Tuesday 31 July, 2012


     
ಸಾಮಾಜಿಕ ಉಪ ಭಾಷೆ
    
   ಭಾಷೆ  ನಿಂತ ನೀರಲ್ಲ. ಅದು ಸದಾ ಪರಿವರ್ತನ ಶೀಲವಾದದ್ದು. ಪರಿವರ್ತನೆ ಒಮ್ಮೆಲೆ ಗೋಚರಿಸುವದಿಲ್ಲ. ಮನಸ್ಸಿಗೆ ವೇದ್ಯವಾಗುತ್ತದೆ. 
      
     ನಾನು ಸುಮಾರು ಐವತ್ತು ವರ್ಷಗಳಿಂದ ನನ್ನ ಮಾತೃಭಾಷೆಯ ಪರಿಸರವುಳ್ಳ ಪ್ರದೇಶದಿಂದ  ಸುಮಾರು ನೂರು ಕಿ. ಮೀ ಗಳಷ್ಟು ಅಂತರದಲ್ಲಿ ವಾಸವಾಗಿದ್ದೇನೆ.  ಅಲ್ಲಿಯ ನನ್ನ ಸಂಬಂಧಿಕರೊಂದಿಗೆ  ಭಾಷಾ ಸಂಪರ್ಕದಲ್ಲಿದ್ದೇನೆ.  ದೂರವಾಣಿಯಲ್ಲಿ ಮಾತಾಡುತ್ತೇನೆ.  ವರ್ಷದಲ್ಲಿ ಆರೆಂಟು ಬಾರಿಯಾದರೂ ಅಲ್ಲಿಗೆ ಹೋಗಿ ಬರುತ್ತೇನೆ.  ನನ್ನ ಇಲ್ಲಿಯ ಮನೆಯಲ್ಲಿ ನನ್ನ ಕುಟುಂಬದ ಸದಸ್ಯರೊಂದಿಗೆ ನನ್ನ ಮಾತೃ ಭಾಷೆಯಲ್ಲಿ ಮಾತಾಡುತ್ತೇನೆ. ನಾನು ಈಗ ಮಾತಾಡುವ ಭಾಷೆಯು ನಾನು ಈ ಊರಿಗೆ  ಬರುವ  ಸಂದರ್ಭದ  ಮಾತೃಭಾಷೆಯಲ್ಲದೆ ಬೇರೆಯಲ್ಲವೆಂದು ತಿಳಿದುಕೊಂಡಿದ್ದೆನು.  
    
    ಆದರೆ ಒಂದು ದಿನ ನನ್ನ ಮಾತೃ ಭಾಷೆಯನ್ನೇ ತಮ್ಮ ತಮ್ಮ  ಮಾತೃ ಭಾಷೆಯಾಗುಳ್ಳ ಮತ್ತು ಆ ಭಾಷೆಯನ್ನು ಸಾಮಾಜಿಕ ಭಾಷೆಯ್ನನ್ನಾಗಿ ಹೊಂದಿದ ತಮ್ಮ ಕೇರಿಗಳಲ್ಲಿ ವಾಸವಾಗಿರುವ ನನ್ನ ಗೆಳತಿಯರ ಗುಂಪೊಂದು ನನ್ನನ್ನು ಭೆಟ್ಟಿಯಾದಾಗ ಇದೇನೆ ಶಾಂತಕ್ಕಾ  ``ನಿನ್ ಮಾತ ಬೆರೆ ಆಗಿದ ಆ ಬದಿ ಬಟ್ರಂಗ್ ಮಾತಾಡ್ತಿ''  ಎಂದಾಗ ನಾನು ಮಾತಾಡುತ್ತಿರುವದು ನಾಡವರ ಭಾಷೆಯೇ ಅಗಿದ್ದರೂ, ನನಗರಿವಿಲ್ಲದೆ ನನ್ನ ಇಲ್ಲಿಯ ಪರಿಸರದ  ಭಾಷೆಯ ಪ್ರಭಾವವು ನನ್ನ[ತವರಿನ]  ಹಿಂದಿನ  ಊರಿನ   ನನ್ನ  ಪರಿಸರದ ಭಾಷೆಯ ಮೇಲೆ  ಉಂಟಾಗಿದೆಯೆಂದು  ನನಗೆ ಅರಿವಾಯಿತು. 

     ಈ ಬಗೆಯ ಭಾಷೆ  ಬದಲಾವಣೆಯ ಪ್ರಕ್ರಿಯೆ ಕೇವಲ ನನ್ನ ಈ ಒಂದು ಭಾಷೆಗೆ ಮಾತ್ರ ಸೀಮಿತ ವಾದದ್ದಲ್ಲ.  ಮೌಖಿಕವಾದ ಎಲ್ಲ ಬಗೆಯ ಭಾಷೆಗಳಲ್ಲಿ ಇದು ನಡೆಯುತ್ತದೆ.  ಲಿಪಿ ಬದ್ಧ ವಾದ ಆಧುನಿಕ ಭಾಷೆಗಳನ್ನೂ  ಇದು ಬಿಟ್ಟಿಲ್ಲ.  ಹವ್ಯಕ ಸಾಮಾಜಿಕ  ಭಾಷೆಯಲ್ಲಿಯೂ ಇದು ನಡೆಯುತ್ತಿದೆ.  
        

   ಹೊನ್ನಾವರ ತಾಲೂಕಿನ ಪಂಚಗ್ರಾಮದ ಭಾಷೆ ಅಥವಾ ಕುಮಟಾದ ಹಳ್ಳಿಗರ ಭಾಷೆಗಿಂತ ಉಚ್ಚಾರದಲ್ಲಿ ಶಬ್ದ ಬಳಕೆಯಲ್ಲಿ ವ್ಯತ್ಯಾಸವನ್ನು ಹೊಂದಿದೆ. ಹಳ್ಳಿಗರು ಇದನ್ನು ಆಗಾಗ ಗುರುತ್ರಿಸುತ್ತಾರೆ. ಅವರು ಹೇಳುವಂತೆ ಪ್ರತಿ ಮೂರು ಮೈಲು ಅಂತರಗಳಲ್ಲಿ ಈ ವ್ಯತ್ಯಾಸಗಳು ಕಂಡು ಬರುತ್ತದೆ. ಆದರೆ  ಅನೇಕ ಭಾಷೆಗಳ ಗತಿಯನ್ನು ಗಮನಿಸಿ ಹೇಳುವುದಾದರೆ ಅವು ಪ್ರತಿ ವರ್ಷ ಹೊಸ ಶಬ್ದಗಳನ್ನು ಸ್ವೀಕರಿಸುತ್ತಾ ಹಳೆಯ ಶಬ್ದಗಳನ್ನು ಬಿಡುತ್ತಾ ಸಾಗುವದು ಕಂಡುಬರುತ್ತದೆ. ಈ ದಿಸೆಯಲ್ಲಿ ಸಾಮಾಜಿಕ ಉಪ ಭಾಷೆಗಳ ದೋಣಿ  ವೇಗವಾಗಿ ಸಾಗುತ್ತದೆ. ಎತ್ತ ಸಾಗಿದೆ ಕಾಲವೇ ನಿರ್ಣಯಿಸಬೇಕು. ಹಳೆಯ ಭಾಷಾ ನೆನಪನ್ನು ಮೆಲಕಾಡಿಸುವವರಿಗೆ ಇಲ್ಲಿ ಹೊನ್ನಾವರ ಪಂಚ ಗ್ರಾಮದ  ಹವ್ಯಕ ಸಾಮಾಜಿಕ ಉಪಭಾಷೆಯ ಚೌಕಟ್ಟಿನಲ್ಲಿರುವ  ಮತ್ತು ಹಿರಿಯರು ಮಕ್ಕಳಿಗಾಗಿ ಹೇಳಿರುವ ಹಾಗೂ ಹಿರಿಯರಿಂದ ಕೇಳಿ ಕಲಿತು ಮಕ್ಕಳು ಹೇಳಿದ ಕೆಲವು ಕತೆಗಳನ್ನು ಬ್ಲಾಗಿಸುತ್ತಿದ್ದೇನೆ. ಈ ಹವ್ಯಕ ಉಪಭಾಷಾ ಜನಪದ ಕತೆಗಳನ್ನು ಹವ್ಯಕರ ಕತೆಗಳು ಎಂಬ ಮಾಲಿಕೆಯಲ್ಲಿ ನೀವು  ಕಾಣಬಹುದು.

No comments:

Post a Comment