Saturday 14 July, 2012

ಕಾಯಕ ಮಾಡಿ ಕಾಯತೇದ ಕರ್ಕಿಯ ಗುರ್ಕಜ್ಜ ಒಂದು ನೆನಪು


ಕಾಯಕ ಮಾಡಿ ಕಾಯತೇದ
         ಕರ್ಕಿಯ ಗುರ್ಕಜ್ಜ  ಒಂದು ನೆನಪು
  
 ಈ ಲೇಖನವು ರವಿವಾರ ಜನವರಿ 1985ರಲ್ಲಿ`ನೆನಹು' ಲೇಖನ ಮಾಲೆಯಲ್ಲಿ ಪ್ರಕಟಗೊಂಡಿತ್ತು.  ಪತ್ರಿಕೆಯ ಹೆಸರು ನೆನಪಿಲ್ಲ. ಲೇಖನದ ಝೆರಾಕ್ಸ ಮಾತ್ರ ನನ್ನ ಬಳಿಯಿದೆ. ಅದನ್ನು ಮತ್ತೊಮ್ಮೆ ಈ ದಿನ ಬ್ಲಾಗ್ ನಲ್ಲಿ ನನ್ನ 70ನೇಯ ವರ್ಷದ ಈ ದಿನ ಪ್ರಕಟಿಸುತ್ತಿದ್ದೇನೆ.

  ನಮ್ಮ ದೇಶದ  ಕೆಲವು ರಾಜಮಾರ್ಗಗಳ ಎಡ ಬಲಕ್ಕೆ ಅಲ್ಲಲ್ಲಿ ನೆಟ್ಟು ಬೆಳೆಸಿದಂತಿರುವ ದೊಡ್ಡ ದೊಡ್ಡ ಸಾಲು ಮರಗಳನ್ನು ಕಾಣುತ್ತೇವೆ. ಆಗ ಈ ಮರಗಳನ್ನು ನೆಟ್ಟವರು ಯಾರು ಎಂಬ ಪ್ರಶ್ನೆ ಕುತೂಹಲಗೊಂಡ ನಮ್ಮ ಮುಂದೆ ನಿಲ್ಲುತ್ತದೆ. ಹಳೆಯ ಸಂಗತಿ ಬಲ್ಲವರು ಆಗ ನಮ್ಮ ಬಳಿಯಿದ್ದರೆ ನಮ್ಮ ಈ ಪ್ರಶ್ನೆಗೆ ಉತ್ತರವಾಗಿ ಒಂದು ಸುಂದರವಾದ ಕತೆ ಹೇಳುತ್ತಾರೆ.
   
  ' ಬಹು ಹಿಂದೆ ಒಬ್ಬ ಸೈನಿಕ  ಯುದ್ದದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ. ಆತ ಕೈಯೂರಿ ನಡೆಯುತ್ತ ತನ್ನ ಊರು ಮುಟ್ಟಿದ. ಅವನು ಅಂತಹ ಸ್ಥಿತಿಯಲ್ಲಿದ್ದರೂ ತನ್ನ ದೇಶದ ಸಲುವಾಗಿ ಏನಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂಬಾಸೆ ಅವನಲ್ಲಿ ಜೀವಂತವಾಗಿತ್ತು. ಆತ ಗಿಡ ನೆಡುವ ಕೆಲಸವನ್ನು ಆರಿಸಿಕೊಂಡ. ತನ್ನ ಮರಣ ಕಾಲದವರೆಗೂ ಅವಿರತವಾಗಿ ಗಿಡ ನೆಡುತ್ತಲೇ ನಡೆದ. ಅವನು ನೆಟ್ಟ ಗಿಡಗಳೇ ಇಂದು ನಾವು ಕಾಣುವ ಸಾಲು ಮರಗಳು" ಎನ್ನುತ್ತಾರೆ.

   ಹೊನ್ನಾವರದ ಕರ್ಕಿಯಲ್ಲಿ ಸುಮಾರು ಹದಿನೈದು ವರ್ಷ ವಾಸಿಸಿ ಕಾಯಕ ಮಾಡಿ ಕಾಯ ತೇದು ಮರೆಯಾದ ಗುರ್ಕಜ್ಜ ಬಾಳಿದ ಜೀವನ ಕ್ರಮವನ್ನು ಕಣ್ಣಾರೆ ಕಂಡ ನನಗೆ ಈ ಮೇಲಣ ಕತೆ ಸತ್ಯ ಸಂಗತಿಯಾಗಿರಲೂ    ಬಹುದು ಎನಿಸುವುದುಂಟು.

    ಗುರ್ಕಜ್ಜನ ನಿಜ ಹೆಸರೇನು? ಆತ ಇಲ್ಲಿಗೆ ಎಲ್ಲಿಂದ ಬಂದ? ಇವನ ತಂದೆ ತಾಯಿ ಬಂಧು ಬಳಗ ಯಾರು? ಅರಿತವರಿಲ್ಲಿಲ್ಲ ಆತ ಸೈನ್ಯದಲ್ಲಿದ್ದವನೆಂದು ಕೆಲವರ ಊಹೆ. ನೇಪಾಳದ ಗೂರ್ಕರ ಜನಾಂಗದವ ನಿರಬಹುದೆಂಬುದು ಬಹು ಜನರ ಅಭಿಪ್ರಾಯ. ಹೀಗಾಗಿ ಆತ ಗುರ್ಕಜ್ಜನೆಂದು ಹೆಸರಾದ. ಆತನಿಗೆ ಹಿಂದಿ ಯಂತಹ ಭಾಷೆಯೊಂದು ಬರುತ್ತಿತು. ಕನ್ನಡ ಬರುತ್ತಿರಲಿಲ್ಲ. ಈ ಭಾಷಾ ಆಡಚಣೆಯಿಂದಲೋ, ಹುಟ್ಟು ಅಂರ್ತಮುಖಿಯಾಗಿರುವುದರಿಂದಲೋ  ಆತ ಜನರೊಂದಿಗೆ ಬೆರೆಯುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸ ವಾಯಿತು. ಅನೇಕ ವರ್ಷಗಳಿಂದ ಅವನು  ತೊಡುತ್ತಿದ್ದುದು ಒಂದು ನೀಲಿ ಚಡ್ಡಿ ಹಾಗೂ ಶರ್ಟಿನಂತಹ ಒಂದು ಅಂಗಿ. ಇತ್ತೀಚಿನ ಕೆಲವು ತಿಂಗಳು ಆತನ ಬಳಿ ಆ ಅಂಗಿಯೂ ಇರಲಿಲ್ಲವೇನೋ. ಒಳ ಚಡ್ದಿ ಮಾತ್ರ ಧರಿಸುತ್ತಿದ್ದ.

  ಗುರ್ಕಜ್ಜ  ಭಿಕ್ಷುಕನಾಗಿ  ಇಲ್ಲಿಗೆ  ಬಂದನೋ  ಏನೋ.  ಆದರೆ  ಕರ್ಕಿಯಲ್ಲಿ  ಆತ  ಭಿಕ್ಷುಕನಾಗಿ  ಬಾಳಲಿಲ್ಲ . ಆಲಸಿಯಾಗಿ  ಮೂಲೆ  ಹಿಡಿಯಲಿಲ್ಲ. ಅವನ  ಬಳಿ  ಭಿಕ್ಷಾ ಪಾತ್ರೆಯೂ ಇರಲಿಲ್ಲ. ಕಂತೆ ಬೊಂತೆ ಜೋಳಿಗೆಗಳೂ ಇರಲಿಲ್ಲ. ಹದಿನೈದು  ವರ್ಷಗಳ  ಹಿಂದೆಯೇ  ಎಪ್ಪತ್ತು ವರ್ಷ  ದಾಟಿರಬಹುದಾದ  ಆ  ಹಳದಿ  ಬಣ್ಣದ  ಗಿಡ್ಡ ದೇಹದ ಹಣ್ಣು ಹಣ್ಣು  ಮುದುಕ  ಗುರ್ಕಜ್ಜ  ತನ್ನ ಉಪಜೀವನಕ್ಕೆ ಆರಿಸಿಕೊಂಡ ದಾರಿ ಮಾತ್ರ  ಅಪೂರ್ವ .ಅದ್ವಿತೀಯ. ಆತ  ಆರಿಸಿಕೊಂಡ  ವೃತ್ತಿ ಅಂಗಡಿ ಮತ್ತು ಮನೆಯ ಆವರಣಗಳ  ಹಾಗೂ ಜನ ಬಳಸುವ ಓಣಿಗಳ ಸ್ವಚ್ಛತೆ. ಅವನ ವೃದ್ದಾಪ್ಯದ ಕಾರಣದಿಂದಲೋ. ಸ್ವಚ್ಛತೆಗಾಗಿ ಆತ ತಕ್ಕ ಹತ್ಯಾರ ಬಳಸುತ್ತಿದ್ದಿಲ್ಲ ವಾದುದರಿಂದಲೋ ಅವನ ಕೆಲಸ ನಿಧಾನವಾಗಿ ಸಾಗುತ್ತಿತ್ತು. ಅಂಗಡಿ ಮನೆಗಳ ಅಂಗಳ. ಹಾದಿ ಹಾಗೂ ಸುತ್ತಮುತ್ತ ಬೆಳೆದ ಹುಲ್ಲು ಕಸ ಕಡ್ಡಿ ತೆಗೆದು ಹೊರ ಚೆಲ್ಲಿ ಬರಿಗೈಯಿಂದ ಮಣ್ಣನ್ನು ಬದಿಗೆ ಸರಿಸಿ ಕಟ್ಟೆಯಂತೆ ಒಟ್ಟಿ ಆತ ಹೊರಟು ನಿಲ್ಲುತ್ತಿದ್ದ. ಆದರೆ  ತಾನು  ಇಂತಿಂಥ  ಕೆಲಸ  ಮಾಡಿದ್ದೇನೆ  ತನಗೆ  ಅದು  ಕೊಡಿ ಇದು  ಕೊಡಿ  ಎಂದು ಕೇಳುವ ಜಾಯಮಾನದವನಾಗಿರಲಿಲ್ಲ ಅವನು.  ಯಾರೂ ಹೇಳದೆ ತಾನೂ ಕೇಳದೆ ಎಸಗಿದ ತನ್ನ ಕಾರ್ಯಕ್ಕೆ ತಾನಾಗಿಯೇ ಪ್ರತಿಫಲ ಬೇಡುವುದು ತಪ್ಪು ಎಂಬುದು ಅವನ ತತ್ವವೋ ಏನೋ ತನ್ನ ಕೆಲಸ ಮುಗಿದೊಡನೆ ಇನ್ನೊಂದು ಮನೆ ಅಥವಾ ಅಂಗಡಿಯೆಡೆ ನಡೆದು ಬಿಡುವನು. ಅವನ ಈ ಸ್ವಭಾವನ್ನು ಬಲ್ಲ ಅಂಗಡಿ ಮಾಲಿಕರು, ಮನೆಯ ತಾಯಂದಿರು ಅವನು ಕೆಲಸ ಮುಗಿಸುತ್ತಲೆ ತಡಮಾಡದೆ ಒಂದು ಚಹವೋ ಸ್ವಲ್ಪ ಅನ್ನವೋ ಕೊಟ್ಟು ಕಳುಹಿಸುತ್ತಿದ್ದರು.
  
  ಆ ಹಣ್ಣು ಮುದುಕ ಕರ್ಕಿಯ ಬಸ್ ನಿಲ್ದಾಣದ ಸ್ವಚ್ಛತೆಯ ಕಾರ್ಯವನ್ನೂ ಮಾಡುತ್ತಿದ್ದ. ನಾಲ್ಕಾರು ಕಾಗದ ತುಂಡುಗಳನ್ನು ತನ್ನ ಕೈಗಳನ್ನೊ ಬಳಸಿ ಬಸ್ ನಿಲ್ದಾಣದ ಒಳಭಾಗವನ್ನು ಅದರ ಒಂದೆರಡು ಮಾರು ಅಂಗಳದ ಭಾಗವನ್ನು ಒಂದು ಹುಲ್ಲು ಕಡ್ಡಿಯೂ ಕಾಣದಂತೆ ಜಳ ಜಳ ಮಾಡುತ್ತಿದ್ದ .ಈ ಬಸ್ ನಿಲ್ದಾಣದಲ್ಲಿ ಭಿಕ್ಷುಕರು ಹುಚ್ಚರು ವಾಸ್ತವ್ಯ ಮಾಡಿ ಹೇಸಿಗೆ ಮಾಡಿ ಹೋಗುವುದುಂಟು. ಆದರೆ ಗುರ್ಕಜ್ಜ ಒಮ್ಮೆಯೂ ಆ ಸ್ಥಳವನ್ನೂ ತನಗಾಗಿ ಬಳಸಿದವನಲ್ಲ. ಆತ ಹಳೆಯ ಧರ್ಮಶಾಲೆಯ ಬಳಿ ಮಲಗುತ್ತಿದ್ದನಂತೆ.

  ಗುರ್ಕಜ್ಜನ ಆದರ್ಶಮಯ ಅನ್ನ ಗಳಿಕೆಯ ವಿಧಾನದ ಮಾತುಗಳು ಕರ್ಕಿಯಲ್ಲಿ ಹಿರಿ ಕಿರಿಯ ನೂರಾರು ಜನರ ಬಾಯಲ್ಲಿ ಅವನು ಬದುಕಿರುವಾಗಲೇ ಕೇಳಿ ಬರುತ್ತಿದ್ದವು. ಇತ್ತ ವೃದ್ದಾಪ್ಯದಿಂದ ಅವನ ಪಾದ ಮುಖಗಳು ಬಾತುಕೊಳ್ಳುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಆತನು ದುಡಿದು ಉಣ್ಣುವುದು ಸರಿಯಲ್ಲವೆಂದು ನನಗೊಮ್ಮೆ ಅನಿಸಿತು. ಸಾರ್ವಜನಿಕ ಕೆಲಸಗಳಲ್ಲಿ ಉತ್ಸಾಹಿಯಾಗಿದ್ದ ನನ್ನ ವಿದ್ಯಾರ್ಥಿಯೊಬ್ಬನು ಆತ ಸಾರ್ವಜನಿಕ ಗಣಪತಿ ಉತ್ಸವದ ತಯಾರಿಯಲ್ಲಿದ್ದಾಗ ಭೆಟ್ಟಿಯಾಗಿದ್ದೆ. ಅವನು ಗುರ್ಕಜ್ಜನ ವಿಷಯವನ್ನು ಚೆನ್ನಾಗಿ ಅರಿತವ. ಗುರ್ಕಜ್ಜನಿಗೆ ವೃದ್ದಾಪ್ಯ ವೇತನ ದೊರಕಿಸುವ ಅಥವಾ ಇನ್ನಾವುದಾದರೂ ಮಾರ್ಗದಿಂದ ಅವನಿಗೆ ಸಾಯುವ ಕಾಲಕ್ಕೆ ಅನ್ನದ ಬಾರಿಯನ್ನೂ ಮಾಡಿಕೊಡುವ ಬಗ್ಗೆ ಯೋಚನೆ ಮಾಡೋಣ. ಈ ಬಗ್ಗೆ ನಿನ್ನ ಗೆಳೆಯರನ್ನೆಲ್ಲ ಸಂಘಟಿಸು ಎಂದಿದ್ದೆ. ಆದರೆ ಕೆಲವೇ ದಿನಗಳಲ್ಲಿ ಆತ ತನ್ನ ಹೆಚ್ಚಿನ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಹೋದ. ಗುರ್ಕಜ್ಜನ ವಿಷಯ ಮಾತ್ರ  ನನ್ನ ಆಲಸ್ಯದ ಕಾರಣದಿಂದ ಮುಂದುವರಿಯಲಿಲ್ಲ. ನನ್ನ ಜಂಜಡದಲ್ಲಿಯೇ ನಾನು ಮುಳುಗಿದೆ.
   
  ಕಳೆದ ವರ್ಷ (1984) ಜೂನ್ ತಿಂಗಳಲ್ಲೊಮ್ಮೆ ನಾನು ವರ್ಗದಲ್ಲಿ ಪಾಠ ಪ್ರಾರಂಭಿಸುವ ಮುನ್ನ  ಒಬ್ಬ ವಿದ್ಯಾರ್ಥಿ ಎದ್ದು ನಿಂತು ``ಅಕ್ಕೋರೇ ಗುರ್ಕಜ್ಜ ಹೋಗಿ ಬಿಟ್ಟ''ಎಂದ. ಒಂದು ಕ್ಷಣ ಆ ಮಹಾಜೀವಿಯ ಕಾಯಕದ ರೀತಿ ಕಣ್ಮುಂದೆ ಹಾದು ಹೋಯಿತು.ಅವನ ಕೊನೆ ಹೇಗಾಯಿತೆಂದು ವಿವರ ಕೇಳಲು ನನಗೆ ಮನಸ್ಸಾಗಲಿಲ್ಲ. ವಿದ್ಯಾರ್ಥಿ ಇನ್ನು ಏನೋ ಹೇಳಲು ಬಾಯಿ ತೆರೆದ. ಆದರೆ ಅದನ್ನು ಕೇಳಿಸಿಕೊಳ್ಳಲು ನಾನು ಸಿದ್ದಳಿರಲಿಲ್ಲವೆಂದರಿತು ಸುಮ್ಮನಾದ. ಆತ ಹೇಳಬಹುದಾದುದನ್ನ ಕೇಳಿ ಸಹಿಸಿಕೊಳ್ಳುವ ಶಕ್ತಿ ಆಗ ನನ್ನಲ್ಲಿರಲಿಲ್ಲ. ನಾನು ಕೂಡ ಅವನಿಗಾಗಿ ಕೊನೆಗೂ ಏನೂ ಪ್ರಯತ್ನ ಮಾಡದೇ ಉಳಿದೆನಲ್ಲ ಎಂಬ ಅಪರಾಧ ಪ್ರಜ್ಞೆ  ಮಾತ್ರ ನನ್ನಲ್ಲಿ ಉಳಿಯಿತು.
   
  ಗುರ್ಕಜ್ಜ ತೀರಿಕೊಂಡ ಮೇಲೆ ಒಂದು ದಿನವೂ `ಸುಗತಿ' ಕಾಣದ ಕರ್ಕಿಯ ಬಸ್ ನಿಲ್ದಾಣದಲ್ಲಿ ನಾನು ದಿನವೂ ಬಸ್ಸಿಗಾಗಿ ಕಾದು ಕೂಡ್ರುತ್ತೇನೆ. ನಾರುವ ಸೋರುವ ಆ ಬಸ್ ನಿಲ್ದಾಣದ ನೋಟ ಬೇಡ ಬೇಡವೆಂದರೂ ಗುರ್ಕಜ್ಜನ ನೆನಪನ್ನು ಒತ್ತಿ ಒತ್ತಿ ತರುತ್ತದೆ. ಗುರ್ಕಜ್ಜ ಯಾರ ಋಣದಲ್ಲಿಯೂ ಬಾಳಲಿಲ್ಲ. ಆದರೆ ಕರ್ಕಿಯ ಬಸ್ ನಿಲ್ದಾಣದ ಲಾಭ ಪಡೆಯುವ ಸಾರ್ವಜನಿಕರಾದ ನನ್ನಂಥವರು ಮಾತ್ರ ಅವನ ಸೇವೆಯ ಋಣ ತೀರಿಸಲಾಗದೆ ಉಳಿದೆವು. 

No comments:

Post a Comment