Friday 7 September, 2012

ನಮ್ಮಗಿಡ ಮರಬಳ್ಳಿಗಳು- ಹಲಸಿನ ಮರ


ಹಲಸಿನಮರ  Atrocarpus integrifolia Linn-idian jacktree
     
       ಹಲಸಿನ ಮರವು ಭಾರತ ಮೂಲದ್ದಾಗಿದ್ದು ಇದರ ಬಗ್ಗೆ ಸುಮಾರು 4000ವರ್ಷಗಳ ಹಿಂದಿನ ಪ್ರಾಚೀನ ದಾಖಲೆಗಳು ದೊರೆಯುತ್ತವೆ. ಪ್ರಾಚೀನ ಅಡುಗೆ ಪುಸ್ತಕವಾದ ಮಂಗರಸನ ಸೂಪ ಶಾಸ್ತ್ರದಲ್ಲಿ ಹಲಸಿನ ಅಡುಗೆಯನ್ನು ಹಲವಾರು ಪುಟಗಳಲ್ಲಿ ವಿವರಿಸಲಾಗಿದೆ. ಇಡಿಯ ಹಲಸಿನ ಕಾಯಿಯನ್ನೇ ಕಟ್ಟಿಗೆಯ ಅಟ್ಟಣಿಗೆಯ ಬೆಂಕಿಯ ಮೇಲಿಟ್ಟು ಬದನೆಯಕಾಯಿಯಂತೆ ಬೇಯಿಸುವ ಮಂಗರಸನ ವಿಧಾನವನ್ನು ಓದುವಾಗ ವಿಸ್ಮಯವಾಗುತ್ತದೆ.

       ಹಲಸಿನ ಹಣ್ಣು ಪ್ರಪಂಚದಲ್ಲಿಯೇ ಬಹು ದೊಡ್ಡ ಹಣ್ಣು. ಆದ್ದರಿಂದ ಮಾವು ಹಣ್ಣುಗಳ ರಾಜನಾದರೆ ಹಲಸು ಹಣ್ಣುಗಳ ಅಣ್ಣ. ಹಣ್ಣುಗಳು ಅರ್ಧ ಮೀಟರಿನಷ್ಟು ಉದ್ದ. ಇಲ್ಲಿ ಚಿಕ್ಕ ಹಣ್ಣಿನ ತಳಿಗಳೂ ಇವೆ. ಸುಲಿದ ತೆಂಗಿನ ಕಾಯಿ ಗಾತ್ರದ ಸುಂದರ ರುದ್ರಾಕ್ಷಿ ಹಲಸು ಪಶ್ಚಿಮ ಕರಾವಳಿಯಲ್ಲಿ ವಿರಲವಾಗಿ ಕಂಡು ಬರುತ್ತವೆ.

      ಹಲಸು ಹೂ ಬಿಡುವದಿಲ್ಲವೆಂಬುದು ಜನಸಾಮಾನ್ಯರ ನಂಬಿಕೆ.ಆದರೆ ವಸಂತ ಕಾಲದಲ್ಲಿ ಇದು ಹೂ ಬಿಡುತ್ತದೆ. ನಮಗೆ ಮರದಲ್ಲಿ ಕಾಣುವದು ಹೂ ಗೊಂಚಲು. ಇದು ಬಿಡಿ ಹೂವಲ್ಲ.ಇದರ ಹೂ ಗೊಂಚಲು  ಬೆರಳುದ್ದದಲ್ಲಿದ್ದು ಮಿನಿ ಹಲಸಿನಕಾಯಿಯಂತೆ ಕಾಣುತ್ತದೆ. ಈ ಗೊಂಚಲಿನಲ್ಲಿ ಹತ್ತಿಪ್ಪತ್ತರಿಂದ ನೂರಾರು ಬಿಡಿ ಹೂಗಳಿರುತ್ತವೆ ಆದರೆ ಇದರ ಹೂಗಳ ಪಕಳೆಗಳು ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿರುತ್ತವೆ. ಹೂ ಗೊಂಚಲಿನಲ್ಲಿ ಎರಡು ಪ್ರಕಾರ. ಒಂದು ಗಂಡು ಇನ್ನೊಂದು ಹೆಣ್ಣು.  ಗಂಡು ಹೂಗೊಂಚಲು ಹೆಣ್ಣು ಹೂವಿನ ಗೊಂಚಲಿಗಿಂತ ಉದ್ದವಾಗಿ ರುತ್ತದೆ. ತನ್ನಲ್ಲಿರುವ ಪರಾಗ ಕಣಗಳನ್ನು ಹೆಣ್ಣು ಹೂವಿಗೆ ಮುಟ್ಟಿಸಿದ ಬಳಿಕ ಅದು ಮಸಿ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತದೆ. ಪರಾಗವನ್ನು  ಪಡೆದ ಹೆಣ್ಣು ಹೂವುಗಳ ಗೊಂಚಲು ಹಲವು ಹಣ್ಣುಗಳ ಮೂಡೆಯಾಗಿ  ಬೆಳೆಯುತ್ತದೆ. 

    ಆದ್ದರಿಂದ ಇದು ಹಣ್ಣಿನೊಳಗೊಂದು ಹಣ್ಣು ವಿಸ್ಮಯದ ಹಣ್ಣು. ಎಂದು ಒಗಟು ಕಟ್ಟಬಹುದು. ಏಕೆಂದರೆ .ಒಂದಲ್ಲ; ಹಲವಾರು ಹಣ್ಣುಗಳು ಇದರೊಡಲಲ್ಲಿರುತ್ತವೆ. ಇದರ ಕುಟುಂಬಕ್ಕೆ ಸೇರಿದ ವಾಟೆ ಹೆಬ್ಬಲಸು, ಸೀತಾಫಲ, ರಾಮ ಫಲ, ಇತ್ಯಾದಿ ಸುಮಾರು 18 ಪ್ರಭೇದದ ಮರಗಳು ನಮ್ಮ ನಾಡಿನಲ್ಲಿವೆ. ಈ ಹಣ್ಣುಗಳ ಹೊಟ್ಟೆಯಲ್ಲಿಯೂ ಹಲವಾರು ಹಣ್ಣುಗಳಿರುವದನ್ನು ಗಮನಿಸಬಹುದು.

   ಭಾರತದಲ್ಲಿ ಹಲಸಿನ ತವರು ಪಶ್ಚಿಮ ಘಟ್ಟ ಭಾರತದ ಹಲವು ಕಡೆ ಇದು ಕಂಡು ಬರುತ್ತದೆ. ಆದರೆ ಪಶ್ಚಿಮ ಘಟ್ಟದ ಹಣ್ಣು ತುಂಬ ರುಚಿ..
    
  ಹಲಸಿನ ಹಣ್ಣು ಕಾಡಿನ ಪ್ರಾಣಿ ಪಕ್ಷಿಗಳಿಗೆ ಉತ್ತಮ ಆಹಾರ. ಇಲ್ಲಿಯ ಕರಡಿಗಳಿಗೆ ಬೇಸಿಗೆ ಮಳೆಗಾಲಗಳ ಸಂಧಿ ಕಾಲದಲ್ಲಿ ಭೂರಿ ಭೋಜನ. ಇದೇ ಕಾಲದಲ್ಲಿ ಕಾಡಿನಲ್ಲಿ ವಿವಿಧ ಹೂಗಳ ಸುಗ್ಗಿ. ಕಾಡಿನ ಜೇನುಹುಟ್ಟು ಜೇನಿನಿಂದ ತುಂಬಿಕೊಳ್ಳುತ್ತದೆ. ಹಲಸಿನ ಹಣ್ಣುಗಳು ಬಿರಿದು ನೆಲದ ಮೇಲೆ ಬಿದ್ದಿರುತ್ತವೆ .ಹಣ್ಣನ್ನು ಮೆಲ್ಲಲು ಬಂದ ಕರಡಿಗಳಿಗೆ ಮರದ ಮೇಲಿನ ಜೇನಿನ ಪರಿಮಳ  ಮೂಗಿಗೆ  ಹೊಡೆಯುತ್ತದೆ. ಕರಡಿ ಎರಡೂ ಕೈಯಿಂದ ಹಲಸಿನ ಹಣ್ಣನ್ನು ಮೆಲ್ಲುತ್ತದೆ; ಅಲ್ಲಿಂದ ಅದು ಮರ ಹತ್ತಿ ಜೇನನ್ನು ಸುರಿಯುತ್ತದೆ. ಇದು ಕರಡಿಯ ಭಾಗ್ಯ.  

ಹಲಸಿನ ಹಣ್ಣು; ಕರಡಿಯ ಆಹಾರವಷ್ಟೆ ಅಲ್ಲ, ನಾಡಿನ  ಮನುಷ್ಯರ ಆಹಾರವೂ ಆಗಿದೆ. ಆದರೇನು ಮಾಡುವದು. ಮನುಷ್ಯ ನಾಜೂಕಾಗಿದ್ದಾನೆ. ಕರಡಿಯಂತೆ ತಿನ್ನಲು ಶಕ್ತನಾಗಿಲ್ಲ. ಹಿಂದೆ ಮಲೆನಾಡು ಕರಾವಳಿಯ ಶ್ರಮ ಜೀವಿಗಳಿಗೆ ಬಡತನ ಬಂದಾಗ ಅವರ ಹಸಿವನ್ನು ನೀಗಿಸಿ ಜೀವವುಳಿಸಿದ ಹಣ್ಣು ಇದು. ದುಡಿಯಲು ಶಕ್ತಿ ನೀಡಿದ ಹಣ್ಣು ಇದು .50 ವರ್ಷಗಳ ಹಿಂದೆ ಈ ಹಣ್ಣನ್ನು ಕೃತಜ್ಞತೆಯಿಂದ ನೆನೆಯುವ ಜನರಿದ್ದರು. ಹಲಸಿನ ಹಣ್ಣನ್ನು ಅದರ ಪರಿಮಳವನ್ನು ಮೋಹಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು .ಎರಡು ಮೂರು ದಿನ ಬೇರೆ ಆಹಾರ ಸೇವಿಸದೆ ಈ ಹಣ್ಣಿನ ಮೇಲೆಯೇ ಜೀವಿಸುತ್ತಿದ್ದ ಕೂಲಿಕಾರರನ್ನು ತಾನು ಕಂಡುದಾಗಿ  ಶ್ರೀ ಎಸ್.ಕೆ. ಕಲ್ಲಾಪುರ ತಿಳಿಸುತ್ತಾರೆ.(1979)

    ಇದು ಅಡುಗೆಗೂ ಸೈ. ಕರಾವಳಿ ಮಲೆನಾಡುಗಳ ಹಳೆಯ ಅಡುಗೆಯಲ್ಲಿ ಹಲಸಿನ ಗುಜಕೆಗಳು, ಬೆಳೆದ ಕಾಯಿಗಳು ಜನಪ್ರಿಯವಾಗಿದ್ದವು. ಮದುವೆಯಂತಹ ಸಾವಿರಾರು ಜನರ ಊಟದಲ್ಲಿ ಬೆಳೆದ ಹಲಸಿನ ಕಾಯಿಯ ಹುಳಗ[ಹೊಳ್ಳಗ-ಹುಳಿ] ವೆಂಬ ಹೆಸರಿನ ಮೇಲೋಗರಕ್ಕೆ ಅಗ್ರ ಸ್ಥಾನವಿತ್ತು. ಸಾವಿರ ಜನರ ಊಟಕ್ಕೆ ಮನೆಯ ತೋಟದಲ್ಲಿ ಬೆಳೆದ ಕೆಲವೇ ಹಲಸಿನ ಕಾಯಿಗಳು ಸಾಲುತ್ತಿದ್ದವು.  ಹಸಿದು ಉಣ್ಣುತ್ತಿದ್ದರು. ಈಗಿನಂತೆ ಹಸಿಯದವರು ಅರೆ ಬರೆ ಉಣ್ಣುವ ಮದುವೆ ಊಟಕ್ಕೆ ಲಕ್ಷಾಂತರ ಹಣ ಖರ್ಚಾಗುತ್ತಿರಲಿಲ್ಲ..  

ಹಲಸಿನ  ಹಣ್ಣು ಜೀವಸತ್ತ್ವಗಳ ಗಣಿ. ಬೆಳೆದ ಕಾಯಿಯಲ್ಲಿ ಸಾಕಷ್ಟು  ಜೀವ ರಕ್ಷಕ ಅಂಶಗಳಿವೆ. ಹಣ್ಣಿನ ತೊಳೆಗಳಲ್ಲಿ ಪ್ರತಿ ಶತ 18.9 ರಷ್ಟು ಪಿಷ್ಟವಿದೆ. ಬೀಜದಲ್ಲಿ ಇದು ಇನ್ನೂ ಹೆಚ್ಚಿದೆ. ಆದರೆ ಇದು  ಕೆಲವರ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ತರುತ್ತದೆಯಂತೆ. ಇದು ಬೀಜದ ಅಥವಾ ಹಣ್ಣಿನ ತಪ್ಪಲ್ಲ ಅದನ್ನು ತಿನ್ನುವವರ ಕ್ರಮದಲ್ಲಿ ದೋಷವಿದೆ. ಅವರ ಜೀರ್ಣ ಶಕ್ತಿಯಲ್ಲಿ ದೋಷವಿದೆ. ಹಸಿದು ಹಲಸು ತಿನ್ನು ಎಂಬುದು ಅನುಭವಿಕರ ಮಾತು . ಹಲಸು ತಿಂದಾಗ ಪಿಷ್ಟಯುಕ್ತ ಇತರ ಆಹಾರವನ್ನು ಕಡಿಮೆ ಸೇವಿಸಬೇಕು. ಹಣ್ಣನ್ನು ತಮ್ಮ ತಮ್ಮ ಜೀರ್ಣ ಶಕ್ತಿಯ ಮಟ್ಟವನ್ನು ನೋಡಿ ಸೇವಿಸಬೇಕು. ಜೀರ್ಣಶಕ್ತಿಯಿದ್ದವರು ದಿನಕ್ಕೆ ಮೂರು ಬಾರಿ ಸ್ವಲ್ಪ ಸ್ವಲ್ಪ ಊಟಕ್ಕೆ ಮೊದಲು ತಿನ್ನಬಹುದು. ಹಣ್ಣನ್ನು ತಿನ್ನುವಾಗ ಜೇನು ಬಳಸಬೇಕು. ತುಸು ತೆಂಗಿನೆಣ್ಣೆ ಹನಿಸಿಕೊಂಡು ಸೇವಿಸಿದರೆ ಹಣ್ಣು ಕರುಳಿನಲ್ಲಿ ಸಿಕ್ಕಿಕೊಳ್ಳದೆ ಕೆಳಗೆ ಜಾರುತ್ತದೆಯೆಂಬುದು ಅನುಭವ ವೈದ್ಯದ ಅಭಿಪ್ರಾಯ. ಕರಾವಳಿಯಲ್ಲಿ ಮತ್ತು ಪಶ್ಚಿಮ ಗಟ್ಟದ ಹಣ್ಣುಗಳಲ್ಲಿ ಎರಡು ತರ ಒಂದು ಚಕ್ಕೆ. ಇದರ ತೊಳೆಗಳು ಮೃದು.  ಇನ್ನೊಂದು ಬಕ್ಕೆ ಇದರ ತೊಳೆ. ತುಸು .ಗಟ್ಟಿ. ಕೆಲವರಿಗೆ ಚಕ್ಕೆ ಪ್ರಿಯವಾದರೆ ಕೆಲವರಿಗೆ ಬಕ್ಕೆ ಪ್ರಿಯ. ಇನ್ನು ಕೆಲವರಿಗೆ ಎರಡೂ ಬಗೆಯ ಹಣ್ಣು ಪ್ರಿಯ. ಇದು ದೇವರಿಗೂ ಪ್ರಿಯ. ಗ್ರಾಮ ದೇವರ ಹಬ್ಬದಲ್ಲಿ.  ಭಕ್ತರ ರೋಗ ರುಜಿನ ಇತರ ಸಂಕಟಗಳನ್ನು ದೂರ ಮಾಡಿದಗ್ರಾಮ ದೇವರಿಗೆ  ನೀಡುವ ತುಲಾಭಾರ ಆಚರಣೆಯಲ್ಲಿ ಈ ಹಣ್ಣನ್ನೇ ಆಯ್ದುಕೊಳ್ಳುವಲ್ಲಿ ಭಕ್ತರ ಜಾಣತನವಿದೆ. ಒಡೆಯನ ಮನೆಗೆ ಹೋಗಿ ಒಡೆಯನ ಹಬ್ಬಗಾಣ್ಕೆಗೂ ರೈತನಿಗೆ ಈ ಹಣ್ಣು ಬೇಕು. ಈ ಆಚರಣೆ ತಮಿಳು ಶಿಲಪ್ಪದಿ ಕಾರಂ ದಷ್ಟು ಹಳೆಯದು. ಆಕಾಶದಲ್ಲಿಯ ದೇವರಿಗೂ ಹಲಸಿನ ಚಕ್ಕೆಯ ಹೋಮವಾಗಬೇಕು. 

     ನಮ್ಮ ನಾಡಿನಲ್ಲಿ ಹಲಸಿನ ಕಾಯಿಯ ಮತ್ತು ಹಣ್ಣಿನ ಚಾರೆಯ ಮುಳ್ಳನ್ನು ಹೊರತು ಪಡಿಸಿ ಇದರ  ಸರ್ವಾಂಗವನ್ನು ಅಡುಗೆಗೆ ಬಳಸಬಲ್ಲ ತಜ್ಞೆಯರಿದ್ದಾರೆ. ಚಾರೆಯ ಒಳ ಭಾಗವನ್ನು ಅಂಚು ಎನ್ನುತ್ತಾರೆ    

     ಇವರು .ಅಂಚು, ಕಿರು ತೊಳೆ ,ಹಿರಿ ತೊಳೆ ಬೀಜ ಮತ್ತು ಹಣ್ಣಿನೊಳಿಗಿನ  ದಿಂಡನ್ನೂ ಅಡುಗೆ ಮಾಡಬಲ್ಲರು. ಎಳೆ ಕಾಯಿಯಲ್ಲಿಯೂ ಜೀವಸತ್ವ ತುಂಬಿರುತ್ತದೆ. ನಮ್ಮ ಮಹಿಳೆಯರಿಗೆ ಎಳೆ ಕಾಯಿಯನ್ನು ತರಕಾರಿಯಂತೆ ಅಡುವ ಲವಲವಕೆಯು ಹೆಚ್ಚು,  ಪಟ್ಟಣಗಳಲ್ಲಿ ಮಿಡಿ ಹಲಸಿನ ಕಾಯಿಗಳು  ಮಾರಾಟಕ್ಕೂ ಬರುತ್ತವೆ. ಮಿಡಿ ಹಲಸಿನಕಾಯನ್ನು (ಗುಜಕೆ)  ಕೊಯ್ದು  ಅಡುಗೆಗೆ ಅಣಿ ಮಾಡುವಾಗ ಕೈಗೆ ಅಂಟುವ ಅಂಟನ್ನು ಪರಿಗಣಿಸದೆ ಇವರು ಅಡುಗೆಗೆ ಅದನ್ನು ಬಿಡಿಸಿಕೊಳ್ಳುವ ಕೆಲಸಲ್ಲಿ ನಿರತರಾಗುತ್ತಾರೆ. ಇದರ  ತಾಳ್ಳು ಪಲ್ಯದ ರುಚಿಯ ಮುಂದೆ ಇದನ್ನು ತರಕಾರಿಯಾಗಿ ಬಿಡಿಸಿಕೊಳ್ಳುವ ಕೆಲಸವು ಇವರಿಗೆ ನಗಣ್ಯವೆನಿಸುತ್ತದೆ.
     ಬಗೆಯಲ್ಲಿ ಸಿಹಿ ತಿಂಡಿ ತಯಾರಿಸಿ  ತಿನ್ನುವದು ನಮ್ಮ ನಾಡಿನ ಜನರಿಗೆ ಅತ್ಯಂತ ಪ್ರಿಯ. ಪಾಯಸ, ಕಡಬು, ದೋಸೆ,  ಸುಟ್ಟೇವು, ಸಿರಾ, ಕಡಿ, ಹಲ್ವಾ.  ಪಕೋಡ , ಕೇಸರಿಬಾತು, ದೋಸೆ, ಪಾನಕ, ಮುಳಕ, ಸೀಕರಣೆ ಗಳನ್ನು  ಅಡುತ್ತಾರೆ. ಹಲಸಿನ ಹಣ್ಣಿನ ಸುಟ್ಟೇವು ಜಟಕಾದಿ ಕೆಲವು ಜನಪದ ದೇವರಗೆ ಇಷ್ಟವಾದ ನೈವೇದ್ಯ. ಬೆಳೆದ ಕಾಯಿಗಳ ಹಪ್ಪಳ ದೋಸೆ ಗಳು ಇಲ್ಲಿ ಪ್ರಸಿದ್ಧ .  ಇಲ್ಲಿ ಅಕ್ಕಿಯನ್ನು  ಕೂಡಿಸದೆ  ಕೇವಲ ಸೊಳೆಗಳನ್ನು ಅರೆದು ದೋಸೆ ಮಾಡ ಬಹುದಾದ ವಿಶೇಷತೆಯನ್ನು ಹೊಂದಿದ ಹಲಸಿನ ಕಾಯಿಗಳಿವೆ. ಇವು ತಮ್ಮಲ್ಲಿ ಅಕ್ಕಿಯಂತಹ ಪಿಷ್ಟವಿದೆಯೆಂಬುದನ್ನು ಸಾಬೀತು ಪಡಿಸುತ್ತವೆ.. ಬೇಸಿಗೆಯಲ್ಲಿ ಹಲಸಿನ ಪೇಪರ್ ದೋಸೆ ಮಾವಿನ ಹಣ್ಣಿನ ಸೀಕರಣೆಗಳ ಜೋಡು ನೀಡುವ ಸವಿ ರುಚಿ ಮರೆಯಲಾಗುವಂಥದ್ದಲ್ಲ. ಈ ದೋಸೆಯನ್ನು ಒಣಗಿಸಿ ಹಪ್ಪಳದಂತೆ ಕಾಯ್ದಿಟ್ಟು ಕೊಳ್ಳುತ್ತಾರೆ. ಹಲಸಿನ ಕಾಯಿಯ ಹಪ್ಪಳದ ಉದ್ಯೋಗವು ಕರಾವಳಿ ಮಲೆನಾಡಿನ ಕೆಲವು ಭಾಗಗಳಲ್ಲಿ ಗೃಹ ಉದ್ಯೋಗವಾಗಿ ಬೆಳೆದಿದೆ. ಒಣಗಿಸಿದ ದೋಸೆ ತಯಾರಿಯನ್ನು ಕೂಡ ಗೃಹ ಕೈಗಾರಿಕೆಯಲ್ಲಿ ಸೇರಿಸಿಕೊಳ್ಳಬಹುದಾಗಿದೆ.. ಬೆಳೆದ ಸೊಳೆಯಲ್ಲಿಯ ಬೀಜವನ್ನು ಬೇರ್ಪಡಿಸಿ ಉಪ್ಪಿನ ನೀರಿನಲ್ಲಿ ತೊಳೆಗಳನ್ನು ಕಾದಿಟ್ಟು ಮಳೆಗಾಲದಲ್ಲಿ ಹಲವು ವಿಧದ ಅಡುಗೆಯನ್ನು ತಯಾರಿಸುತ್ತಾರೆ. 
         
ಬೀಜಗಳನ್ನು ತಿಪ್ಪೆಗೆಸೆಯುವ ತಪ್ಪು ಮಾಡುವದಿಲ್ಲ. ಅದೊಂದು ಉತ್ತಮ ಆಹಾರವೆಂದು ಪರಿಗಣಿಸುತ್ತಾರೆ. ಬೀಜದಿಂದ ಸುಕಿನುಂಡೆ. ಚಟ್ನಿ ಪುಡಿ. ಬುಡ್ಡಣ. ಸಾರು, ಹುಳಿ. ಪಲ್ಯ. ಪಾಯಸ. ಹೋಳಿಗೆ. ಮಡ್ಡಿ   ತಯಾರಿಸುವದು ಇವರಿಗೆ ನೀರು ಕುಡಿದಷ್ಟು ಸುಲಭ. ಬೀಜದ ಸೇವನೆಯನ್ನು ಕೂಡ ಹಲವಾರು ಅಚರಣೆಗಳ ಮೂಲಕ ಕಡ್ಡಾಯಗೊಳಿಸಿಕೊಂಡಿದ್ದಾರೆ. .ಕುಡಿ ತಿಂಗಳಲ್ಲಿ ಇದರ ಕಜ್ಜಾಯ ಅಡಬೇಕೆಂಬುದು ಈ ತಿಂಗಳ ಆಚರಣೆಯ ಒಂದು ಅಂಗ. ಘಟ್ಟದ ಮೇಲಿನ  ಊರುಗಳಲ್ಲಿ ನಾಗರ ಪಂಚಮಿಯ ದಿನ ಬೇಳೆಯನ್ನು ಹುರಿದು ಮಕ್ಕಳ ಕೈಗೆ ಕೊಡದೆ ಮನೆಯೊಳಗೆಲ್ಲ ಬೀರುತ್ತಾರೆ. ಮಕ್ಕಳು ಅವುಗಳನ್ನು ಹೆಕ್ಕಿ ತಿನ್ನಬೇಕು. ಈ ಆಚರಣೆಯಿಂದ ಮೈಗೆ ಕಜ್ಜಿಯಾಗುವದಿಲ್ಲವೆಂಬ ನಂಬಿಕೆಯಿದೆ. ಈ ಆಚರಣೆಗಳು ಮತ್ತು ಪಾಕ ತಜ್ಞೆಯರ ಈ ಜ್ಞಾನ, ಅಡುವಕಲೆ ಈ ಮುಂದಿನ ತಲೆ ಮಾರಿಗೆ ಹರಿಯ ಬೇಕಾಗಿದೆ. ಆದರೆ ಹಲಸಿನ ಬೀಜವನ್ನು ಅಡುವವರ ಕೊರತೆಯಿಂದಾಗಿ, ಪಿಜ್ಜಾ ಬರ್ಗರ್ ಪ್ರಿಯರ್ ಹಾವಳಿಯಿಂದಾಗಿ ಅಮೂಲ್ಯ ಹಲಸಿನ ಬೀಜಗಳು  ತಿಪ್ಪೆ ಸೇರುವದನ್ನು ನೋಡುವಾಗ ಮನಸ್ಸಿಗೆ ತಾಪವಾಗುತ್ತದೆ.

    ಇದು ಆಹಾರ ಮಹತ್ವದ ಜೊತೆಗೆ, ಔಷಧ ಮಹತ್ವವನ್ನೂ ಹೊಂದಿದೆ. ಹಲಸಿನ ಮರ ನಮ್ಮ ದೇಹ ಪೋಷಕ ವೈದ್ಯ. ಇದು ದೆ.ಹಕ್ಕೆ ಬಲವನ್ನು ಕೊಡುತ್ತದೆ. ಕಾಡುಹಣ್ಣುಗಳನ್ನು ಬಿಟ್ಟರೆ ಸಧ್ಯ ಇಪ್ಪತ್ತೊಂದನೆಯ ಶತಶತ ಮಾನದ ಪ್ರಾರಂಭದ ಕಾಲದವರೆಗೂ ಇದು ಕೀಟ ನಾಶಕ ರಹಿತ ತರಕಾರಿ ಮತ್ತು ಹಣ್ಣಾಗಿ ಉಳಿದಿದೆ. ಮುಂದೆ ಹೇಗೋ ಏನೋ. ಇದರ ಬೇರಿನ ಕಷಾಯ ಅತಿಸಾರಕ್ಕೆ ಮದ್ದು ಹಣ್ಣು ಫಲಕಾರಿ. ಪಿತ್ತದ ತೊಂದರೆಯನ್ನು ನಿವಾರಿಸುವ ಅಪೂರ್ವ ಗುಣ ಹಣ್ಣಿನಲ್ಲಿದೆ. ಹಲಸಿನ ಮರದ ಅಣಂಬೆ ಚರ್ಮ ರೋಗಗಳಿಗೆ ಮದ್ದು. ಹಲಸಿನೆಲೆಯ ಕೊಟ್ಟೆಯಲ್ಲಿ ತಯಾರಿಸಿದ ಕೊಟ್ಟೆ ರೊಟ್ಟಿ ಆರೋಗ್ಯದಾಯಕ ವೆಂದು ತಿಳಿದವರು ಬಲ್ಲರು.
        
ಸುಮಾರು 300 ವರ್ಷಗಳ ಹಿಂದಿನ ಮಾತು. ಇಂಥ ಅನ್ನಪೂರ್ಣ ಹಲಸಿನ ಮರಗಳಿಗೆ ಕೆಟ್ಟ ಕಾಲ ಕೂಡಿ ಬಂತು. ಮರಗೆಲಸದ ಆಚಾರಿಗಳಿಗೆ ಇವರ ಉಳಿಗೆ ಬಗ್ಗುವ ಒಗ್ಗುವ ಇದರ ಗುಣ ಅರಿವಾದದ್ದೇ ತಡ ,ತಮ್ಮ ಕಲೆಯನ್ನು ಈ ಮರಗಳ ಮೇಲೆ ಪ್ರಯೋಗಿಸಿದರು. ಕಲಾ ರಸಿಕರು ತಮ್ಮ ತಮ್ಮ ಹೊಸ ಮನೆಯ ಅಲಂಕಾರಕ್ಕೆಂದು ತೋರ ತೋರದ ಇಡಿ ಇಡಿಯ ಮರಗಳನ್ನೇ ತಂದು ಕುಸುರು ಕೆತ್ತಿಸಿ ಮನೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೆಮ್ಮೆ ಪಟ್ಟರು. ನಾಡಿನ ಕಲಾ ಸಿರಿವಂತಿಕೆ ಹೆಚ್ಚಿತು. ಆದರೆ ಬಡವರ ಆಹಾರ ಸಂಪತ್ತಿಗೆ ಕುತ್ತು ಬಂತು ಭೂಮಿ ಮರುಗಿತ್ತು.
   
   ಈಗ ಹಲಸಿನ ಮರಗಳನ್ನು ಬೆಳೆಸಿ ಭೂಮಿಯ ಹಾಗೂ ನಮ್ಮ ಒಡಲಿಗೆ ಹಿತವನ್ನುಂಟು ಮಾಡಬೇಕಾಗಿದೆ. ನಿಮಗೆ ಮರ ಬೆಳಿಸಬೇಕೆನಸಿದರೆ ತಡ ಮಾಡಬೇಡಿ. ನೆಡಲು ತಡ ಮಾಡಿದರೆ ಬೀಜಗಳು ಸಾಯುತ್ತವೆ. ಏಕೆಂದರೆ ಅವಕ್ಕೆ ಜೀವಶಕ್ತಿ ಕಡಿಮೆ. ತೊಳೆಯಿಂದ ಹೊರಬಂದ ಒಂದು ವಾರ ದಲ್ಲಿಯೇ ಬೀಜಗಳನ್ನು ನೆಡುವದು ಉತ್ತಮ. ಕಸಿ ಹಲಸಿನ ಮರಗಳು ಜನಪ್ರಿಯವಾಗುತ್ತಿವೆ.

No comments:

Post a Comment