Wednesday 25 July, 2012

ನಮ್ಮ ಗಿಡ ಮರ ಬಳ್ಳಿಗಳು- ಕರಿಮುಳ್ಳಣ್ಣು


ಕರಿಮುಳ್ಳಣ್ಣು  Zizipus oenoplia L.C. Mill


 ಬೇಸಿಗೆ ಕಾಲಿಡುತ್ತಲೇ ಹಳ್ಳಿ ಮಕ್ಕಳು ಕಾಡಿನ ಹಣ್ಣಿನ ಕನಸು ಕಾಣಲುತೊಡಗುವದು ಸಾಮಾನ್ಯವಾಗಿರುತ್ತದೆ; ಪಟ್ಟಣದ ಶಾಲಾ ಮಕ್ಕಳಿಗೆ ತಮ್ಮ ಪರೀಕ್ಷೆ ಮುಗಿಯುತ್ತಲೇ ಹಳ್ಳಿಯ ಅಜ್ಜಿ ಮನೆಗೆ ಹೋಗುವ ತವಕ. ಮನೆಯಲ್ಲಿ ತೋಟದ ಹಣ್ಣು ಪೇಟೆಯ ಹಣ್ಣುಗಳು ದೊರೆಯುತ್ತಿದ್ದರೂ ಕಳೆದ ವರ್ಷ ಅಜ್ಜಿ ಮನೆಯ ಗುಡ್ಡದ ಬದಿಯ ಕಾಡಿನಲ್ಲಿ ಬಿಳಿ ಮುಳ್ಳಣ್ಣು, ಕರಿ ಮುಳ್ಳಣ್ಣು, ಚಂಪೇರ ಹಣ್ಣು , ಕಡಜಲ ಹಣ್ಣು, ಮುಳ್ಳು ಗುಜ್ಜರ ಹಣ್ಣು, ಚಿರಕಲ ಹಣ್ಣು, ಗೇರ ಹಣ್ಣು, ನೇರಲ ಹಣ್ಣು,  ಕುನ್ನೇರಲ ಹಣ್ಣು, ಬಿಳಿಕಾರೆ ಹಣ್ಣುಗಳನ್ನು ತಿಂದ ನೆನಪು ಪರೀಕ್ಷೆಗಾಗಿ ಓದಲು ಕುಳಿತಾಗಲೆಲ್ಲ ಕಾಡುತ್ತದೆ. ಹೀಗೆ ಕಾಡುವ ಹಣ್ಣುಗಳಲ್ಲಿ ಕರಿಮುಳ್ಳಣ್ಣೂ ಒಂದಾಗಿದೆ. ಇದು ಹಣ್ಣು ಕೊಡುವ ಕಾಲ ಡಿಸೆಂಬರ ಅನಂತರ ಒಂದೆರಡು ತಿಂಗಳು ಮಾತ್ರ ಬಳಿಕ ಈ ಗಿಡ ತನ್ನ ಎಲೆಗಳನ್ನೆಲ್ಲ ಪೂರ್ಣ ಉದುರಿಸಿ  ಒಣಗಿ ಜಿಗ್ಗಿನಂತಾಗುತ್ತದೆ. 
 
        ಈಗ ಬೇರೆ ಹಿಂಡು ಹಿಂಡುಗಳಲ್ಲಿ ಬಿಳಿ ಮುಳ್ಳಣ್ಣು ಕಣ್ಸೆಳೆಯುತ್ತದೆ. ಮುತ್ತಿನ ಬಣ್ಣದ ಬಿಳಿ ಮುಳ್ಳಣ್ಣಿನ ಮುಂದೆ  ಕಪ್ಪು ಬಣ್ಣದ  ಇದು ಕರಿ ಮುಳ್ಳಣ್ಣು ಎನಿಸಿಕೊಂಡಿತು. ಆದರೆ ಇದು ಬಿಳಿ ಮುಳ್ಳಣ್ಣಿನಷ್ಟು ದೊಡ್ಡದಲ್ಲ. ಇದು ಕಾಳು ಮೆಣಸಿನಷ್ಟು ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತದೆ. ತುಸು ಹುಳಿ ಸಿಹಿ ರುಚಿ. ಚೀಪಿ ತಿನ್ನಬಹುದಾದ ಒಂದೇ ಬೀಜದ ಹಣ್ಣು ಇದು. ಬೀಜ ಗಟ್ಟಿ. ಬೀಜವನ್ನು ತಿನ್ನುವ ರೂಢಿಯಿಲ್ಲ. ರಸ ಅತ್ಯಲ್ಪ. ಚೀಪುವಾಗ ರಸಾನುಭವವಾಗುವ ಕಾಲಕ್ಕೆ ಸರಿಯಾಗಿ ಇದರ ಸಿಪ್ಪೆ ನಾಲಿಗೆಯಲ್ಲಿ ಉಳಿದುಕೊಳ್ಳುತ್ತದೆ. ಆದರೆ ಸಿಪ್ಪೆ ಉಗುಳಬಹುದಾದ ಮಾಲಲ್ಲ. ಜಗಿದು ನುಂಗಬೇಕಾದ ಜೀವಸತ್ವದ ಗಣಿ. 
 
       ಇದು ತಿನ್ನಬಹುದಾದ ಹಣ್ಣೆಂದು ನಿಮಗೆ ಹೇಳಿದವರು ಯಾರು? ಇದಕ್ಕೆ ಉತ್ತರ ಪರಂಪರೆ. ನಾವು ನಿತ್ಯ ಉಣ್ಣುವ ಅನ್ನ ಊಟದಲ್ಲಿ ಬಳಸುವ ಹೀರೆ ಮೊಗ್ಗೆ ಮುಂತಾದವನ್ನು ನಾವು ಸೇವಿಸಲು ಕಲಿತದ್ದು ಪರಂಪರೆಯಿಂದ. ಇದನ್ನು ಮೊಟ್ಟ ಮೊದಲು ಸೇವಿಸುವ ಧೈರ್ಯ  ಮಾಡಿದ ಸ್ತ್ರೀ-ಪುರುಷ ಯಾರೋ ಗೊತ್ತಿಲ್ಲ.
 
       ಕರಿ ಮುಳ್ಳಣ್ಣಿನ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ನಾವು ನೀವು ಭಯಪಡದೆ ಇದನ್ನು ತಿನ್ನಬಹುದು. ಇದರಲ್ಲಿ ಶರ್ಕರ, ಪಿಷ್ಟ, ಕಬ್ಬಿಣ, ರಂಜಕಗಳಿವೆ. ಇದು ಶಕ್ತಿವರ್ಧಕ. ಹಿರಿಯರು ಮಕ್ಕಳಿಗೆ ಸಾಮಾನ್ಯ ಜ್ವರ; ಹೊಟ್ಟೆ ನೋವು ಬಂದಾಗ ಈ ಹಣ್ಣಿನ ಕಷಾಯ ನೀಡಬಹುದು. ತೊಗಟೆಯ ಕಷಾಯದಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ ಎಲೆಯ ರಸದಿಂದ ಹಸಿಗಾಯ ನಿವಾರಣೆಯಾಗುತ್ತದೆಯೆಂಬ ವರದಿಗಳಿವೆ. ಬೇರನ್ನು ನಾಡ ಮದ್ದುಗಾರರು ಚವಿ ರೋಗಕ್ಕೆ, ಚರ್ಮ ರೋಗಕ್ಕೆ  ಮದ್ದಾಗಿ ಬಳಸುತ್ತಾರೆ. ಇದು ಎಸಿಡಿಟಿಗೂ ಮದ್ದು. ಆದರೆ ಹಣ್ಣನ್ನು ಕೊಯ್ಯಲು ಹೋದಾಗ ಕೈ  ಮತ್ತು ಕಾಲುಗಳನ್ನು ಎಚ್ಚರಿಕೆಯಿಂದಿಡಿ. ಎಡಗೈಯ್ಯಲ್ಲಿ ಕಾಯಿ ಹಣ್ಣುಗಳಿಂದ ತುಂಬಿದ ಮುಳ್ಳು ಮತ್ತು ಎಲೆಗಳ ಸುಂದರ ಹೆಣಿಗೆಯ ಟೊಂಗೆಯನ್ನು ಮೆಲ್ಲಗೆ ಹಿಡಿದು ಹಣ್ಣನ್ನು ಆಯ್ದುಕೊಳ್ಳುವದು ಒಂದು ನೋಡಿ ಕಲಿಯುವ ಕಲೆ. ಆದರೂ ಇದು ತನ್ನ ಮುಳ್ಳಿನಿಂದ ಪರಚದಿರುವದಿಲ್ಲ. ಈ ಅನುಭವವಿರುವ ಕರಾವಳಿಯ ಪೂರ್ವದಲ್ಲಿರುವ ಗಟ್ಟದ ಮಕ್ಕಳು ಇದನ್ನು ಪರಿಗೆಯೆಂದರು. ಸೂಜಿಯ ಮೊನೆಯಂತಹ ಇದರ ಮುಳ್ಳುಗಳನ್ನು ಮತ್ತು ಕಪ್ಪು ಬಣ್ಣದ ಹಣ್ಣುಗಳನ್ನು ಕಂಡ ಅಂಕೋಲೆಯ ಸುತ್ತಣಜನ ಇದನ್ನು ಕರಿಸೂಜಿ ಮುಳ್ಳು ಎಂದರು. ಇಂಗ್ಲಿಷಿನಲ್ಲಿ ಜಾಕಲ ಜುಜುಬಿ ಎಂದರು .ಝಿಝಿಪಸ್ ಒನೋಪಲಿಎಂಬುದು ಇದರ ಸಸ್ಯ ಶಾಸ್ತ್ರೀಯ ಹೆಸರು ರಾಮ್ನೇಸಿ ಕುಟುಂಬ.
 
        ಈ ಮುಳ್ಳು ಹಿಂಡನ್ನು ಗಮನಿಸಿರಿ. ಅಲ್ಲೆಲ್ಲ ಹತ್ತಾರು ಔಷಧ ಗಿಡ ಬಳ್ಳಿಗಳು ಕಂಡುಬರುತ್ತವೆ. ಇವುಗಳನ್ನು ರಕ್ಷಿಸಲು ಇಲ್ಲೊಂದು ಅಪೂರ್ವ ರಕ್ಷಣಾ ವ್ಯವಸ್ಥೆಯಿದೆ. ಈ ಗಿಡದ ಟೊಂಗೆ ಟೊಂಗೆಗೆ ಎಲೆ ಎಲೆಯ ಸಂದಿನಲ್ಲಿ ಅಪೂರ್ವ ಮುಳ್ಳುಗಳ ಜೋಡಣೆ ಕಾಣುತ್ತದೆ. ಒಂದು ಮುಳ್ಳು ಸೂಜಿ ಮೊನೆಯಂತೆ ಚೂಪಾಗಿ ತೊಂಬತ್ತಂಶದ ಕೋನದಲ್ಲಿ ಹಾಗೂ ಬದಿಯಲ್ಲಿಯ ಇನ್ನೊಂದು ಮುಳ್ಳು ಬೆಕ್ಕಿನ ಉಗುರಿನಂತೆ ಬಾಗಿ ನಲವತೈದು ಅಂಶದ ಕೋನದಲ್ಲಿ ಜೋಡಿಯಾಗಿ ವೈರಿಗಳನ್ನು ಪರಚಲು ಸಿದ್ಧವಾಗಿ ನಿಂತಿರುತ್ತವೆ. ಆದರೆ ಈ ಔಷಧ ಗಿಡಗಳನ್ನು ಮೇಯಲು ಬರುವ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಂಡರೂ ಇದು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥವಾಗುವ ಪರಿಸ್ಥಿತಿ ಉಂಟಾಗಿದೆ. ಇದರ ಮುಳ್ಳು ಮನುಷ್ಯನ ಕಣ್ಣಿಗೆ ಬಿದ್ದು ಕಮರುವ ಸ್ಥಿತಿ ಬಂದಿದೆ. ಈತ ತನ್ನ ತೋಟಕ್ಕೆ ಇದರ ಹಸಿರು ಬೇಲಿ ಮಾಡುವ ಬದಲು ಪ್ರತಿ ಮಳೆಗಾಲದ ಆರಂಭದಲ್ಲಿ ಇದನ್ನು ಕಡಿ ಕಡಿದು ತೋಟದ ಬೇಲಿಗೆ ಒಡ್ಡುತ್ತಿದ್ದಾನೆ. ಇಂತಹ ಅಪೂರ್ವ ಮುಳ್ಳು ಹಿಂಡುಗಳ ನಾಶಕ್ಕೆ ಕಾರಣನಾಗುತ್ತಿದ್ದಾನೆ. ಜೊತೆಗೆ ಈ ಹಿಂಡುಗಳ ಉಸ್ತುವಾರಿಯಲ್ಲಿದ್ದ ಔಷಧ ಗಿಡಗಳನಾಶಕ್ಕೂ ಕಾರಣನಾಗುತ್ತಿದ್ದಾನೆ. ಈಗ ನಾವು ತಲೆಯ ಮೇಲೆ ಕೈಯ್ಯಿಟ್ಟು ತೆಪ್ಪಗೆ ಕುಳಿತಿರ ಬೇಕೆ? ನಮ್ಮ ಮುದ್ದು ಕರಿಮುಳ್ಳಣ್ಣಿನ ಹಿಂಡನ್ನು ಉಳಿಸಿಕೊಳ್ಳುವ ಬಗೆ ಹೇಗೆ ಬಾಲಕರೆ ನೀವೇ ಹೇಳುತ್ತೀರಾ? ಬರೆಯುತ್ತೀರಾ?                    

No comments:

Post a Comment