ಸಾಗುವಾನಿ -TectonagrandisLinn teak
ಇದಕ್ಕೆ ತೇಗ ಎಂಬ ಇನ್ನೊಂದು ಹೆಸರಿದೆ. ಟೀಕ್ವುಡ್ಡ್ ಎಂದು ಹಲವರು ಇದನ್ನು ಗುರುತಿಸುತ್ತಾರೆ.
ಸಾಗವಾನಿ ಬಹು ದೊಡ್ಡ ಮರ. ಮೊಳವುದ್ದದ ಅಗಲ ಎಲೆಗಳ ಎದುರು ಬದುರು ಜೋಡಣೆ. ಚಿಗುರು ನಸುಗೆಂಪು, ಎಲೆಗಳನ್ನು ತಿಕ್ಕಿದರೆ ಕೈಗೆ ಕೆಂಪು ಬಣ್ಣ ಹತ್ತಿಕೊಳ್ಳುತ್ತದೆ. ಬೆಳೆದ ಎಲೆಯ ಬಣ್ಣ ಹಸಿರು. ಹೂಗಳು ಬಿಳಿ ನಕ್ಷತ್ರದಂತೆ. ನೆಲಕ್ಕೆ ಬಿದ್ದ ಹೂಗಳು ಬಕುಳದ ಹೂವಿನಂತೆ ತೂತು ಹೊಂದಿರುತ್ತವೆ. ತೂತಿನಲ್ಲಿ ದಾರವನ್ನು ತೂರಿಸಿ ಇವುಗಳನ್ನು ಪೋಣಿಸ ಬಹುದು. ಕಾಯಿಗೆ ಒಂದೇ ಬೀಜ, ಸುಮಾರು ಅರವತ್ತು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಒಂದೆ ಗಣಪತಿಯಿತ್ತು. ಚವತಿಯ ಹಬ್ಬದಲಿ ನಾವು ಮಕ್ಕಳು ಹಿರಿಯರು ಆ ಗಣಪತಿಯ ದರ್ಶನ ಪಡೆಯಲು ಹೋಗುತ್ತಿದ್ದೆವು. ಆಗ ಪ್ಲಾಸ್ಟಿಕ್ ಬಳಕೆಯಲ್ಲಿರಲಿಲ್ಲ. ಅಲ್ಲಿಯ ಪೂಜಾರಿಗಳು ದರ್ಶನಕ್ಕೆ ಬಂದವರಿಗೆ ಸಾಗುವಾನಿ ಎಲೆಯಲ್ಲಿ ತೆಂಗಿನ ಕಾಯಿಸುಳಿ ಬೆಲ್ಲ ಬೆರೆಸಿದ ಬತ್ತದ ಹೊದಳನ್ನು ಪ್ರಸಾದವಾಗಿ ಕೊಡುತ್ತಿದ್ದರು. ಉಡುಪಿ ಜಿಲ್ಲೆಯ ಚೇರ್ಕಾಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಗುವಾನಿ ಎಲೆಯನ್ನು ಮುಚ್ಚಿಗೆಯಾಗಿ ಬಳಸಿ ಹಲಸಿನ ಹಣ್ಣಿನ ಕಡಬನ್ನು ಬೇಯಿಸುತ್ತಾರೆ. ಸಾಗುವಾನಿ ಎಲೆಯಲ್ಲಿ ಕಡಬು ಬೆಂದಾಗ ಕಡಬಿನ ಬಣ್ಣ ಕೆಂಪಗಾಗುತ್ತದೆ. ಈ ಕೆಂಪು ಕಡಬನ್ನು ಕಡಬು ಪ್ರಿಯರು ಕೋಳಿ ಸಾರಿನೊಂದಿಗೆ ತಿನ್ನುತ್ತಾರೆ. ಹಲಸಿನ ಹಣ್ಣಿನ ಕಾಲ ಮುಗಿಯುತ್ತ ಬಂದಾಗ. ಸಸ್ಯಾಹಾರಿ ಭಕ್ತರು ಸಾಗುವಾನಿ ಎಲೆಯಲ್ಲಿ ಹಲಸಿನ ಹಣ್ಣಿನ ಖಾದ್ಯ ಮಾಡಿ ಜಟಗ,ಬಬ್ಬರಿ ಯಾದಿ ಜನಪದ ದೇವರುಗಳಿಗೂ ಅರ್ಪಿಸುತ್ತಾರೆ..
ಇದರ ಮದ್ದಿನ ಗುಣವು ಅಪೂರ್ವವಾದದ್ದು. ಒಮ್ಮೆ ನನ್ನ ಕೈ ಬಲಭಾಗಕ್ಕೆ ಬಿಸಿ ಗಂಜಿ ಬಿದ್ದು ಅಲ್ಲಿ ಗುಳ್ಳೆಗಳೆದ್ದವು ಸುಟ್ಟ ಗುಳ್ಳೆಗಳೆದ್ದಾಗ ಸಾಗವಾನಿ ಎಣ್ಣೆ ಹಚ್ಚುವದು ಮನೆ ಮದ್ದಿನ ಒಂದು ಕ್ರಮ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಎಣ್ಣೆಯ ಬಳಕೆ ಹೆಚ್ಚು. ನಾನು ಅಗತ್ಯ ಬಿದ್ದಾಗ ಇರಲಿ ಎಂದು ಕೊಬ್ಬರಿ ಎಣ್ಣೆಯಲ್ಲಿ ಸಾಗವಾನಿ ಚಿಗುರನ್ನು ಹಾಕಿ ನನ್ನ ಸುಟ್ಟ ಗಾಯಕ್ಕೆ ಆ ಎಣ್ಣೆಯನ್ನು ಹಚ್ಚಿದೆ. ಯಾವ ವೈದ್ಯರ ಬಳಿಗೂ ಹೋಗಲಿಲ್ಲ. ಗುಳ್ಳೆ ಒಡೆದ ಗಾಯಕ್ಕೂ ಸಾಗುವಾನಿ ಎಣ್ಣೆಯದೇ ಮದ್ದು.
ನನ್ನ ಸುಟ್ಟ ಗಾಯ ತೊಂದರೆ ಕೊಡಲಿಲ್ಲ. ಈ ನಡುವೆ ನನಗೆ ಈ ಮೂರು ನಾಲ್ಕು ದಿನಗಳಲ್ಲಿ ಸೊಳ್ಳೆ ಕಾಟ ಬರಲಿಲ್ಲ. ಆಕೆ ಎಂದು ಯೋಚನೆ ಮಾಡಿದೆ. ನಾನು ನನ್ನ ಸುಟ್ಟಗಾಯಕ್ಕೆ ಹಚ್ಚಿಕೊಂಡ ಸಾಗುವಾನಿ ಎಣ್ಣೆಯ ಪ್ರಭಾವದಿಂದಾಗಿ ಸೊಳ್ಳೆಗಳು ನನ್ನ ಬಳಿ ಸುಳಿಯಲಿಲ್ಲವೆಂದು ತಿಳಿದುಕೊಂಡೆ.
ಈ ಅನುಭವ ಪಡೆದ ನಾನು ಒಮ್ಮೆ ಹಳದಿಪುರದ ಹಾಲಕ್ಕಿ ಒಕ್ಕಲ ಕೇರಿಗೆ ಹೋಗಿದ್ದೆ. ಅಲ್ಲೊಂದು ಸಾಗವಾನಿ ಮರವಿತ್ತು. ನನ್ನ ಬಳಿ ನಾಲ್ಕಾರು ಜನ ನಿಂತಿದ್ದರು. ನಾನು ಬಲ್ಲ ಮದ್ದು ಇವರಿಗೂ ತಿಳಿಯಲಿ ಎಂದುಕೊಂಡು ಇದರ ಎಣ್ಣೆ ಸುಟ್ಟಗಾಯಗಳಿಗೆ ಮದ್ದು. ಇದು ನಿಮಗೆ ಗೊತ್ತೆ ಎಂದೆ. ಆಗ ಅವರಲ್ಲೊಬ್ಬರು ಅಷ್ಟೇ ಅಲ್ಲ ಈ ಎಣ್ಣೆಯನ್ನು ಮೈಗೆ ಕೈ ಕಾಲುಗಳಿಗೆ ಹಚ್ಚಿಕೊಂಡರೆ ಸೊಳ್ಳೆಗಳು ಇತ್ತ ಸುಳಿಯುವುದಿಲ್ಲ ಎಂದರು. ನನ್ನ ಅನುಭವಕ್ಕೆ ಇನ್ನೊಬ್ಬರ ಈ ಅನುಭವದ ದೃಢೀಕರಣವಾಯಿತು. ಹೌದು ನನಗೂ ಇದು ತಿಳಿದಿದೆ. ನೀವು ಸೊಳ್ಳೆ ಓಡಿಸಲು ಈ ಎಣ್ಣೆಯನ್ನು ಯಾಕೆ ಬಳಸುವುದಿಲ್ಲ? ಎಂದು ಕೇಳಿದೆ. ಸೊಳ್ಳೆ ಓಡಿಸಲು ನಾವು ಹೊಗೆ ಹಾಕುತ್ತೇವೆ. ಎಲ್ಲರಿಗೂ ಇದರಿಂದ ಉಪಯೋಗವಾಗುತ್ತದೆ. ಕೇರಿಯವರೆಲ್ಲ ಹೊಗೆ ಹಾಕುವುದರಿಂದ ಸೊಳ್ಳೆಗಳು ಇಲ್ಲಿ ಬರುವುದಿಲ್ಲ ಎಂದರು. ಇವರ ಅಡುಗೆ ಮನೆಯಿಂದ ಕಟ್ಟಿಗೆ ಉರಿಸಿದ ಹೊಗೆ ಹೊರಬಂದು ಕೇರಿಯ ಜನರಿಗೆ ಸೊಳ್ಳೆಯ ಕಾಟ ತಪ್ಪುತ್ತದೆ.
ನಮ್ಮ ಮನೆಗೆ ಕೆಲಸಕ್ಕೆ ಬರುವ ಗೌರಿ ಅಮ್ಮಾ ಇವತ್ತು ಸೊಳ್ಳೆ ಜಾಸ್ತಿ.ಹೊರಗೆ ಹುಲ್ಲು ಕೀಳಲು ಕೊಡುವುದಿಲ್ಲ.ಆ ದಿನ ಕೊಟ್ಟ ಆ ಕೆಂಪ ಎಣ್ಣೆ ಕೊಡಿ ಎನ್ನುತ್ತಾಳೆ.ಕೆಂಪೆಣ್ಣೆ ಹಚ್ಚಿಕೊಂಡು ಹೊರಗಿನ ಕೆಲಸಕ್ಕೆ ನಡೆಯುತ್ತಾಳೆ.
ನನಗೂ ಈಗಿತ್ತಲಾಗಿ ಸಾಗುವಾನಿ ಎಣ್ಣೆಯ ಸೊಳ್ಳೆ ನಿರೋಧಕ ಶಕ್ತಿಯ ಮೇಲೆ ನಂಬಿಕೆ ಬಂದಿದೆ. ಇಷ್ಟು ದಿನ ಮುಂಜಾನೆ ಸೊಳ್ಳೆಯ ಪರದೆಯ ಒಳಗಿಟ್ಟು ಲ್ಯಾಪ್ ಟಾಪನ್ನು ತೆರೆಯುತ್ತಿದ್ದೆ. ಈಗ ಸೊಳ್ಳೆಯ.ಪರದೆಯ ಹಂಗಿಲ್ಲದೆ ಟೇಬಲ ಮೇಲೆ ಲ್ಯಾಪ್ ಟಾಪ್ನ ಕೆಲಸ ಕೈಗೊಳ್ಳುತ್ತಿದ್ದೇ??
ಸಾಗುವಾನಿ ಎಣ್ಣೆ ಮಾಡಿಟ್ಟಿದ್ದೆ. ನೀವೂ ಸಾಗವಾನಿ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯಲ್ಲಿ ನಸುಗೆಂಪು ಮತ್ತು ಹಸಿರಾದ ಎಳೆ ಎಲೆಗಳನ್ನು ಹರಿದು ಹಾಕಿ ಸಳಗುಡುವ ಶಬ್ದ ನಿಲ್ಲುವವರೆಗೆ ಕಾಸಿದರೆ ಕಡು ಗುಲಾಬಿ ಕೆಂಪು ಎಣ್ಣೆ ಸಿದ್ದವಾಗುತ್ತದೆ. ಇದನ್ನು ತಣಿಸಿ ಬಾಟ್ಲಿಯಲ್ಲಿ ತುಂಬಿಟ್ಟು ಕೊಳ್ಳಿರಿ. ಬಳಸಿನೋಡಿರಿ. ಎಣ್ಣೆ ಹಚ್ಚಿಕೊಳ್ಳುವಾಗ ಹೊಸ ಬಟ್ಟೆ ಬೇಡ. ಪ್ರತಿದಿನ ಒಗೆದಿರುವ ಬಟ್ಟೆಯನ್ನೇ ಧರಿಸಿಕೊಂಡರೆ ಉತ್ತಮ.
ಸಾಗುವಾನಿ ಎಣ್ಣೆಯನ್ನು ನಿತ್ಯ ಪಾದಕ್ಕೆ ಹಚ್ಚಿ ಕೊಳ್ಳುವುದರಿಂದ ಪಾದದ ಬಿರುಕು ದೂರವಾಗಿ ಪಾದ ನಯಗೊಳ್ಳುತ್ತದೆ..
ಕೂದಲಿಗೂ ನಾನು ಇದನ್ನು ಬಳಸಿದ್ದೇನೆ. ಕೂದಲ ಮೇಲೆ ವ್ಯತಿರಿಕ್ತ ಪರಿಣಾಮವಾದ ಹಾಗೆ ಕಂಡಿಲ್ಲ. ಕೈ ಕಾಲುಗಳ ರೋಮಗಳ ಬಣ್ಣದಲ್ಲಿ ವ್ಯತ್ಯಾಸವಾಗಿಲ್ಲ.
ಸಾಗುವಾನಿ ಹೂಗಳ ಎಣ್ಣೆ ತಯಾರಿಸಬಹುದೆಂದು ಹಳೆಯ ವೈದ್ಯಗ್ರಂಥದಲ್ಲಿ ಓದಿದ ನೆನಪು. ಆದರೆ ಹೂಗಳನ್ನು ಸಂಗ್ರಹಿಸುವುದು ಕಷ್ಟ, ಮಳೆಗಾಲದಲ್ಲಿ ನೆಲದ ಮೇಲೆ ಹೂಗಳು ಉದುರುತ್ತವೆ. ಆಗ ಒಂದು ಸೀರೆಯ ತುಂಡನ್ನು ಅಲ್ಲಿ ಹಾಸಿಟ್ಟರೆ ಮುಂಜಾನೆ ಬೊಗಸೆ ತುಂಬ ಪರಿಮಳದ ಹೂ ಪಡೆಯಬಹುದು. ಇದನ್ನು ಎಣ್ಣೆ ಮಾಡಲು ಬಳಸಬಹುದು. [ ಮಕ್ಕಳಿಗಾಗಿ ಬರೆದ ಬರೆಹಕ್ಕೆ ಇಲ್ಲಿ ನನ್ನ ಅನುಭವದಿಂದ ದೊರೆತ ಹೆಚ್ಚಿನ ಅಂಶಗಳನ್ನು ಸೇರಿಸಲಾಗಿದ ]
No comments:
Post a Comment