Tuesday, 19 June 2012

ಹುಣಸೆ - Tamarindus indica, Lin


ಹುಣಸೆ  - Tamarindus indica, Lin


       ಇದು ಭಾರತೀಯರಿಗೆ ಹೆಚ್ಚು ಪರಿಚಿತವಾಗಿರುವ  ಮರ. ಹಿಂದಿಯಲ್ಲಿ ಇಮಲಿ. ಸಂಸ್ಕ್ರತದಲ್ಲಿ ಚಿಂಚಾ ಕೊಂಕಣಿ ಮತ್ತು ಮರಾಠಿಯಲ್ಲಿ ಚಿಂಚ ತುಳವಿನಲ್ಲಿ ಪುನ್ಕೆದಮರ ಎಂದು ಇದು ಪರಿಚಿತವಾಗಿದೆ. ಇದನ್ನು ಭಾರತದಲ್ಲಿ ಮೊದಲು ಕಂಡವರು ಇದನ್ನು ಭಾರತೀಯ ಖರಜೂರ ವೆಂದು ಹೆಸರಿಸಿ ಗೌರವಿಸಿದ್ದಾರೆ. ಇದರ ಸಸ್ಯಶಾಸ್ತ್ರೀಯ ಹೆಸರು   ಟೆಮರಿಂಡಸ್ ಇಂಡಿಕಸ್   ಎಂದಿದ್ದು ಇದರಲ್ಲಿಯ ಇಂಡಸ್   ಮತ್ತು ಇಂಡಿಕಾ ಎಂಬ ಶಬ್ದಗಳು ಈ ಮರವು ಭಾರತ ಮೂಲದ್ದೆಂದು  ಸೂಚಿಸುತ್ತವೆ. ಈ ಮರಕ್ಕಿರುವ  ತಿಮಿರ ಹಿಂದಿ  ಎಂಬ ಫಾರಸಿ ಹೆಸರು  ಹಾಗು ತಮರ ಹಿಂದೀ ಎಂಬ ಅರಬಿ  ಹೆಸರುಗಳು ಇದನ್ನು ಪುಷ್ಟೀಕರಿಸುತ್ತವೆಯಾದರೂ ಇದು ಭಾರತದ  ಹೊರಗೂ ಕೆಲವು  ದೇಶಗಳಲ್ಲಿ ಕಂಡುಬರುತ್ತದೆ ಇದರ ಪ್ರಾಚೀನ ದಾಖಲೆಯು ಅರಬೀ ಮೂಲದ್ದಾಗಿದೆ. ಅವರು ನಮ್ಮ ದೇಶದಲ್ಲಿ ಇದನ್ನು ಮೊದಲು ಕಂಡರೆಂದು ತಿಳಿಯಬಹುದಾಗಿದೆ.
 ಭಾರತದಲ್ಲಿ ಬೃಹದಾಕಾರದ ಹುಣಸೆ ಮರಗಳನ್ನು ಕಾಣಬಹುದು. ಇವು ನೇರವಾಗಿ ಬೆಳೆಯುವ ಸಾಧ್ಯತೆ ಇದೆಯಾದರೂ  ಉತ್ತಮ ಅವಕಾಶ ದೊರೆಯದಿದ್ದಾಗ ಇವುಗಳ ಕಾಂಡದ ರೂಪ ಗೊಡ್ಡಾಗುವದುಂಟು.  ಆದರೆ  ಮರಗಳು ಹೂ ಬಿಟ್ಟಾಗ ನೋಟ ಸುಂದರ.  ಕವಿಗೆ ಕವನಕ್ಕೆ ಸ್ಪೂತರ್ಿ ಬರಲು ಹೂತ ಹುಣಸೆ ಮರ ಸಾಕು  ಎಂದು ಕವಿ ಬೇಂದ್ರೆ  ಹಾಡಿದ್ದಾರೆ. ಹುಣಸೆಯ ಹೂ ಉದುರಿದ ಸ್ಥಳದಲ್ಲಿ ಹಳದಿ ಬಟ್ಟೆ ಹಾಸಿದಂತೆ  ಕಾಣುತ್ತದೆ.
ಮಕ್ಕಳಿಗೆ ಹುಣಸೆ ಕಾಯಿ ಅಚ್ಚುಮೆಚ್ಚು. ಮರದ ಮೇಲೆ ಜೋತಾಡುತ್ತಿರುವ ಹುಣಸೆ ಕಾಯನ್ನು ಕಂಡರೆ ಸಾಕು.ಅದಕ್ಕೆ  ಕಲ್ಲೆಸೆದು ಅದನ್ನು ಕೆಡವುವ ಭರದಲ್ಲಿರುವಾಗ ಶಾಲೆಗೆ  ತಡವಾದದ್ದು ಅವರಿಗೆ ನೆನಪಿಗೆ ಬರದು. ಹೊರಟ ಕಾರ್ಯ  ಮರೆಯುವದುಂಟು; ಅಂತಹ ಸೆಳೆತ ಅದರ  ಹುಳಿ ರುಚಿಯಲ್ಲಿದೆ. ಚಿಗುರು, ಹೂ ಕಾಯಿ ಮತ್ತು ಹಣ್ಣುಗಳು ಭಾರತೀಯ ಅಡುಗೆ ಪದ್ಧತಿಯಲ್ಲಿ ಮಹತ್ವದ ಸ್ಥಾನದಲ್ಲಿವೆ.                                                                       
       ಕಾಯಿಯಿಂದ ತೊಕ್ಕು ಎಂಬ ಉಪ್ಪಿನ ಕಾಯಿ ತಯಾರಿಸಿ ಬಹು ದಿನಗಳವರೆಗೆ ಕಾಯ್ದಿರಿಸುತ್ತಾರೆ. ಹೂವು  ಮತ್ತುಎಳೆಯ ಎಲೆಯನ್ನು ಚಟ್ನಿ ತಂಬುಳಿ ಹುಳಿ ಇತ್ಯಾದಿ ಅಡುಗೆ ತಯಾರಿಸಲು ಬಳಸುತ್ತಾರೆ. ಹಣ್ಣು ಹಲವು ವಿಧದ  ಪಾನೀಯ   ಸಾರು ಹುಳಿ ಗೊಜ್ಜುಗಳಿಗೆ ಹಾಗೂ ದಕ್ಷಿಣ ಭಾರತದ ಪುಳಿಯೋಗರೆಗೆ ಮೂಲ ಪರಿಕರ ವಾಗಿದೆ.
       ಇದು ಆಹಾರ ಪರಿಕರವಾಗಿದೆಯಷ್ಟೇ ಅಲ್ಲ ,ಇದೊಂದು ಅತ್ಯುತ್ತಮ ಮದ್ದೂ ಅಹುದು. ಹಣ್ಣು ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಹಸಿವೆಯನ್ನುಂಟುಮಾಡುತ್ತದೆ. ಥಂಡಿ ಜ್ವರ ಬಂದು ಊಟ ಸೇರದೇ ಇದ್ದಾಗ ಚಿಕ್ಕ ನೆಲ್ಲಿಕಾಯಷ್ಟು ಹುಣಸೆ ಹಣ್ಣಿಗೆ ನಾಲ್ಕು ಕಾಳು ಉಪ್ಪು  ಒಂದು ಚಿಟಿಕೆ ಮೆಣಸಿನ ಕಾಳಿನ ಪುಡಿ ಕೂಡಿಸಿ ಚೆನ್ನಾಗಿ ನುಳಿ ಮಾಡಿ ಬಾಯಿಯಲ್ಲಿಟ್ಟು ಪೆಪ್ಪರ ಮೆಂಟ್ನಂತೆ  ಚೀಪುತ್ತಿದ್ದರೆ  ಊಟ ರುಚಿಸ ತೊಡಗುತ್ತದೆ. ಗಂಟಲಲ್ಲಿರುವ ಕಫ ಕರಗುತ್ತದೆ. ಆಗಾಗ ಥಂಡಿಯಾಗುತ್ತಿರುವ ಮಕ್ಕಳಿಗಾಗಿ ಇದರಲ್ಲಿ ಒಂದು ಚೂರು ಮನೆಯಲ್ಲಿ ತಯಾರಿಸಿದ  ಅರಶಿನ ಪುಡಿಯನ್ನು ಚೆನ್ನಾಗಿ  ಕೂಡಿಸಿ  ನುಳಿ ಮಾಡಿ   ಸೇಂಗಾಕಾಳುಗಾತ್ರದ  ಗೋಲಿಗಳನ್ನಾಗಿ ಮಾಡಿ ಒಂದೆರಡು ಗೋಲಿಗಳನ್ನು ನಿತ್ಯ ತಿಂಡಿ ನೀಡುವ ತಟ್ಟೆಯಲ್ಲಿಟ್ಟು  ಕೊಟ್ಟರೆ  ಮಕ್ಕಳು ಇನ್ನಷ್ಟು ಗೋಲಿ ಗಳಿಗಾಗಿ ಕೈಯೊಡ್ಡುತ್ತಾರೆ. ಈ ತಿಂಡಿಯನ್ನು  ಬಯಲು ಸೀಮೆಯ ತಾಯಂದಿರು ಹುಣಸೆ ಚಿಗಳಿ ಎನ್ನುತ್ತಾರೆ. ಈ ಚಿಗಳಿಯನ್ನು ಚಿಕ್ಕ ಕಡ್ಡಿಗೆ ಅಂಟಿಸಿ ಜ್ವರ ಬಂದು ಬಾಯಿ ರುಚಿ ಕೆಟ್ಟಿರುವ ಮಕ್ಕಳ ಕೈಗೆ ಕೊಡುತ್ತಾರೆ. ಈ ಷಡ್ರಸ ಭರಿತವಾದ ಚಿಗಳಿಯು ಹುಣಸೆಹಣ್ಣು ಹಿತ್ತಾಳೆ ಕಂಚಿನ ಪಾತ್ರೆಯನ್ನು ಬೆಳಗುವಂತೆ ಬಾಯಿ ರುಚಿ ಕೆಟ್ಟಿರುವ  ಬಾಲಕರ ಬಾಯಿ ಅನ್ನನಳಿಯನ್ನೆಲ್ಲ ಸ್ವಚ್ಚ ಮಾಡಿ ಬಿಡುತ್ತದೆ  ಆಗ ಮಕ್ಕಳು  ಊಟ  ಬಯಸುತ್ತಾರೆ.  ಈ ಜನಪದ ಜ್ಞಾನವನ್ನು ಬಳಸಿಕೊಂಡು ತಯಾರಾದ ಲಾಲಿಪಪ್ ಮಾದರಿಯ  ಹುಣಸೆ ಪಪ್ಗಳು ಪೇಟೆಗೆ ಬಂದಿವೆ.
            ಆಯುವರ್ೆದವು ಇದು ಕಫ ಪಿತ್ತ ವಾತನಾಶಕವೆಂದು ಸಾರಿ  ಹೇಳುತ್ತದೆ. ನೀವು ಒಂದು ಚೂರು ಹುಣಸೆ ಹಣ್ಣು ಕೇಳಿದಾಗ ಇಲ್ಲವೆನ್ನುವ ತಾಯಂದಿರಿಗೆ ಹಿರಿಯರು ಹೇಳಿದ ಈ ಮಾತನ್ನು  ತಿಳಿಸಿರಿ. ಆಗ ನೀವು ಹುಣಸೆ ಹಣ್ಣನ್ನು ತಿನ್ನಲು ನಿಮ್ಮ  ತಾಯಿ ನಿರಾಕರಿಸಲಾರರು. ಅಪ್ಪಣೆ ಸಿಕ್ಕಿತೆಂದು ಹುಣಸೆ ಕಾಯನ್ನು ಭರಪುರ್ ತಿನ್ನಬೇಡಿ.
          ಪಾನಕ ಬೇಕೆ?   ಲಿಂಬುವಿಗಾಗಿ ಕಾದಿರ ಬೇಡಿ, ಹುಣಸೆ ಹಣ್ಣಿನಿಂದ ವಿವಿಧ ಬಗೆಯ ಪಾನೀಯ ತಯಾರಿಸಿಕೊಂಡು ಸೇವಿಸಿರಿ. ಬೆಲ್ಲ ಕಾಳು ಮೆಣಸು ಸೇರಿಸಿ ತಯಾರಾಗುವ ಹಸಿ ಯಾ ಬಿಸಿ ಪಾನೀಯವು  ಅನೇಕ ರೋಗಗಳ ವಿರುದ್ಧ   ಹೋರಾಡಬಲ್ಲ  ಸೋಮರಸ. ಇದರ ಎಲೆಯ ಕಷಾಯ ಸೇವನೆಯಿಂದ  ಸುಂಬಳ ಹೊರಕಡೆ  ಗುಣವಾಗುತ್ತದೆ.  ಹೂವಿನಿಂದ  ಗುಲ್ಕಂದ ಮಾಡಿ ತಿನ್ನಿರಿ, ಎಲೆಯಿಂದ  ಕಷಾಯ ತಯಾರಿಸಿ ಕುಡಿಯಿರಿ.  ಬೀಜ ವು ಬೀಸಾಡ ಬಹುದಾದ ಕಸವಲ್ಲ. ಇದರಲ್ಲಿ ತಿನ್ನಬಹುದಾದ ಹಿಟ್ಟು ಸಾಕಷ್ಟಿದೆ. ಬೀಜವನ್ನು ಸುಟ್ಟು ತಿನ್ನುವ ಹಳೆಯ ರೂಢಿಗೆ ಜೀವದಾನ ಮಾಡಿರಿ. ಜೊತೆಗೆ ಇನ್ನೊಂದು ಮಾತು ನೆನಪಿಡಿರಿ
       ನಿಮ್ಮ ತಾಯಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಬೀಜಗಳನ್ನು  ಸಂಗ್ರಹಿಸಿ  ಹಸಿ ಮಣ್ಣಿನ  ಲಾಡು ಕಟ್ಟಿ ಅದರಲ್ಲಿ ಒಂದೊಂದು ಬೀಜ ಅಡಗಿಸಿಕೊಂಡು ಮೇ ಜೂನ್ ತಿಂಗಳಲಿ ನಿಮ್ಮ ಗೆಳೆಯರ ಜೊತೆ ಹಾದಿ ಬೀದಿಯ ಹಿಂಡುಗಳಲ್ಲಿ ಇಟ್ಟುಬನ್ನಿ.ಮಳೆಗಾಲದಲ್ಲಿ ಮೊಳೆತು ಅದು ಅಲ್ಲಿ ಸಸಿಯದಾಗ ತನ್ನ ಜ್ವರವನ್ನು  ಇಳಿಸುವಲ್ಲಿ ನೀವು ಕೈಕೊಂಡ ನಿಮ್ಮ ಈ ಅಳಿಲ ಸೇವೆಯನ್ನು ನೆನೆದು ತಾಯಿ ಭೂಮಿ ನಿಮ್ಮನ್ನು ಬಹು ಕಾಲ ಬಾಳಿ ಎಂದು ಹರಸುತ್ತಾಳೆ. 

No comments:

Post a Comment