Monday 16 July, 2012

ನಮ್ಮ ಮರ ಗಿಡ ಬಳ್ಳಿಗಳು-ಗೇರಮರ


ಗೇರಮರ Anacardium occidentale. L.

      ಭಾರತದಲ್ಲಿ  ಮೂರುಬಗೆಯ  ಗೇರುಮರಗಳು ಪರಿಚಿತವಾಗಿವೆ.  ಮೊದಲನೆಯದಾಗಿ ಆಯುರ್ವೇದ ಕಾಲದಿಂದ ಪರಿಚಿತವಾಗಿರುವ ಕೇರು. ಇದನ್ನು ಕರಾವಳಿ ಪ್ರದೇಶದಲ್ಲಿ ಗುಡ್ಡೆಗೇರು ಎಂದು ಗುರುತಿಸುತ್ತಾರೆ. ಬಯಲು ಸೀಮೆಯಲ್ಲಿ ಇದರ ಬೆಳೆ ಹೆಚ್ಚು. ಎರಡನೆಯದು ಹೊಳೆಗೇರು. ಇದರ ರಸವು ಮನುಷ್ಯರ ಚರ್ಮಕ್ಕೆ ತಾಗಿದರೆ ಆ ಭಾಗವು ಬಾತುಕೊಳ್ಳುವದುಂಟು. ಮೂರನೆಯದು. ಕರಾವಳಿಯ ಹಳ್ಳಿಯಲ್ಲಿ ನೆಲೆಸಿರುವ ನೀವೆಲ್ಲರೂ ಬಲ್ಲ ಗೇರು ಮರ.  ಮಕ್ಕಳು ಒಣಗೇರು ಬೀಜವನ್ನು ಬಳಸಿ ಪಿನ್ನೆ ಎಂಬ ಆಟವನ್ನು ಆಡುತ್ತಾರೆ.     
    


      ಸಾಮಾನ್ಯವಾಗಿ. ಆಯಾ ಹಣ್ಣಿನ ಬೀಜವು ಅದರ ತಿರುಳಿನಲ್ಲಿರುತ್ತದೆ. ಇದು ಹಣ್ಣುಗಳ ನೈಸರ್ಗಿಕ ಗುಣ. ಆದರೆ ಗೇರಹಣ್ಣಿನ ಹೊರಗೆ ಇದರ ಬೀಜವಿರುತ್ತದೆ. ಇದು ಗೇರಹಣ್ಣಿನ ವಿಶಿಷ್ಟ ಗುಣ. ದಕ್ಷಿಣ ಅಮೇರಿಕಾದ ಬ್ರಾಜಿಲ್ ಇದರ ತವರೂರಾಗಿದ್ದು ಇದು ಭಾರತಕ್ಕೆ ವಲಸೆ ಬಂದ ಹಣ್ಣು ಎನ್ನಲಾಗುತ್ತದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಅಂದರೆ 1560 ರ ಹೊತ್ತಿಗೆ ಗೇರ ಮರವು ಭಾರತಕ್ಕೆ ಬಂದಿರಬೇಕೆಂದು ತಿಳಿಯಲಾಗುತ್ತದೆ. ಪೋರ್ಚುಗೀಸರು ಈ ಬೆಳೆಯನ್ನು ಭಾರತಕ್ಕೆ ತಂದರೆಂಬ ಅಭಿಪ್ರಾಯವಿದೆ. ಈ ಮಾತಿಗೆ ಗೇರಹಣ್ಣಿಗಿರುವ ಪರ್ಯಾಯ ನಾಮವಾದ ಗೋವೆಹಣ್ಣು ಎಂಬ ಹೆಸರು ಪುಷ್ಟಿಯನ್ನೀಯುತ್ತದೆ ಇದನ್ನು ಪಟ್ಟಣಗಳಲ್ಲಿ ಗೋಡಂಬಿ ಎಂದು ಗುರುತಿಸುತ್ತಾರೆ. ಇದಕ್ಕೆ ಇಂಗ್ಲೀಷಿನಲ್ಲಿ ಕಾಷ್ಯುಪ್ರುಟ ಕೊಂಕಣಿ, ಹಿಂದಿ, ಗುಜರಾಥಿ, ಉರ್ದು ಭಾಷೆಗಳಲ್ಲಿ ಕಾಜು ಎಂಬ ಹೆಸರುಗಳಿವೆ. .ಭಾರತದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಹೆಕ್ಟೇರು ಪ್ರದೇಶದಲ್ಲಿ ಗೇರನ್ನು ಬೆಳೆಸಲಾಗುತ್ತದೆ.ಮಲೆನಾಡು ಬಯಲ ನಾಡುಗಳಲ್ಲಿಯೂ ಇದನ್ನು ಬೆಳೆಸಲಾಗುತ್ತದೆ.ಕಲ್ಲು ಮರಳು ಮುಂತಾದ ಯಾವುದೇ ತರದ ಭೂಮಿಯಲ್ಲಿಯೂ ಇದು ಬೆಳೆಯುವುದಲ್ಲದೆ ಒಂದು ವರ್ಷ ನೀರು ಹನಿಸಿದರೆ ಸಾಕು. 4-5 ವರ್ಷಗಳಲ್ಲೆ ಗಿಡ ಫಲ ಕೊಡಲಾರಂಬಿಸುತ್ತದೆ. 
ಇದರ ಬೆಲೆಯುಳ್ಳ ಭಾಗ ಬೀಜದ ಒಳತಿರುಳು [ಪಪ್ಪು] ಇದು ವಿದೇಶಿ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ವಸ್ತು. ಒಳ ತಿರುಳನ್ನು ಕೂಡ ವಾಣಿಜ್ಯ ಕ್ಷೇತ್ರದಲ್ಲಿ ಗೇರುಬೀಜವೆಂದು ಗುರುತಿಸಲಾಗುತ್ತದೆ.

     ಇದು ವಿದೇಶದಿಂದ ನಮ್ಮ ದೇಶಕ್ಕೆ ಬಂದ ಬೆಳೆಯಾಗಿದ್ದರೂ ಕರಾವಳಿಯ ಸಾಂಸ್ಕೃತಿಕ ,ವೈದ್ಯಕೀಯ ಮತ್ತು ಆಹಾರ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಯುಗಾದಿ ಹಬ್ಬದ ದಿನ ಕರಾವಳಿಗ ದನಗಾಹಿಗಳು ಹಸಿರು ಬಣ್ಣದ ಹಸಿ ಗೇರು ಬೀಜವನ್ನು ಸುಲಿದು ಅದರ ಒಳ ಬೀಜವನ್ನು ತಮ್ಮ ತಮ್ಮ ಒಡೆಯನ ಮನೆಗೆ ಕೊಟ್ಟು ಉಂಡು ಹೋಗುವ ರೂಢಿ ಹಳ್ಳಿಗಳಲ್ಲಿದೆ.

     ಯುಗಾದಿ ಹಬ್ಬದ ದಿನ ಅಡುವ ಪಾಯಸಕ್ಕೆ ಹಸಿ ಗೇರು ಬೀಜವನ್ನು ಸುಲಿದು ಒಳಗಿನ ಹೂಂಗನ್ನು ಸೇರಿಸಿ ಅಡುವದು, ಒಣ ಗೇರು ಬೀಜಗಳನ್ನು ಹದವಾಗಿ ಸುಟ್ಟು ಒಡೆದು ಒಳಗಿನ ಹೂಂಗನ್ನು ಕೃಷ್ಣಾಷ್ಟಮಿಯ ದಿನದ ಪಂಚ ಕಜ್ಜಾಯಕ್ಕೆ ಸೇರಿಸಿ ಬೆರೆಸಿ ಕೃಷ್ಣನಿಗೆ ಅರ್ಪಿಸಿ ತಿನ್ನುವದು ಸಂಪ್ರದಾಯವಾಗಿದೆ. ಹೀಗೆ ಇದು ನಮ್ಮ ಧಾರ್ಮಿಕ ಆಚರಣೆಯಲ್ಲಿ ಸೇರಿಕೊಂಡಿದೆ. ತಿರುಳನ್ನು ಹಲ್ಲಿನಿಂದ ಜಗಿದು ತಿನ್ನುವಾಗ ಅದು ಅಸಾಧಾರಣ ರುಚಿಯನ್ನು ನೀಡುತ್ತದೆ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ತಿನ್ನ ಬೇಕೆನಿಸುತ್ತದೆ. ಹಸಿ ಹಸಿರು ಬೀಜವನ್ನು ಮೆಟಗತ್ತಿಯಲ್ಲಿ ಎರಡಾಗಿ ಸೀಳಿ ಒಳ ತಿರುಳನ್ನು ಕಡ್ಡಿಯ ಸಹಾಯದಿಂದ ಪಡೆಯುವುದುಂಟು. ಒಣಗಿ ಒಣಗಿ ತುಸು ಕೇಸರಿ ಬಣ್ಣಕ್ಕೆ ತಿರುಗಿದ ಬೀಜವನ್ನು ಹಿಡಿದು ಕಲ್ಲಿನಿಂದ ಪೆಟ್ಟು ಕೊಟ್ಟಾಗ ಬೀಜ ಒಡೆದು ಎರಡೂ ಹೋಳಾಗುತ್ತದೆ. ಕಡ್ಡಿಯಿಂದ ಅದರ ಬಿಳಿ ಬೀಜವನ್ನು ಹೊರತೆಗೆದು ಒರೆಸಿ ತಿನ್ನಬಹುದು ಅಥವಾ ಈ ಹೋಳುಗಳನ್ನು ನೆಲಕ್ಕೆ ಬಡಿದಾಗ ಒಳಗಿನ ಬೀಜದ ತಳ್ಳೆ ಹೊರ ಬೀಳುತ್ತದೆ. ಇದನ್ನು ಬಟ್ಟೆಯಿಂದ ಒರೆಸಿ ತಿನ್ನಬಹುದು 
    ಅಂಕೋಲೆಯ ಹಾಲಕ್ಕಿ ಒಕ್ಕಲಿಗ ಮಹಿಳೆಯರು ಗೇರು ಎಲೆಗಳನ್ನು ಕೊಟ್ಟೆಯಂತೆ ಸೆಟ್ಟು ಅದರಲ್ಲಿ  ಕಡ್ಡಿಯ ಸಹಾಯದಿಂದ ಸುಲಿದ ಗೇರು ಬೀಜವನ್ನು ತುಂಬಿ ಮಾರುತ್ತಾರೆ.
     ಹಿಂದೆ ಬೀಜವನ್ನು ನೆನೆಹಾಕಿ ಸಂಸ್ಕರಿಸಿ ತಿರುಳನ್ನು ತೆಗೆದು ಮಾರಾಟಕ್ಕೆ ಸಿದ್ಧಪಡಿಸುವ ಗ್ರಹ ಕೈಗಾರಿಕೆಗಳಿದ್ದವು. ಅಂಕೋಲಾ ತಾಲೂಕಿನ ಕೇಣಿ ಎಂಬ ಊರಿನ ಒಂದು ಜನ ವರ್ಗವು ಈ ಗುಡಿ ಕೈಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಈಗ ಊರೂರುಗಳಲ್ಲಿ ಗೇರಬೀಜ ಸಂಸ್ಕರಿಸುವ ಪ್ಯಾಕ್ಟರಿಗಳಿವೆ. ಇಲ್ಲಿ ಬೆಲೆ ಹೆಚ್ಚು ಇಲ್ಲಿಂದ ಸಾಕಷ್ಟು ಪ್ರಮಾಣದಲ್ಲಿ ಗೇರು ಬೀಜವು ಸರಬರಾಜಾಗುವದರಿಂದ  ಭಾರತೀಯರ ಅಡುಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೇರು ಬೀಜ(ಒಳ ಬೀಜ) ವು ಪಾಯಸ, ಬರ್ಪಿ, ಬಿಸ್ಕಿಟ್, ಪಲ್ಯದಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಕೇರಳದ ಆವಿಯಲ್ ಅಡಿಗೆಯಲ್ಲಿ ಹಾಗೂ ಕರಾವಳಿಯ ಸಮಾರಂಭದ ಪಲ್ಯದಲ್ಲಿ ಇದರ ಬಳಕೆ ಹೆಚ್ಚು. ಇದು ಪೌಷ್ಟಿಕಾಂಶವುಳ್ಳದ್ದೂ ಆಗಿದೆ.
    ಬೀಜದ ಸಿಪ್ಪೆ ಬಹು ಪ್ರಯೋಜನಕಾರಿ. ಸಿಪ್ಪೆಯಿಂದ ತೆಗೆದ ಎಣ್ಣೆಯನ್ನು ಗೆರೆಣ್ಣೆಯೆನ್ನುತ್ತಾರೆ. ಈ ಎಣ್ಣೆಯು ಒರಲೆಗಳಿಗೆ ಪ್ರತಿರೋಧ ಒಡ್ಡುತ್ತದೆ. ದೋಣಿ ಮುಂತಾದ ಮರದ ಸಾಮಾನುಗಳನ್ನು ಇದು ಹೆಚ್ಚು ಕಾಲ ಬಾಳಿಸುತ್ತದೆ.  ಕೆಂಪು ಹಳದಿ ಬಣ್ಣಗಳಲ್ಲಿ ದೊರೆಯುವ ಇದರ ಹಣ್ಣು ಬಹು ಆಕರ್ಷವಾಗಿ ಕಾಣುತ್ತದೆ. ಗೋವಾದಲ್ಲಿ ಗೇರು ಹಣ್ಣಿನಿಂದ ಪೆನ್ನಿ ಎಂಬ ಹೆಸರಿನ ಸರಾಯಿ ತಯಾರಿಸುತ್ತಾರೆ. ತಾಂಜಾನಿಯಾದಲ್ಲಿ ಗೇರು ಹಣ್ಣನ್ನು ಒಣಗಿಸಿ ಆಹಾರಕ್ಕಾಗಿ ರಕ್ಷಿಸಿಕೊಳ್ಳುತ್ತಾರೆ. ಆದರೆ ಈ ಹಣ್ಣು ಭಾರತದಲ್ಲಿ 
ಜನಪ್ರಿಯವಾಗಿಲ್ಲ. ಇದಕ್ಕೆ ಮುಖ್ಯ  ಕಾರಣ ಅದರಲ್ಲಿಯ ಒಂದು ತರದ ಒಗರು ಹಾಗೂ ನಾಲಿಗೆ ಮತ್ತು ಗಂಟಲು ತುರಿಸುವ ಗುಣ.
     ಆದರೆ ಗೇರು ಹಣ್ಣಿನಲ್ಲಿ ಅನೇಕ ರೋಗ ನಿವಾರಕ ಶಕ್ತಿಯೂ ಪೌಷ್ಟಿಕಾಂಶವೂ ಇರುವುದೆಂಬುದನ್ನು ಬಹುಜನರು ಅರಿತಿರುವುದಿಲ್ಲ. ಹಣ್ಣಿನಲ್ಲಿ ಶರ್ಕರಪಿಷ್ಟಾದಿಗಳು  ಸಸಾರಜನಕ, ಕೊಬ್ಬು ಕ್ಯಾಲ್ಸಿಯಂ  ರಂಜಕ  ಹಾಗೂ ಸಿ.ಜೀವಸತ್ವಗಳಿವೆ.. ಅನುಭವಿ ವೈದ್ಯರು ಗೇರುಹಣ್ಣಿನ ವೈದ್ಯಕೀಯ ಗುಣಗಳನ್ನು ತಿಳಿಸುತ್ತಾರೆ. ಅವರ ಹೇಳಿಕೆಯಂತೆ. ಗೇರುಹಣ್ಣಿನ ರಸಕ್ಕೆ ಕೊಂಚಭಾಗ ಜೇನುತುಪ್ಪವನ್ನು ಬೆರೆಸಿ, ನಿತ್ಯ ಒಂದು ಬಾರಿ ಸೇವಿಸುವದರಿಂದ ಅತಿಸಾರ, ಕಡಿಮೆಯಾಗಿ ಮೂತ್ರ ವಿಸರ್ಜನೆಯಾಗುತ್ತದೆ. ಹಾಗೂ ಮೂತ್ರದಲ್ಲಿರುವ ಅತಿಯಾದ ಆಮ್ಲತೆ ಹುಡುಗಿಯರಲ್ಲಿ ನೋವಿನಿಂದ ಕೂಡಿದ ಋತುಸ್ರಾವ ಇತ್ಯಾದಿಗಳು ನಿವಾರಣೆಯಾಗುತ್ತವೆಯೆಂಬ ಜನಾಭಿಪ್ರಾಯಗಳಿವೆ. ದನಗಳು ಗೇರ ಹಣ್ಣನ್ನು ಪ್ರೀತಿಯಿಂದ ತಿನ್ನುತ್ತವೆ. ದನಗಳ ನೆಗಡಿ ರೋಗಕ್ಕೆ  ಗೇರಹಣ್ಣಿನ ಸರಾಯಿ ಉಪಯೋಗಿಸಲಾಗುತ್ತದೆ
 
     ತಿನ್ನುವದಕ್ಕಾಗಿ ಗೇರುಹಣ್ಣು ಬಹುಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದ್ದರೂ ಹಳ್ಳಿಗಳಲ್ಲಿ ಜನಪದ ರೀತಿಯ ಅಡಿಗೆಗಳಲ್ಲಿ ಇದು ತುಸು ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.. 
   
  ಪೂರ್ಣ ಹಣ್ಣಾಗಲು ಒಂದೆರಡು ದಿನ ಇರುವಾಗ ದೊರೆಯುವ ಬಲಿತ ಕಾಯಿಯನ್ನು ಬಂಡಿ ಎನ್ನುತ್ತಾರೆ. ಇದನ್ನು ಕೆಂಡದಲ್ಲಿ ಹುಗಿದು ಕೆಲ ಹೊತ್ತು ಇಟ್ಟರೆ ಮೇಲಿನ ಭಾಗ ಸುಟ್ಟು ಕಪ್ಪಾಗುತ್ತದೆ. ಅದು ಆರಿದ ಮೇಲೆ ಒಳ ತಿರುಳನ್ನು ಸುಟ್ಟ ಬದನೆಕಾಯಿಯನ್ನು ಅಡುವಂತೆ ಬಜ್ಜಿ ಹಸಿ ಗೊಜ್ಜುಗಳನ್ನು ಅಡುತ್ತಾರೆ. ಬಲಿತ ಹಣ್ಣುಗಳಿಂದ ತಯಾರಿಸುವ ಇಡ್ಲಿ ದೋಸೆಗಳು ಪರಿಮಳ ಮತ್ತು ರುಚಿಯಿಂದ ಮೋಹಗೊಳಿಸುತ್ತವೆ. ಗೇರು ಬೀಜದ ಸೊನೆ ಚರ್ಮ ಹಾನಿಕಾರಕ. ಚರ್ಮವನ್ನು ಅರಿಶಿನ ನೀರಿನಿಂದ ತೊಳೆದರೆ ಇದರ ಹಾನಿಕಾರಕ ಗುಣ ಕಡಿಮೆಯಾಗುತ್ತದೆ. 
 
ಚಿಗುರನ್ನು ಕೂಡ ತಂಬುಳಿಗೆ ಬಳಸಬಹುದು. ಎಲುವು ಕೂಡಿಸುವ ಮನೆ ಮದ್ದುಗಾರರು. ನಾಡ ವೈದ್ಯರು ಇದರ ತೊಗಟೆಗಳನ್ನು ಬ್ಯಾಂಡೆಜಾಗಿ ಬಳಸುತ್ತಾರೆ. ಗೇರು ಕಟ್ಟಿಗೆ ಮತ್ತು ಒಣ ಎಲೆ ಉತ್ತಮ ಉರುವಲು. ಊರಲ್ಲಿ ಗೇರು ಬೆಳೆ ಪ್ರಾರಂಭವಾದಾಗ ಹಳದಿ ಪುರದಲ್ಲಿ ಗೇರು ಬಂಡಿ ತೇರು ನಡೆಯುತ್ತದೆ. ತೇರಿಗೆ ಗೇರು ಬಂಡಿ ಕಟ್ಟುತ್ತಾರೆ.
ಜಗತ್ತಿನ ಬಹುದೂಡ್ಡ ಗೇರು ಮರವು ಬ್ರಾಜಿಲ್ದಲ್ಲಿದ್ದು 81 ಸಾವಿರ ಚದುರ ಅಡಿ ವಿಸ್ತಾರವನ್ನು ವ್ಯಾಪಿಸಿಕೊಂಡಿರುವುದಾಗಿ ತಿಳಿದುಬರುತ್ತದೆ.
ನಿಮ್ಮ ಮನೆಯ ತೋಟದಲ್ಲಿ ಸ್ಥಳ ವಿದ್ದರೆ ಗೇರುಗಿಡವೊಂದನ್ನು ಬೆಳೆಸಿರಿ 


No comments:

Post a Comment