Thursday 26 July, 2012

ನಮ್ಮ ಗಿಡ ಮರ ಬಳ್ಳಿಗಳು- ಅಡಸೋಗೆ


        CqÉظÉÆUÉ 
           Adhathoda vasica,Nees.Acanthaceae


       ಇದು ಸದಾ ಹಸುರಾಗಿರುವ ಚಿಕ್ಕ ಗಿಡ. ಇದರ ಎಲೆಗಳು ಮಾವಿನೆಲೆಗಿಂತ ದೊಡ್ಡ ಮತ್ತು ಉದ್ದವಾಗಿರುತ್ತವೆ. ಈ ಗಿಡ ಬಿಳಿ ಹೂಗಳನ್ನು ಹೊಂದಿರುತ್ತದೆ. ಹೂಗಳ ಮೇಲೆ ತಿಳಿ ನೀಲಿ ರೇಖೆಯಿರುತ್ತದೆ. ಎಲೆಗಳು ಎದುರು ಬದುರಾ ಗಿರುತ್ತವೆ.  ಎಲೆಯ ತೊಟ್ಟು ಕಾಂಡಕ್ಕೆ ಕೂಡುವಲ್ಲಿ ಕಾಂಡವು ತುಸು ದಪ್ಪವಾಗಿರುತ್ತದೆ. ಭಾರತದ ಎಲ್ಲ ಕಡೆ ಇದು ಬೆಳೆಯುತ್ತದೆ. 

        ಇದಕ್ಕೆ ಕನ್ನಡದಲ್ಲಿ ಅಡ್ಸೊಗೆ, ಅಡ್ಡೆಸೊಗೆ, ಆಡುಸೊಗೆ, ಆಡು ಮುಟ್ಟದ ಗಿಡ, ಇತ್ಯಾದಿ ಹೆಸರುಗಳಿವೆ. ಇದರ ಟೊಂಗೆಗಳನ್ನು ಬೇಲಿಯುಲ್ಲಿ ಚುಚ್ಚಿದರೆ ಸಾಕು ಚೆನ್ನಾಗಿ ಬೆಳೆದು ನಮ್ಮ ತೋಟವನ್ನು ದನಕರುಗಳ ಕಾಟದಿಂದ ಕಾಯುತ್ತವೆ. ಅಡ್ಡೆ ಎಂದರೆ ಬೇಲಿ. ಸೊಗೆ ಎಂಬುದು ಒಂದು ಗಿಡದ ಅಂಗವನ್ನು ಸೂಚಿಸುತ್ತದೆ. ಬೇಲಿ ಮಾಡಿ  ತೋಟ ಮಾಡುವವರು ಮೂಲತಃ ಇದನ್ನು ಅಡ್ಡೆಗೆ ಸೋಗೆಯಾಗಿ ಬಳಸುತ್ತಿದ್ದ ಕಾಲದಲ್ಲಿ ಇದಕ್ಕೆ ಅಡ್ಸೊಗೆ, ಅಡ್ಡೆಸೊಗೆ ಎಂಬ ಹೆಸರುಗಳು ರೂಢಿಗೆ ಬಂದವು. ಇದಕ್ಕೆ ಸಂಸ್ಕೃತದಲ್ಲಿ ವಾಸ, ವಾಸಕಲ್ಪ ಎಂಬ ಹೆಸರುಗಳಿವೆ ಆಯುರ್ವೇದದಲ್ಲಿ ತೀರ ಪರಿಚಿತವಾದ ಗಿಡವಿದು. ಅಲ್ಲಿ ಇದನ್ನು ವೈದ್ಯರ ತಾಯಿಯೆ0ದು ಕರೆದು ಗೌರವಿಸಲಾಗುತ್ತದೆ ಇದರ ವೈಜ್ಞಾನಿಕ ಹೆಸರು ಅಡತೊಡ ಜೈಲಾನಿಕ ಎಂದಾಗಿರುತ್ತದೆ.

         ಅಡ್ಡೆಸೊಗೆ ಹಿತ್ತಲವನ್ನಷ್ಟೇ ಅಲ್ಲ, ನಮ್ಮ ಆರೋಗ್ಯವನ್ನು ಕಾಯುವ ಶಕ್ತಿಯನ್ನು ಹೊಂದಿದೆ. ಇದು ಕೆಮ್ಮು, ದಮ್ಮು, ನೆಗಡಿ ಮುಂತಾದ ರೋಗಗಳಿಗೆ ದಿವ್ಯವಾದ ಔಷಧವಾಗಿದೆ. ಇದನ್ನು ತಿಳಿದುಕೊಂಡು ಔಷಧ ತಯಾರಕರು ಇದರ ಎಲೆಯಿಂದ ಸಿರಿಪ್ ತಯಾರಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ಹಿತ್ತಲದಲ್ಲಿ ಸುಲಭವಾಗಿ ಬೆಳೆಯುವ ಇದರ ಉಪಯೋಗವನ್ನು ತಿಳಿಯುದೆ. ಪೇಟೆಯು ಮದ್ದಿಗೆ ಬೆಲೆ ತರುತ್ತಿದ್ದೇವೆ. ಇದನ್ನು ಮನೆ ಮದ್ದಿನಲ್ಲಿ ಬಳಸುವುದು ಕಷ್ಟವಲ್ಲ. 

          ಇದರ ಬೇರು ಎಲೆ ಹೂಗಳೆಲ್ಲವೂ ಔಷಧಿಯಾಗಿವೆ. ನಾಲ್ಕು ಎಲೆಯನ್ನು ಎರಡು ಕಪ್ ನೀರಿನಲ್ಲಿ ಕುದಿಸಿ ತುಸು ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿ ಎರಡು ದಿನ ಮೂರು ಹೊತ್ತು ಆಹಾರ ಸೇವನೆಗೆ ಮೊದಲು ಸೇವಿಸಬೇಕು. ಇದರಿಂದ ಕೆಮ್ಮು ಕಫಗಳು ದೂರವಾಗುತ್ತವೆ. ಇದನ್ನು ಮಕ್ಕಳಿಗೆ ವಯಸ್ಸಿಗನುಗುಣವಾಗಿ ನೀಡಬೇಕು. 
 
         ಬೇರನ್ನು ತುಸು ಜೇನಿನಲ್ಲಿ ತೇದು ನೆಗಡಿ ಕಫದಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ ಮೂರುಬಾರಿ ನೆಕ್ಕಿಸಿದರೆ ಕಫ ಕರಗುತ್ತದೆ. ಮಕ್ಕಳಿಗೆ ಅಡ್ಡೆಸೊಗೆಯ ಅಂದರೆ ಅಡುಸೊಗೆಯ ಎಲೆಯು ಒಂದು ಚಮಚ ರಸವನ್ನು ತುಸು ಬಿಸಿ ಮಾಡಿ ಒಂದು ಚಮಚ ಜೇನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಸಬಹುದು.

         ನೆಗಡಿ, ಜ್ವರವಿದ್ದಾಗ, ಹತ್ತಿಪ್ಪತ್ತು ಅಡ್ಡಸೊಗೆಯ ಎಲೆಯನ್ನು ಕುದಿಸಿ ಸ್ನಾನದ ನೀರಿಗೆ ಕೂಡಿಸಿ ಆ ನೀರಿನಿಂದ ಮೈಗೆ ಸ್ನಾನ ಮಾಡಬೇಕು. ( ಗೃಹವೈದ್ಯಗ್ರಂಥ)

        ಅಡ್ಡೆಸೊಗೆಯ ಎಲೆಯ ರಸವು ಮಹಿಳೆಯರ ಮುಟ್ಟಿನ ತೊಂದರೆಯನ್ನು ನಿವಾರಿಸಬಲ್ಲದು ಮುಟ್ಟಿನ ಹೊಟ್ಟೆ ನೋವಿನಿಂದ ತೊಂದರೆ ಪಡುವ ಮಹಿಳೆಯರು ಅಡ್ಡೆಸೊಗೆ ಎಲೆಯ ಎರಡು ಚಮಚ ರಸವನ್ನು  ಜೇನು ತುಪ್ಪ ಬೆರೆಸಿ ಸುಮಾರು 10 ರಿಂದ 15 ದಿನ ಸೇವಿಸಬೇಕು. 

       ಅಡ್ಡೆಸೊಗೆಯು ಎಲೆ ಚರ್ಮರೋಗ ನಿವಾರಕವೂ ಅಹುದು. ಎಲೆ ಮತ್ತು ಅರಶಿನ ಅರೆದು ಮೈಗೆ ಹಚ್ಚಿ ಅರ್ಧತಾಸಿನ ಬಳಿಕ ಅಟ್ಟಲಕಾಯಿಯು ನೊರೆ ಹಚ್ಚಿ ಸ್ನಾನ ಮಾಡಿದರೆ ಮೈಮೇಲಿನ ನವೆ, ಕಜ್ಜಿ ದೂರವಾಗುತ್ತದೆ. ಚರ್ಮರೋಗ ನಿವಾರಣೆಗಾಗಿ ಆಗಾಗ ಈ ರೀತಿ ಸ್ನಾನವು ಅನುಕೂಲಕರವಾಗಿದೆ. ಅಡ್ಡೆಸೋಗೆಯ ಎಲೆಯ ರಸದಲ್ಲಿ ಹಾಲ್ಬಳ್ಳಿ ಬೇರನ್ನು ತೇದು ಹಚ್ಚುವದರಿಂದ ಮುಖದ ಕಪ್ಪು ಕಲೆಗಳು ಮಾಯುತ್ತವೆ, ಅಡ್ಡೆಸೊಗೆಯ ಔಷಧ ಗುಣಗಳು ನೂರಾರು. ಮೂಲವ್ಯಾಧಿ ರಕ್ತ ಹೀನತೆ ಜಂತು ಹುಳು ಪಾದದ ಉರಿ ಮುಂತಾದವುಗಳನ್ನು ನೀಗಬಲ್ಲದು.  ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಪ್ರಯುತ್ನಿಸಿರಿ. ಒಂದೆರಡು ಟೊಂಗೆ ತಂದು ನಿಮ್ಮ ಬೇಲಿಗೆ ನೆಟ್ಟಿರಿ. ಹಚ್ಚ ಹಸುರಾಗಿ ಸದಾ ಹಸನ್ಮುಖಿಯಾಗಿರುವ ಇದನ್ನು ಕುಂಡದಲ್ಲಿ ಕೂಡ ನೆಟ್ಟುಕೊಳ್ಳಬಹುದು. ಅನೇಕ ವರ್ಷ ಬಾಳುತ್ತ ಈ ಹಸಿರು ವೈದ್ಯೆ ನಿಮ್ಮ ಹಾಗೂ ಕುಟುಂಬದವರ ಮತ್ತು ನೆರೆಹೊರೆಯವರ ಆರೋಗ್ಯ ರಕ್ಷಣೆಯ ಹೊರೆ ಹೊರಬಲ್ಲಳು.

No comments:

Post a Comment