Wednesday 18 July, 2012

ನಮ್ಮ ಗಿಡಮರ ಬಳ್ಳಿಗಳು- ಹುರುಡೆ



ಹುರುಡೆ  Cyperus bulbosus

      ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ ರೇವೆ ಮಣ್ಣಿನ ಬತ್ತದ ಗದ್ದೆಯ ಕೊಯಲು ಮುಗಿದು  ಗದ್ದೆಯ ಮಣ್ಣೆಲ್ಲ ಒಣಗಿದ ಬಳಿಕ ಅಲ್ಲಿ ಮತ್ತೊಂದು ಬೆಳೆ ಕೊಯ್ಲಿಗೆ ಬರುತ್ತದೆ. ಇದಕ್ಕೆ ಮನುಷ್ಯರ ಕೈಯ್ಯಿನ ನಾಟಿ ಬೇಕಿಲ್ಲ. ಕೃಷಿ ಕೆಲಸವೂ ಬೇಕಾಗಿಲ್ಲ. ಇದು ನಿಸರ್ಗವು ಉತ್ತಿ ಬಿತ್ತಿ ಸಿದ್ಧಗೊಳಿಸುವ ಬೆಳೆ. ಈ ಉಚಿತ ಆಹಾರವ ಬೆಳೆಯೇ ಹುರುಡೆ. ಈ ಬೆಳೆಯನ್ನು ತಮ್ಮ ಆಹಾರವಾಗಿ ಸ್ವೀಕರಿಸಿದವರು ಪ್ರಾಜ್ಞರಾದ ಕಾಡುವಾಸಿಗಳು ; ಇತ್ತೀಚೆಗೆ ಬಡವರು ಹಾಗೂ ದನ ಕಾಯುವ ಮಕ್ಕಳು ಆಹಾರವಾಗಿ ಸ್ವೀಕರಿಸಿದ್ದಾರೆ. ಆದರೆ ಬತ್ತ ಬಿತ್ತಿ ಅಪಾರ ಧಾನ್ಯ ಬೆಳೆಯುವ ಬೆಳೆಗಾರರಿಗೆ ಇದೊಂದು ಕಳೆ.


   ಹುರುಡೆಯ ಹುಲ್ಲನ್ನು ಗದ್ದೆಯ ಕಳೆಯೆಂದು ಇವರು ಗುರುತಿಸುತ್ತಾರೆ. ಗದ್ದೆಯ ಕಳೆ ಕೀಳುವಾಗ ಈ ಹುಲ್ಲನ್ನು ಕಿತ್ತು ಬೀಸಾಡುತ್ತಾರೆ. ಆದರೂ ಇವುಗಳ ಸಂತತಿ ಬತ್ತದ ಗದ್ದೆಯಲ್ಲಿ ನಿರಾತಂಕವಾಗಿ ಬೆಳೆಯುತ್ತದೆ.


  ಇದರ ಎಲೆಗಳು ಉಳ್ಳಾಗಡ್ಡೆಯ ಎಲೆಗಳಂತೆ ಕೊಳವೆಯಾಕಾರ ದಲ್ಲಿರುತ್ತವೆ. ವಿರಲವಾಗಿ ಬೆಳೆದಿರುವ ಗಿಡಗಳ ಎಲೆಗಳು ಉಳ್ಳಾಗಡ್ಡೆ ಎಲೆಯಷ್ಟು ದಪ್ಪವಾಗಿರುತ್ತವೆ. ಹಾಗೂ ಇವುಗಳಿಗೆ ಬುಡದಲ್ಲಿ ಕಬ್ಬಿಗಿರುವಂತಹ ಒಂದೆರಡು ಗಂಟುಗಳಿರುತ್ತವೆ. ದಟ್ಟವಾಗಿ ಬೆಳೆದಿರುವ ಹುರುಡೆಯ ಹುಲ್ಲು ಸೂಜಿಗಿಂತ ತುಸು ಗಡುತರವಾಗಿರುತ್ತವೆ. ಈ ಹುಲ್ಲುಗಳಿಗೆ ಬುಡದಲ್ಲಿ ಶೇಂಗಾ ಕಾಳಿನ ಗಾತ್ರದ ಬಟಾಟೆಯನ್ನು ಹೋಲುವ ಗಡ್ಡೆಗಳಿರುತ್ತವೆ. ಬಣ್ಣವು ಬಟಾಟೆಯಂತೆ. ಗಡ್ಡೆಗಳ ಮೊಳಕೆಗಳು ಕೂಡ ಶೇಂಗಾ ಬೀಜದ ಮೊಳಕೆಯಂತೆ ಕಾಣುತ್ತವೆ. 
     


      
   ಹೂಗಳು ಗಿಡದ ಕೊಳವೆಯಂತಹ ಎಲೆಯ ತುದಿಯಲ್ಲಿ ಕಾಣುತ್ತವೆ. ಪ್ರತಿ ಹೂವಿನಲ್ಲಿ ಪರಾಗ ಕಣಗಳು ಅಪಾರ. ಗಿಡಕ್ಕೆ ತುಸು ಕೈ ಸೋಂಕಿದರೆ ಸಾಕು. ತಕ್ಷಣ ಪರಾಗ ಕಣಗಳು ಹಾರುತ್ತವೆ. ಆಗ ಚಿಕ್ಕ ಬಿಳಿ ಧೂಳಿನ ಹೊಗೆ ಹಾರಿದಂತೆ ಭಾಸವಾಗುತ್ತದೆ. ಪರಾಗಕಣಗಳು ಹಾರಿದ ಬಳಿಕ ಹೂಗಳ ಅಂದವು ಕಡಿಮೆಯಾಗುತ್ತದೆ.


ವಾಮನ ರೂಪಿ ಈ ಹುರುಡೆ ಗಡ್ಡೆಗಳನ್ನು ಸಸ್ಯ ವಿಜ್ಞಾನಿಗಳು “Cyperus bulbosus ಎಂದು ಗುರುತಿಸುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಇನ್ನೊಂದು ಬಗೆಯ ಗಡ್ಡೆಯ ಹೆಸರು ಕೊನ್ನಾರಿ ಇದಕ್ಕೆ ಕರಿ ಹುರುಡೆಯ್ದೆಂದು ಸ್ಥಳೀಯವಾಗಿ ಹಾಗೂ ಭದ್ರಮುಷ್ಠಿಯೆಂದು ಸಂಸ್ಕೃತದಲ್ಲಿ ಹೆಸರಿದೆ. ಇದರ ಸಸ್ಯಶಾಸ್ತ್ರೀಯ ದ್ವಿನಾಮವು Cyperus rotundus” ಇದು ಆಯುರ್ವೇದದಲ್ಲಿ ಜನಪದ ವೈದ್ಯದಲ್ಲಿ ಪ್ರಸಿದ್ಧ  ಔಷಧ ಪರಿಕರವಾಗಿದೆ. ಆದರೆ ಹುರುಡೆಯ ಆಹಾರ ಮೌಲ್ಯ ಔಷಧ ಮೌಲ್ಯಗಳ ಬಗ್ಗೆ ಹೆಚ್ಚು ತಿಳಿದು ಬರುತ್ತಿಲ್ಲ. ಇದು ಗದ್ದೆಕೊಯಲಾದ ಬಳಿಕ ನೆಲದಡಿಯಲ್ಲಿ ಗಡ್ಡೆಗಳನ್ನು ಉಳಿಸಿಕೊಂಡು ಬದುಕುತ್ತದೆ 


       ಎಪ್ರಿಲ್ ಮೇ ತಿಂಗಳ ಸುಮಾರಿಗೆ ಮನ್ಸೂನು ಮಳೆಯ ಪ್ರಾರಂಭಕ್ಕೆ ಮೊದಲು ಬೇಸಾಯಗಾರರು ಗದ್ದೆಯನ್ನು ಹೂಡಿ ಮಣ್ಣನ್ನು ಸಡಿಲುಗೊಳಿಸುತ್ತಾರೆ. ಇದು ಹುರಡಿ ಕೊಯ್ಲಿಗೆ ಸುಸಂಧಿ. ರಜೆ ದೊರಕಿಸಿಕೊಂಡಿರುವ ಶಾಲಾ ಮಕ್ಕಳು ಹಾಗೂ ದನ ಕಾಯುವ ಮಕ್ಕಳು ಕೈಯಲ್ಲೊಂದು ಗರಟೆ, ಚೂಪಾದ ಕೋಲು, ಅಥವಾ ನೀಲಿ ಕಲ್ಲಿನ ಚಿಪ್ಪಿ ಹಿಡಿದು ಗದ್ದೆಗಿಳಿಯುತ್ತಾರೆ. ಅಲ್ಲಿಯೇ ಮರಳನ್ನು ಕೆದರಿ ಗಡ್ಡೆಗಳನ್ನು ತಮ್ಮ ಗರಟೆಗಳಲ್ಲಿ ತುಂಬಿಕೊಳ್ಳುತ್ತಾರೆ. ಕೆಲವು ಗಡ್ಡೆಗಳನ್ನು ಹಸಿಯಾಗಿ ಅಲ್ಲಿಯೇ ತಿನ್ನುತ್ತಾರೆ. 

ಮನೆಯ ಚಿಕ್ಕ ದೊಡ್ಡ ಮಕ್ಕಳೆಲ್ಲ ಒಟ್ಟಾಗಿ ಗಡ್ಡೆಯನ್ನು ಆಗೆಯಲು ಹೋದಾಗ ತಾವು ತಿಂದು ಹೆಚ್ಚಾದುದನ್ನು ತಾಯಿಯ ಮಡಲಿಗೆ ಸುರಿಯುತ್ತಾರೆ. ಇವು ಅವಳ ಚಿಕ್ಕ ಮಡಕೆಯನ್ನು ತುಂಬಿಕೊಳ್ಳುತ್ತವೆ. ಇವಳು ಈ ಗಡ್ಡೆಗಳನ್ನು ತೊಳೆದು ತುಸು ಉಪ್ಪು ಮತ್ತು ನೀರು ಸೇರಿಸಿ ಬೇಯಿಸುತ್ತಾಳೆ. ಬೆಂದ ಗಡ್ಡೆಗಳು ಸಿಹಿಗೆಣಸಿನ ರುಚಿಯನ್ನು ಹೊಂದಿದ್ದು ಇವು ಮನೆಮಂದಿಗೆಲ್ಲ ಆ ದಿನದ ವಿಶೇಷ ಖಾದ್ಯವಾಗುತ್ತವೆ. ಹಸಿಗಡ್ಡೆಗಳನ್ನು ಹಂಚಿನ ಮೇಲೆ ಹುರಿದಾಗ ಅದರ ರುಚಿ ಇನ್ನೊಂದು ತೆರನಾಗಿರುತ್ತವೆ. 

ಹುರುಡೆಯು ಬರಗಾಲದ ಸಮಯದಲ್ಲಿ ಬಡವರ ಕೈಗೆಟಕುವ ಆಹಾರವೆಂದು ಪ್ರಖ್ಯಾತಿಯಿದೆ. ಮೇ ತಿಂಗಳ ಹೊತ್ತಿಗೆ ಬಡವರ ಮನೆಯಲ್ಲಿ ಕಾಳುಕಡ್ಡಿಯ ಬರಗಾಲವಿರುತ್ತದೆ. ಆದ್ದರಿಂದ ಬಡವರು; ಬುಡಕಟ್ಟು ಜನರು ಕುಟುಂಬ ಸಮೇತ ಹುರುಡೆ ಆಗೆಯಲು ಹೋಗುತ್ತಾರೆ. ಹೂಟಿ ಮಾಡಿರುವದರಿಂದ ಗದ್ದೆಯ ಮೇಲ್ಮಣ್ಣು ಒಣಗಿರುತ್ತದೆ. ಹಲವಾರು ವರ್ಷಗಳಿಂದ ಈ ಗಡ್ಡೆಗಳನ್ನು ಆರಿಸಿ ಅನುಭವವಿರುವ ಈ ಬುಡಕಟ್ಟು ಕುಟುಂಬಗಳು ಮುಂಜಾನೆಯೆ ಗಡ್ಡೆಗಳಿಗಾಗಿ ಹೊರಡುತ್ತವೆ. ಹುರುಡೆಯ ಹುಲ್ಲು ಸುಳಿವು ಸಿಗದಂತೆ ಒಣಗಿ ಮಣ್ಣಾಗಿ ಹೋಗಿರುತ್ತವೆಯಾದರೂ ಗಡ್ಡೆಗಳನ್ನು ಹುಡುಕುವ ಕಲೆ ಇವರಿಗೆ ಗೊತ್ತಿರುತ್ತದೆ. ಈ ಹಿಂದೆ ಒಂದೊಂದು ಕುಟುಂಬವು ಮೂರು ನಾಲ್ಕು ಕೆ.ಜಿ.ಯಷ್ಟು ಹುರುಡೆಯನ್ನು ಆರಿಸಿ ಒಯುತ್ತಿದ್ದರೆಂದು ಜನ ತಿಳಿಸುತ್ತಾರೆ. 

ಜನಪದ ಅಡುಗೆ ದೋಸೆ:  ಈ ಹಸಿ ಹುರುಡೆಯನ್ನು ತೊಳೆದು ನಾಲ್ಕು ತಾಸು ನೆನೆಸಿದ ತುಸು ಅಕ್ಕಿಯೊಂದಿಗೆ ಅರೆದು (ರುಬ್ಬಿ) ಹಿಟ್ಟನ್ನು ತಯಾರಿಸಿ ದೋಸೆ ಎರೆದು ಉಣ್ಣುತ್ತಾರೆ. ಇದು ಬಡ ಬುಡಕಟ್ಟು ಜನರಿಗೆ ಮೃಷ್ಟಾನ್ನ ಭೋಜನ. 

ಗದ್ದೆಗಳಲ್ಲಿ ಹುರುಡೆಗಳ ಸಂಖ್ಯೆ ಅಪಾರ. ಆದರೆ ಇವುಗಳ ಗಾತ್ರ ಕಿರಿದು ಶ್ರಮಕ್ಕೆ ತಕ್ಕ ಉತ್ಪನ್ನವಲ್ಲ. ಆದರೂ ಹುರುಡೆಯನ್ನು  ಅಗೆದು ತಿನ್ನುವಲ್ಲಿ ದೋಸೆ ಮಾಡಿ ಮೆಲ್ಲುವಲ್ಲಿ ಇವರಿಗೆ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲಾದೀತೆ?

ಇತ್ತೀಚೆಗೆ ಈ ಕಾಡು ಆಹಾರವನ್ನು ಸಂಗ್ರಹಿಸಿ ತಿನ್ನುವವರು ಕಂಡುಬರುತ್ತಿಲ್ಲ. ಕಳೆನಿವಾರಕಗಳ ಬಳಕೆಯಿಂದಾಗಿ ಗದ್ದೆಯಲ್ಲಿ ಹುರುಡೆ ಕೆಳಗೆ ಕುತ್ತು ಬಂದಿದೆ. ಇವುಗಳ ಬಗೆಗಿನ ಜನಜ್ಞಾನ ದೂರವಾಗುತ್ತಿದೆ. 



No comments:

Post a Comment