Friday, 7 September 2012

ನಮ್ಮ ಗಿಡ ಮರಬಳ್ಳಿಗಳು- ತುಂಬೆ



 ತುಂಬೆ  Leucas cephalotes[Roth]sprengel   
ಇದು ಭಾರತದ ಎಲ್ಲ ಭಾಗದಲ್ಲಿ ಕಂಡುಬರುವ ಕಳೆಗಿಡ. ಮಳೆಗಾಲದಲ್ಲಿ ತಂತಾನೆ ಎಲ್ಲ ತರದ ಭೂಮಿಯಲ್ಲಿ ಇದು ಬೆಳೆಯುತ್ತದೆ. ಗದ್ದೆ ಹೊಲಗಳ ಮೂಲೆಯಲ್ಲಿ ಹಾಳುಬಿದ್ದ ಬಯಲಿನಲ್ಲಿ ಹಾದಿಯ ಬದಿಯಲ್ಲಿ ಹಚ್ಚ ಹಸುರಾಗಿ ಬೆಳೆಯುತ್ತದೆ. ನೀರಿನ ಪಸೆ ಸಿಕ್ಕರೆ ಬೇಸಿಗೆಯಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ತುಂಬೆ ಆಯುರ್ವೇದದಲ್ಲಿ  ಹಾಗೂ ಜನಪದ ವೈದ್ಯದಲ್ಲಿ ಬಳಕೆಯಾಗುವ ಒಂದು ಚಿಕ್ಕ ಔಷಧ  ಸಂಸ್ಕೃತದಲ್ಲಿ ದ್ರೋಣ ಪುಷ್ಪವೆನ್ನುತ್ತಾರೆ.

ಸಾಮಾನ್ಯವಾಗಿ ತುಂಬೆ ಹೂ ಶಿವನಿಗೆ ಪ್ರಿಯವಾದ ಹೂವೆಂದು ತಿಳಿಯಲಾಗುತ್ತದೆ. ಆದ್ದರಿಂದ ಇದನ್ನು ರುದ್ರ ಪುಷ್ಪವೆನ್ನುತ್ತಾರೆ. ಬೀರ ಎಂಬ ಹೆಸರಿನ ಜನಪದ ದೇವರಿಗೆ ಪೂಜೆಯ ಮೊದಲು ಜಳಕ ಮಾಡಿಸಿ ದೇವರ ಮೈತುಂಬ ತುಂಬೆ ಹೂವನ್ನು ಬಿಡಿಬಿಡಿಯಾಗಿ ಅಂಟಿಸಲಾಗುತ್ತದೆ.  ಕಲ್ಲಿನ ಮೂರ್ತಿಗಳಿಗೆ ನೀರಿನ ಸ್ನಾನ ಮಾಡಿಸಿದ ಬಳಿಕ ಹೂವುಗಳನ್ನು ಅಂಟಿಸುವ ಕಾರಣ ಅವು ಅಲ್ಲಿ ಅವು ಅಂಟಿಕೊಳ್ಳುತ್ತವೆ. ಹೂವನ್ನು ಹೊನ್ನಾವರದ ಸಾಲಿಕೆರೆಯಲ್ಲಿ ಗ್ರಾಮದೇವರಿಗೆ ಮೈಗೆ ಅಂಟಿಸುತ್ತಾರೆ, ದೇವರ ಬಳಿ ಪ್ರಶ್ನೆ ಕೇಳಲು ಬಂದವರು ತಮ್ಮ ಕೆಲಸ ಸಾಧ್ಯವಾಗುವುದಾದರೆ ತಾವು ಸೂಚಿಸಿದ ಯಾವುದಾದರೂ ಒಂದು ಭಾಗದ ಹೂ ಬೀಳಲಿ ಎನ್ನುತ್ತಾರೆ. ಹೂ ಬಿದ್ದರೆ ಖುಶಿ ಪಡುತ್ತಾರೆ. ಈ ಕ್ರಿಯೆಗೆ ಹೂ ಕೇಳುವದು ಎನ್ನುತ್ತಾರೆ.

ಕೆಲವು ಪುರಾಣಗಳ ಪ್ರಕಾರ ಇದು ವಿಷ ಹಾರಿ. ದೇವಾಸುರರು ಸಮುದ್ರ ಮಥನ ಮಾಡುತ್ತಿದ್ದ ಕಾಲದಲ್ಲಿ ಪ್ರಥಮವಾಗಿ ಹೊರಬಂದ ವಿಷವನ್ನು ಕಂಡು ದೇವಾಸುರರು ಹೆದರಿ ದೂರ ಸರಿದಾಗ ಲೋಕ ಕಲ್ಯಾಣಕ್ಕಾಗಿ ಶಿವನು ಆ ವಿಷವನ್ನು ತಾನೇ ಕುಡಿದನು ಎಂದು ಪುರಾಣಗಳು ಹೇಳುತ್ತವೆ. .ಪುರಾಣಿಕರು ಶಿವನ ದೇಹದಲ್ಲಿ ಸೇರಿದ ಆ ವಿಷ ನಿವಾರಣೆಗಾಗಿ ಶಿವನಿಗೆ ತುಂಬೆ ಹೂವನ್ನು ಅರ್ಪಿಸುವ ಪದ್ಧತಿ ರೂಢಿಗೆ ಬಂದಿದೆಯೆಂದು ಅವರು ತಿಳಿಸುತ್ತಾರೆ. ಈ ಆಚರಣೆಯ ಹಿನ್ನೆಲೆಯು ತುಂಬಿ ಗಿಡವು ದೇಹದಲ್ಲಿಯ ವಿಷವನ್ನು ಅಂದರೆ ಅನಗತ್ಯ ರೋಗಾಣು ಗಳನ್ನು ದೂರ ಮಾಡುತ್ತದೆ ಎಂಬ ಅಂಶದ ಮೇಲೆ ಬೆಳಕು ಚಲ್ಲುತ್ತದೆ. ಸಾಮಾನ್ಯವಾಗಿ ಮನುಷ್ಯರ ರೋಗ ನಿರೋಧಕ ಗುಣದ ಗಿಡಮರ ಬಳ್ಳಿಗಳ ಅಂಗಾಂಗ ಗಳನ್ನು ದೇವರಿಗೆ ಅರ್ಪಿಸುವುದು ಜನಪದ ಆಚರಣೆಯಲ್ಲಿ ಕಂಡು ಬರುವ ಮಹತ್ವದ ಅಂಶ.

ಇದು ಮನೆಮದ್ದಿನಲ್ಲಿ ಬಳಕೆಯಾಗುವ ಉತ್ತಮ ಗಿಡ. ಇದರ ಎಲೆಯ ರಸವನ್ನು ತುಸು ಜೇನು ಬೆರೆಸಿ ಮಕ್ಕಳಿಗೆ ದೊಡ್ದವರಿಗೆ ಒಂದು ಚಮಚದಿಂದ ನಾಲ್ಕು ಚಮಚದವರೆಗೆ ಅವರವರ ವಯಸ್ಸಿಗೆ ತಕ್ಕಂತೆ ನೀಡಿದರೆ ಮಕ್ಕಳ ಕಫ ದೂರವಾಗುತ್ತದೆ.

No comments:

Post a Comment