Saturday 21 July, 2012

ನಮ್ಮ ಗಿಡ ಮರಬಳ್ಳಿಗಳು-ಬಾಯಿ ಒಡಕನ ಗಿಡ



ಬಾಯಿ ಒಡಕನಗಿಡ

Euphorbia hirta



      ಇದು ಭಾರತೀಯರಿಗೆ ಹೆಚ್ಚು ಪರಿಚಿತವಾದ ಗಿಡ. ಇದನ್ನು ಆಹಾರ ಪರಿಕರಗಳ ಜೊತೆ ಅಟ್ಟು ಸೇವಿಸುತ್ತಾರೆ ದಕ್ಷಿಣ ಕರ್ನಾಟಕದಲ್ಲಿ ಬೆರಕೆ ಸೊಪ್ಪಿನಜೊತೆ ಇದರ ಒಂದೆ ರಡು ಚಿಗುರುಗಳನ್ನು ಸೇರಿಸುತ್ತಾರೆ. ಮಲೆನಾಡಿನ ಭೂಮಿ ಹುಣ್ಣಿವೆಯ ಅಡುಗೆಯಲ್ಲಿ ಇದಕ್ಕೆ ಸ್ಥಾನ ಕಲ್ಪಿಸಲಾಗಿದೆ. ಕರಾವಳಿಯಲ್ಲಿ ಇದನ್ನು ಅಗಾಗ ತಂಬುಳಿ ಮಾಡಿ ಸೇವಿ ಸುತ್ತಾರೆ. ಇದರ ದೇಟು ಮತ್ತು ಹೂವುಗಳ ಬಣ್ಣವನ್ನು ಗಮನಿಸಿ. ಇದರಲ್ಲಿ ಬಿಳಿ ಮತ್ತು ಕೆಂಪು ಎಂದು ಎರಡು ವಿಧಗಳನ್ನು ಗುರುತಿಸುತ್ತಾರೆ.
  
      ಇದರ ಹೂಗೊಂಚಲು ನೆನೆಸಿದ ಕೆಂಪಕ್ಕಿಯನ್ನು ನೆನಪಿಸುವ ಕಾರಣ ಇದರ ಒಂದು ಬಗೆಯ ಗಿಡಕ್ಕೆ ಕೆಂಪು ನೆನೆಯಕ್ಕಿ ಗಿಡವೆಂಬ ಹೆಸರಿದೆ. ಗಿಡವನ್ನು ಮುರಿದಾಗ ಬಿಳಿಹಾಲು ಹೊರಬರುವ ಕಾರಣ ಇದು ಇನ್ನೊಂದು ಊರಿನಲ್ಲಿ ಹಾಲು ಕುಡಿಯೆಂಬ ಹೆಸರು ಪಡೆದಿದೆ. ಇದರ ದೇಟುಗಳು ಹಸಿರು ಮತ್ತು ಹವಳದ ಬಣ್ಣದಲ್ಲಿರುತ್ತವೆ.  ಬೆಂಗಳೂರಿನಲ್ಲಿ ಇನ್ನೊಂದು ಪ್ರಕಾರದ ಬಾಯಿ ಒಡಕನ ಗಿಡ ದೊರೆಯುತ್ತಿದ್ದು ಇದರ ಬಳಕೆಯೂ ಜಾರಿಯಲ್ಲಿದೆ.ಇದಕ್ಕೆ  ಸಾಸಿವೆಯಷ್ಟು ಚಿಕ್ಕ ಅಚ್ಚ ಬಿಳಿ ಬಣ್ಣದ ಹೂವುಗಳಿರುತ್ತವೆ, ಕೆಂಪು ನೆನೆಯಕ್ಕಿ ಗಿಡವನ್ನು ಸಸ್ಯ ವಿಜ್ಞಾನಿಗಳು ಯರ್ಪೋಬಿಯಾ ಹಿರ್ಟಾ ಎಂದು ಗುರುತಿಸಿದರೆ ಬಿಳಿಯ ಹೂವಿನ ನೆನೆಯಕ್ಕಿ ಗಿಡವನ್ನು ಯಫೋರ್ಬಿಯಾ ಪಾರ್ವಿ  ಫ್ಲೋರಾ ಎನ್ನುತ್ತಾರೆ. ಸಂಸ್ಕೃತದಲ್ಲಿ ದುಗ್ಧಿಕಾ, ನಾಗಾರ್ಜುನಿ ಎನ್ನುತ್ತಾರೆ.
       ಬಾಯಿ ಒಡಕನಗಿಡವು ಯಾವುದೇ ತಂಪು ಭೂಮಿಯಲ್ಲಿ ಕಳೆಗಿಡವಾಗಿ ಕಂಡುಬರುತ್ತದೆ. ಎಲೆಗಳು ಅಭಿಮುಖ ಜೋಡಣೆಯಲ್ಲಿರುತ್ತವೆ. ಎಲೆಗಳ ಅಂಚು ಗರಗಸದ ಸಣ್ಣ ಹಲ್ಲಿನಂತಿದೆ. ಎಲೆಗಳ ಬುಡಭಾಗವು ಅಸಮವಾಗಿರುವುದು. ಈ ಗಿಡದ ವಿಶೇಷವಾಗಿದೆ. ಎಲೆಗಳ ಕಂಕುಳಲ್ಲಿ ಹೂಗೊಂಚಲು ಕಾಣುತ್ತದೆ. ಹೂಗಳು ಬಹಳ ಚಿಕ್ಕವು. ಕಾಯಿಗಳು ಗಸಗಸೆಯಷ್ಟು ಸಣ್ಣವು. 
 
         ಕರ್ನಾಟಕದಲ್ಲಿ  ಕರಾವಳಿ ಪ್ರದೇಶದಲ್ಲಿ ಇದನ್ನು ಬಾಯಿ ಒಡಕನ ಗಿಡವೆಂದು ಗುರುತಿಸಲು ಪ್ರಮುಖ ಕಾರಣ ಇದರ ಮದ್ದಿನ ಗುಣ. ಇದು ಬಾಯೊಳಗೆ ಹುಟ್ಟುವ ಬೊಕ್ಕೆಗಳ ಶಮನಕ್ಕೆ ಅತ್ಯುತ್ತಮ ಔಷಧವೆಂದು ಗುರುತಿಸಲಾಗಿದೆ.
 
         ಬಾಯಿ ಹುಣ್ಣಾದಾಗ ಅಥವಾ ಬಾಯಿ ಹುಣ್ಣಾಗದಂತೆ ತಡೆಯುವ ಸಲುವಾಗಿ ಇದರ ಗಿಡವನ್ನು ಅಡುಗೆಯಲ್ಲಿ ಆಗಾಗ ಬಳಸಲಾಗುತ್ತದೆ. ಆರೆಂಟು ಫಲಭರಿತ ಕುಡಿಗಳನ್ನು ಅರ್ಧ ಚಮಚ ಜೀರಿಗೆ ಆರೆಂಟು ಕಾಳು ಮೆಣಸುಗಳ ಜೊತೆಯಲ್ಲಿ 1 ಚಮಚ ತುಪ್ಪ ಹನಿಸಿಕೊಂಡು ಬಾಡಿಸಿ (ಹುರಿಯ ಬೇಕಾಗಿಲ್ಲ) ಒಂದು ಹಿಡಿ ತೆಂಗಿನ ಕಾಯಿಯ ಸುಳಿಯನ್ನು ಸೇರಿಸಿಕೊಂಡು ಅರೆದು ಅದಕ್ಕೆ ಒಂದು ಚಮಚ ಉಪ್ಪು ಹಾಗೂ ಒಂದು ಕಪ್ಪು ಕಡೆದ ಮೊಸರು ಸೇರಿಸಿ ಮಜ್ಜಿಗೆಯ ಹದಕ್ಕೆ ಬರುವಂತೆ ನೀರನ್ನು ಬೆರೆಸಿ ತಂಬುಳಿಯ ತಯಾರಿಸಿ ಸೇವಿಸುವ ಪರಂಪರಾಗತ ಪದ್ಧತಿ ಜನಪದ ಅಡುಗೆಯಲ್ಲಿದೆ. ಇದನ್ನು ಕುಡಿಯಲು, ಅನ್ನ ಕಲಸಿ ಉಣ್ಣಲು ಬಳಸಲಾಗುತ್ತದೆ. 

          ಫಲ ಭರಿತವಾದ ಹೂ ಗೊಂಚಲು ಹಸಿಯಾಗಿ ತಿನ್ನುವದಕ್ಕೆ ರುಚಿಕರವಾಗಿರುತ್ತದೆ. ಇದರಲ್ಲಿ ಮಧುವನ್ನು ಹೀರಲು ಬರುವ ಚಿಕ್ಕ ಜೀವಿಗಳನ್ನು ಕಾಣಬಹುದು. ಆದ್ದರಿಂದ ಇವುಗಳನ್ನು ತೊಲಗಿಸಲು ಹೂಗೊಂಚಲನ್ನು ಉಪ್ಪು ಬೆರೆಸಿದ ನೀರಿನಲ್ಲಿ ತೊಳೆಯಬಹುದು. ಎಲೆಗಳ ಕಷಾಯದಿಂದ ಮೈ ತೊಳೆದರೆ ಅನೇಕ ಚರ್ಮರೋಗಗಳು ಗುಣಗುತ್ತವೆ. ಇದು ಕೂದಲಿನ ಆರೋಗ್ಯವನ್ನೂ ಕಾಯಬಲ್ಲದು. ಕೂದಲು ನೆರೆಯುವುದನ್ನು ತಪ್ಪಿಸಬಲ್ಲದು.
 
          ಆಸ್ಟ್ರೇಲಿಯದ ಜನಪದ ವೈದ್ಯ ಪದ್ಧತಿಯಲ್ಲಿ ಇದನ್ನು ಅಸ್ತಮಾ ರೋಗ ನಿವಾರಣೆಗಾಗಿ ಬಳಸುತ್ತಾರೆ.  ಆದ್ದರಿಂದ ಇದಕ್ಕೆ ಆಸ್ಟ್ರೇಲಿಯನ್ ಅಸ್ತಮಾ ಹರ್ಬ ಎಂಬ ಹೆಸರಿದೆ.ಫಿಲಿಫಾಯಿನ್ಸನಲ್ಲಿ ಇದನ್ನು ಡೆಂಗ್ಯು ಜ್ವರದ ಸಂದರ್ಭದಲ್ಲಿ  ಮನೆಮದ್ದಾಗಿ ಬಳಸುವದುಂಟು.
 
         ಆಫ್ರಿಕಾದ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಇದನ್ನು ರಕ್ತಭೇದಿಗೆ ಔಷಧವಾಗಿ ಬಳಸುತ್ತಾರೆಂದು ವರದಿಗಳಿವೆ. ಆಸ್ಟ್ರೇಲಿಯ ಆಫ್ರಿಕಾಗಳ ಜನಪದ ವೈದ್ಯ ಪದ್ಧತಿಯಲ್ಲಿ ರಕ್ತದ ಏರೊತ್ತಡ ನಿವಾರಣೆಗಾಗಿ ಇದನ್ನು ಬಳಸಲಾಗುತ್ತದೆ. ಇದು ಈ ರೋಗಕ್ಕೆ ಔಷಧವೆಂದು ವೈಜ್ಞಾನಿಕವಾಗಿ ದೃಢಟ್ಟಿದೆ.
 
        ಆಧುನಿಕ ವೈಜ್ಞಾನಿಕ ಪ್ರಯೋಗಗಳಿಂದ ಇದಕ್ಕೆ ಅನೇಕ ರೋಗಕಾರಕ ಬೆಕ್ಟೀರಿಯಾ ಶಿಲೀಂದ್ರಗಳನ್ನು ನಾಶ 
ಪಡಿಸುವ ಗುಣವಿದೆಯೆಂದು ತಿಳಿದು ಬರುತ್ತದೆ. ಇದು ಭೇದಿ, ಕೆಮ್ಮು, ಹೊಟ್ಟೆಹುಳಗಳನ್ನು ದೂರಮಾಡುತ್ತದೆಯೆಂದು ತಿಳಿದು ಬರುತ್ತದೆ. ಅತ್ಯಮೂಲ್ಯವಾದ ಈ ಔಷದ ಸಸ್ಯವನ್ನು ಕಂಡಲ್ಲಿ ಕಿತ್ತು ಹಾಕದೆ ಬೆಳೆಯಗೊಡಿರಿ, ಬಳಸಿ ಆರೋಗ್ಯವಂತರಾಗಿ.

ಚಿತ್ರ ಕೃಪೆ ಅಂತರ್ಜಾಲ

No comments:

Post a Comment