Wednesday 3 April, 2013

ನಮ್ಮ ಗಿಡ ಮರಬಳ್ಳಿಗಳು-ಅಶೋಕ ಮರ


ಅಶೋಕ ಮರ. saraka ashoka
        
ರಾಮಾಯಣದಲ್ಲಿಯ ಸೀತೆಯ ಕತೆಯನ್ನು ನೀವು ಕೇಳಿದ್ದರೆ  ನೀವು ರಾವಣನ ಬಗ್ಗೆ ತಿಳಿದಿರುತ್ತೀರಿ. ಅಶೋಕ ಮರದ ಹೆಸರನ್ನು ಕೇಳಿರುತ್ತೀರಿ. ಲಂಕಾ ದೇಶದ ದೊರೆ ರಾವಣನು ಸೀತೆಯನ್ನು ಲಂಕೆಗೆ ಕದ್ದೊಯ್ದನೆಂದು ಕತೆ ತಿಳಿಸುತ್ತದೆ. ರಾವಣನು ಮರಗಿಡಗಳ ಬಗ್ಗೆ ಮಮತೆಯನ್ನು ಹೊಂದಿದ್ದನು. ಅವನು ತನ್ನ ರಾಜ್ಯದಲ್ಲಿ ಅಶೋಕ ಮರಗಳನ್ನು  ನೆಟ್ಟಿದ್ದನು. ರಾಮಾಯಣವನ್ನು ಬರೆದವರು ರಾಮಾಯಣ ಕಾಲದ ರಾವಣನ ಆ ಸ್ಥಳವನ್ನು ಅಶೋಕ ವನವೆಂದು ಕರೆದಿದ್ದಾರೆ. ರಾವಣನು ಸೀತೆಯನ್ನು ಒಯ್ದು ಈ ಅಶೋಕ ವನದಲ್ಲಿಟ್ಟಿದ್ದನೆಂದು ರಾಮಾಯಣದ ಕತೆ ತಿಳಿಸುತ್ತದೆ. ರಾಮನ ಬರುವನ್ನು ಕಾಯುತ್ತ ಸೀತೆ ಅಶೋಕ ಮರದ ತಂಪಿನಲ್ಲಿ ದಿನ ಕಳೆದಿದ್ದಳು.

    ನೀವು ಈ ಕತೆಯನ್ನು ಕೇಳಿದ್ದರೂ ನೀವೆಲ್ಲರೂ ಅಶೋಕ ಮರವನ್ನು ಕಂಡಿರಲಾರಿರಿ. ಯಾಕೆಂದರೆ ರಾವಣನಂತೆ ಮರಗಿಡಗಳನ್ನು ಪ್ರೀತಿಸುವವರು ಕಡಿಮೆಯಾಗಿದ್ದಾರೆ. ಆದ್ದರಿಂದ ಅನೇಕ ಮರಗಿಡಗಳು ಈ ಭೂಮಿಯನ್ನು ಬಿಟ್ಟು ಹೋಗಿವೆ. ಅವು ಮರಳಿ ಭೂಮಿಗೆ ಬರಲಾರವು. ಅವುಗಳನ್ನು ಪ್ರಯೋಗ ಶಾಲೆಯಲ್ಲಿ ಮತ್ತೆ ತಯಾರಿಸುವದು ಸಾಧ್ಯವಿಲ್ಲ. ಇನ್ನು ಅನೇಕ ಮರಗಿಡಗಳು ಭೂಮಿಯನ್ನು ಬಿಡುವ ಸ್ಥಿತಿಯಲ್ಲಿವೆ. ಇಂತಹ ಅಪಾಯದ ಅಂಚಿನಲ್ಲಿರುವ ಮರಗಿಡಗಳ ಸಾಲಿನಲ್ಲಿ ನಮ್ಮ ಅಶೋಕ ಮರವೂ ನಿಂತಿದೆ. ಈ ಮರವನ್ನು ಈ ಅಪಾಯದಿಂದ ಉಳಿಸುವ ಬಗೆ ಹೇಗೆ? ಎಲ್ಲರೂ ಚಿಂತಿಸಬೇಕಾದ ವಿಷಯವಿದು. ಈ ಬಗ್ಗೆ ಚಿಂತಿಸುವ ಮೊದಲು ಇದನ್ನೊಮ್ಮೆ ನೀವು ನೋಡಿ ಬರಬೇಕಲ್ಲವೇ?

ಇದು ಹೇಗಿರುತ್ತದೆ ಗೊತ್ತೇ? ಪಟ್ಟಣದ ಶಾಲೆ ಕಾಲೇಜುಗಳ ಅಂಗಳದಲ್ಲಿ ಹೂದೋಟಗಳಲ್ಲಿ ಕಾಣುವ, ಉದ್ದವಾಗಿದ್ದು ಕಂಬದಂತೆ ಕಾಣುವ ಅಶೋಕ ಮರವೆಂಬ ಹೆಸರಿನಿಂದ ಗುರುತಿಸಲಾಗುವ ಮರವು ಸೀತೆ ಕಂಡ ಅಶೋಕ ಮರವಲ್ಲ. ಅದು ಮಲೇಶ್ಯಾ ಮೂಲದ ಕಂಬದ ಅಶೋಕ ಮರದ ಎಲೆಗಳಿಗೆ ಕಂಬದ ಮರದ ಎಲೆಗಳ ತುಸು ಹೋಲಿಕೆಯಿದೆ. ಅದರೆ ಅಶೋಕ ಮರ ದೂರದಿಂದ ಮಾವಿನ ಮರದಂತೆ ಕಾಣುತ್ತದೆ. ಇದು 20-30 ಅಡಿ ಎತ್ತರ ಬೆಳೆಯಬಲ್ಲದು. ಎಲೆಗಳು ಸದಾ ಹಸುರು ದಟ್ಟವಾಗಿ ಬೆಳೆದಿರುತ್ತವೆ. ಇದು ತಂಪಾದ ನೆಳಲು ನೀಡುವ ಮರ. ತಳಿರಿಗೆ ಮಾವಿನ ತಳಿರಿನ ಹೋಲಿಕೆಯಿದೆ. ಆದರೆ ಅರಗೆಂಪು ಬಣ್ಣದ ಇದರ ಎಳೆಯ ಚಿಗುರು ತಿರುಳು[ತಳಿರು] ಮುಖ ಬಾಡಿದವರ ಹಾಗೆ ಕೆಳಮುಖ ಮಾಡಿ ಜೋಲಿಕೊಂಡಿರುತ್ತದೆ. ಇದು ಈ ಗಿಡವನ್ನು ಗುರುತಿಸಲು ಇದರ ಒಂದು ಪ್ರಮುಖ ಲಕ್ಷಣ. ನಾಲ್ಕರಿಂದ ಐದು ಜೋಡಿ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡು ಗರಿ ಮಾದರಿಯಲ್ಲಿರುತ್ತವೆ. ಮರವು ಜನವರಿಯಿಂದ ಮೇ ತಿಂಗಳವರೆಗೆ ಹೂ ಬಿಡುತ್ತದೆ ಕೈ ಬೊಗಸೆಯಷ್ಟು ದಪ್ಪವಾಗಿರುವ ಹೂಗೊಂಚಲು ಪ್ರಾರಂಭದಲ್ಲಿ ಹಳದಿ ಕೇಸರಿ ಬಣ್ಣದಲ್ಲಿದ್ದು ಅನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಣಗಿದ ಹೂಗಳು ಮರದ ಮೇಲೆಯೇ ಇದ್ದು ಕಂದು ಬಣ್ಣಕ್ಕೆ ತಿರುಗುತ್ತವೆ. ಇದು ಈ ಹೂವುಗಳ ವಿಶೇಷತೆ. ಒಣಗಿದ ಈ ಹೂವುಗಳನ್ನು ಸುಲಭವಾಗಿ ತೆಗೆದಿಟ್ಟುಕೊಂಡು ಪುಡಿ ಮಾಡಿ ಕಷಾಯ ತಯಾರಿಕೆಯಲ್ಲಿ ಬಳಸಬಹುದು.

ಮುಟ್ಟಿನಲ್ಲಿ ಅಧಿಕ ರಕ್ತಸ್ರಾವದ ತೊಂದರೆಯುಳ್ಳವರು ಹೂವುಗಳನ್ನು ಕಷಾಯ ಅಥವಾ ಪುಡಿ ರೂಪದಲ್ಲಿ ಹಾಲು, ನೀರು ಮತ್ತು ಜೇನಿನೊಂದಿಗೆ ಸೇವಿಸಬಹುದು. ಅಶೋಕಾರಿಷ್ಟ, ಅಶೋಕವಟಿ ಮುಂತಾದ ಔಷಧಗಳು ಔಷಧದ ಅಂಗಡಿಗಳಲ್ಲಿ ದೊರೆಯುತ್ತವೆಯಾದರೂ ನಾವೇ ತಯಾರಿಸಿಕೊಳ್ಳುವ  ಇದರ ಮನೆಮದ್ದು ಉತ್ತಮ. 

ಅಶೋಕ ಮರವು ಸುಮಾರು ಮೂರು ಸಾವಿರ ವರ್ಷಗಳ ಪೂರ್ವದಲ್ಲಿಯೇ ಹಳೆಯ ಗ್ರಂಥಗಳಲ್ಲಿ ದಾಖಲಾಗಿದೆ. ಮಹಿಳೆಯರ ಗರ್ಭಾಶಯ ಸಂಬಂಧಿ ರೋಗಗಳಿಗೆ ಇದರ ತೊಗಟೆಯಲ್ಲಿ ಮದ್ದಿದೆಯೆಂಬುದು ಒಂಭತ್ತನೆಯ ಶತಮಾನದ ಅನಂತರದ ಆರ್ಯುರ್ವೇದ ಗ್ರಂಥಗಳಲ್ಲಿ ಪ್ರಕಟವಾಗಿದೆ. 

          
     ಬೌದ್ಧರ ಕಾಲದಲ್ಲಿ ಈ ಮರವು ಬೌದ್ಧಶಿಲ್ಪಗಳಲ್ಲಿ ಸ್ಥಾನ ಪಡೆಯಿತು. ಮಾಯಾದೇವಿ ಗೌತಮನಿಗೆ ಜನ್ಮ ನೀಡಿರುವದನ್ನು ತಿಳಿಸುವ ಶಿಲ್ಪದಲ್ಲಿರುವ ಮರವು ಅಶೋಕವೆಂದು ಪ್ರವಾಸಿ ಹುಯ್ಯೆನ್ಸ್ ತಾಂಗ್ನ ಅಭಿಪ್ರಾಯವಾಗಿದೆ. ಮರದ ಬುಡಕ್ಕೆ ಮಹಿಳೆಯರ ಪಾದದ ಪೆಟ್ಟು ಬಿದ್ದರೆ ಈ ಮರವು ಹೂ ತಳೆಯುತ್ತದೆಯೆಂಬ ನಂಬಿಕೆಯಿದೆ. ಕವಿ ಕಾಳಿದಾಸನ ಮಾಲವಿಕಾಗ್ನಿ ಮಿತ್ರ ಗ್ರಂಥದಲ್ಲಿ ಅಗ್ನಿಮಿತ್ರನ ಪ್ರೇಯಸಿ ಮಾಲವಿಕಾ, ಅಶೋಕ ಮರವು ಹೂ ತಳೆಯಲೆಂದು ಆ ಮರದ ಕೆಳಗೆ ನರ್ತಿಸಿದ ವಿಷಯವಿದೆ. ಪುರಾಣಗಳು ಅಶೋಕ ಮರವನ್ನು ನೆಡುವದರಿಂದ ಸಂಸಾರದಲ್ಲಿ ಎಲ್ಲ ದುಃಖ ನಿವಾರಣೆಯಾಗುತ್ತದೆ ಯೆನ್ನುತ್ತವೆ. ಅಶೋಕವು ಮಳೆ ಕಾಡಿನ ಗಿಡ . ಭಾರತ ವಲ್ಲದೆ ದಕ್ಷಿಣ ಏಸಿಯಾದ ಇತರ ದೇಶಗಳಾದ ಶ್ರೀಲಂಕಾ ಮಲೇಸಿಯ, ಇಂಡೋನೇಸಿಯಗಳಲ್ಲಿ ಇದು ನೈಸರ್ಗಿಕವಾಗಿ ಬೆಳೆಯುತ್ತದೆ. ಇದರ ಹೂವಿನ ಅಂದಕ್ಕಾಗಿ ಆಸಕ್ತರು ತಮ್ಮ ಹೂದೋಟಗಳಲ್ಲಿ ಇದನ್ನು ನೆಟ್ಟುಕೊಳ್ಳುತ್ತಾರೆ.  ಈ ಮರದ ಗೇಣುದ್ದದ ಸೊಡಗೆಯಲ್ಲಿ ನಾಲ್ಕೈದು ಬೀಜಗಳಿರುತ್ತವೆ. ಬೀಜಗಳು ಮೂತ್ರಾಂಗದ ಕಲ್ಲು ನಿವಾರಣೆಯಲ್ಲಿ ಔಷಧವಾಗಿ ಬಳಕೆಯಲ್ಲಿವೆ. ಪಶ್ಚಿಮ ಗಟ್ಟದಂಚಿನಲ್ಲಿ ಬೀಜಗಳು ಹಲಸಿನ ಬೀಜಗಳಷ್ಟು ದೊಡ್ಡವಿರುತ್ತವೆ. ಕರಾವಳಿಯಲ್ಲಿ ಬೀಜಗಳು ಕಣಬೆ ಕಾಯಿಯ ಆಕಾರದಲ್ಲಿದ್ದು ಒಂದು ಚದುರ ಇಂಚಿನಷ್ಟು ದೊಡ್ಡವಾಗಿರುತ್ತವೆ. ಬೀಜಗಳ ಬಣ್ಣ ಕಂದು. ಪಶ್ಚಿಮ ಘಟ್ಟ ಮತ್ತು ಕರಾವಳಿಯಲ್ಲಿ ಮಳೆಗಾಲದ ಮೊದಲು ಇದರ ಬೀಜಗಳು ನೆಲಕ್ಕುರುಳುತ್ತವೆ. ತಕ್ಕ ಪರಿಸರ ದೊರೆತರೆ ಗಿಡವಾಗಿ ಬೆಳೆಯುತ್ತವೆ. ಬೀಜಗಳನ್ನು ದೊರಕಿಸಿಕೊಂಡು ನಿಮ್ಮ ನೆರೆಹೊರೆಯ ಗೆಳೆಯರಿಗೆ ಕೊಡಿರಿ. ನಿಮ್ಮ ಮನೆಯಂಗಳದಲ್ಲಿ ಅಥವಾ ಶಾಲೆಯಂಗಳದಲ್ಲಿ ಬೀಜನೆಟ್ಟು ಪೋಷಿಸಿರಿ.              

No comments:

Post a Comment