Friday, 10 August 2012

ನಮ್ಮ ಗಿಡ ಮರಬಳ್ಳಿಗಳು-ಸಾವಿರ ಸಂಬಾರ ಸೊಪ್ಪು



 ಸಾವಿರ ಸಂಬಾರಸೊಪ್ಪು 
   coleus aromaticus  Benth              

 ಇದಕ್ಕೆ ಸಾಂಬಾರು ಸೊಪ್ಪಿನಬಳ್ಳಿ, ದೊಡ್ಡಪತ್ರೆ:- ಇತ್ಯಾದಿ ಕನ್ನಡ ಹೆಸರುಗಳಿವೆ. ಸಂಸ್ಕೃತದಲ್ಲಿ ಅಜಪಾದ ಇಂದು ಪರ್ಣ ಎನ್ನುತ್ತಾರೆ. ಕೋಲಿಯಸ್ ಅಂಬೋನಿಕಸ್ ಇದು ಇದರ ಸಸ್ಯಶಾಸ್ರ್ತೀಯ ದ್ವಿನಾಮ ಇದು ಲೆಮಿನೇಸಿ ಕುಟುಂಬಕ್ಕೆ ಸೇರಿದೆ.
ಸಾವಿರ ಸಂಬಾರಗಿಡವು ನೆಲದ ಮೇಲೆ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದರ ಹೆಸರಿನ ಜೊತೆ ಬಳ್ಳಿ ಶಬ್ದ ಸೇರಿದ್ದರೂ ಇದು  ಬಳ್ಳಿಯಲ್ಲ. ಆದರೆ ನೆರಳಿರುವಲ್ಲಿ ಅಥವಾ ಆಧಾರವು ದೊರೆತರೆ ಬಸಲೆಯಂತೆ ತುಸು ಉದ್ದವಾಗಿ ಹಬ್ಬಿಕೊಳ್ಳುತ್ತದೆ.ಎದುರು ಬದುರು ಇರುವ ದಪ್ಪ ರಸಭರಿತ ಎಲೆಗಳು ಹಸುರಾಗಿದ್ದು ತುಂಬಾ ಸುವಾಸನೆಯುಳ್ಳದ್ದಾಗಿವೆ. ಗಿಡಗಳು ಚೆನ್ನಾಗಿ ಬಲಿತಮೇಲೆ ಜ್ಯೇಷ್ಟದಿಂದ ಭಾದ್ರಪದ ಮಾಸದವರೆಗೆ ಹಸುರಾದ ಸುವಾಸನಾಭರಿತ ಹೂ ಬಿಡುತ್ತವೆ. 

ಪಶ್ಚಿಮ ಕರಾವಳಿಯಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಅನೇಕರು ಇದನ್ನು ಮನೆಮದ್ದು ಮತ್ತು ಅಡುಗೆಯಲ್ಲಿ ಬಳಸುತ್ತಾರೆ ಎಲೆಯಿಂದ . ರಸ ತೆಗೆಯುವ ಮುನ್ನ ಅಡುಗೆ ಮಾಡಲು,ಕಟ್ಟಿಗೆ ಒಲೆ ಉರಿಸಿದ ನೆಲದ ಮೇಲೆ ಎಲೆಗಳನ್ನು ಇಟ್ಟು ಬಾಡಿಸಿಕೊಳ್ಳುತ್ತಾರೆ ಎಲೆಗಳು ಬಾಡಿಸಿದರೆ ರಸವನ್ನು ಹಿಂಡಿಕೊಳ್ಳುವದು ಸುಲಭವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಕಟ್ಟಿಗೆ ಒಲೆ ಬಳಕೆಯಿಲ್ಲದ ಕಡೆ, ಎಲೆಗಳನ್ನು ಬಿಸಿಲಿನಲ್ಲಿ ಬಾಡಿಸಿ ಅಥವಾ ಸಣ್ಣ ಉರಿಯ ಮೇಲಿಟ್ಟು ಕಾಸಿದ ಪಾತ್ರೆಯ ಮೇಲೆ ಎಲೆಗಳನ್ನಿಟ್ಟು ಬಾಡಿಸಿಕೊಳ್ಳಬಹುದು. ಎಲೆಗಳನ್ನು ಬಾಳೆ ಎಲೆಯಲ್ಲಿಟ್ಟು ಬಾಳೆ ಎಲೆಯನ್ನು ಸುತ್ತಿ ಅದನ್ನು ಬೂದಿಮುಚ್ಚಿದ ಕೆಂಡದಲ್ಲಿ ಹುಗಿದು ಬಾಳೆ ಎಲೆಯು ತುಸು ಬಾಡಿದಾಗ ಹೊರತೆಗೆದು ಒಳಗಿರುವ ಸಂಬಾರ ಸೊಪ್ಪನ್ನು ಹಿಂಡಿ ರಸ ಪಡೆಯುವದು ಇನ್ನೊಂದು ಜನಪದ ಪದ್ಧತಿ ಈ ಪದ್ಧತಿಯನ್ನು ಮುಂಬರಿ ಹುಗಿಯುವದು ಎನ್ನುತ್ತಾರೆ.

     ಮೈಮೇಲೆ ಪಿತ್ತದ ಗಂದೆಗಳು ಎದ್ದಾಗ ಇದರ ಎಲೆಯ ರಸವನ್ನು ಸೇವಿಸುವದು, ಮತ್ತು ಮೈಗೆ ಬಳಿಯುವದು ಅನೇಕ ಕಡೆ ರೂಢಿ ಯಲ್ಲಿದೆ.ಎಲೆಯ ರಸಕ್ಕೆ ಕಫವನ್ನು ಕರಗಿಸುವ ಗುಣವಿದೆ.ಎಲೆಗಳ ರಸವನ್ನು  ಮಕ್ಕಳಿಗೆ ಶುದ್ಧ ಕಲ್ಲುಸಕ್ಕರೆ ಬೆರೆಸಿ ಕುಡಿಯಲು ಕೊಡಬೇಕು. ಆರೆಂಟು ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಅದಕ್ಕೆ ಸಿಹಿಯಾಗುವಷ್ಟು ಜೇನು ಅಥವಾ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸದಂತೆ ದಿನಕ್ಕೆ ಮೂರು ಬಾರಿ ಕೊಡಬೇಕು. ಭೇದಿಯಲ್ಲಿಯೂ ಇದು ಉತ್ತಮ ಮನೆಮದ್ದು. ಕೊಲೆರಾ ರೋಗಾಣುಗಳನ್ನು ಗುಣ ಪಡಿಸುವ ಗುಣವಿದೆಯೆಂದು ತಿಳಿದು ಬರುತ್ತದೆ. ಕಾಲರಾ ರೋಗದಲ್ಲಿ ಇದರ ನಾಲ್ಕಾರು ಎಲೆಗಳನ್ನು ಜಜ್ಜಿ ಕುದಿಸಿ ಆರಿಸಿದ ನೀರಿನಲ್ಲಿ ತಿಕ್ಕಿ ಸೋಸಿ ಕುಡಿಯಲು ಕೊಡಬೇಕು. ಈ ಕ್ರಮವನ್ನು ಮೊದಲು ಅರ್ಧ ತಾಸಿಗೊಮ್ಮೆ ಬಳಿಕ ತಾಸಿಗೊಮ್ಮೆ ನಡೆಸಬೇಕು.

ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ತಲೆಯೆಣ್ಣೆಯನ್ನು ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನಿತ್ಯ ತಲೆಗೆ ಹಾಕುವದರಿಂದ ತಲೆ ತಂಪಾಗುವುದು. ಕಣ್ಣುರಿ ಕಡಿಮೆಯಾಗುವದು.ಒಳ ವಸ್ತ್ರದ ಹೊಲಸು, ಬೆವರು ಮತ್ತು ಬಟ್ಟೆಯ ಬಿಗುವಿನ ಕಾರಣ ತುರಿಕಜ್ಜಿಯಾದರೆ ಸಂಬಾರಸೊಪ್ಪು, ಅರಿಶಿನಪುಡಿ, ಇವನ್ನು ಬೆಣ್ಣೆಯಲ್ಲಿ ಅರೆದು ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಸಲ ಹಚ್ಚಿದರೆ ಗುಣವಾಗುತ್ತದೆ. ಚೇಳು ಪಡ್ಚೆಹುಳ[ ಶತಪದಿ]ಇತ್ಯಾದಿ ವಿಷ ಕೀಟಗಳು  ಕಚ್ಚಿದಾಗ ಕೂಡಲೆ ಎಲೆಯನ್ನು ಜಜ್ಜಿದ ರಸ ಹಚ್ಚ ಬೇಕು. ಎಲೆಯ ಹಸಿ ರಸವನ್ನು ಹಣೆಗೆ ಹಚ್ಚಬೇಕು.

ರೋಗವಿಲ್ಲದಾಗ ಇದನ್ನು ಆಹಾರವಾಗಿಯೂ ಬಳಸುತ್ತಾರೆ.  ಇದರಿಂದ ಹಲವು ಬಗೆಯ ಅಡುಗೆಯನ್ನು ತಯಾರಿಸಿ ಉಣ್ಣುತ್ತಾರೆ
 
ಸಣ್ಣ ಪಾತ್ರೆಯಲ್ಲಿ ಆರೆಂಟು ಎಲೆ, ಆರು ಕರಿಮೆಣಸು ಅರ್ಧಚಮಚ ಜೀರಿಗೆ, ಒಂದು ಚಮಚ ತುಪ್ಪ ಅಥವಾ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆಯ ಪರಿಮಳ ಬರುವವರೆಗೆ ಬಾಡಿಸಿಕೊಂಡು ಅದನ್ನು ಅರ್ಧ ಹಿಡಿ ತೆಂಗಿನಕಾಯಿಸುಳಿಯೊಂದಿಗೆ ಅರೆದು ಹುಳಿ ಮಜ್ಜಿಗೆ ಕೂಡಿಸಿ. ತಂಬುಳಿ ತಯಾರಿಸುತ್ತಾರೆ


     ಎರಡು ಎಲೆಯನ್ನು ಉಪ್ಪು ಹುಳಿ ಬೆಲ್ಲ ಎರಡು ಒಣ ಮೆಣಸು ಹಾಕಿ ಬೇಯಿಸಿರಿ ಒಂದು ಹಿಡಿ ಕಾಯಿಸುಳಿ ಜೊತೆ ಅರೆಯಿರಿ. ಒಣಮೆಣಸಿನ ಒಂದೆರಡು ತುಂಡು ಚಿಟಿಕೆ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ ವಗ್ಗರಣೆ ಮಾಡಿ ಗೊಜ್ಜು, ತಯಾರಿಸುತ್ತಾರೆ. 
ಅನೇಕ ರೋಗವನ್ನು ಹತೋಟಿಯಲ್ಲಿಡುವ ಔಷಧೀಯ ಗುಣಗಳುಳ್ಳ ಸಾವಿರ ಸಂಬಾರ ಸೊಪ್ಪಿನ ಬೇಡಿಕೆ ಇತ್ತೀಚಿಗೆ ಹೆಚ್ಚುತ್ತಿರುವುದು ಗಮನಾರ್ಹ.

ಸಾವಿರ ಸಂಬಾರ ಸೊಪ್ಪಿನ ಈ ಗಿಡವನ್ನು ಕುಂಡದಲ್ಲಿ ಅಥವಾ ಮನೆಯ ಮುಂದೆ ಬೆಳೆಸಿಕೊಂಡರೆ ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಒಂದು ಗಿಡ ಬೆಳೆ ಸಲು ಒಂದು   ಗೇಣುದ್ದದ  ಟೊಂಗೆ ಸಾಕು. ಪ್ರಯತ್ನಿಸಿರಿ.

No comments:

Post a Comment