Thursday 28 June, 2012

ನೈಋತ್ಯ ಮಾನ್ಸೂನು ಮತ್ತು ಕಾಡ ಕೆಸುವಿನೆಲೆ ಕರಗಲಿ.


ನೈಋತ್ಯ ಮಾನ್ಸೂನು ಮತ್ತು ಕಾಡ ಕೆಸುವಿನೆಲೆ ಕರಗಲಿ.

           ಭರತ ಖಂಡಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶದೊಂದಿಗೆ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಮಳೆಯ ನರ್ತನ ವೈಭವ ಪ್ರಾರಂಭವಾಗಿದೆ. 
                   ಇಲ್ಲಿ ಒಮ್ಮೆ ಮುಸಲ ಧಾರೆಯಾಗಿ ಮತ್ತೊಮ್ಮೆ ಕುಂಭದ್ರೋಣವಾಗಿ ಮಳೆ ಸುರಿದರೆ ಮತ್ತೊಮ್ಮೆ ತುಂತುರು  ಸಿಂಚನ. ಬಿಸಿಲು ಮಳೆಗಳ ಚಲ್ಲಾಟ ,ಕಣ್ಣುಮುಚ್ಚಾಲೆಯಾಟ. 
 ಬಾವಿ, ಹೊಳೆ ಹಳ್ಳ ಭರ್ತಿ, ಗುಡ್ಡ ತಗ್ಗುಗಳಲ್ಲೆಲ್ಲ ನೂರಾರು ಜಲಪಾತ! ತೊರೆ, ಹಳ್ಳ ಅಬ್ಬಿ  ಕಚ್ಚರಿಕೆಗಳಿಗೆಲ್ಲ ಸಮುದ್ರ ಸೇರುವ ತವಕ.
                                      ಅತ್ತ ನೇಗಿಲ ಯೋಗಿ ಭೂಮಿಯಲ್ಲಿ ಉಳುಮೆ ನಡೆಸಿದ್ದಾನೆ. ಆದರೆ ಇತ್ತ ಭೂರಮೆ ಉತ್ತದೆ ಬೆಳೆ ಬೆಳೆಸುತ್ತಿದ್ದಾಳೆ. ಇಂಬು ಸಿಕ್ಕಲೆಲ್ಲ ಬೀಜ, ಗಡ್ಡೆಗಳು ಜಿಗಿತಿವೆ. ಕೆಸು, ತಗಟೆ, ಪಾಂಡವರ ಹರಿಗೆ, ಮುಳ್ಳರಿವೆ, ಗೋಳಿ ಸೊಪ್ಪು,ಹೊನೆಗೊನೆಗಳು ಮಚಲೆ ಸೊಪ್ಪು  ಚಿಗುರತೊಡಗಿವೆ.  ಮರಗೆಸು ಮರದ ಸಂದಿಯಿಂದಲೇ ಇಣುಕ ತೊಡಗಿದೆ

                          ಅಡುಗೆ ಮನೆಯಲ್ಲಿ ಸಂಭ್ರಮ, ರೈತ ಬಿತ್ತಿ ಬೆಳೆವ ಬೆಳೆಗಿಂತ ಮುಂಚೆ ಭೂರಮೆ ಬಿತ್ತಿದ ಬೆಳೆ ಕೈಗೆಟಕುತ್ತಿದೆ. ಕಾಡು ಕೆಸು ನಳನಳಿಸುತ್ತಿದೆ. ತಗಟೆ ಹಚ್ಚಡ ಹಾಸಿದೆ. 

         ಪೇಟೆಯಲ್ಲಿ ಕೆಟ್ಟ ರಾಸಾಯನಿಕಗಳಿಂದ ತೊಯ್ದ ತುಟ್ಟಿ ಒಣ ತರಕಾರಿಗಳ ಆಟ. ಈಗ ಸಾಂಪ್ರದಾಯಿಕ ಅಡುಗೆ ಬಲ್ಲವರ ಕಣ್ಣು ಈ ಭೂಮಿ  ಬೆಳೆವ ಬೆಳೆಯ ಮೇಲೆ.. ಕಾಡುಕೆಸುವನ್ನು ಕರಗಲಿ ಮಾಡಿ ಗೊಜ್ಜು, ಪಲ್ಯ, ಸಾರು ಮಾಡಿ ತಿನ್ನುವ ಕನಸು.ಬಡಿಸುವ ನನಸು. ಈ ಬೆಳೆಯನ್ನು ಅಡುವ ಕಲೆ,  ಈವಿದ್ಯೆ ಇವರ ಕರಗತವಾಗಿದೆ. ನೋಡು ನೋಡುತ್ತಿರುವಾಗಲೇ ಗಮಗಮಿಸುವ ಕರಗಲಿ ಯಾದಿಯಾಗಿ ಹಲವು ಅಡುಗೆ ಗಳು ಸಿದ್ದ. 

    ನೀವು  ಕರಗಲಿ ಅಟ್ಟು ಉಣ್ಣಬೇಕಾ.?  ಹೀಗೆ ಮಾಡಿ.                                   

ನೀವು ನಿಮ್ಮ ಹಿತ್ತಲಲ್ಲಿ ಬೆಳೆದ ಅಥವಾ ಇತರ ಕಳಂಕ ರಹಿತ ಸ್ಥಳದಲ್ಲಿ ಬೆಳೆದ  ಕೆಸುವಿನೆಲೆಗಳನ್ನು ಆಯ್ದುಕೊಳ್ಳಿ. ಜೂನ್ ತಿಂಗಳಲ್ಲಿ ಈ ಎಲೆಗಳು ಚಿಕ್ಕವು.  ಎಳೆಯವು.ಒಂದು ಹಸ್ತದಷ್ಟಿರುತ್ತವೆ. ಮೂವತ್ತು ನಲವತ್ತು ಕೆಸುನೆಲೆಗಳನ್ನು ಬೆರಳುಗಳ ಸಂದಿಯೊಂದಿಗೆ ತೂರಿಸಿ ಸರಸರ ಎತ್ತಿಕೊಳ್ಳಿ [.ಕೆಸುವಿನೆಲೆ ಹರಿಯುವದೂ ಒಂದು ಸಾಂಪ್ರದಾಯಿಕ ಕೌಶಲವೆಂಬುದನ್ನು ಅರಿತಿರಿ.]
        ಎಲೆಗಳನ್ನು ತೊಳೆದು ಕೊಚ್ಚಿರಿ. ಒಂದು ಕಪ್ ನೀರು ಸೇರಿಸಿ. ಸಣ್ಣ ಉರಿಯ ಮೇಲಿಡಿ. ಬಿಂಬಲಕಾಯಿಯ ಹುಳಿಯಿದ್ದರೆ ಒಂದೆರಡು ಚಮಚ ತುಂಬ ಅದಕ್ಕೆ ಸೇರಿಸಿರಿ. ಅಥವಾ ನಾಲ್ಕಾರು ಬಿಂಬಲಕಾಯಿ ಕೊಚ್ಚಿ ಹಾಕಿ ಆರೆಂಟು ಸಣ್ಣ ಮೆಣಸು (ಸೂಜಿ ಮೆಣಸು) ಕೊಚ್ಚಿ ಹಾಕಿ. (ಪೇಟೆಯ ಹಸಿ ಮೆಣಸಾದರೆ ನಾಲ್ಕಾರು ಸಾಕು.)  ಒಂದು ಚಮಚ ಉಪ್ಪು ಸೇರಿಸಲು ಮರೆಯದಿರಿ. ಮೊನ್ನೆ ಹಲಸಿನ ಹಣ್ಣು ತಿಂದಿದ್ದರಲ್ಲವೆ? ಬೇಳೆ ಒಣಗಿಸಿಟ್ಟೀದ್ದೀರಾ? ನಾಲ್ಕಾರು ಬೇಳೆ ಜಜ್ಜಿರಿ. ಸುಲಿಯಿರಿ. ಚಿಕ್ಕ ಚಿಕ್ಕ ಚೂರು ಮಾಡಿ ಬೇಯುತ್ತಿರುವ ಕರಗಲಿಗೆ ಸೇರಿಸಿರಿ.ಬೇಳೆ ಚನ್ನಾಗಿ ಬೇಯಲಿ.


 ಕರಗಲಿ.

  ಕೆಸುವಿನೆಲೆ ಬೆಂದು ಕರಗಿ ಹಸಿರು ಮೊಸರಿನಂತಾಗುತ್ತದೆ. ಪನೀರಿಲ್ಲದ ಪಾಲಕ್ನಂತಾಗುತ್ತದೆ. ಹಸಿರು ಹಸಿರಾಗಿರುವ ಇದಕ್ಕೆ ಒಂದು ವಗ್ಗರಣೆ ಕೊಡಿ.  ಹೇಗೆ?
10 ಎಸಳು ಬೆಳ್ಳುಳ್ಳಿ ಸುಲಿದು ತುಸು ಜಜ್ಜಿರಿ,ಇದನ್ನು ನಾಲ್ಕು ಚ ಅಡುಗೆ ಎಣ್ಣೆಯಲ್ಲಿ ಕಮ್ಮಗೆ ಹುರಿಯಿರಿ. ಕರಗಲಿಗೆ ಸೇರಿಸಿ.ರಿ  ಬಿಸಿ ಅನ್ನಕ್ಕೆ ಕಲಸಿ ತಿನ್ನಿರಿ.  ಯಾ ಊಟದ ಜೊತೆ ನಂಜಿ ಕೊಳ್ಳಿರಿ.



 ಎಲ್ಲ ವಿಧದಲ್ಲಿಯೂ  ಪಾಲಕ ಪನೀರನ್ನು ಮೀರಿಸುವ ಈ ಹಸಿರು ಕರಗಲಿ ಬಡವರ, ಹಳ್ಳಿಗರ ಶ್ರೀಮಂತ ಆಹಾರ.  ಸಿರಿವಂತರಿಗೆ ತಕ್ಕ  ಆಹ್ಹಾರ.
ಇದು ಸಾವಿರಾರು ವರ್ಷಗಳಿಂದ ನಮ್ಮ ನಿಮ್ಮ ಹಿರಿಯರು ಬಳಸಿ ಈ ದಿನಗಳವರೆಗೆ ಕಾದಿಟ್ಟುಕೊಂಡ  ಜನಪದ ಜ್ಞಾನ.
 ಈ  ಕೆಸುವಿನ ಬಗೆಗಿನ ಜ್ಞಾನ. ಕರಗಲಿ ಆಡುವ ಕಲೆ ಮರೆಯಾಗದಿರಲಿ.           

 ಕಾಡಿನ ಬದಿಯಿಂದ  ಹಳ್ಳಿಯಿಂದ ಎಲೆ ಆಮದು ಮಾಡಿಕೊಂಡು ಅಟ್ಟು ತಿನ್ನಿ. ಪೇಟೆಯಲ್ಲಿ ಶುದ್ಧ ಭೂಮಿಯ ತುಂಡು ಕಾಣಬಹುದು, ಅಲ್ಲಿ  ಈ ಕೆಸುವನ್ನು ಅರಸಿ ಆರಿಸಿ  ತನ್ನಿ. ಎರಡು ತಿಂಗಳು ವಾರಕ್ಕೆರಡು ಬಾರಿ ಗಡದ್ದಾಗಿ ತಿನ್ನಿ. ಮನೆಗೆ ಬಂದ ನೆಂಟರಿಷ್ಟರಿಗೂ ರುಚಿಯ ಪರಿಚಯ ಮಾಡಿಸಿ.  ಮರೆಯಾಗುತ್ತಿರುವ   ಪ್ರತಿವರ್ಷ  ಭೂಮಿತಾಯಿಯೇ ನಿಂತು  ಬಿತ್ತಿ ಬೆಳೆಯುತ್ತಿರುವ ಇಂತಹ  ಆಹಾರ ಬೆಳೆಗಳ ಬಗ್ಗೆ ಜನ ಜಾಗ್ರತಿ ಮಾಡಿ. 

ಇಂತಹ ಕೆಲವು ಬೆಳೆಗಳ ಬಗ್ಗೆ ಆಗಾಗ ಬರೆಯಬೇಕೆಂದಿದ್ದೇನೆ.ಆಯ್ತಾ

No comments:

Post a Comment