Tuesday 5 June, 2012

ಸೊಪ್ಪೊಡತಿ-೨


ಸೊಪ್ಪೊಡತಿ- 2 ಇನ್ನಷ್ಟು ಮಾಹಿತಿ

ಸುಪ್ಪಡ್ತಿ, ಸುಪ್ಪುಡ್ತಿ, ಸುಪ್ಪಡತಿ, ಸೊಪ್ಪಡಸಿ,ಸೊಪ್ಪಡತಿ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ಇವಳು ಕಾಡಿನಲ್ಲಿರುವ ಸೊಪ್ಪಿನ ಅಧಿದೇವತೆ. ಸೊಪ್ಪೊಡತಿ ಎಂಬ ಶಬ್ದವೇ ಮೇಲಿನಂತೆ ಹಲವು ರೀತಿಯಾಗಿ ಉಚ್ಚಾರಣೆಗೊಂಡಿರಬಹುದೆಂದು ಕೊಂಡಿದ್ದೇನೆ. 
  ಈ ಹಿಂದೆ ತಿಳಿಸಿದಂತೆ ಕಾಡಿನ ಉತ್ಪನ್ನಗಳನ್ನು ಬಳಸುವ ಕೃಷಿಕರು ತಾವು ಕಾಡಿನಿಂದ ಕೊಂಡೊಯ್ಯುವ ಕಾಡಿನ ಉತ್ಪನ್ನಗಳ ಸ್ವಲ್ಪ ಭಾಗವನ್ನು ಸಾಮಾನ್ಯವಾಗಿ ಸೊಪ್ಪನ್ನು ಈ ಸೊಪ್ಪಿನ ಅಧಿದೇವತೆಗೆ ಅರ್ಪಿಸುತ್ತಾರೆ. ಇದು ಅವರು ತಮ್ಮ ದೇವರಿಗೆ ಕೃತಜ್ಞಾಪೂರ್ವಕವಾಗಿ ಅರ್ಪಿಸುವ ನೈವೇದ್ಯವೆಂದು ಕೊಂಡಿದ್ದೇನೆ. 
           ಸೊಪ್ಪೊಡತಿಯ ಇರುವ ನೆಲೆ ಅವಶ್ಯವಾಗಿ ಜನವಸತಿಯ ಸಮೀಪದ ಕಾಡು. ಮೊದ ಮೊದಲು ಇದರ  ಇರುವ ನೆಲೆಗಳು ಸಮೀಪದ ಜನರು ಸೊಪ್ಪಿನ ಬೆಟ್ಟಕ್ಕೆ ಹೋಗುವ ದಾರಿಯಲ್ಲಿನ ಒಂದು ನಿರ್ದಿಷ್ಟ ಸ್ಥಾನದಲ್ಲಿರುತ್ತಿದ್ದು ಅಲ್ಲಿಯ  ಸಾಮಾನ್ಯ ಒಂದು ಕಲ್ಲು ಆಸ್ಥಾನದ ಅದರ [ಳ] ಕುರುಹಾಗಿ ಬಳಕೆಯಲ್ಲಿತ್ತು.
       ಪಶ್ಚಿಮ ಕರಾವಳಿಯ ಪ್ರದೇಶದಲ್ಲಿ ಜಂಬಿಟ್ಟಂಗಿಯ ಕಲ್ಲುಗಳು ಹೆಚ್ಚು. ಇಲ್ಲಿಯ ಜನಪದ ದೇವರುಗಳಾದ ಜಟಗ, ಮಾಸ್ತಿ, ಚವುಡಿ, ಗುತ್ತುಗಳು ಮರದ ಅಥವಾ ಬಳ್ಳಿಯ ಹಿಂಡಿನ ಬಳಿಯಲ್ಲಿರುವ, ಶಿಲ್ಪಿಯ ಉಳಿತಾಗಿರದ, ಇಂತಹ ಕಲ್ಲುಗಳಾಗಿರುವದನ್ನು ಗಮನಿಸಬಹುದು.
        
ಸಿರ್ಸಿ ತಾಲೂಕಿನ ಕಾಡಿನ ನಡುವಿನ ಊರಾದ `ರಾಗಿ ಹೊಸಳ್ಳಿ' ಎಂಬ ಊರಿನಲ್ಲಿ ಸೊಪ್ಪೊಡತಿ ಇದ್ದಾಳೆ. ಚಿತ್ರದಲ್ಲಿರುವಂತೆ ಜಂಬಿಟ್ಟಂಗಿಯ ನೈಸರ್ಗಿಕ ವೇದಿಕೆಯ ಮೇಲೆ ಇದು ಕಂಡುಬರುತ್ತದೆ.ಜನ ಅವಳ ಮೈತುಂಬ ಸೊಪ್ಪನ್ನು ಹೊಚ್ಚಿದ್ದಾರೆ.  





  ಸೊಪ್ಪಡತಿಯ ಸ್ಥಾನವಿರುವ ಹೆಚ್ಚಿನ ಪ್ರದೇಶವನ್ನು ಜನರು ಬೇರೆ ಕಾರಣಗಳಿಗಾಗಿ ಬಳಕೆ ಮಾಡಲು ಪ್ರಾರಂಭಿಸಿದ ಬಳಿಕ ಆ ಸ್ಥಳವು `ಸೊಪ್ಪೊಡತಿ' ಎಂಬ ಪ್ರದೇಶವಾಚಕವಾದ ಊರಾಗಿ ಉಳಿದದ್ದುಂಟು. ದೇವರ ಹೆಸರು ಊರಿಗೆ ಅನ್ವಯವಾಗುವದುಂಟು.
   ಹೊನ್ನಾವರದ ಗುಂಡಬಾಳದ ಹತ್ತಿರದ ಒಂದು ಊರಿಗೆ `ಸೊಪ್ಪೊಡತಿ' ಎಂಬ ಹೆಸರಿದೆ. ಈ ಊರಿನಲ್ಲಿ ಜನ ಗದ್ದೆ ಮನೆ ಮಾಡಿಕೊಂಡು ಬಾಳುತ್ತಿದ್ದಾರೆ.. 
        ಈ ಸೊಪ್ಪೊಡತಿ, ಎಂಬ ದೇವರು ಇನ್ನೂ ಆದಿಮ ರೂಪದಲ್ಲಿಯೇ ಇವೆ. ಮುಂದೆ ಇದು ವನದೇವತೆಯಾಗಿ ಪ್ರಸಿದ್ಧಿವಾಗಬಹುದು. ಪುರಾಣೋಕ್ತ ವಿಧಾನದಲ್ಲಿ ಪೂಜೆಗೊಳ್ಳಬಹುದು. ಇವಳಿಗಾಗಿ ಗುಡಿ ಗುಂಡಾರಗಳು ಎದ್ದು ನಿಲ್ಲ ಬಹುದು. ವಿಪರ್ಯಾಸವೆಂದರೆ ಪರಿಸರ ಸ್ನೇಹಿಯಾದ ಈ ದೇವರ ಮುಂದೆಯೂ ಹೋಮ ಹವನಗಳು ನಡೆಯಬಹುದು. 
         ಆಸಕ್ತ ಓದುಗರೆ ನಿಮ್ಮ ಊರಿನಲ್ಲಿಯೂ ಈ ದೇವರ ಬಗ್ಗೆ ಮಾಹಿತಿ ಗೊತ್ತಿದ್ದವರು ಇದ್ದಿರಬಹುದು. ಅವರಿಂದ ಇನ್ನಷ್ಟು ಮಾಹಿತಿ ಸಂಗ್ರಹಿಸಿ ಇಲ್ಲಿಗೆ ಕಳಿಸಿಕೊಡಿ. ನಾವು ನೀವು ಕೂಡಿ ಈ ದೇವರ ಹುಟ್ಟಿನ ಬಗ್ಗೆ ಇನ್ನಷ್ಟು ಅರಿಯೋಣ.  ಆ ಮೂಲಕ  ನೂರಾರು  ಜನಪರ ಜನಪದ ದೇವರುಗಳ ಹುಟ್ಟಿನ ಗುಟ್ಟು ತಿಳಿಯೋಣ. 
.



1 comment:

  1. There is a Sappodati in Kekkar of Honnaver taluk.It was on shortcut route between Kekkar and Chandavar,.We children used to take that route to catch bus,We were warned to put sappu on that kallu.or else that god will make us to miss the route.Reason could be The forest was so dense and there were every chances of forest trees to encroach the walk way(kalu daari).People used to cut the branch of sappu which hampers the free movement. Regards Mr Rajeev Bailkeri

    ReplyDelete