Friday 7 September, 2012

ನಮ್ಮ ಗಿಡ ಮರ ಬಳ್ಳಿಗಳು-ಕುಸುಮಾಲೆ


ಕುಸುಮಾಲೆ,  Ixora coccinea  L    


.        ಇದಕ್ಕೆ ಕನ್ನಡದಲ್ಲಿ ಕಿಸ್ಗಾರ ಕೇಪುಳ ಹೊಳೆ ದಾಸವಾಳ ಗುಡ್ಡೆ ದಾಸವಾಳ ಇತ್ಯಾದಿ ಹೆಸರುಗಳಿವೆ.ಇದನ್ನು ಸಂಸ್ಕೃತದಲ್ಲಿ ಬಂಧು ಜೀವಕವೆನ್ನುತ್ತಾರೆ. ಇಕ್ಸೋರಾ ಕಾಕ್ಸೀನಿಯಾ ಇದು ಇದರ ವೈಜ್ಞಾನಿಕ ಹೆಸರು. ಕೆಂಪು ಹೂ ಬಿಡುವ ಕುಸುಮಾಲೆ ಗಿಡವು ನಮ್ಮ ದೇಶದ ಗುಡ್ಡ ಬೆಟ್ಟಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುತ್ತದೆ. ಮನೆಮದ್ದಿನಲ್ಲಿ ಬಳಸುವದಕ್ಕಾಗಿ ಬಿಳಿ ಹೂ ಬಿಡುವ ಕುಸುಮಾಲೆ ಗಿಡವನ್ನು ಇಲ್ಲಿಯ ಜನರು ತಮ್ಮ ಮನೆಯ ಅಂಗಳದಂಚಿನಲ್ಲಿ ನೆಟ್ಟುಕೊಳ್ಳುತ್ತಾರೆ. ಕೆಂಪು ಹೂ ಬಿಡುವ ಕುಸುಮಾಲೆ ಗಿಡದ ಸೊಪ್ಪನ್ನು ಗೊಬ್ಬರಕ್ಕೆ ಬಳಸುವ ಕಾರಣ ಈ ಗಿಡಗಳು ಸೊಪ್ಪು ಕೊಯ್ಯುವವರ ಕತ್ತಿಗೆ ಪ್ರತಿವರ್ಷ ಬಲಿಯಾಗುತ್ತವೆ. ಆದ್ದರಿಂದ ಈ ಗಿಡಗಳು ಕುರುಚಲು ಗಿಡಗಳಾಗಿ ಬೆಳೆಯುತ್ತವೆ. ಕಡಿಯದೆ ಕೊಯ್ಯದೆ ಬಿಟ್ಟರೆ ಇವು ಸುಮಾರು ಎರಡಾಳೆತ್ತರದ ಚಿಕ್ಕ ಮರಗಳಾಗಿ ಬೆಳೆಯಬಲ್ಲವು.

        ಕೆಂಪನೆಯ ನಾಲ್ಕು ದಳದ ಹೂವುಗಳಿಗೆ ಉದ್ದದೇಟು. ಹವಳದ ಬಣ್ಣದ ಹವಳದಾಕಾರದ ಇದರ ಹಣ್ಣುಗಳು ಸಿಹಿ
ಹಾಗೂ ಚೊಗರು ರುಚಿಯುಳ್ಳವು. ಬೆಟ್ಟದ ಬದಿಯ ಹಳ್ಳಿ ಮಕ್ಕಳು ಇದರ ಹಣ್ಣುಗಳನ್ನು ತಿನ್ನುತ್ತಾರೆ. ಈ ಗಿಡದ ಮೊಗ್ಗು ಚಿಗುರುಗಳನ್ನು ಕೂಡ ತಿನ್ನಬಹುದಾಗಿದೆ. ಇವುಗಳಿಂದ ಚಟ್ನಿ, ತಂಬುಳಿ ಮಾಡಿ ಸೇವಿಸುವದು ಹಳ್ಳಿಗಳಲ್ಲಿ ರೂಢಿಯಿದೆ.

ಮಣ್ಣಿನಿಂದ ಮಾಡಿದ ನೆಲದ ಮೇಲೆ ಚಿಕ್ಕ ಮಕ್ಕಳು ಮೂತ್ರ ಮಾಡಿ ಆ ಮೂತ್ರವು ಒಣಗಿದಾಗ ಅಲ್ಲಿ ಬಿಳಿ ಅಂಶ ಕಂಡುಬಂದರೆ ಅದನ್ನು ಧಾತು ಎಂದು ಜಾನಪದರು ಗುರುತಿಸುತ್ತಾರೆ. ಇದು ಒಂದು ಬಗೆಯ ಸಾಮಾನ್ಯ ರೋಗವೆಂದು ತಿಳಿಯುತ್ತಾರೆ. ಮೂತ್ರದಲ್ಲಿ ಧಾತು ಹೋಗುವದರಿಂದ ಮಕ್ಕಳು ಅಶಕ್ತರಾಗುತ್ತಾರೆ ಎಂಬ ಅಭಿಪ್ರಾಯಗಳಿವೆ. ಈ ರೋಗ ನಿವಾರಣೆಗಾಗಿ ಬಿಳಿ ಹೂವಿನ ಕುಸುಮಾಲೆಯ ಗಿಡದ ಬೇರನ್ನು ಅಕ್ಕಚ್ಚಿನ ನೀರಿನಲ್ಲಿ ತೇದು ನಲವತ್ತೈದು ದಿನ ಮಕ್ಕಳಿಗೆ ಕುಡಿಸುತ್ತಾರೆ. ಇದಲ್ಲದೆ ಉರಗೆ ಗಡ್ಡೆ ಮತ್ತು ಕುಸುಮಾಲೆ ಬೇರುಗಳ ಸಿಪ್ಪೆಯನ್ನು. ಒಣಗಿಸಿ ಪುಡಿ ಮಾಡಿಟ್ಟುಕೊಂಡು ಕಷಾಯ ಮಾಡಿ ಮಕ್ಕಳಿಗೆ ಕುಡಿಸುತ್ತಾರೆ. ನಿರೋಗಿಗಳೂ ಕುಡಿಯಬಹುದಾದ ಪಾನೀಯವಿದು.ತಲೆಕೂದಲನ್ನು ರಕ್ಷಣೆಮಾಡುವ ಗುಣವು ಇದರ ಹೂವಿಗಿದೆಯೆಂದು ತಿಳಿಯಲಾಗುತ್ತದೆ. ಕರ್ನಾಟಕದಲ್ಲಿ  ನೆಲೆಸಿದ ಕೇರಳಿಗರು ಕೆಂಪು ಕುಸುಮಾಲೆಯ ಹೂವನ್ನು ಕೂದಲೆಣ್ಣೆ ತಯಾರಿಕೆಯಲ್ಲಿ ಬಳಸುವದನ್ನು ಗಮನಿಸಲಾಗಿದೆ

ಇದು ಒಳ್ಳೆಯ ಟೋನಿಕ್ ಎಂದು ಜನ ನಂಬಿಗೆಯಿದೆ ಹೂ, ಮೊಕ್ಕೆ, ಹಣ್ಣು ಕಾಯಿಗಳನ್ನು ಮತ್ತುಚಿಗುರನ್ನು ಕೂಡಿಸಿ ಅರೆದು ಬೆಲ್ಲ  ಕಲ್ಲುಸಕ್ಕರೆ ಸೇರಿಸಿ ಲೇಹ ಮಾಡಿಟ್ಟುಕೊಳ್ಳುವದು ಉತ್ತಮ. ಶಿಶುಗಳಿಗೆ ಕಜ್ಜಿ, ಮೈ ತುರಿಕೆಯಿದ್ದಾಗ ಹೂವಿನ ಕೇಸರವನ್ನು ತೆಗೆದು ಹಾಕಿ ಹೂವನ್ನು ತೊಳೆದು ತೊಳದ ಮೊಗ್ಗು, ಕಾಯಿ ಹೂವುಗಳನ್ನು ಕೂಡಿಸಿ ಜಜ್ಜಿ, ರಸವನ್ನು ಹಿಂಡಿ ವಯಸ್ಸಿಗೆ ಅನುಗುಣವಾಗಿ ಅರ್ಧ ಚಮಚದಿಂದ ಒಂದೆರಡು ಚಮಚದವರೆಗೆ ಸೇವನೆಗೆ ನೀಡಬಹುದು.
     
       ಜನಪದ ಧಾರ್ಮಿಕ ಆಚರಣೆಯಲ್ಲಿಯೂ ಇದನ್ನು ಬಳಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಅಮ್ಮನವರ ಬಂಡಿಹಬ್ಬದ ದಿನ ಅಮ್ಮನವರ ಕಳಸ ಹೊರಡುವಾಗ ಅಮ್ಮನವರಿಗೆ ಬಲಿ ಸೇವೆ ಸಲ್ಲಿಸುವ ಹರಕೆ ಹೊರುತ್ತಾರೆ. ಬಲಿ
ಸೇವೆಯೆಂದರೆ ಅಮ್ಮನವರು ಹೊರಡುವ ದಾರಿಯಲ್ಲಿ ಕೂಗುತ್ತ ಓಡುವದು. ಈ ಬಲಿಸೇವೆ ಸಲ್ಲಿಸುವವರನ್ನು ಬಲಿ ಮಕ್ಕಳು ಎನ್ನುತ್ತಾರೆ. ಬಲಿ ಮಕ್ಕಳು ಕುಸುಮಾಲೆ ಹೂವಿನ ಮಾಲೆಯನ್ನು ಧರಿಸುತ್ತಾರೆ. ಇತರ ಕಡೆ ದೇವಿ ಪೂಜೆಗೂ ಇದನ್ನು ಬಳಸುವದುಂಟು.
         
ಇತ್ತೀಚೆಗೆ ಬಹು ಬಣ್ಣದ ಹಲವು ಆಕಾರದ ಕುಸುಮಾಲೆ ಗಿಡಗಳು ತೋಟದ ಅಲಂಕಾರವನ್ನುಹೆಚ್ಚಿಸಿವೆ. ಆದರೆ ನಮ್ಮ ಹಿರಿಯರು ಬಲ್ಲ ಕೆಂಪು ಬಿಳಿ ಕುಸುಮಾಲೆ ಗಿಡಗಳಂತೆ ಇವು ಔಷಧ ಮಹತ್ವವನ್ನು ತಿಳಿಸುತ್ತಿಲ್ಲ. ನಮ್ಮ ಹಳೆಯ ಕುಸುಮಾಲೆಗಳು ಮರೆಯಾಗದಂತೆ ರಕ್ಷಿಸುವದು ನಮ್ಮ ಹೊಣೆ ನೀವು ಕೆಂಪು ಬಿಳಿ ಹೂವಿನ ಎರಡು ಗಿಡಗಳನ್ನು ಒಂದೆಡೆ ನೆಟ್ಟು ಅದರ ಅಂದ ನೋಡಿ ಆನಂದಿಸಿರಿ.

No comments:

Post a Comment