Monday 13 August, 2012

ನಮ್ಮ ಗಿಡ ಮರ ಬಳ್ಳಿಗಳು- ಉತ್ರಾಣೆ ಗಿಡ


ಉತ್ರಾಣೆ ಗಿಡ - Achyranthes aspera,Linn Amaranthacae



ಇದು ಸುಮಾರು ಒಂದರಿಂದ ಮೂರು ನಾಲ್ಕು ಅಡಿ ಎತ್ತರ ಬೆಳೆಯುವ ವಾರ್ಷಿಕೆ. ಇದಕ್ಕೆ ಸಂಸ್ಕೃತದಲ್ಲಿ ಅಪಾಮಾರ್ಗವೆಂಬ ಹೆಸರಿದೆ.  ಏಕೆಂದರೆ  ಇದರ  ಬೀಜಗಳು  ದೇಟಿ ಗುಂಟ  ಹಿಮ್ಮುಖವಾಗಿ ಬೆಳೆಯುತ್ತವೆ  ಬಿಳಿ ಉತ್ರಾಣೆಯನ್ನು ಸಸ್ಯಶಾಸ್ತ್ರಜ್ಞರು ಅಚರಾಂಥಸ್ ಅಸ್ಪರಾ ಎಂದು ಗುರುತಿಸುತ್ತಾರೆ..
     
ಇದು  ಜನ  ನೆಟ್ಟು ಬೆಳೆಸುವ ಗಿಡವಲ್ಲ. ಭೂಮಿಯು  ಜನರ ನೆರವಿಲ್ಲದೆ ಜನರಿಗಾಗಿ ತಾನೇ ಇದನ್ನು ಬೆಳೆಸುತ್ತದೆ. ಇದರ ಪರಿಚಯವಿಲ್ಲದವರು ಇದನ್ನು ಕಳೆ ಗಿಡಗಳ ಸಾಲಿನಲ್ಲಿ ಸೇರಿಸಿದ್ದಾರೆ. ಆದರೆ ಪ್ರಾಚೀನ ಕಾಲದಿಂದ ಅನೇಕ ಮನೆ ಮದ್ದುಗಾರರು ಅಡುಗೆ ಬಲ್ಲ ಗೃಹಿಣಿಯರು ಹಾಗೂ ಅನೇಕ ಋಷಿ ಮುನಿಗಳು ಇದನ್ನು ಬಲ್ಲವರಾಗಿದ್ದರು.

ಈ ಗಿಡವು  ಬಹಳ ಹಿಂದಿನಿಂದ ಮನೆಮದ್ದಿನಲ್ಲಿ ಬಳಕೆಯಲ್ಲಿದ್ದರೂ ಬಳಿಕ ಇದರ ಮನೆ ಮದ್ದನ್ನು ಮರೆತವರ ಸಂಖ್ಯೆಯೇ ಹೆಚ್ಚು. ಇದು ಕಫ ಮತ್ತು ವಾತ ನಾಶಕವಾಗಿದೆ. ಕಿವಿನೋವು ಕಣ್ಣು ನೋವುಗಳಲ್ಲಿಯೂ ಉಪಯುಕ್ತವಾಗಿದೆ. ಪಚನ ಕ್ರಿಯೆಯನ್ನು ಸಮ. ಸ್ಥಿತಿಯಲ್ಲಿಡಬಹುದು ಇದರ ಬೀಜವನ್ನು ತಿನ್ನುವದರಿಂದ ಅಥವಾ ಪಾಯಸ ಮಾಡಿ ಸೇವಿಸುವದರಿಂದ ಅತಿ ಹಸಿವೆ ದೂರವಾಗುತ್ತದೆ., ಇತ್ಯಾದಿಯಾಗಿ ಇದರ ಮದ್ದಿನ ಗುಣದ ಬಗ್ಗೆ ಹಳೆಯ ಗ್ರಂಥಗಳಲ್ಲಿ ಅಪೂರ್ವ ಮಾಹಿತಿಗಳಿವೆ. ಬೆಂಗಳೂರಿನ ಬೆರಕೆ ಸೊಪ್ಪು ಮಾರಾಟಗಾರ ಮಹಿಳೆಯರು ತಾವು ಮಾರುವ ಬೆರಕೆ ಸೊಪ್ಪಿನಲ್ಲಿ ಇದರ ಕೆಲವು ಚಿಗುರುಗಳನ್ನು ಸೇರಿಸುವದನ್ನು ಗಮನಿಸಲಾಗಿದೆ.ಆದರೆ ಗಿಡವನ್ನು ಗುರುತಿಸುವವರು ಅತ್ಯಂತ ವಿರಳವಾಗಿದ್ದಾರೆ. ಶಾಲಾ ಮಕ್ಕಳಿಗೆ ಅವರ ತಾಯಂದಿರಿಗೆ ಇಂತಹ ಅಪೂರ್ವ ಗಿಡಗಳ ಪರಿಚಯ ಮಾಡಿಸಿ ಕೊಡುವ ಅಗತ್ಯವಿದೆ.

   ಈ ಗಿಡಗಳು ಜನರ ಪರಿಚಯದಲ್ಲಿರಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಇದನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದರು. ಸಪ್ತ ಮುನಿಗಳಲ್ಲಿ ಒಬ್ಬರಾದ ಭಾರದ್ವಾಜ ಮುನಿಗೆ ಈಗಿಡವು ಪ್ರಿಯವಾದದ್ದು ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದೆ. ಸಪ್ತರ್ಷಿ ವನದಲ್ಲಿ ಮತ್ತು ಸಪ್ತರ್ಷಿ ಪೂಜಾ ವ್ರತದಲ್ಲಿ ಇದಕ್ಕೆ ಸ್ಥಾನ ಕಲ್ಪಿಸಲಾಗಿದೆ. ಭಕ್ತರು ಇದನ್ನು ಪೂಜೆಯಲ್ಲಿ ಬಳಸುತ್ತಾರೆ; ದೇವರಿಗೆ ಇದರ ಎಲೆಯನ್ನು ಅರ್ಪಿಸುತ್ತಾರೆ..
. ಇದು ಹಲ್ಲುಗಳ ರಕ್ಷಣೆಯಲ್ಲಿ ಮಹತ್ವದ ಮೂಲಿಕೆಯಾಗಿದೆಯೆಂದು  ನಮ್ಮ ಹಿರಿಯರು ತಿಳಿದಿದ್ದರು. ಪ್ರತಿನಿತ್ಯ ಉತ್ರಾಣೆ ಕಡ್ಡಿಯಿಂದ ಹಲ್ಲುಜ್ಜುವದರಿಂದ ಹಲ್ಲು ಉತ್ತಮಗೊಳ್ಳುತ್ತದೆಯೆಂದು ಅನುಭವಿಗಳ ಅಂಬೋಣವಿದೆ. ಉತ್ತರ ಭಾರತದ ಅನೇಕ ಹಳ್ಳಿಗರು ತಮ್ಮ ಹಲ್ಲುಗಳನ್ನು ಇದರ ಹಸಿಕಡ್ಡಿಯಿಂದ ತಿಕ್ಕುವ ಕಾರಣ ಅವರ ಹಲ್ಲುಗಳು ವಯಸ್ಸು ಎಂಬತ್ತು ದಾಟಿದರೂ ಗಟ್ಟಿಮುಟ್ಟಾಗಿರುತ್ತವೆಯೆಂಬ ವರದಿಗಳಿವೆ. ಭಾದ್ರಪದ ಮಾಸದ ಗಣೇಶ ಚವತಿಯ ಮರುದಿನ ಪಂಚಮಿಯಂದು ಮಾತ್ರ ವಿಧವೆಯರಿಗೆ ಉತ್ರಾಣೆ ಕಡ್ಡಿಯಿಂದ ಹಲ್ಲು ತಿಕ್ಕಲು ಅವಕಾಶ ಮಾಡಿಕೊಡುವ ಆಚರಣೆ ಜಾರಿಯಲ್ಲಿದೆ. ಆದರೆ ಈ ಧಾರ್ಮಿಕ ಆಚರಣೆಗಳ ಹಿನ್ನೆಲೆಯನ್ನರಿಯದವರು  ಈ ಕೆಲಸವನ್ನು ವಯಸ್ಕರಿಗೆ ಮೀಸಲಿಟ್ಟು ತಾವು ಕಂಪನಿ ಪೇಸ್ಟಗಳ ಮೊರೆ ಹೋಗಿದ್ದಾರೆ. ಹಿರಿ ಕಿರಿಯರು ಇದನ್ನು ಬಳಸುವ ಕ್ರಮವು ದೂರವಾಗಿ ಇದರ ಪರಿಚಯ ಜನರಿಂದ ದೂರವಾಗುತ್ತಿದೆ.

   ಉತ್ರಾಣೆಯಲ್ಲಿ ಬಿಳಿ ಕೆಂಪು ಮತ್ತು ಹಸಿರು ಬಣ್ಣದ ಬಗೆ ಗಳು ಬಳಕೆಯಲ್ಲಿ ಕಂಡುಬರುತ್ತವೆ. ಕೆಂಪು ಉತ್ರಾಣಿಯು ಜನಪದ ಧಾರ್ಮಿಕ ಆಚರಣೆಯಲ್ಲಿ ಸ್ಥಾನ ಪಡೆದಿದೆ. ಬಾಳಂತಿಯರು ಇದನ್ನು ಪೂಜಿಸುತ್ತಾರೆ. ಅದರೆ ಇವರಿಗೆ ಈ ಪೂಜೆಯ ಹಿನ್ನೆಲೆಯ ಅರಿವಿಲ್ಲ. ಇದು ಸುಖ ಪ್ರಸವಕ್ಕೆ ಸಹಾಯ ಮಾಡುವ ಮೂಲಿಕೆಯೆಂಬುದನ್ನು ಇವರು ಮರೆತಿದ್ದಾರೆ. ಎರಡನೆಯ ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಬಿಳಿ ಬಣ್ಣದ ಉತ್ರಾಣೆಯ ಬೀಜವನ್ನು ನೆನೆಯಿಸಿ ಕುಡಿದರೆ ಮೂಲವ್ಯಾಧಿಯು ಗುಣವಾಗುತ್ತದೆ.

     ಅಚ್ಚ ಹಸಿರು ಬಣ್ಣದ ಕಾಡು ಉತ್ರಾಣಿಯನ್ನು ಹಳ್ಳಿಗರು ಇದ್ರಸೆ ಗಿಡ ಎನ್ನುತ್ತಾರೆ. ಇದನ್ನು ಮಕ್ಕಳ ಶ್ವಾಸ ಸಂಬಂಧಿಯಾದ ಇದ್ರಸೆ ಎಂಬ ರೋಗಕ್ಕಾಗಿ ಬಳಸುತ್ತಿದ್ದಾರೆ. ಇಂತಹ ಅನೇಕ ಮದ್ದಿನ ಗಿಡಗಳ ಅರಿವು ನಮ್ಮ ಪೂರ್ವಜರು ನೀಡಿದ ನಿಧಿ.ಇದನ್ನು ರಕ್ಷಿಕೊಳ್ಳುವದು ನಮ್ಮ ನಿಮ್ಮ ಕರ್ತವ್ಯ. ಈ ಬಗ್ಗೆ ತ್ವರಿತ ಅಧ್ಯಯನವು ನಡೆಯಬೇಕಾಗಿದೆ.

Friday 10 August, 2012

ನಮ್ಮ ಗಿಡ ಮರಬಳ್ಳಿಗಳು-ಸಾವಿರ ಸಂಬಾರ ಸೊಪ್ಪು



 ಸಾವಿರ ಸಂಬಾರಸೊಪ್ಪು 
   coleus aromaticus  Benth              

 ಇದಕ್ಕೆ ಸಾಂಬಾರು ಸೊಪ್ಪಿನಬಳ್ಳಿ, ದೊಡ್ಡಪತ್ರೆ:- ಇತ್ಯಾದಿ ಕನ್ನಡ ಹೆಸರುಗಳಿವೆ. ಸಂಸ್ಕೃತದಲ್ಲಿ ಅಜಪಾದ ಇಂದು ಪರ್ಣ ಎನ್ನುತ್ತಾರೆ. ಕೋಲಿಯಸ್ ಅಂಬೋನಿಕಸ್ ಇದು ಇದರ ಸಸ್ಯಶಾಸ್ರ್ತೀಯ ದ್ವಿನಾಮ ಇದು ಲೆಮಿನೇಸಿ ಕುಟುಂಬಕ್ಕೆ ಸೇರಿದೆ.
ಸಾವಿರ ಸಂಬಾರಗಿಡವು ನೆಲದ ಮೇಲೆ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದರ ಹೆಸರಿನ ಜೊತೆ ಬಳ್ಳಿ ಶಬ್ದ ಸೇರಿದ್ದರೂ ಇದು  ಬಳ್ಳಿಯಲ್ಲ. ಆದರೆ ನೆರಳಿರುವಲ್ಲಿ ಅಥವಾ ಆಧಾರವು ದೊರೆತರೆ ಬಸಲೆಯಂತೆ ತುಸು ಉದ್ದವಾಗಿ ಹಬ್ಬಿಕೊಳ್ಳುತ್ತದೆ.ಎದುರು ಬದುರು ಇರುವ ದಪ್ಪ ರಸಭರಿತ ಎಲೆಗಳು ಹಸುರಾಗಿದ್ದು ತುಂಬಾ ಸುವಾಸನೆಯುಳ್ಳದ್ದಾಗಿವೆ. ಗಿಡಗಳು ಚೆನ್ನಾಗಿ ಬಲಿತಮೇಲೆ ಜ್ಯೇಷ್ಟದಿಂದ ಭಾದ್ರಪದ ಮಾಸದವರೆಗೆ ಹಸುರಾದ ಸುವಾಸನಾಭರಿತ ಹೂ ಬಿಡುತ್ತವೆ. 

ಪಶ್ಚಿಮ ಕರಾವಳಿಯಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಅನೇಕರು ಇದನ್ನು ಮನೆಮದ್ದು ಮತ್ತು ಅಡುಗೆಯಲ್ಲಿ ಬಳಸುತ್ತಾರೆ ಎಲೆಯಿಂದ . ರಸ ತೆಗೆಯುವ ಮುನ್ನ ಅಡುಗೆ ಮಾಡಲು,ಕಟ್ಟಿಗೆ ಒಲೆ ಉರಿಸಿದ ನೆಲದ ಮೇಲೆ ಎಲೆಗಳನ್ನು ಇಟ್ಟು ಬಾಡಿಸಿಕೊಳ್ಳುತ್ತಾರೆ ಎಲೆಗಳು ಬಾಡಿಸಿದರೆ ರಸವನ್ನು ಹಿಂಡಿಕೊಳ್ಳುವದು ಸುಲಭವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಕಟ್ಟಿಗೆ ಒಲೆ ಬಳಕೆಯಿಲ್ಲದ ಕಡೆ, ಎಲೆಗಳನ್ನು ಬಿಸಿಲಿನಲ್ಲಿ ಬಾಡಿಸಿ ಅಥವಾ ಸಣ್ಣ ಉರಿಯ ಮೇಲಿಟ್ಟು ಕಾಸಿದ ಪಾತ್ರೆಯ ಮೇಲೆ ಎಲೆಗಳನ್ನಿಟ್ಟು ಬಾಡಿಸಿಕೊಳ್ಳಬಹುದು. ಎಲೆಗಳನ್ನು ಬಾಳೆ ಎಲೆಯಲ್ಲಿಟ್ಟು ಬಾಳೆ ಎಲೆಯನ್ನು ಸುತ್ತಿ ಅದನ್ನು ಬೂದಿಮುಚ್ಚಿದ ಕೆಂಡದಲ್ಲಿ ಹುಗಿದು ಬಾಳೆ ಎಲೆಯು ತುಸು ಬಾಡಿದಾಗ ಹೊರತೆಗೆದು ಒಳಗಿರುವ ಸಂಬಾರ ಸೊಪ್ಪನ್ನು ಹಿಂಡಿ ರಸ ಪಡೆಯುವದು ಇನ್ನೊಂದು ಜನಪದ ಪದ್ಧತಿ ಈ ಪದ್ಧತಿಯನ್ನು ಮುಂಬರಿ ಹುಗಿಯುವದು ಎನ್ನುತ್ತಾರೆ.

     ಮೈಮೇಲೆ ಪಿತ್ತದ ಗಂದೆಗಳು ಎದ್ದಾಗ ಇದರ ಎಲೆಯ ರಸವನ್ನು ಸೇವಿಸುವದು, ಮತ್ತು ಮೈಗೆ ಬಳಿಯುವದು ಅನೇಕ ಕಡೆ ರೂಢಿ ಯಲ್ಲಿದೆ.ಎಲೆಯ ರಸಕ್ಕೆ ಕಫವನ್ನು ಕರಗಿಸುವ ಗುಣವಿದೆ.ಎಲೆಗಳ ರಸವನ್ನು  ಮಕ್ಕಳಿಗೆ ಶುದ್ಧ ಕಲ್ಲುಸಕ್ಕರೆ ಬೆರೆಸಿ ಕುಡಿಯಲು ಕೊಡಬೇಕು. ಆರೆಂಟು ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಅದಕ್ಕೆ ಸಿಹಿಯಾಗುವಷ್ಟು ಜೇನು ಅಥವಾ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸದಂತೆ ದಿನಕ್ಕೆ ಮೂರು ಬಾರಿ ಕೊಡಬೇಕು. ಭೇದಿಯಲ್ಲಿಯೂ ಇದು ಉತ್ತಮ ಮನೆಮದ್ದು. ಕೊಲೆರಾ ರೋಗಾಣುಗಳನ್ನು ಗುಣ ಪಡಿಸುವ ಗುಣವಿದೆಯೆಂದು ತಿಳಿದು ಬರುತ್ತದೆ. ಕಾಲರಾ ರೋಗದಲ್ಲಿ ಇದರ ನಾಲ್ಕಾರು ಎಲೆಗಳನ್ನು ಜಜ್ಜಿ ಕುದಿಸಿ ಆರಿಸಿದ ನೀರಿನಲ್ಲಿ ತಿಕ್ಕಿ ಸೋಸಿ ಕುಡಿಯಲು ಕೊಡಬೇಕು. ಈ ಕ್ರಮವನ್ನು ಮೊದಲು ಅರ್ಧ ತಾಸಿಗೊಮ್ಮೆ ಬಳಿಕ ತಾಸಿಗೊಮ್ಮೆ ನಡೆಸಬೇಕು.

ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ತಲೆಯೆಣ್ಣೆಯನ್ನು ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನಿತ್ಯ ತಲೆಗೆ ಹಾಕುವದರಿಂದ ತಲೆ ತಂಪಾಗುವುದು. ಕಣ್ಣುರಿ ಕಡಿಮೆಯಾಗುವದು.ಒಳ ವಸ್ತ್ರದ ಹೊಲಸು, ಬೆವರು ಮತ್ತು ಬಟ್ಟೆಯ ಬಿಗುವಿನ ಕಾರಣ ತುರಿಕಜ್ಜಿಯಾದರೆ ಸಂಬಾರಸೊಪ್ಪು, ಅರಿಶಿನಪುಡಿ, ಇವನ್ನು ಬೆಣ್ಣೆಯಲ್ಲಿ ಅರೆದು ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಸಲ ಹಚ್ಚಿದರೆ ಗುಣವಾಗುತ್ತದೆ. ಚೇಳು ಪಡ್ಚೆಹುಳ[ ಶತಪದಿ]ಇತ್ಯಾದಿ ವಿಷ ಕೀಟಗಳು  ಕಚ್ಚಿದಾಗ ಕೂಡಲೆ ಎಲೆಯನ್ನು ಜಜ್ಜಿದ ರಸ ಹಚ್ಚ ಬೇಕು. ಎಲೆಯ ಹಸಿ ರಸವನ್ನು ಹಣೆಗೆ ಹಚ್ಚಬೇಕು.

ರೋಗವಿಲ್ಲದಾಗ ಇದನ್ನು ಆಹಾರವಾಗಿಯೂ ಬಳಸುತ್ತಾರೆ.  ಇದರಿಂದ ಹಲವು ಬಗೆಯ ಅಡುಗೆಯನ್ನು ತಯಾರಿಸಿ ಉಣ್ಣುತ್ತಾರೆ
 
ಸಣ್ಣ ಪಾತ್ರೆಯಲ್ಲಿ ಆರೆಂಟು ಎಲೆ, ಆರು ಕರಿಮೆಣಸು ಅರ್ಧಚಮಚ ಜೀರಿಗೆ, ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆಯ ಪರಿಮಳ ಬರುವವರೆಗೆ ಬಾಡಿಸಿಕೊಂಡು ಅದನ್ನು ಅರ್ಧ ಹಿಡಿ ತೆಂಗಿನಕಾಯಿಸುಳಿಯೊಂದಿಗೆ ಅರೆದು ಹುಳಿ ಮಜ್ಜಿಗೆ ಕೂಡಿಸಿ. ತಂಬುಳಿ ತಯಾರಿಸುತ್ತಾರೆ


     ಎರಡು ಎಲೆಯನ್ನು ಉಪ್ಪು ಹುಳಿ ಬೆಲ್ಲ ಎರಡು ಒಣ ಮೆಣಸು ಹಾಕಿ ಬೇಯಿಸಿರಿ ಒಂದು ಹಿಡಿ ಕಾಯಿಸುಳಿ ಜೊತೆ ಅರೆಯಿರಿ. ಒಣಮೆಣಸಿನ ಒಂದೆರಡು ತುಂಡು ಚಿಟಿಕೆ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ ವಗ್ಗರಣೆ ಮಾಡಿ ಗೊಜ್ಜು, ತಯಾರಿಸುತ್ತಾರೆ. 
ಅನೇಕ ರೋಗವನ್ನು ಹತೋಟಿಯಲ್ಲಿಡುವ ಔಷಧೀಯ ಗುಣಗಳುಳ್ಳ ಸಾವಿರ ಸಂಬಾರ ಸೊಪ್ಪಿನ ಬೇಡಿಕೆ ಇತ್ತೀಚಿಗೆ ಹೆಚ್ಚುತ್ತಿರುವುದು ಗಮನಾರ್ಹ.

ಸಾವಿರ ಸಂಬಾರ ಸೊಪ್ಪಿನ ಈ ಗಿಡವನ್ನು ಕುಂಡದಲ್ಲಿ ಅಥವಾ ಮನೆಯ ಮುಂದೆ ಬೆಳೆಸಿಕೊಂಡರೆ ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಒಂದು ಗಿಡ ಬೆಳೆ ಸಲು ಒಂದು   ಗೇಣುದ್ದದ  ಟೊಂಗೆ ಸಾಕು. ಪ್ರಯತ್ನಿಸಿರಿ.

Thursday 9 August, 2012


           ತಿಗಳಾರಿ ಲಿಪಿ

                  ಉತ್ತರಕನ್ನಡ ಜಿಲ್ಲೆಯಲ್ಲಿ  ದೊರೆತ ಒಂದು ವಿಶೇಷ ಬಗೆಯ ಲಿಪಿಯನ್ನು ಕಣ್ಣಾರೆ ಕಂಡು ಆ ಬಗ್ಗೆ ಪುಸ್ತಕದಲ್ಲಿ ದಾಖಲಿಸುವಲ್ಲಿ ಮೊದಲಿಗರಾದ ಇಬ್ಬರು ಮಹನೀಯರಲ್ಲಿ ವಿದೇಶಿಯರಾದ ಬುಖಾನನ್ [1801]ಒಬ್ಬರಾದರೆ ಇನ್ನೊಬ್ಬರು ಕಾರವಾರದವರಾದ  ಎಸ್. ಸಿಲ್ವಾ. 

              ಎಸ್. ಸಿಲ್ವಾ. ಇವರು  ಕೆನರಾ  ಗೆಜಿಟಿಯರದ ಪರಿಷ್ಕರಣದ  ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಕೈಕೊಂಡ ಸಂದರ್ಭದಲ್ಲಿ ದೊರೆತ ಮಾಹಿತಿಯನ್ನು ಇಂಗ್ಲಿಷಿನಲ್ಲಿ ಬರೆದರು. ಇದನ್ನು  ಶ್ರೀ ಎಂ. ಎನ್. ಭಂಡಾರಕರ ಕನ್ನಡಕ್ಕೆ ಅನುವಾದಿಸಿದರೆಂದು  ಕಾರವಾರ ಜಿಲ್ಲಾ ದರ್ಶನ ಈ ಪುಸ್ತಕದಲ್ಲಿ ಎಸ್. ಸಿಲ್ವಾ ತಿಳಿಸುತ್ತಾರೆ.  ಇದು ಪ್ರಕಟವಾದ ಕಾಲ 1962 ಎಂದು  ತಿಳಿಯಲಾಗಿದೆ.  ಇವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ ತಿಗಳಾರಿ ಲಿಪಿಯ ಛಾಯಾ ಚಿತ್ರ ಇಲ್ಲಿದೆ.  


ಎರಡನೆಯದು 1985ರಲ್ಲಿ [ಶಾಂತಿನಾಯಕ] ಸ್ವತಃ ತಿಗಳಾರಿ ಬಲ್ಲವರಿಂದ  ಕರ್ಕಿಯಲ್ಲಿ ಬರೆಯಿಸಿಕೊಂಡದ್ದಾಗಿದೆ. ಇದರಲ್ಲಿ ಕನ್ನಡ ನಾಡಿನ ಕನ್ನಡ ಲಿಪಿಯ ಪ್ರಭಾವವು ತಿಗಳಾರಿ ಲಿಪಿಯ ಮೇಲಾಗಿರುವ ಪ್ರಮಾಣವನ್ನು  ಗುರುತಿಸಬಹುದು. 

Saturday 4 August, 2012


          ಕಲ್ಲುಕೆಸುAriopsis peltata Nimmo Araceae


     ಮಳೆಗಾಲದಲ್ಲಿ ಕರಾವಳಿಯ ಜಂಬಿಟ್ಟಂಗಿಯ ಕಲ್ಲಿನ ಪಾಗಾರದ ಮೇಲೆ ಪಾಗಾರವನ್ನೆಲ್ಲ ಮುಚ್ಚುವಂತೆ ಒತ್ತಾಗಿ ಬೆಳೆಯುವ ಕಲ್ಲುಕೆಸು, ಆಹಾರವಾಗಿ ಬಳಕೆಯಲ್ಲಿದೆ.

    ಎಲೆಗಳು ಅಮೃತಬಳ್ಳಿಯ ದೊಡ್ಡ ಎಲೆಗಳನ್ನು ಹೋಲುತ್ತವೆ. ಎರಡು ಇಂಚಿನಿಂದ ಅರ್ಧ ಅಡಿಯವರೆಗೆ ಎತ್ತರವಾಗಿ ಬೆಳೆಯುತ್ತವೆ.ಇದಕ್ಕೆ ಮರಕೆಸುವಿಗಿರುವಂತೆ ಸಣ್ಣ ಗಡ್ಡೆಗಳಿದ್ದು ಇವು ಕಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡಿರುತ್ತವೆ. ಕಪ್ಪು ಮೈಯುಳ್ಳ ಹ್ಡೆಯಂತಹ ದೇಟಿನೊಳಗೆ ಲಂಬ ನಿಲುವಿನ ಹೂವು.

    ಜನಪದ ಆಹಾರ : ಈ ಕೆಸುವಿನೆಲೆಗಳನ್ನು ಶ್ರಾವಣಮಾಸದ ಮೊದಲೇ ಬಳಸುವದು ಪದ್ಧತಿಯಾಗಿದೆ. ಇದರ ಮುಗ್ದ ಮೋಹಕ ಸೌಂದರ್ಯದ ಜೊತೆಗೆ ಆಹಾರ ಯೋಗ್ಯವಾದ ರುಚಿಯು ಇದೆ. ಇದರ ಎಲೆಯಿಂದ ಪತ್ರೊಡೆ, ಕರಗ್ಲಿ ಮುಂತಾದ ವ್ಯಂಜನಗಳನ್ನು ತಯಾರಿಸಿ ಸೇವಿಸುತ್ತಾರೆ. ಇದರ ಮುದ್ದೆ ಪತ್ರೊಡೆ ಹೆಚ್ಚು ಬಳಕೆಯಲ್ಲಿವೆ..

   ಜನಪದ ಅಡುಗೆ1: ಮುದ್ದೆ ಪತ್ರೊಡೆ : ಇದರ ಒಂದು ಬೊಗಸೆ (ಸುಮಾರು ನಲವತ್ತು)ಎಲೆಗಳನ್ನು ಕೊಚ್ಚಿರಿ, ಎರಡು ನೀರುಳ್ಳಿಗಳನ್ನು ಕೊಚ್ಚಿರಿ. 6 ಒಣಮೆಣಸು 1 ಚಮಚ ಕೊತಂಬರಿ, 5 ಮೆಂತೆಕಾಳು, ಕಾಲು ಚಮಚ ಸಾಸಿವೆಯನ್ನು ಎಣ್ಣೆ ಹನಿಸಿಕೊಂಡು ಬೇರೆ ಬೇರೆಯಾಗಿ ಹುರಿಯಿರಿ. 

ಅರ್ಧ ಕಡಿ (1 ಕಪ್ಪು) ಕಾಯಿಸುಳಿ, ಎರಡು ತಾಸು ನೆನೆಯಿಸಿದ 4 ಚಮಚ ಕಡಲೇಬೇಳೆ, 1 ನೆಲ್ಲಿಕಾಯಿ ಗಾತ್ರದ ಹುಣಸೆ ಹುಳಿ, 2 ಚಮಚ ಬೆಲ್ಲ ಹಾಗೂ ಹುರಿದ ಮಸಾಲೆಯ ಪರಿಕರಗಳನ್ನು ಕೂಡಿಸಿ ತುಸು ನೀರನ್ನು ಸೇರಿಸಿ ಮುದ್ದೆಯಾಗಿ ಅರೆಯಿರಿ. 
ಕೊಚ್ಚಿದ ಸೊಪ್ಪು, ಉಳ್ಳಾಗಡ್ಡೆ ಹಾಗೂ ಒಂದುವರೆ ಚಮಚ ಉಪ್ಪನ್ನು ಈ ಮುದ್ದೆಗೆ ಕೂಡಿಸಿ ತುಸು ಕಿವುಚಿರಿ. ಲಿಂಬುಗಾತ್ರದ ಮುದ್ದೆ ಕಟ್ಟಿರಿ, ಅದನ್ನು ತುಸು ಒತ್ತಿ ಚಪ್ಪಟೆಮಾಡಿರಿ ಇಡ್ಲಿಯಂತೆ ಬೇಯಿಸಿರಿ. ಈ ಇಡ್ಲಿಗೆ ರವೆಯನ್ನು ಹಚ್ಚಿ ತುಸು ಎಣ್ಣೆ ಬಿಟ್ಟು ದೋಸೆ ಹಂಚಿನ ಮೇಲೆ ಹುರಿದು ತಿನ್ನಬಹುದು. ಒಗ್ಗರಣೆ ಮಾಡಿ ಅದರಲ್ಲಿ ಪತ್ರೊಡೆಗಳನ್ನು ಹರಿದು ಪುಡಿಮಾಡಿ ಸ್ವಲ್ಪ ಕಾಯಿ ಸುಳಿಹಾಕಿ ಕೆದಕಿದರೆ 'ಪತ್ರೊಡೆ ಪುಡಿ' ತಯಾರಾಗುತ್ತದೆ. 

 ಸಾಧ್ಯತೆ : ಪಾಲಕ ಸೊಪ್ಪನ್ನು ಬಳಸಿ ತಯಾರಿಸುವಂತೆ ಇದರ ಎಲೆಯಿಂದ ಬಜಿ, ಸಾರು, ಚಟ್ನಿ ಮಾಡಬಹುದು.
ಇದನ್ನು ಹಳೆಯ ಜಂಬಿಟ್ಟಣಗಿಯ ಕಲ್ಲಿನ ಮೇಲೆ ಹಾಗೂ ತಂಪುಳ್ಳ ನೆಲದ ಮೇಲೆ ಬೆಳೆಸಿಕೊಳ್ಳಬಹುದು.