Thursday 19 July, 2012

ಪ್ರತಿಕ್ರಿಯೆ


                             ಶೌಚಾಲಯ ಮತ್ತು  ಸರಕಾರ


       14 ಜುಲೈ 12 ರ ಪ್ರಜಾವಾಣಿಯ ಭೂಮಿಕಾದಲ್ಲಿ ವಿವಿಧ ಚಿಂತಕರಿಂದ ವ್ಯಕ್ತವಾಗಿರುವ ನಮ್ಮ ರಾಜ್ಯದ ಶೌಚಾಲಯ ಸಮಸ್ಯೆಯ ಕುರಿತ ಪ್ರತಿಕ್ರಿಯೆ ಆಧುನಿಕ ಸ್ವತಂತ್ರ ಭಾರತದ ದಯನೀಯ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ. ಈ ದೇಶದ ಆಡಳಿತಕ್ಕೆ ದೇಶದ ಶೌಚಾಲಯ ಪರಿಸ್ಥಿತಿಯನ್ನು ಸುಗಮಗೊಳಿಸುವದು ಒಂದು ಚಿಕ್ಕ ಆದರೆ ಅಷ್ಟೇ ಮಹತ್ವದ ಮತ್ತು ಅಗತ್ಯದ ಕೆಲಸ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 
ಅರವತ್ತೈದು ವರ್ಷ ಕಳೆದರೂ ಇದು ಸಾಧ್ಯವಾಗಲಿಲ್ಲವೆಂಬುದು ದೇಶಕ್ಕೆ ನಾಚಿಕೆಗೇಡಿನ ಸಂಗತಿ.
     
     ಒಂದು ಮನೆಗೆ ಶೌಚಾಲಯವಿಲ್ಲವೆಂದಾದರೆ ಅದಕ್ಕೆ ಅವರು ಹೊಣೆ, ಇವರು ಹೊಣೆ ಎಂದು ಜಾರಿಕೊಳ್ಳದೆ ಸರಕಾರವೇ ಇದಕ್ಕೆ ಹೊಣೆಯಾಗಬೇಕು
 
      ದೇವಸ್ಥಾನ ನಿರ್ಮಾಣಕ್ಕಾಗಿ ಲಕ್ಷಗಟ್ಟಲೆ ಮತ್ತು ಮಠ ಮಾನ್ಯಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವ ಈ ಸರಕಾರ ಬಡವರಿಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುವಾಗ ಪಕ್ಷಪಾತ ಮಾಡುವುದೇಕೆ?.ಶೌಚಾಲಯನಿರ್ಮಾಣಕ್ಕೆ ಸರಕಾರ ಕೊಡುವ ಅನುದಾನ ಶೌಚಾಲಯದ ನೆಲಗಟ್ಟು ನಿರ್ಮಾಣಕ್ಕೂ ಸಾಲುವ ದಿಲ್ಲವೆಂಬ ಹೇಳಿಕೆಗಳಿವೆ. ಇದರಿಂದಾಗಿಸಂಡಾಸನಿರ್ಮಿಸಿಕೊಳ್ಳಲು ಮನಸ್ಸಿ ದ್ದರೂ ಬಡವರು ಈ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಷ್ಟಿಷ್ಟು ಪುಡಿಗಾಸು ಬೀಸಾಡಿ ಶೌಚಾಲಯ ನಿರ್ಮಿಸಿಕೊಳ್ಳಿ ಎನ್ನುವ ಬದಲು ಸರಕಾರವೇ ಮುಂದೆ ನಿಂತು ಆಧುನಿಕ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಮುಂದಾಗಲಿ.  ಬಡವರ ಮನೆಗೆ ಉತ್ತಮ ಶೌಚಾಲಯ ನಿರ್ಮಿಸಿ ಕೊಡುವದು ದೇವಾಲಯ ನಿರ್ಮಿಸುವದಕ್ಕಿಂತ ಆಸ್ಪತ್ರೆ ನಿರ್ಮಿಸುವದಕ್ಕಿಂತ ನೂರುಪಟ್ಟು ಹೆಚ್ಚಿನ ಮೌಲ್ಯವುಳ್ಳದ್ದು. ಇದನ್ನು ಅರಿಯದ ಪ್ರಜಾಪ್ರತಿನಿಧಿಗಳು ಸರಕಾರದಲ್ಲಿರುವಾಗ ಯಾರಿಗೆ ದೂರುವದು? ಯಾರಿಗೆ ತಿಳಿಸುವದು?.

      ಪ್ರಜೆಗಳ ದುಡ್ಡಿನಿಂದ ವಿಧಾನಸೌಧದಲ್ಲಿ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯ ವಿರುವುದಾದರೆ ಅವರನ್ನು ಆರಿಸಿ ಕಳಿಸುವ ಪ್ರಜೆಗಳಿಗೆ ಯಾಕೆ ತಗಡು ಬಾಗಿಲ ಕಟ್ಟಿದ ಮಣ್ಣು ಹೊಂಡದ ಶೌಚಾಲಯ? ವಿಧಾನಸೌಧದಲ್ಲಿ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯವಿರುವಂತೆ ಬಡವರಿಗೆ ವಿಶೇಷವಾಗಿ ಮಹಿಳೆಯರಿಗಾಗಿ ಮಕ್ಕಳಿಗಾಗಿ ಮುದುಕರಿಗಾಗಿ ಉತ್ತಮ ಶೌಚಾಲಯ ಏಕೆ ಬೇಡ.?

       ಐಷಾರಾಮಿ ಅಹ್ಲುವಾಲಿಯಾ ಅವರಿಗೆ ಮೀಸಲಾದ ಎರಡು ಟಾಯಲೆಟ್ ನವೀಕರಣಕ್ಕೆ ಮುವತ್ತೈದು ಲಕ್ಷ  ಖರ್ಚಾದ ವಿಷಯ  ಹಳ್ಳಿಸುಬ್ಬ ಬ್ಲಾಗ್ನಲ್ಲಿ ಓದಿದೆ. ಇಂಥ ಘಟನೆಗಳು ನಮ್ಮ ದೇಶವನ್ನು ದುರಂತದತ್ತ ಒಯ್ಯುತ್ತಿರುವ ರಾಜಕೀಯ ಸುನಾಮಿಗಳು. ಪ್ರತಿಬಾರಿ ಸರಕಾರ ಬದಲಾದಾಗಲೆಲ್ಲ ನಮ್ಮ ಶಾಸಕರಿಗೆ ಮಂತ್ರಿಗಳಿಗೆ ಅದ್ದೂರಿ ಶೌಚಾಲಯದ ನವೀಕರಣ ನಡೆಯುತ್ತದೆ. ಅದಕ್ಕೆಷ್ಟು ಖರ್ಚಾಗುತ್ತದೆ? ಅದರ ಲೆಕ್ಕವನ್ನು ದೇಶದ ಈ ಬಡ ಪ್ರಜೆಗೆ ತಿಳಿಸುವವರು ಯಾರು? ತಿಳಿಸಿದರೂ, ತಿಳಿದರೂ ಅವನೇನು ಮಾಡಿಯಾನು?

       ಸದ್ಯ ಶೌಚಾಲಯ ನಿರ್ಮಾಣ ವರ್ತಮಾನ ಸರಕಾರದ ಪ್ರಥಮ ಆದ್ಯತೆಯ ಕಾರ್ಯವಾಗಲಿ. ನಮ್ಮ ರಾಜ್ಯದಲ್ಲಿ ಪೂರ್ಣ ಅಂದರೆ ನೂರಕ್ಕೆ ನೂರು ಶೌಚಾಲಯ ನಿರ್ಮಾಣ ಸಾಧ್ಯವಾಗುವವರೆಗೆ ಬಜೆಟ್ ಹಣದಲ್ಲಿ ದೇವರಿಗೆ ಮಠಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಲಿ. ಶೌಚಾಲಯ ನಿರ್ಮಾಣವೆಂದರೆ ಅದು ಕಾಟಾಚಾರದ ತಗಡು ಹೊಂಡ ವಾಗಿರುವದು ಬೇಡ.  ಉತ್ತಮ ಶೌಚಾಲಯವೇ ಆಗಿರಲಿ. ಪ್ರಜೆಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಪುಡಿಗಾಸು ಹೊತಾಕುವ ಯೋಜನೆಯನ್ನು ಸರಕಾರ ಕೈಬಿಟ್ಟು ಹಣ ಸೋರಿ ಹೋಗದಂತೆ ಊರಿನ ಪಂಚರ ಸಮಕ್ಷಮ ಉತ್ತಮ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ತುರ್ತಾಗಿ ಜಾರಿಗೆ ತರಲಿ. 







No comments:

Post a Comment