Saturday 28 July, 2012

ನಮ್ಮ ಗಿಡ ಮರ ಬಳ್ಳಿಗಳು- ಕರಂಬಲ


ಕರಂಬಲ ಹಣ್ಣು - Averrhoa carambola,Linn
  
           ಕರಂಬಲ ಹಣ್ಣಿನ ಮರವು ಬಿಂಬಲ ಕಾಯಿಯ ಮರದಂತೆ ಚಿಕ್ಕ ಆಕಾರವುಳ್ಳದ್ದು. ಎಲೆಗಳು ಮೆತ್ತಗೆ ಗರಿ ಮಾದರಿಯವು .ಗುಲಾಬಿ ಬಣ್ಣದ ಹೂಗಳು ಗಂಟೆಯಾಕಾರದವು. ಐದು ಎಸಳಿನವು. ಹೂ ಕಾಯಿಗಳು ಗೊಂಚಲಾಗಿರುತ್ತವೆ. ಇದರ ಫಲವು ಎದ್ದು ಕಾಣುವ ಐದರಿಂದ ಆರೇಳು ಏಣುಗಳನ್ನು ಅಂದರೆ ಧಾರೆಗಳನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಧಾರೆಹುಳಿ ಎನ್ನುವದುಂಟು. ವಿದೇಶದಿಂದ ಬಂದ ಕರಂಬೋಲಾ ಎಂಬ ಹೆಸರು ಕನ್ನಡ ಭಾಷೆಯಲ್ಲಿ ಕರಬಲ, ಕರಂಬಲ, ಕರಿಮಾದಲ ಇತ್ಯಾದಿ ಅಚ್ಚ ಗನ್ನಡ ಹೆಸರಾಗಿ ಮಾರ್ಪಟ್ಟಿದೆ. ಕಾಯಿ ಅಥವಾ ಹಣ್ಣುಗಳನ್ನು ಅಡ್ಡ.ಕತ್ತರಿಸಿದಾಗ ತುಂಡುಗಳು ನಕ್ಷತ್ರದಂತೆ ಕಾಣುವ ಕಾರಣ ಈ ಹಣ್ಣುಗಳನ್ನು ಇಂಗ್ಲಿಷನಲ್ಲಿ ಸ್ಟಾರ ಪ್ರುಟ್ ಎನ್ನುತ್ತಾರೆ.  

        ಈ ಹಿಂದಿನ ತಲೆಮಾರಿನ ಹಿರಿಯರು ಮಕ್ಕಳಿಗೆ ನೆಗಡಿಯಾದಾಗ ಮೊದಲು ಕರಂಬಲ ಹಣ್ಣುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಊರಿನಲ್ಲಿ ವಿರಳವಾಗಿರುವ ಈ ಮರಗಳನ್ನು ಎಲ್ಲಿಯಾದರೂ ಕಂಡರೆ ಗುರುತಿಸಿಕೊಂಡಿರುತ್ತಿದ್ದರು. ತಮ್ಮ ಮನೆಯಲ್ಲಿಯೂ ಈ ಮರ ಇರಬೇಕೆಂದು ಬಯಸುತ್ತಿದ್ದರು. ಅದರ ಹಣ್ಣುಗಳನ್ನು ತಂದು ಬಿಸಿ ಬೂದಿಯಲ್ಲಿ ಹುಗಿದು ತುಸು ಬೇಯಿಸಿ.ಬಟ್ಟೆಯಲ್ಲಿಟ್ಟು ಹಿಂಡಿ ರಸ ತೆಗೆದು ರೋಗಿ ಮಕ್ಕಳಿಗೆ ಜೇನಿನೊಂದಿಗೆ ಆಗಾಗ ಕುಡಿಸುತ್ತಿದ್ದರು. ಈ ಕಾಲ ಸರಿದು ಹೋಗಿದೆ. ಈಗ ಬಾಟ್ಲಿ ಹಿಡಿದು ಮಕ್ಕಳ ರೋಗ ತಜ್ಞರಲ್ಲಿಗೆ ಓಡುವದು ಪದ್ಧತಿಯಾಗಿದೆ. ಈ ಹಣ್ಣಿನಲ್ಲಿ ಎ,ಸಿ ಜೀವಸತ್ವಗಳಿವೆ. ಕಬ್ಬಿಣ, ಕ್ಯಾಲ್ಸಿಯಂ ರಂಜಕ ಪ್ರೋಟೀನ್ ಮತ್ತು ಶರ್ಕರ ಪಿಷ್ಟಗಳಿವೆ. ಹಣ್ಣು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

      ಕರಾವಳಿಯ ಆಹಾರದಲ್ಲಿ ಇದರ ಬಳಕೆ ಬಿಂಬಲ ಕಾಯಿ ಬಳಕೆಯಷ್ಟು ಹೆಚ್ಚಿನ ಪ್ರಮಾಣದಲ್ಲಿಲ್ಲವಾದರೂ ಇದನ್ನು ಮಕ್ಕಳು ಹಸಿಯಾಗಿ ತಿನ್ನುತ್ತಾರೆ. ಹಿರಿಯರು ಇದನ್ನು ತುಸು ಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಉಪ್ಪಿನಕಾಯಿ ಗೊಜ್ಜು ತಂಬುಳಿ ಮಾಡಿ ಸೇವಿಸುತ್ತಾರೆ. ಧಾರೆಯ ಅಂಚುಗಳು ಚೆನ್ನಾಗಿ ಬೇಯುವದಿಲ್ಲವಾದ್ದರಿಂದ ಅದನ್ನು ತೆಗೆದುಹಾಕಿ ಕೊಚ್ಚಿ ಬೇಯಿಸಿ ಸಿಹಿ ಸೇರಿಸಿ ಕುದಿಸಿ ಬಾಟ್ಲಿಯಲ್ಲಿ ಕಾದಿಟ್ಟುಕೊಂಡರೆ ಬೇಸಿಗೆ ಕಾಲದಲ್ಲಿ ಮತ್ತು ಜ್ವರದಿಂದ ಬಳಲುತ್ತಿದ್ದವರಿಗೆ ಶರಬತ್ ತಯಾರಿಸಿ ಕೊಡಬಹುದು. ಬಾಯಾರಿಕೆಯನ್ನು ನೀಗಿ ದೇಹಕ್ಕೆ ಇದು ತಂಪು ನೀಡುತ್ತದೆ. ಇದರ ಮಾಗಿದ ಹಣ್ಣು ಮತ್ತು ಹಣ್ಣಿನ ರಸ ಸೇವನೆ ರಕ್ತಮೂಲ ವ್ಯಾಧಿಗೆ ಉತ್ತಮ ಮದ್ದು.ರಸ ಜ್ವರ ನಿವಾರಣೆ ಮಾಡುತ್ತದೆ. ಹಣ್ಣುಗಳನ್ನು ನಕ್ಷತದಾಕಾರದಲ್ಲಿ ಕತ್ತರಿಸಿ ನಾಲ್ಕಾರು ಬಿಸಿಲಿನಲ್ಲಿ ಒಣಗಿಸಿ ಉಪ್ಪಿನ ಪುಡಿ ಚಿಮುಕಿಸಿಟ್ಟುಕೊಂಡರೆ ಅಡುಗೆಯಲ್ಲಿ ಬಳಸಬಹುದು. ಸಾಮಾನ್ಯ ಜ್ವರವಿರುವಾಗ ಕುಡಿಯುವ ನೀರಿನಲ್ಲಿ ನೆನೆಯಿಸಿ ಸಿಹಿ ಸೇರಿಸಿ ಪಾನಕ ಮಾಡಿ ಕುಡಿಯಬಹುದು.   


ಇದರ ಮೂಲ ನೆಲೆ ಬ್ರೆಜಿಲ್ ದೇಶವೆಂದೂ ಪೋರ್ಚುಗೀಸರ ಮೂಲಕ ಇದು ಭಾರತವನ್ನು ಪ್ರವೇಶಿಸಿತೆಂದು ತಿಳಿಯಲಾಗುತ್ತದೆ.ದೇಹದ ಗಾಯಗಳಿಂದಾಗುವ ರಕ್ತ ಸ್ರಾವವನ್ನು ನಿಲ್ಲಿಸಲು ಇದು ಉಪಯೋಗವಿದೆ. ಇದರ ಹುಳಿ ಹಣ್ಣುಗಳನ್ನು ಹಿತ್ತಾಳೆ ಪಾತ್ರೆಯನ್ನು ಬೆಳಗುವದಕ್ಕಾಗಿ ಹುಣಸೆ ಹಣ್ಣಿನಂತೆ ಬಳಸುತ್ತಾರೆ, ಹುಳಿ ಜಾತಿಯ ಈ ಹಣ್ಣುಗಳನ್ನು ಪಾತ್ರೆಗಳ ಮೇಲಿನ ಜಂಗು ಮತ್ತು ಇತರ ಕಲೆಗಳನ್ನು ತೆಗೆಯಲು ಬಳಸುತ್ತಾರೆ. ಇದು ಬಿಳಿಬಟ್ಟೆಯ ಮೇಲಿನಜಂಗು ಕಲೆಯನ್ನು ತೆಗೆಯುತ್ತದೆ. ಬ್ರಾಜಿಲ್ದಲ್ಲಿ ಕಿಡ್ನಿ ಮತ್ತು ಬ್ಲಾಡರ ತೊಂದರೆಗಳಿಗೂ ಸರಾಯಿ ಕುಡಿತದ ತೊಂದರೆಗಳಿಗೂ ಇದನ್ನು ಮದ್ದಾಗಿ ಬಳಸಲಾಗುತ್ತದೆ ಹವಾಯಿಯಲ್ಲಿ ಇದರ ಶರಬತ್ ಕುಡಿಯುತ್ತಾರೆ. ಚೀನಿಯರು ಇದನ್ನು ಮೀನದ ಅಡುಗೆಯಲ್ಲಿ ಬಳಸುತ್ತಾರೆ. ಹೀಗೆ ದೇಶ ವಿದೇಶಗಳ ಜಾನಪದರು ಇದರ ಆಹಾರ ಮೌಲ್ಯ ಮತ್ತು ಔಷಧ ಮೌಲ್ಯವನ್ನು ಅರಿತು ಇದನ್ನು ಬಳಸುತ್ತಿದ್ದಾರೆ. 
    
     ಅಳಿವಿನ ಅಂಚಿನಲ್ಲಿರುವ ಈ ಗಿಡವನ್ನು ನಮ್ಮ ನಮ್ಮ ಮನೆಯ ಮುಂದೆ ನೆಟ್ಟು ಮನೆಯಂಗಳಕ್ಕೆ ಶೋಭೆಯನ್ನು ತಂದುಕೊಳ್ಳುವದಲ್ಲದೆ ನಮ್ಮ ನಮ್ಮ ಆರೊಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದರ ಪ್ರಯೋಜನ ಪಡೆಯ ಬಹುದಲ್ಲವೇ? ಇದರ ಗಿಡ ತಯಾರಿಸಿಕೊಳ್ಳುವದು ನಿಮಗೆ ಸುಲಭವಲ್ಲ. ಆದ್ದರಿಂದ ನಿಮ್ಮ ಊರಿನ ಅರಣ್ಯ ಇಲಾಖೆಯವರನ್ನು  ನಿಮ್ಮ ಶಿಕ್ಷಕರೊಂದಿಗೆ ಭೆಟ್ಟಿಯಾಗಿರಿ. ಬೀಜದ ಮತ್ತು ಕಸಿ ಗಿಡಗಳನ್ನು ತಯಾರಿಸಿ ನಿಮ್ಮ ಮತ್ತು ಪರ ಊರಿನ ಆಸಕ್ತ ಶಾಲಾ ಮಕ್ಕಳಿಗೆ ಹಂಚಲು ವಿನಂತಿಸಿಕೊಳ್ಳಿರಿ.

No comments:

Post a Comment