Monday 4 June, 2012



ಸೊಪ್ಪೊಡತಿ -೧
  ಸೊಪ್ಪಡಸಿ, ಸೊಪ್ಪಡತಿ ಎಂಬುದು. ಅಂಕೋಲೆಯ ಓದು ಬರೆಹ ಬಾರದ ಜನರಲ್ಲಿ ಹೆಚ್ಚಾಗಿ ಬೆಟ್ಟಕ್ಕೆ ಹೋಗಿ ಕೃಷಿಗೆ ಅಗತ್ಯವಾದ ಗಿಡಗಂಟಿಗಳ ಸೊಪ್ಪನ್ನು ಕೊಯ್ದು ತರುವ ಕೃಷಿಕ ಮಹಿಳೆಯರು ಬಲ್ಲ ಜನಪದ  ಹೆಣ್ಣು ದೇವರು. ಈ ದೇವರು ಮೂರ್ತಿ ರೂಪದಲ್ಲಿ ಕಂಡು ಬರುವದಿಲ್ಲ. ಈ ದೇವರನ್ನು ಕುರಿತು ಕೃಷಿಕ ಮಹಿಳೆಯರು ಬಳಸುವ ಸಾಂದರ್ಭಿಕ ವಾಕ್ಯಗಳ ಮೇಲಿಂದ ಇದನ್ನು ಹೆಣ್ಣು ದೇವರೆಂದು ತಿಳಿಯಲಾಗಿದೆ.   ಹೊನ್ನಾವರ ಕರಕಿಯ ಸಣ್ಣ ಕತೆಗಾರ ಭಾಗವತರ ಕತೆಯಲ್ಲಿ ಮೊದಲ ಬಾರಿಗೆ ಈ ಹೆಸರು `ಸೊಪ್ಪಡಸಿ' ಎಂದು 
ಗ್ರಾಂಥಿಕ ರೂಪದಲ್ಲಿ ಕಂಡುಬಂದಿದೆ. ಆದ್ದರಿಂದ ಇದು ಹೊನ್ನಾವರದ ಜನರು ಕೂಡ ಬಲ್ಲ ದೇವರೆಂದುಕೊಂಡಿದ್ದೇನೆ. 


  ಅಂಕೋಲೆಯ ನಾಡವರು ಇದನ್ನು ಸುಪ್ಪಡತೆ. ಸುಪ್ಪಡತಿ ಕಲ್ಲ ಎಂಬ ಹೆಸರುಗಳಿಂದ ಗುರುತಿಸುತ್ತಾರೆ. ಸೊಪ್ಪನ್ನು ತರಲು ಹೋಗುವ ಮಹಿಳೆಯರು ತಾವು ಪರಂಪರಾಗತವಾಗಿ ನಡೆಸಿಕೊಂಡು ಬಂದ ಆಚರಣೆಯಂತೆ ತಾವು ಕೆಲಸ ಮಾಡುವ  ಒಂದು ಸ್ಥಳದಲ್ಲಿ ತಾವು ಕೊಯ್ಯುವ ಒಂದು ಗಿಡದ ಗೊಲಗೆ [ಚಿಕ್ಕಟೊಂಗೆ] ಸೊಪ್ಪನ್ನು ಸೊಪ್ಪಡಸಿಯ ಹೆಸರಿನಲ್ಲಿ ಹರಕೆಯಾಗಿ ಒಪ್ಪಿಸುತ್ತಾರೆ ಈ ಕ್ರಿಯೆಗೆ ಸೊಪ್ಪಡಸುವದು ಅಂದರೆ ಸೊಪ್ಪನ್ನು ಅರ್ಪಿ ಸುವದು ಎಂದರ್ಥ. ಸೊಪ್ಪನ್ನು ನೀಡುವ ಈ ದೇವರಿಗೆ ಸೂಚಿಸುವ ಕೃತಜ್ಞತಾ ಪೂರ್ವಕ ಆಚರಣೆಯಿದು. ಆದ್ದರಿಂದ ಆಯಾ ಜನರು ಸೊಪ್ಪು ಕೊಯ್ಯುವ ಕೆಲಸ ಮಾಡುವ ನೆಲೆಗಳಲ್ಲಿ ಆಯಾ ಜನರ ಈ ದೇವರಿರುತ್ತದೆ. 

  ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿರುವದು ಹಾಲಕ್ಕಿ ಮಹಿಳೆ ನುಗ್ಲಿ ಮತ್ತು ಪದ್ಮಾವತಿಯವರಿಂದ  ಇವರು ಇದನ್ನು ಶಪ್ಪರಸಿ ಎನ್ನುತ್ತಾರೆ. [ಇವರ ಭಾಷೆಯಲ್ಲಿ ಸ ವು ಶ ಆಗುತ್ತದೆ. ಇಲ್ಲಿ ಡ ವು ರ ಆಗಿರುವದನ್ನು ಗಮನಿಸಬಹುದು.] 

  ಇವರ ಹೇಳಿಕೆಯಂತೆ ಇದು ಅಡವಿಯ ದೇವರು. ಹಾಲಕ್ಕಿ ಒಕ್ಕಲ ಸೊಪ್ಪಡಸಿ ದೇವರು ಅಂಕೋಲಾ ತಾಲೂಕಿನ ಹಟ್ಟಿಕೇರಿಯಿಂದ ಐದಾರು ಕಿ.ಮೀ. ದೂರದಲ್ಲಿರುವ ಹಟ್ಟಿ ಬೆಟ್ಟದಲ್ಲಿದೆ. ಇಲ್ಲಿ ಇಜಾರಕಲ್ಲು ಬುತ್ತಿಕಲ್ಲುಗಳಿವೆ ಬುತ್ತಿಯಾಕಾರದ ದೊಡ್ದ ಕಲ್ಲು  ಕಲ್ಲಿನ ವನಕೆ  ಕಲ್ಲಿನ ವಳ್ಳುಗಳಿವೆಯಂತೆ. ಇವರು  ತಮ್ಮ ಹಾಡಿನಲ್ಲಿ ಬರುವ ಸಿರ್ಕವಲಿ ಕತೆಯ ಪ್ರಸಂಗ ನಡೆದದ್ದು ಇಲ್ಲಿಯೇ ಎನ್ನುತ್ತಾರೆ. ಇಲ್ಲಿ ಸಿರ್ಕವಲಿಯ ಹೆಜ್ಜೆ ಗುರುತುಗಳನ್ನು ಕಾಣಬಹುದು ಎನ್ನುತ್ತಾರೆ. ಈ ಸ್ಥಳವು ಈ ಹಿಂದೆ ಹಾಲಕ್ಕಿ ಒಕ್ಕಲ ನೆಲೆಯಾದ ಕೊಟೆಬಾವಿ ಮಲ್ಲಣಿ ಕೆಕಣಿ ಶೀಕಳಿಗಳ ಸಮೀಪದಲ್ಲಿದೆಯೆಂದು ತಿಳಿದು ಬರುತ್ತದೆ. [ಅರಶಿನ ಗುಂಡಗೆ ರೋಗಕ್ಕೆ ಮದ್ದು ಕೊಡುವ ಮಲ್ಲಾಣಿ ಗೌಡನ ಮನೆ ಇಲ್ಲಿದೆ.] ಈ ದೇವರಿಗೆ ಸೊಪ್ಪು ತರಕು ಮತ್ತು ಮರಗಿಡಗಳಿಗೆ ಸಂಬಂಧಿಸಿದ ಎಲ್ಲರೂ ಭಕ್ತರಾಗಿರುತ್ತಾರೆ. ಈ ಬೆಟ್ತದಿಂದ ಸೊಪ್ಪು ಮತ್ತು ಮರಗಿಡಗಳಿಗೆ ಸಂಬಂಧಿಸಿದ ಯಾವದೇ ಉತ್ಪನ್ನವನ್ನು ತರಲು ಬೆಟ್ಟವನ್ನು ಪ್ರವೇಶಿಸುವ ಯಾವದೇ ಜಾತಿಯ ಜನರು ಇದಕ್ಕೆ ನಡೆದುಕೊಳ್ಳುತ್ತಾರೆ. ಅರಣ್ಯ ಕಾವಲುಗಾರರು ಈ ಸ್ಥಳದ ಬಳಿ ಬಂದರೆ. ಬಳಿಯಲ್ಲಿಯ ಒಂದು ಗಿಡದ ಗೊಲಗೆ [ಟೊಂಗೆ]ಯನ್ನು ಮುರಿದು ಈ ದೇವರಿಗೆ ಅರ್ಪಿಸುತ್ತಾರೆ

  ಈ ದೇವರಿಗಿರುವ ಒಂದು ಅಪಖ್ಯಾತಿಯಿದೆ. ಇದರ ಕಾರಣವೇನೆಂಬುದು ತಿಳಿದು ಬರುವದಿಲ್ಲ. ಈ ದೇವರು ಕೊಟ್ಟವರ ಕೈಯ್ಯೂ ಬತ್ತಾಗಲಿ ಕೊಡದಿದ್ದವರ ಕೈಯ್ಯೂ ಬತ್ತಾಗಲಿ [ಒಣಗಲಿ] ಎನ್ನುತ್ತಾಳಂತೆ. ಹೊನ್ನಾವರದಿಂದ ಅಂಕೋಲೆಯವರೆಗಿನ ಬಹು ಜನರಲ್ಲಿ ಈ ದೇವರ ಬಗ್ಗೆ ಈ ನಂಬಿಕೆ ಜಾರಿಯಲ್ಲಿದೆ. ನಾಡವರು ಕೃತಘ್ನರನ್ನು ಈ ದೇವರಿಗೆ ಹೋಲಿಸಿ ಮಾತಾಡುವದು ಕಂಡು ಬರುತ್ತದೆ. 'ನೀನ ಸುಪ್ಪಡತಿ ಕಲ್ಲ', 'ಸುಪ್ಪಡ್ತೆ' ಎಂಬ ಬೈಗುಳಗಳು ಇಲ್ಲಿ ಜಾರಿಯಲ್ಲಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹದ ಅಗತ್ಯವಿದೆ.





No comments:

Post a Comment