Sunday 1 July, 2012

ಚವತಿ ಗಣೇಶನ ವಿಸರ್ಜನೆ





ಚವತಿ ಗಣೇಶನ ವಿಸರ್ಜನೆ    
                                     
  ಇಲ್ಲಿ ಕಾಣುವ ಈ ಗಣಪತಿಯ ಮೂರ್ತಿಗಳಲ್ಲಿ ನಡುವೆ ಇರುವ ಬಾಲ ಗಣೇಶನ ಮೂರ್ತಿಯು ಸುಮಾರು ಮೂವತ್ತು ವರ್ಷಗಳ ಹಿಂದೆ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ಸಂಗ್ರಹಿಸಿದ್ದಾಗಿದೆ. ಉಳಿದೆರಡನ್ನು ಬೇರೆ ಸ್ಥಳಗಳಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಡೆಯಲಾಗಿದೆ. 

  ಉಳ್ಳವರು ತಾಮ್ರ ಹಿತ್ತಾಳೆ ಬೆಳ್ಳಿ ಹವಳ ಚಿನ್ನಗಳ ಗಣೇಶ ಮೂರ್ತಿಯನ್ನು ಸಂಗ್ರಹಿಸುತ್ತಾರೆ. ಆದರೆ ಮಣ್ಣಿನ ಗಣೇಶ ನಿರ್ಮಾಪಕರ ಕೌಶಲವನ್ನು ಆ ಮೂರ್ತಿಗಳ ಅಂದವನ್ನು ಕಂಡು ಅವುಗಳನ್ನು ಮನೆಗೆ ತಂದು ನಮ್ಮ ಮನೆಯ ಶೋಕೇಸಿನಲ್ಲಿಡಲು ನಾನು ಹಂಬಲಿಸಿದೆ. ಈ ನನ್ನ ಹಂಬಲವನ್ನು ಪೂರೈಸಿ ಕೊಟ್ಟವರು ಸುಮಾರು ಎರಡು ದಶಕಗಳ ಹಿಂದೆ ನನ್ನ ಬಳಿ ವಿದ್ಯಾರ್ಜನೆಯಲ್ಲಿದ್ದ ಕರ್ಕಿಯ ನನ್ನ ವಿದ್ಯಾರ್ಥಿಗಳು. ಅವರು  ಮೂರ್ತಿಯನ್ನೊಯ್ಯಲು ನನ್ನನ್ನು ಪ್ರೋತ್ಸಾಹಿಸುತ್ತ  ``ಇಲ್ಲಿ ಅನೇಕರು ಗಣೇಶನನ್ನು ಹೊಳೆಗೆ ಒಯ್ದು ಮುಳುಗಿಸುವದಿಲ್ಲ. ವಿಶೇಷ ರೀತಿಯಲ್ಲಿ ಮಂತ್ರಗಳ ಮೂಲಕವೇ ವಿಸರ್ಜಿಸಿ ವಿರಮಿಸುತ್ತಾರೆ ಬಳಿಕ ಅದನ್ನು ಒಯ್ಯಬಹುದು ಎಂದರು. ಆದರೂ ನಾನು ಆತಂಕಗೊಂಡೆ. ಈ ಮೂರ್ತಿಯನ್ನು ನಾನು ಒಯ್ಯಬಹುದೇ? ಎಂದು ಅಲ್ಲಿಯ ಹಿರಿಯರನ್ನು ಕೇಳಿದೆ. 

        ವಿಸರ್ಜನ ಕ್ರಿಯೆ ಮಂತ್ರಗಳ ಮೂಲಕ ನಡೆದು ಶಾಸ್ತ್ರೋಕ್ತವಾಗಿ ಕೊನೆಗೊಳ್ಳುತ್ತದೆ. ಆದರೆ ಅದನ್ನು ಹೊಳೆಯಲ್ಲೋ ಬಾವಿಯಲ್ಲೋ ನದಿ ಸಮುದ್ರದಲ್ಲೋ ಮುಳುಗಿಸುವದು ಬಿಡುವದು ಅವರವರ ಇಷ್ಟ. ಆದರೆ ಮೈಗೆಲ್ಲ ಬಣ್ಣ ಎರಚಿಕೊಳ್ಳುತ್ತ ಕೂಗುತ್ತ ಮೆರವಣಿಗೆ ಮಾಡುತ್ತ ಕೆಟ್ಟ ರಾಸಾಯನಿಕ ತುಂಬಿದ ಗಣೇಶನನ್ನು ನೀರ ನೆಲೆಗಳಲ್ಲಿ ಮುಳುಗಿಸುವದಕ್ಕೆ ಶಾಸ್ತ್ರದ ಆಧಾರವಿಲ್ಲ. ಆದರೆ ಇವುಗಳನ್ನು ಎಲ್ಲೆಂದರಲ್ಲಿ ಹಾದಿ ಬೀದಿಯಲ್ಲಿ ಬೀಸಾಡಬಾರದು ಅಷ್ಟೆ. ಹೊರಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಬಹುದು. ಭೂಮಿಯ ಮಣ್ಣು ಭೂಮಿಯನ್ನು ಸೇರುತ್ತದೆ ಎಂದು ಆ ಹಿರಿಯರು ಹೇಳಿದರು. 

        ಆ ಬಳಿಕ ಇವರ ಮಾತನ್ನು ಅನುಮೋದಿಸುವ ಪರಿಸರ ಸ್ನೇಹಿಯಾದ ವಿಸರ್ಜನಾ ಪದ್ಧತಿಯನ್ನು ಹಲವಾರು ವರ್ಷಗಳಿಂದ ನಾನು ಗಮನಿಸುತ್ತ ಬಂದಿದ್ದೇನೆ. ಹಿಂದಿನಿಂದ ನಡೆದು ಬಂದ ಗಣೇಶ ವಿಸರ್ಜನಾ ಪದ್ಧತಿಯೊಂದು ನಮ್ಮ ಸುತ್ತ ಮುತ್ತ ಜಾರಿಯಲ್ಲಿದೆ. ಎಂಬುದನ್ನು ಹಲವರು ಗಮನಿಸಿಲ್ಲ. ಇಲ್ಲಿಯ ಅನೇಕ ಪೂಜಾರಿಗಳು ದೇವರ ಪೂಜೆಗೆ ಉಪಯೋಗಿಸುವ ತಂಬಿಗೆಯನ್ನು ಚೆನ್ನಾಗಿ ತಿಕ್ಕಿ ಬೆಳಗಿ ಬಾವಿಯ ನೀರನ್ನು ಎತ್ತಿ ತಂದು ಪೀಠದ ಸಮೇತ ಎತ್ತಿ ತಂದ ಗಣಪನನ್ನು ಬಾವಿಯ ಬಳಿ ಕುಳ್ಳಿರಿಸಿಕೊಂಡು ವಿಸರ್ಜನಾ ಮಂತ್ರಗಳನ್ನು ಹೇಳಿ ತಂಬಿಗೆಯಲ್ಲಿದ್ದ ನೀರನ್ನು ಗಣಪನಿಗೆ ಸಂಪ್ರೋಕ್ಷಣೆ ಮಾಡುತ್ತಾರೆ. ಉಳಿದವರು ದೇವರ ಪೂಜೆಗೆ ನಿತ್ಯ ಬಳಸುವ ನೀರನ್ನು ಸಂಪ್ರೋಕ್ಷಣೆಗೆ ಬಳಸುತ್ತಾರೆ. ಆ ಬಳಿಕ ಪೀಠದಿಂದ ಗಣಪತಿಯನ್ನು ತುಸು ಅಲುಗಾಡಿಸಿಟ್ಟರೆ ಗಣೇಶನ ವಿಸರ್ಜನೆ ಮುಗಿಯಿತು. 

  ಗಣಪತಿಯನ್ನು ಮನೆಗೆ ಅಥವಾ ಪೂಜಾಸ್ಥಾನಕ್ಕೆ ತರುವಾಗಲೂ ಅಷ್ಟೆ. ಆಗ ವಿಜ್ರಂಭಣೆಯಲ್ಲಿ ಗಣಪತಿಯನ್ನು ಬರಮಾಡಿಕೊಳ್ಳುವದು ಕೂಡ ಅಗತ್ಯವಿಲ್ಲ. ಯಾಕೆಂದರೆ ಅದು ಶಾಸ್ತ್ರೋಕ್ತ ಮಂತ್ರಗಳೊಂದಿಗೆ ಸ್ಥಾಪನೆಗೊಂಡ ಮೇಲೆಯೇ ಮೂರ್ತಿಗೆ ದೇವತಾ ಸ್ಥಾನ ದೊರಕುತ್ತದೆ ಆ ಬಳಿಕ ನಡೆಯುವ ಆರಾಧನೆಗೆ ಮಾತ್ರ ಭಕ್ತಿಯ ಬೆಲೆಯಿದೆ. ಅನ್ಯಥಾ ಅಲ್ಲವೆಂದು ಬಲ್ಲ ಹಿರಿಯರು ಅಭಿಪ್ರಾಯ ಪಟ್ಟರು. ಅಂದರೆ ಸ್ಥಾಪನಾ ಪೂರ್ವದ ಹಾಗೂ ಶಾಸ್ತ್ರೋಕ್ತ ವಿಸರ್ಜನಾ ನಂತರದ ಆಚರಣೆಗಳು ಭಕ್ತಿಗೆ ಪೂರಕವಾದವಲ್ಲ. ಪೂಜೆ ಮಾಡಿ ಮಂತ್ರಗಳೊಂದಿಗೆ ಸ್ಥಾಪನೆಯ ಸ್ಥಾನದಲ್ಲಿ ಒಮ್ಮೆ ವಿಸರ್ಜನೆ ಮಾಡಿದ ಬಳಿಕ ಮತ್ತೊಮ್ಮೆ ಇಷ್ಟೊಂದು ವೈಭವದ ವಿಸರ್ಜನಾ ಆಚರಣೆ ಅವಶ್ಯವಿಲ್ಲ. 

ಚವತಿ ಗಣೇಶನ ವಿಸರ್ಜನೆ ನಮ್ಮ ನಾಡಿನಲ್ಲಿ ಪರಿಸರಕ್ಕೆ ಮಾರಕವಾದ ಆಚರಣೆಯಾಗಿ ಪರಿವರ್ತನೆಯಾಗಿರುವದು ತಮಗೆ ತಿಳಿದಿರುವ ವಿಷಯವಾಗಿದೆ. ಈ ಆಚರಣೆ ಮಾರಕವಾಗುವದಕ್ಕೆ ಪ್ರಮುಖ ಕಾರಣ ಈ ಮೂರ್ತಿಗಳಿಗೆ ಬಳಿಯುವ ಜೀವ ವಿರೋಧಿಯಾದ ರಾಸಾಯನಿಕ ಬಣ್ಣ. ಜೊತೆಗೆ ಮೂರ್ತಿಯ ತಯಾರಿಕೆಗೆ ಬಳಸುವ ಟ್ರಕ್ ಗಟ್ಟಲೆ ಜೇಡಿಮಣ್ಣು ಇದು ಜಲವಾಸಿಗಳ ನೆಲೆಯನ್ನು ಸೇರಿ ಅಲ್ಲಿಯ ಪರಿಸರವನ್ನು ಹಾಳು ಮಾಡುತ್ತಿರುವದು ಹಲವರನ್ನು ಚಿಂತೆಗೀಡು ಮಾಡುತ್ತಿದೆ. ಗಣೇಶನ ವಿಸರ್ಜನಾ ಸಂದರ್ಭದ ಮೆರವಣಿಗೆಗಳು  ತರುವ ಅನರ್ಥಗಳಿಗೆ ಲೆಕ್ಕವಿಲ್ಲ. ಭಕ್ತರ ಸಾವು ನೋವುಗಳೂ ಸಂಭವಿಸುತ್ತವೆ ಆರಾಧನೆಯ ಸಂದರ್ಭದಲ್ಲಿ ಮತ್ತು ಆ ಬಳಿಕ ಹೀಗೆ ಸಾವು ನೋವುಗಳಾಗುವವದು ಸರಿಯೆ?. ಈ ಅನೇಕ ಸಮಸ್ಯೆಗಳಿಗೆ ಈ ಮೇಲೆ ತಿಳಿಸಿದ ಮಂತ್ರ ವಿಸರ್ಜನಾ ಪದ್ಧತಿ ಪರಿಹಾರ ಕವಾಗಿದೆಯಲ್ಲವೇ.? ಬಾಹ್ಯ ಢಂಬಾಚಾರವನ್ನೊಲ್ಲ ನಮ್ಮ ಗಣೇಶ ಅಲ್ಲವೇ? 

ಬಾವಿ ನೀರನ್ನು ಸಿಂಪಡಿಸಿ ವಿಸರ್ಜನೆ



    

No comments:

Post a Comment