ಕಲ್ಲುಕೆಸು- Ariopsis peltata Nimmo Araceae
ಮಳೆಗಾಲದಲ್ಲಿ ಕರಾವಳಿಯ ಜಂಬಿಟ್ಟಂಗಿಯ ಕಲ್ಲಿನ ಪಾಗಾರದ ಮೇಲೆ ಪಾಗಾರವನ್ನೆಲ್ಲ ಮುಚ್ಚುವಂತೆ ಒತ್ತಾಗಿ ಬೆಳೆಯುವ ಕಲ್ಲುಕೆಸು, ಆಹಾರವಾಗಿ ಬಳಕೆಯಲ್ಲಿದೆ.
ಎಲೆಗಳು ಅಮೃತಬಳ್ಳಿಯ ದೊಡ್ಡ ಎಲೆಗಳನ್ನು ಹೋಲುತ್ತವೆ. ಎರಡು ಇಂಚಿನಿಂದ ಅರ್ಧ ಅಡಿಯವರೆಗೆ ಎತ್ತರವಾಗಿ ಬೆಳೆಯುತ್ತವೆ.ಇದಕ್ಕೆ ಮರಕೆಸುವಿಗಿರುವಂತೆ ಸಣ್ಣ ಗಡ್ಡೆಗಳಿದ್ದು ಇವು ಕಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡಿರುತ್ತವೆ. ಕಪ್ಪು ಮೈಯುಳ್ಳ ಹ್ಡೆಯಂತಹ ದೇಟಿನೊಳಗೆ ಲಂಬ ನಿಲುವಿನ ಹೂವು.
ಜನಪದ ಆಹಾರ : ಈ ಕೆಸುವಿನೆಲೆಗಳನ್ನು ಶ್ರಾವಣಮಾಸದ ಮೊದಲೇ ಬಳಸುವದು ಪದ್ಧತಿಯಾಗಿದೆ. ಇದರ ಮುಗ್ದ ಮೋಹಕ ಸೌಂದರ್ಯದ ಜೊತೆಗೆ ಆಹಾರ ಯೋಗ್ಯವಾದ ರುಚಿಯು ಇದೆ. ಇದರ ಎಲೆಯಿಂದ ಪತ್ರೊಡೆ, ಕರಗ್ಲಿ ಮುಂತಾದ ವ್ಯಂಜನಗಳನ್ನು ತಯಾರಿಸಿ ಸೇವಿಸುತ್ತಾರೆ. ಇದರ ಮುದ್ದೆ ಪತ್ರೊಡೆ ಹೆಚ್ಚು ಬಳಕೆಯಲ್ಲಿವೆ..
ಜನಪದ ಅಡುಗೆ1: ಮುದ್ದೆ ಪತ್ರೊಡೆ : ಇದರ ಒಂದು ಬೊಗಸೆ (ಸುಮಾರು ನಲವತ್ತು)ಎಲೆಗಳನ್ನು ಕೊಚ್ಚಿರಿ, ಎರಡು ನೀರುಳ್ಳಿಗಳನ್ನು ಕೊಚ್ಚಿರಿ. 6 ಒಣಮೆಣಸು 1 ಚಮಚ ಕೊತಂಬರಿ, 5 ಮೆಂತೆಕಾಳು, ಕಾಲು ಚಮಚ ಸಾಸಿವೆಯನ್ನು ಎಣ್ಣೆ ಹನಿಸಿಕೊಂಡು ಬೇರೆ ಬೇರೆಯಾಗಿ ಹುರಿಯಿರಿ.
ಅರ್ಧ ಕಡಿ (1 ಕಪ್ಪು) ಕಾಯಿಸುಳಿ, ಎರಡು ತಾಸು ನೆನೆಯಿಸಿದ 4 ಚಮಚ ಕಡಲೇಬೇಳೆ, 1 ನೆಲ್ಲಿಕಾಯಿ ಗಾತ್ರದ ಹುಣಸೆ ಹುಳಿ, 2 ಚಮಚ ಬೆಲ್ಲ ಹಾಗೂ ಹುರಿದ ಮಸಾಲೆಯ ಪರಿಕರಗಳನ್ನು ಕೂಡಿಸಿ ತುಸು ನೀರನ್ನು ಸೇರಿಸಿ ಮುದ್ದೆಯಾಗಿ ಅರೆಯಿರಿ.
ಕೊಚ್ಚಿದ ಸೊಪ್ಪು, ಉಳ್ಳಾಗಡ್ಡೆ ಹಾಗೂ ಒಂದುವರೆ ಚಮಚ ಉಪ್ಪನ್ನು ಈ ಮುದ್ದೆಗೆ ಕೂಡಿಸಿ ತುಸು ಕಿವುಚಿರಿ. ಲಿಂಬುಗಾತ್ರದ ಮುದ್ದೆ ಕಟ್ಟಿರಿ, ಅದನ್ನು ತುಸು ಒತ್ತಿ ಚಪ್ಪಟೆಮಾಡಿರಿ ಇಡ್ಲಿಯಂತೆ ಬೇಯಿಸಿರಿ. ಈ ಇಡ್ಲಿಗೆ ರವೆಯನ್ನು ಹಚ್ಚಿ ತುಸು ಎಣ್ಣೆ ಬಿಟ್ಟು ದೋಸೆ ಹಂಚಿನ ಮೇಲೆ ಹುರಿದು ತಿನ್ನಬಹುದು. ಒಗ್ಗರಣೆ ಮಾಡಿ ಅದರಲ್ಲಿ ಪತ್ರೊಡೆಗಳನ್ನು ಹರಿದು ಪುಡಿಮಾಡಿ ಸ್ವಲ್ಪ ಕಾಯಿ ಸುಳಿಹಾಕಿ ಕೆದಕಿದರೆ 'ಪತ್ರೊಡೆ ಪುಡಿ' ತಯಾರಾಗುತ್ತದೆ.
ಸಾಧ್ಯತೆ : ಪಾಲಕ ಸೊಪ್ಪನ್ನು ಬಳಸಿ ತಯಾರಿಸುವಂತೆ ಇದರ ಎಲೆಯಿಂದ ಬಜಿ, ಸಾರು, ಚಟ್ನಿ ಮಾಡಬಹುದು.
ಇದನ್ನು ಹಳೆಯ ಜಂಬಿಟ್ಟಣಗಿಯ ಕಲ್ಲಿನ ಮೇಲೆ ಹಾಗೂ ತಂಪುಳ್ಳ ನೆಲದ ಮೇಲೆ ಬೆಳೆಸಿಕೊಳ್ಳಬಹುದು.
No comments:
Post a Comment