Wednesday 3 April, 2013

ನಮ್ಮ ಗಿಡ ಮರ ಬಳ್ಳಿಗಳು-ಅತ್ತಿ


1. ಅತ್ತಿ

     ಇದು ಮಧ್ಯಮ ಎತ್ತರದ ಮರ, ದೇವಸ್ಥಾನದ ಬಳಿ ಹಾಗೂ ಹಕ್ಕಿಗಳು ಓಡಾಡುವ ಜಾಗದಲ್ಲಿ ಈ ಮರಗಳು ಬೆಳೆಯುವುದುಂಟು. ಇಂಥ ಮರಗಳಿಗೆ ಹಾನಿಯಾಗದಂತೆ ರಕ್ಷಿಸುವದು ಭಾರತೀಯ ಪರಂಪರೆಯಲ್ಲಿದೆ.
ಮಾರ್ಚದಿಂದ ಜುಲೈ ತಿಂಗಳ ನಡುವೆ ಈ ಮರಕ್ಕೆ ಹಣ್ಣುಗಳಾಗುತ್ತವೆ. ಈ ಹಣ್ಣುಗಳನ್ನು ಮಂಗ, ಜಿಂಕೆ, ಮೇಕೆ, ದನ, ಹಂದಿಗಳು ಹಾಗೂ ಅನೇಕ ಬಗೆಯ ಪಕ್ಷಿಗಳು ತಿನ್ನುತ್ತವೆ. ಎಲೆಯ ಜಾನುವಾರುಗಳಿಗೆ ಆಹಾರವಾಗಿದೆ.

ಸಸ್ಯಶಾಸ್ತ್ರೀಯ ನಾಮ: Ficus racemosa L. Moraceae

ಇತರ ಹೆಸರುಗಳು: Cluster fig (English)

ಜನಪದ ಆಚರಣೆ 1: ಮದುವೆಯ ದಿನ ಅತ್ತಿ ಟೊಂಗೆಯಿಂದ ಮಾಡಿದ ತೋರಣದಲ್ಲಿ ಮದುಮಕ್ಕಳನ್ನು ಕುಳ್ಳಿರಿಸಿ ಅರಿಶಿನ, ಚಿಗುರೆಲೆ ಹಚ್ಚಿ ಅಭ್ಯಂಜನ ಸ್ನಾನ ಮಾಡಿಸುತ್ತಾರೆ. 

ಜನಪದ ಆಚರಣೆ2: ಕರ್ನಾಟಕದ  ಬಯಲು ನಾಡಿನಲ್ಲಿ ಬೇವಿನ ಮರದಲ್ಲಿ ಹುಟ್ಟಿದ ಅತ್ತಿಮರಕ್ಕೆ ಪೂಜೆ, ಹಾಗೂ ಮದುವೆ ಮಾಡುವ ಪದ್ಧತಿಯಿದೆ.

ಜನಪದ ಆಹಾರ:
ಜಾನಪದರು ತಮ್ಮ ಆಹಾರ ಪರಿಕರಗಳಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ. ಇದರ ಚಿಗುರು, ಕಾಯಿ, ಹಣ್ಣು, ತೊಗಟೆ, ಬೇರು ಹಾಗೂ ಬೇರಿನಿಂದ ಒಸರುವ ರಸಗಳು ಅಡುಗೆಯಲ್ಲಿ ಸ್ಥಾನಪಡೆದಿವೆ.

ಜನಪದ ಅಡುಗೆ 1: ಪಲ್ಯ : ಬೀಜಬಲಿಯದ ಎಳೆಯ ಕಾಯಿಗಳನ್ನು ರುಬ್ಬುವ ಕಲ್ಲಿನ ಒರಳಿನಲ್ಲಿಟ್ಟು ಹಾರೆಯಿಂದ ತುಸು ಕುಟ್ಟಿಕೊಳ್ಳಬೇಕು. ನೀರು ಸೇರಿಸಿ ಬೇಯಿಸಿಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 4 ಚಮಚೆ ಅಡುಗೆಯ ಎಣ್ಣೆ, ಜಜ್ಜೀ ಚೂರುಮಾಡಿದ ನಾಲ್ಕು ಒಣಮೆಣಸು ಜಜ್ಜಿದ ನಾಲ್ಕಾರು ಬೆಳ್ಳುಳ್ಳಿ ಎಸಳು, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಬೇಕು. ಜಜ್ಜಿದ ಅತ್ತಿಕಾಯಿ, ಹುಣೆಸೆ ಹುಳಿಯರಸ 3 ಚಮಚೆ, 2 ಚಮಚ ಬೆಲ್ಲ, ಉಪ್ಪು 1 ಚಮಚೆ ಹಾಗೂ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು, ಒಂದು ಕಪ್ಪು ಕಾಯಿಸುಳಿ ಸೇರಿಸಿ ಇಳಿಸಬೇಕು.

ಜಾನಪದ ಅಡುಗೆ 2: ಕಷಾಯ : ಒಂದು ಹಸ್ತದಷ್ಟು ಅಗಲವಾಗಿರುವ ಅತ್ತಿ, ತೊಗಟೆಯ ಹೊರಬಲ (ಹೊರಚರ್ಮ)ನ್ನು ಹೆರೆಸಿ ತೆಗೆದು, ಸಣ್ಣ ತುಂಡುಗಳಾಗಿ ಕೊಯ್ದು ಅಥವಾ ಕಲ್ಲಿನೊರಳೊಳಗೆ ಕುಟ್ಟಿ ಆರು ಗ್ಲಾಸು ನೀರಿಗೆ ಹಾಕಿ ನೀರು ಅರ್ಧವಾಗುವವರೆಗೆ ಕುದಿಸಿದಾಗ ಕಡು ಗುಲಾಬಿ ಬಣ್ಣದ ಅರ್ಕವು ನೀರಿಗೆ ಬಿಟ್ಟಿರುತ್ತದೆ. ಈ ಅರ್ಕಕ್ಕೆ ರುಚಿಗೆ ತಕ್ಕಷ್ಟು ಹಾಲು, ಸಕ್ಕರೆ/ಬೆಲ್ಲ ಸೇರಿಸಿ ಕುಡಿಯುತ್ತಾರೆ.ಇದನ್ನು ನಿತ್ಯ ಸೇವಿಸಬಹುದು.

ಸಾಗರ ಬಾಳಂತಿ ಮದ್ದಿನಲ್ಲಿ ಅತ್ತಿ ಕಷಾಯವೂ ಸೇರಿರುತ್ತದೆ. ಈ ತೊಗಟೆ ಸುಮಾರು ಏಳುದಿಗಳವರೆಗೆ ಕೆಂಪು ಆರ್ಕವನ್ನು ಬಿಡುತ್ತಿರುತ್ತದೆ. ಚಹ ಕಾಫಿಗಳ ಬದಲಿಗೆ ಆಗಾಗ ಇದನ್ನು ಬಳಸಬಹುದು. ತೊಗಟೆಯನ್ನು ಕಿತ್ತಬಳಿಕ ಆ ಜಾಗಕ್ಕೆ ಬೆಣ್ಣೆ ಬಲಿದು ಬರುವ ಪದ್ಧತಿಯು ಸಾಗರದ ಹಳ್ಳಿಗಳಲ್ಲಿದೆ. ಹೀಗೆ ಮಾಡುವುದರಿಂದ ತೊಗಟೆ ಬೇಗನೆ ತುಂಬಿಕೊಳ್ಳುತ್ತದೆ ಎನ್ನುತ್ತಾರೆ.

ಜನಪದ ಅಡುಗೆ 3: ಕಜ್ಜಾಯ: ಅತ್ತಿ ಮರದ ಬೇರಿನಿಂದ ನೀರನ್ನು ಸಂಗ್ರಹಿಸಿ ಅಡುಗೆಗೆ ಬಳಸುವುದು. ಕರಾವಳಿ ಹಾಗೂ ಮಲೆನಾಡಿಗರ ಪರಂಪರಾಗತ ರೂಢಿಯಾಗಿದೆ. ನಿತ್ಯ ಬಳಸುವ ನೀರಿನಬದಲಿಗೆ ಅತ್ತಿಯ ಮರದ ಬೇರಿನಿಂದ ಪಡೆದ ನೀರನ್ನು ಬಲಸಿ ಚಕ್ಕಲಿ, ಒಡೆ ಮುಂತಾದ ಕಜ್ಜಾಯವನ್ನು ತಯಾರಿಸುತ್ತಾರೆ. ಇದರಿಂದ ಚಕ್ಕಲಿ ಒಡೆಗಳು ಗರಿಗರಿಯಾಗುತ್ತವೆಯೆಂದು ಹೇಳುತ್ತಾರೆ. 
ಅತ್ತಿ ನೀರಿನಿಂದ ಮಾಡಿದ ಅಡುಗೆಯು ಮುಸುರೆಯಲ್ಲ ಅದನ್ನು ಮಡಿಯಲ್ಲಿದ್ದವರು, ತಿನ್ನಬಹುದೆನ್ನತ್ತಾರೆ. ಚವತಿಯ ಸಂದರ್ಭದಲ್ಲಿ ಅತ್ತಿಮರದಿಂದ ಹೆಚ್ಚು ನೀರು ದೊರೆಯುತ್ತದೆ. ಚವತಿಯ ಕಜ್ಜಾಯವನ್ನು ಈ ನೀರಿನಿಂದ ಮಾಡಲಾಗುತ್ತದೆ. 

ನೀರನ್ನು ಸಂಗ್ರಹಿಸುವ ಕ್ರಮ :ನೀರನ್ನು (ರಸವನ್ನು/ಹಾಲನ್ನು) ಸಂಗ್ರಹಿಸಲು ಮಳೆಗಾಲವು ಪ್ರಶಸ್ತವಾದದ್ದು. ಆದರೂ ನೀರಿನ ಆಸರೆಯುಳ್ಳ ಹಳ್ಳಕೊಳ್ಳ, ನದಿಗಳ ಬಳಿಯ ಅತ್ತಿಮರಗಳ ಬೇರಿನಿಂದ ನೀರನ್ನು ಸಂಗ್ರಹಿಸಿದಾಗ ಅಲ್ಲಿ ಅದು ಹೆಚ್ಚು ದೊರೆಯುತ್ತದೆ.

ಸಂಜೆಯ ಹೊತ್ತಿಗೆ ಮನುಷ್ಯರ ತೋಳಿ ನಷ್ಟು ತೊರದ (ದಪ್ಪದ) ಭೂಮಿಯ ಮೇಲ್ಗಡೆ ತುಸುಭಾಗ ಕಾಣುವಂತಹ ಬೇರನ್ನು ಆಯ್ದುಕೊಳ್ಳಬೇಕು. ಈ ಬೇರನ್ನು ಕಾಂಡದಿಂದ ಸುಮಾರು ಒಂದರಿಂದ ಎರಡು ಅಡಿದೂರದಲ್ಲಿ ಸ್ವಚ್ಚ ಕತ್ತಿಯಿಂದ ಕಡಿಯಬೇಕು. ಮಣ್ಣು ತಾಗಿದ ಜಾಗವನ್ನು ತೊಳೆದು ಕಡಿದ ಬೇರಿನ ಬಾಯಿ ಮುಚ್ಚುವಂತೆ ಒಂದು ಬಟ್ಟೆಯಲ್ಲಿ ಕಟ್ಟಬೇಕು. ಬೇರನ್ನು ಕಡಿದ ಜಾಗದಲ್ಲಿ ಸುಮಾರು 4ರಿಂದ5 ಲಿಟರ ನೀರು ಹಿಡಿಯುವ ಪಾತ್ರೆಯನ್ನು ಇಡಲು ಸಾಧ್ಯವಾಗುವಂತೆ ಒಂದು ಚಿಕ್ಕ ತಗ್ಗು ತೆಗೆದು ಅದರಲ್ಲಿ ಪಾತ್ರೆಯನ್ನು ಕೂಡ್ರಿಸಬೇಕು. ಈಗ ಬೇರಿನ ಬಾಯಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ ಬೇರಿನ ಬಾಯಿ ಹಾಗೂ ಪಾತ್ರೆಯ ಬಾಯಿಗಳು ಬೋಡಣೆಯಾಗುವಂತೆ ಪಾತ್ರೆಯನ್ನು ಅಳವಡಿಸಿಕೊಂಡು ಇವೆರಡು ಕೂಡುವಲ್ಲಿ ಬೇರೊಂದು ಸ್ವಚ್ಚ ಬಟ್ಟೆಯನ್ನು ಕಟ್ಟಿಡಬೇಕು. ಈಗ ಪಾತ್ರೆಯಲ್ಲಿ ಬಾಹ್ಯ ಕಸ ಕಡ್ಡಿಗಳು ಬೀಳುವುದಿಲ್ಲ. ಮುಂಜಾನೆ ಹೋಗಿ ನೋಡಿದಾಗ ಪಾತ್ರೆಯು ಅತ್ತಿ ನಿರಿನಿಂದ ತುಂಬಿದ್ದರೆ ಅದನ್ನು ತೆಗೆದು ನೀರನ್ನು ಅರಗಿಸಿಕೊಂಡು ಮತ್ತೆ ಆ ಪಾತ್ರೆಯನ್ನಿಡಬೇಕು. ಮಳೆಗಾಲ ಮುಗಿಯುವಾಗ ಅಥವಾ ನೀರಿನ ಸೆಲೆಯಿರುವ ಸ್ಥಳದಲ್ಲಿ ಮರವಿದ್ದರೆ ಆಮರದ ಬೇರಿನಿಂದ ಮೂರು ದಿನಗಳ ವರೆಗೆ ನೀರು ಒಸರುತ್ತಿರುತ್ತದೆ.

ಜನಪದ ಅಡುಗೆ 4 : ತಂಬುಳಿ : ಅತ್ತಿಯ ಮರದ ಎಂಟು ಕುಡಿಗಳನ್ನು ಬೆಣ್ಣೆ ಅಥವಾ ತುಪ್ಪದಲ್ಲಿ ಬಾಡಿಸಿಕೊಂಡು ಅರ್ಧ ಚಮಚೆ ಜೀರಿಗೆ, ಎಂಟು ಮೆಣಸಿನಕಾಳುಗಳ ಜೊತೆ ಅರೆದು ಒಂದು ಕಪ್ ದಪ್ಪ ಕಡೆದ  ಮೊಸರನ್ನು ಸೇರಿಸಿ ಕುಡಿಯುವ ಮಜ್ಜಿಗೆಯ ಹದಕ್ಕೆ ಬರುವಂತೆ ನೀರು ಹಾಗೂ ಒಂದುವರೆ ಚಮಚ ಉಪ್ಪು ಸೇರಿಸಿದರೆ ತಂಬುಳಿ ಸಿದ್ಧ.
ಗ್ರಂಥಗಳಿಂದ :

1 . ಪುರಾಣ : ಭಾರತೀಯ ಲಿಖಿತ ಪುರಾಣಗಳಲ್ಲಿ ಅತ್ತಿಮರವು ದತ್ತಾತ್ರೇಯ ದೇವರ ಸ್ಥಾನವೆಂದು ವಿವರಿಸಲಾಗಿದೆ. ಪುರಾಣೋಕ್ತ ಹೋಮ, ಹವನಗಳಲ್ಲಿ ಅತ್ತಿಕುಡಿ, ಅತ್ತಿಚಕ್ಕೆಗಳನ್ನು  ಅಗ್ನಿಗೆ ಅರ್ಪಿಸುತ್ತಾರೆ.
2 Bark leaves and unripe fruits are astringent, carminative, stoma chic and vermicide. It is saide in the Ayurvedic Nighantus that the bark is cooling sweet and astringent and fruits cooling
 .. ನೋಡಿ ಡಾ.ಕೆ.ಎಮ್. ನಾಡಕರ್ಣಿಯವರ  The Indian Materia medica page 548
3. ಚಕ್ಕೆಯ ಕಷಾಯ ಗರ್ಭರಕ್ಷಣೇಯ ಗುಣವುಳ್ಳದ್ದಾಗಿದೆ. ಮಧುಮೇಹಿಗಳಿಗೂ ಉತ್ತಮ ಡಾ. ಆಯ್. ಕೆ ಶರ್ಮಾ ರವರು ಸುಲಭ ಗೃಹ ಚಿಕಿತ್ಸೆ, ಪುಟ 236

4 . ನಿಘಂಟು ರತ್ನಾರಕದಲ್ಲಿ ಶೀತಲ, ಅಸ್ಥಿಸಂಧಾನಕಾರಕ ಕಫ, ಪಿತ್ತ, ಅತಿಸಾರ ಯೋನಿರೋಗ ನಿವಾರಕವೆಂದಿದೆ. (ಆಯುವೇದ, ದ್ರವ್ಯಗುಣ, ಸಾರಸಂಗ್ರಹ, ಡಾ. ಕಿದಿಯೂರು ಗುರುರಾಜ, ಭಾಗವತ ಪುಟ 163)

ಇಂಥ ಅಮೂಲ್ಯ ಮರದ ರಕ್ಷಣೆ ಬೇಕು ಸಾಧ್ಯವಾದರೆ ಪ್ರತಿಯೊಬ್ಬರೂ ಇದರ ಚಿಕ್ಕಟೊಂಗೆಯೊಂದನ್ನು ನೆಟ್ಟು ಬೆಳೆಸಿ ಸಂತೋಷಪಡುವುದನ್ನು ರೂಢಿಸಿಕೊಳ್ಳಬೇಕಾಗಿದೆ. 


No comments:

Post a Comment