Monday, 13 August 2012

ನಮ್ಮ ಗಿಡ ಮರ ಬಳ್ಳಿಗಳು- ಉತ್ರಾಣೆ ಗಿಡ


ಉತ್ರಾಣೆ ಗಿಡ - Achyranthes aspera,Linn Amaranthacae



ಇದು ಸುಮಾರು ಒಂದರಿಂದ ಮೂರು ನಾಲ್ಕು ಅಡಿ ಎತ್ತರ ಬೆಳೆಯುವ ವಾರ್ಷಿಕೆ. ಇದಕ್ಕೆ ಸಂಸ್ಕೃತದಲ್ಲಿ ಅಪಾಮಾರ್ಗವೆಂಬ ಹೆಸರಿದೆ.  ಏಕೆಂದರೆ  ಇದರ  ಬೀಜಗಳು  ದೇಟಿ ಗುಂಟ  ಹಿಮ್ಮುಖವಾಗಿ ಬೆಳೆಯುತ್ತವೆ  ಬಿಳಿ ಉತ್ರಾಣೆಯನ್ನು ಸಸ್ಯಶಾಸ್ತ್ರಜ್ಞರು ಅಚರಾಂಥಸ್ ಅಸ್ಪರಾ ಎಂದು ಗುರುತಿಸುತ್ತಾರೆ..
     
ಇದು  ಜನ  ನೆಟ್ಟು ಬೆಳೆಸುವ ಗಿಡವಲ್ಲ. ಭೂಮಿಯು  ಜನರ ನೆರವಿಲ್ಲದೆ ಜನರಿಗಾಗಿ ತಾನೇ ಇದನ್ನು ಬೆಳೆಸುತ್ತದೆ. ಇದರ ಪರಿಚಯವಿಲ್ಲದವರು ಇದನ್ನು ಕಳೆ ಗಿಡಗಳ ಸಾಲಿನಲ್ಲಿ ಸೇರಿಸಿದ್ದಾರೆ. ಆದರೆ ಪ್ರಾಚೀನ ಕಾಲದಿಂದ ಅನೇಕ ಮನೆ ಮದ್ದುಗಾರರು ಅಡುಗೆ ಬಲ್ಲ ಗೃಹಿಣಿಯರು ಹಾಗೂ ಅನೇಕ ಋಷಿ ಮುನಿಗಳು ಇದನ್ನು ಬಲ್ಲವರಾಗಿದ್ದರು.

ಈ ಗಿಡವು  ಬಹಳ ಹಿಂದಿನಿಂದ ಮನೆಮದ್ದಿನಲ್ಲಿ ಬಳಕೆಯಲ್ಲಿದ್ದರೂ ಬಳಿಕ ಇದರ ಮನೆ ಮದ್ದನ್ನು ಮರೆತವರ ಸಂಖ್ಯೆಯೇ ಹೆಚ್ಚು. ಇದು ಕಫ ಮತ್ತು ವಾತ ನಾಶಕವಾಗಿದೆ. ಕಿವಿನೋವು ಕಣ್ಣು ನೋವುಗಳಲ್ಲಿಯೂ ಉಪಯುಕ್ತವಾಗಿದೆ. ಪಚನ ಕ್ರಿಯೆಯನ್ನು ಸಮ. ಸ್ಥಿತಿಯಲ್ಲಿಡಬಹುದು ಇದರ ಬೀಜವನ್ನು ತಿನ್ನುವದರಿಂದ ಅಥವಾ ಪಾಯಸ ಮಾಡಿ ಸೇವಿಸುವದರಿಂದ ಅತಿ ಹಸಿವೆ ದೂರವಾಗುತ್ತದೆ., ಇತ್ಯಾದಿಯಾಗಿ ಇದರ ಮದ್ದಿನ ಗುಣದ ಬಗ್ಗೆ ಹಳೆಯ ಗ್ರಂಥಗಳಲ್ಲಿ ಅಪೂರ್ವ ಮಾಹಿತಿಗಳಿವೆ. ಬೆಂಗಳೂರಿನ ಬೆರಕೆ ಸೊಪ್ಪು ಮಾರಾಟಗಾರ ಮಹಿಳೆಯರು ತಾವು ಮಾರುವ ಬೆರಕೆ ಸೊಪ್ಪಿನಲ್ಲಿ ಇದರ ಕೆಲವು ಚಿಗುರುಗಳನ್ನು ಸೇರಿಸುವದನ್ನು ಗಮನಿಸಲಾಗಿದೆ.ಆದರೆ ಗಿಡವನ್ನು ಗುರುತಿಸುವವರು ಅತ್ಯಂತ ವಿರಳವಾಗಿದ್ದಾರೆ. ಶಾಲಾ ಮಕ್ಕಳಿಗೆ ಅವರ ತಾಯಂದಿರಿಗೆ ಇಂತಹ ಅಪೂರ್ವ ಗಿಡಗಳ ಪರಿಚಯ ಮಾಡಿಸಿ ಕೊಡುವ ಅಗತ್ಯವಿದೆ.

   ಈ ಗಿಡಗಳು ಜನರ ಪರಿಚಯದಲ್ಲಿರಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಇದನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದರು. ಸಪ್ತ ಮುನಿಗಳಲ್ಲಿ ಒಬ್ಬರಾದ ಭಾರದ್ವಾಜ ಮುನಿಗೆ ಈಗಿಡವು ಪ್ರಿಯವಾದದ್ದು ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದೆ. ಸಪ್ತರ್ಷಿ ವನದಲ್ಲಿ ಮತ್ತು ಸಪ್ತರ್ಷಿ ಪೂಜಾ ವ್ರತದಲ್ಲಿ ಇದಕ್ಕೆ ಸ್ಥಾನ ಕಲ್ಪಿಸಲಾಗಿದೆ. ಭಕ್ತರು ಇದನ್ನು ಪೂಜೆಯಲ್ಲಿ ಬಳಸುತ್ತಾರೆ; ದೇವರಿಗೆ ಇದರ ಎಲೆಯನ್ನು ಅರ್ಪಿಸುತ್ತಾರೆ..
. ಇದು ಹಲ್ಲುಗಳ ರಕ್ಷಣೆಯಲ್ಲಿ ಮಹತ್ವದ ಮೂಲಿಕೆಯಾಗಿದೆಯೆಂದು  ನಮ್ಮ ಹಿರಿಯರು ತಿಳಿದಿದ್ದರು. ಪ್ರತಿನಿತ್ಯ ಉತ್ರಾಣೆ ಕಡ್ಡಿಯಿಂದ ಹಲ್ಲುಜ್ಜುವದರಿಂದ ಹಲ್ಲು ಉತ್ತಮಗೊಳ್ಳುತ್ತದೆಯೆಂದು ಅನುಭವಿಗಳ ಅಂಬೋಣವಿದೆ. ಉತ್ತರ ಭಾರತದ ಅನೇಕ ಹಳ್ಳಿಗರು ತಮ್ಮ ಹಲ್ಲುಗಳನ್ನು ಇದರ ಹಸಿಕಡ್ಡಿಯಿಂದ ತಿಕ್ಕುವ ಕಾರಣ ಅವರ ಹಲ್ಲುಗಳು ವಯಸ್ಸು ಎಂಬತ್ತು ದಾಟಿದರೂ ಗಟ್ಟಿಮುಟ್ಟಾಗಿರುತ್ತವೆಯೆಂಬ ವರದಿಗಳಿವೆ. ಭಾದ್ರಪದ ಮಾಸದ ಗಣೇಶ ಚವತಿಯ ಮರುದಿನ ಪಂಚಮಿಯಂದು ಮಾತ್ರ ವಿಧವೆಯರಿಗೆ ಉತ್ರಾಣೆ ಕಡ್ಡಿಯಿಂದ ಹಲ್ಲು ತಿಕ್ಕಲು ಅವಕಾಶ ಮಾಡಿಕೊಡುವ ಆಚರಣೆ ಜಾರಿಯಲ್ಲಿದೆ. ಆದರೆ ಈ ಧಾರ್ಮಿಕ ಆಚರಣೆಗಳ ಹಿನ್ನೆಲೆಯನ್ನರಿಯದವರು  ಈ ಕೆಲಸವನ್ನು ವಯಸ್ಕರಿಗೆ ಮೀಸಲಿಟ್ಟು ತಾವು ಕಂಪನಿ ಪೇಸ್ಟಗಳ ಮೊರೆ ಹೋಗಿದ್ದಾರೆ. ಹಿರಿ ಕಿರಿಯರು ಇದನ್ನು ಬಳಸುವ ಕ್ರಮವು ದೂರವಾಗಿ ಇದರ ಪರಿಚಯ ಜನರಿಂದ ದೂರವಾಗುತ್ತಿದೆ.

   ಉತ್ರಾಣೆಯಲ್ಲಿ ಬಿಳಿ ಕೆಂಪು ಮತ್ತು ಹಸಿರು ಬಣ್ಣದ ಬಗೆ ಗಳು ಬಳಕೆಯಲ್ಲಿ ಕಂಡುಬರುತ್ತವೆ. ಕೆಂಪು ಉತ್ರಾಣಿಯು ಜನಪದ ಧಾರ್ಮಿಕ ಆಚರಣೆಯಲ್ಲಿ ಸ್ಥಾನ ಪಡೆದಿದೆ. ಬಾಳಂತಿಯರು ಇದನ್ನು ಪೂಜಿಸುತ್ತಾರೆ. ಅದರೆ ಇವರಿಗೆ ಈ ಪೂಜೆಯ ಹಿನ್ನೆಲೆಯ ಅರಿವಿಲ್ಲ. ಇದು ಸುಖ ಪ್ರಸವಕ್ಕೆ ಸಹಾಯ ಮಾಡುವ ಮೂಲಿಕೆಯೆಂಬುದನ್ನು ಇವರು ಮರೆತಿದ್ದಾರೆ. ಎರಡನೆಯ ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಬಿಳಿ ಬಣ್ಣದ ಉತ್ರಾಣೆಯ ಬೀಜವನ್ನು ನೆನೆಯಿಸಿ ಕುಡಿದರೆ ಮೂಲವ್ಯಾಧಿಯು ಗುಣವಾಗುತ್ತದೆ.

     ಅಚ್ಚ ಹಸಿರು ಬಣ್ಣದ ಕಾಡು ಉತ್ರಾಣಿಯನ್ನು ಹಳ್ಳಿಗರು ಇದ್ರಸೆ ಗಿಡ ಎನ್ನುತ್ತಾರೆ. ಇದನ್ನು ಮಕ್ಕಳ ಶ್ವಾಸ ಸಂಬಂಧಿಯಾದ ಇದ್ರಸೆ ಎಂಬ ರೋಗಕ್ಕಾಗಿ ಬಳಸುತ್ತಿದ್ದಾರೆ. ಇಂತಹ ಅನೇಕ ಮದ್ದಿನ ಗಿಡಗಳ ಅರಿವು ನಮ್ಮ ಪೂರ್ವಜರು ನೀಡಿದ ನಿಧಿ.ಇದನ್ನು ರಕ್ಷಿಕೊಳ್ಳುವದು ನಮ್ಮ ನಿಮ್ಮ ಕರ್ತವ್ಯ. ಈ ಬಗ್ಗೆ ತ್ವರಿತ ಅಧ್ಯಯನವು ನಡೆಯಬೇಕಾಗಿದೆ.

No comments:

Post a Comment