಳೆದ ಸೊಪ್ಪನ್ನು ನಿಮ್ಮ ತಾಯಿಯ ಕೈಗಿಡಿ. ನೀವು ಬೆಳೆದ ಇದರ ಹಣ್ಣನ್ನು  ನಿಮ್ಮ ಜೊತೆಯವರೊಂದಿಗೆ ಹಂಚಿಕೊಂಡು ತಿನ್ನಿರಿ. .

    ನೈಸರ್ಗಿಕವಾಗಿ ಬೆಳೆದ ಈ ಸೊಫ್ಫು ಮತ್ತು ಈ ಹಣ್ಣುಗಳ  ಬೇಡಿಕೆಯನ್ನು ಗಮನಿಸಿದ ತೋಟಿಗರು ಇದನ್ನು ತೋಟದ ಬೆಳೆಯಾಗಿಸಿಕೊಂಡಿರುವದು ತಿಳಿದು ಬರುತ್ತದೆ. ಆದರೆ ಇವರು ಇದನ್ನು ಮಾರಕ ರಸಗೊಬ್ಬರ  ಕೀಟ ನಾಶಕ ಬಳಸಿ ಬೆಳೆಸಬಾರದು ಅಲ್ಲವೇ?       

 ಛಾಯಾಚಿತ್ರಗಳು ಅಂತರ್ಜಾಲ ಕೃಪೆ 

1 comment:

  1. ನಮ್ಮ ಸುತ್ತಮುತ್ತಲಿನ ಸಸ್ಯ ಸಂಕುಲವನ್ನು ಪರಿಚಯಿಸಿ ಮತ್ತೆ ಬಾಲ್ಯದ ನೆನಪನ್ನು ತಂದುಕೊಟ್ಟ ಲೇಖನ....

    ReplyDelete