Sunday 1 July, 2012


ಗದ್ದೆ ಗುಳ್ಳೆ  pila globosa
 
       ಪಶ್ಚಿಮ ಕರಾವಳಿಯ ಬತ್ತದ ಗದ್ದೆಗಳಲ್ಲಿ ಜೂನ್ ತಿಂಗಳ ಮೊದಲವಾರ ಮುಂಗಾರು ಮಳೆಯ ರಭಸ ಬಹುತೇಕ ಖಚಿತವಾಗಿರುತ್ತದೆ. ಗದ್ದೆಯಲ್ಲಿ ಕಣಕಾಲಿನಷ್ಟು ನೀರು ತುಂಬಿದರೆ ಸಾಕು. ಮಣ್ಣು ಹಸಿಯಾಗಿ ಅಳಕ್ಕಾಗಿ ಒಳ ಜೀವಿಗಳು ಸಂಭ್ರಮದಿಂದ ಹೊರಬರುವ ಅವಕಾಶ ಒದಗಿ ಬರುತ್ತದೆ. 

       ಮುಂಗಾರು ಮಳೆಯ ಆಗಮನದೊಂದಿಗೆ ಆಹಾರಕ್ಕಾಗಿ ಸಂತಾನಾಭಿವೃದ್ಧಿಗಾಗಿ ಹಪಹಪಿಸುವ ಈ ಜೀವಿಗಳು ಮುಂಗಾರುಮಳೆಯ ಸಿಂಚನದೊಂದಿಗೆ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುತ್ತವೆ.

       ವರ್ಷದ ಚಳಿಗಾಲ ಮಳೆಗಾಲದುದ್ದಕ್ಕೂ ಸುಪ್ತಾವಸ್ಥೆಯ ಸಮಾಧಿ ಸ್ಥಿತಿಯಲ್ಲಿದ್ದು ಮಳೆಗಾಲಕ್ಕಾಗಿ ಶಬರಿಯಂತೆ ಕಾಯುವ ಚರಾಚರ ಜೀವಿಗಳಲ್ಲಿ ನಮ್ಮ ಗದ್ದೆಗುಳ್ಳೆಯೂ ಸೇರಿದೆ. 
.
      ಇವು ಹೆಚ್ಚಾಗಿ ಬತ್ತ ಬೆಳೆಯುವ ಗದ್ದೆಗಳಲ್ಲಿ ಕಂಡುಬರುವ ಕಾರಣ ಇವುಗಳನ್ನು ಗದ್ದೆ ಗುಳ್ಳೆ(ಳ್ಯಾ)ಎನ್ನುತ್ತಾರೆ. ಇವುಗಳ ವೈಜ್ಞಾನಿಕ ಹೆಸರು ಪಾಯ್ಳಾ ಗ್ಲೋಬೋಸಾ. ಇಂಗ್ಲಿಷ್ನಲ್ಲಿ ಇದನ್ನು  ಎಪ್ಪಲ್ ಸ್ನೇಲ್ ಎಂದು ಗುರುತಿ ಸುತ್ತಾರೆ. 
ಕರಾವಳಿಯ ಗದ್ದೆಗಳಲ್ಲಿ ದೊರೆಯುವ ಗುಳ್ಳೆಗಳು (ಇವು ಪಶ್ಚಿಮ ಘಟ್ಟದ ಇಳಕಲಿನ ಗದ್ದೆಗಳಲ್ಲಿಯೂ ದೊರೆ ಯುತ್ತವೆಯೆಂದು ಆತ್ಮೀಯ ತಿಳಿಸಿದ್ದಾನೆ.)  ಈ ಗುಳ್ಳೆಗಳು ಜಗತ್ತಿನ ಹಲವು ಕಡೆ ಕಂಡುಬರುತ್ತವೆ.  ಎತ್ತರದ  ಪರ್ವತಗಳಲ್ಲಿಯೂ ಇವುಗಳ ವಾಸವಿದೆ. 

       ಕೆಲವು ಗುಳ್ಳೆಗಳ ಬಣ್ಣ ಕಪ್ಪು ಮಿಶ್ರಿತ ಕಡುಹಸುರು ಮತ್ತೆ ಕೆಲವು ತರಗೆಲೆಯ ಬಣ್ಣದವು. ಚಿಪ್ಪಿನ ಮೇಲೆ ಉಂಗುರದಂತಹ ಒಂದೆರಡು ರೇಖೆಗಳು. ಬಿಳಿ ಬಣ್ಣದ ಸಾಬೂದಾಣೆಯ ಗೊಂಚಲಿನಂತಹ ಮೊಟ್ಟೆಗಳು ಗುಳ್ಳೆಗಳಿಗೆ ನೀರಲ್ಲಿ ತೇಲುತ್ತಿರುವ  ಎಲೆಗಳಿಗೆಅಂಟಿಕೊಂಡಿರುವುದನ್ನು ಕಾಣಬಹುದು.

       ಇವುಗಳ ಆಹಾರ ಪ್ರಮುಖವಾಗಿ ಸಸ್ಯಾಹಾರ (ಅಲ್ಪಸ್ವಲ್ಪ ಮಾಂಸಾಹಾರ ಸೇವನೆಯೂ ಇವುಗಳಲ್ಲಿದೆ.) ಇವು ಬತ್ತಿದ ಗದ್ದೆಯ ಬತ್ತದ ಬೆರೆಗಳನ್ನು ತಿನ್ನುತ್ತವೆಯೆಂಬುದು ಕೃಷಿಕರಿಗೆ ಗೊತ್ತು. ಆದರೆ ಇದರ ಅರಿವಿಲ್ಲದವರು ನೀರಲ್ಲಿ ಓಡಾಡುವ ಒಳ್ಳೆ ಹಾವು ಬೆರೆಗಳನ್ನು ತಿಂದಿತು ಎಂದು ಆರೋಪಿಸುವದುಂಟು. ಆದ್ದರಿಂದಲೇ ಗುಳ್ಯಾ ಬೆರೆ ತಿಂದರೆ ಒಳ್ಳೆ ಬಡಿಸ್ಕೊಂಡಿತ್ತು. ಎಂಬ ಗಾದೆ ಪ್ರಚಲಿತವಿದೆ. ಒಳ್ಯಾ ಬಡಿಸಿಕೊಂಡಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಒಬ್ಬರು ಮಾಡಿದ ತಪ್ಪು  ಇನ್ನೊಬ್ಬರ ಮೈಮೇಲೆ ರವಾನೆಯಾದಾಗ ಈ ಗಾದೆಯನ್ನು ಹೇಳುವುದುಂಟು.
      ಗಂಡಸರು ಗದ್ದೆಯ ಹೋಟಿಗೆ ಹೋದಾಗ ಹೆಂಗಸರು ಗದ್ದೆ ಗೊಬ್ಬರ ಬೀರಲು ಗದ್ದೆಗಿಳಿಯುದುಂಟು. ಆಗ ಮಕ್ಕಳಿಗೆ ಗುಳ್ಳೆಗಳನ್ನು ಹೆಕ್ಕುವ ಕೆಲಸ.  

       ಆ ದಿನ ಮನೆಯಲ್ಲಿಯ ಹಿರಿಯರು  ಮಕ್ಕಳು ಮಡಕೆಯಲ್ಲಿ ತುಂಬಿರುವ ಗುಳ್ಳೆಗಳನ್ನು ಸ್ವಚ್ಛ ಮಾಡಿದರೆ ಹೆಂಗಸರು ಮಸಾಲೆ ತಯಾರಿಸುತ್ತಾರೆ. ಕೇರಿಯಲ್ಲಿ ಗುಳ್ಳೆಗಳ ವಿವಿಧ ಅಡಿಗೆಗಳು ತಯಾರಾಗುತ್ತವೆ. ಗುಳ್ಳೆ ಪಳದಿ, ಗುಳ್ಳಿ ಪುಡಿ (ಸುಕ್ಕಾ) ಗುಳ್ಳೆಗಳ ಎಲೆಬುತ್ತಿ ಮುಂತಾದ ಅಡುಗೆ ಆಡಬಲ್ಲ ಹೆಂಗಸರು ತಮ್ಮ ಪರಂಪರಾಗತ ಜ್ಞಾನವನ್ನು ಇಲ್ಲಿ ಪ್ರಯೋಗಕ್ಕಿಳಿಸುತ್ತಾರೆ. ಕಳೆ ತೆಗೆಯುವಾಗ ,ನೆಟ್ಟಿ ಮಾಡುವಾಗ  ಹಾಗೂ ಇತರ ಅನೇಕ ಬಾರಿ  ಇತರ ಕೆಲಸಕ್ಕಾಗಿ ಗದ್ದೆಯ ಬಯಲಿಗೆ ಹೋದವರು ಗುಳ್ಳೆಗಳನ್ನು ಹೆಕ್ಕಿ ಮನೆಗೆ ತರುತ್ತಾರೆ. ಅಟ್ಟು ಉಣ್ಣುತ್ತಾರೆ. ಗದ್ದೆಯಲ್ಲಿ ನೀರು ತುಂಬಿದ್ದರೆ ನಾಲ್ಕು ತಿಂಗಳು ನೈಸಗರ್ಿಕವಾದ ಮಾಂಸದ ಬೆಳೆ  ಇವರ ಕೈಗೆ ಸಿಗುತ್ತದೆ.
  
         ಇದು ಕರಾವಳಿಯಲ್ಲಿಯಷ್ಟೇ ಅಲ್ಲ ಜಗತ್ತಿನ ಹಲವು ಕಡೆ ಆಹಾರವಾಗಿ ಬಳಕೆಯಲ್ಲಿದೆ. ದೇಶಗಳಲ್ಲಿ ಇದು ಆಹಾರ ಇದನ್ನು ಕೋಳಿ ಆಹಾರವಾಗಿ ಬಳಸುತ್ತಿದ್ದಾರೆ. ನಾಗಾಬುಡಕಟ್ಟಿನ ಜನರು ಇದರ ಸೇವನೆ ಯಿಂದ ಅಸ್ತಮಾ ಟಿ.ಬಿ. ಮತ್ತು ಕಣ್ಣಿನ ಬಾಹ್ಯ ತೊಂದರೆಗಳು ದೂರವಾಗುತ್ತವೆಯೆಂದು ತಿಳಿಯುತ್ತಾರೆ.


No comments:

Post a Comment