Friday, 7 September 2012

ನಮ್ಮಗಿಡ ಮರಬಳ್ಳಿಗಳು- ನಿತ್ಯಪುಷ್ಪ


ನಿತ್ಯಪುಷ್ಪ  Catharanthus roseus[L]G.Don


ಇದಕ್ಕೆ ಅಂಕೋಲೆಯ ಪ್ರಾದೇಶಿಕ ಮಾತಿನಲ್ಲಿ ಇಸಪತ್ರೆ, ಹೊನ್ನಾವರದ ಸುಶಿಕ್ಷಿತರಲ್ಲಿ ನಿತ್ಯಪುಷ್ಪ ಇತರ ಕಡೆಗಳಲ್ಲಿ ಕಾಶಿ ಕಣಗಿಲೆ .ಕೊಂಕಣಿ ಭಾಷೆಯಲ್ಲಿ ಸದಾಪುಲ ಎಂದು ಗುರುತಿಸಲಾಗುವ ಈ ಗಿಡವನ್ನು ಇಂಗ್ಲೀಷ ಭಾಷೆಯಲ್ಲಿ ಮದಾಗಾಸ್ಕರ ಪೆರಿವಿಂಕಲ್ ಎಂದೂ, ಜಗತ್ತಿನ ಸಸ್ಯವಿಜ್ಞಾನಿಗಳು ಕೆಥರಾಂಥಸ್ ರೋಸೆಸ್ ಎಂದು ಗುರುತಿಸುತ್ತಾರೆ. ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ.
   
    ಸುಮಾರು ಎರಡು ಮೂರು ಅಡಿ ಎತ್ತರವಾಗಿ ಹೆಚ್ಚು ಕವಲೊಡೆದು ಪೊದೆಯಂತೆ ಬೆಳೆಯುವ ದಟ್ಟ ಹಸುರಾದ ಎಲೆಗಳ ಸುಂದರ ದಟ್ಟ ಹಸುರು ಬಣ್ಣದ ಗಿಡವಿದು. ಎಲೆಗಳ ತುದಿಗಳು ಮೊಂಡವಾಗಿದ್ದು ಎಲೆಗಳಿಗೆ ಎದುರು ಬದುರು ಜೋಡಣೆಯಿದೆ. ಸುಂದರ ಬಿಳಿ, ಕೆಂಪು, ಗುಲಾಬಿ ಬಣ್ಣದ ಎಸಳುಗಳುಳ್ಳ ಹಾಗೂ ನಟ್ಟ ನಡುವೆ ಕೆಂಪು, ಬಿಳಿ, ಗುಲಾಬಿ ಬಣ್ಣದ ಚಿಕ್ಕ ಬೊಟ್ಟುಗಳುಳ್ಳ ಹೂವುಗಳ ಈ ಚಿಕ್ಕ ಗಿಡಗಳು ಗಮನ ಸೆಳೆಯುತ್ತವೆ. ಹೂಗಳು ಉದುರಿದ ಬಳಿಕ ಹೂ ತೊಟ್ಟಿನಷ್ಟು ಉದ್ದದ ಸೊಡಗೆಗಳು ಎಲೆಗಳ ಕಂಕುಳಲ್ಲಿ ಕಾಣಿಸುತ್ತವೆ. ಬೀಜಗಳು ಹೆಚ್ಚುಕಾಲ ಬದುಕಲಾರವು. ಆದಷ್ಟು ಬೇಗ ಬೀಜ ಬಿತ್ತಿ ಗಿಡ ಪಡೆಯಬೇಕು. ಕಸಿ ಕಟ್ಟಿ ಒಂದೇ ಗಿಡದಲ್ಲಿ ಹಲವು ಬಣ್ಣದ ಹೂ ಪಡೆಯಬಹುದು. ಮಳೆಗಾಲದಲ್ಲಿ ಮತ್ತು ಚೆನ್ನಾಗಿ ನೀರು ಬೀಳುವಲ್ಲಿ ಇದರ ಟೊಂಗೆಗಳೂ ಬೇರು ಬಿಡಬಲ್ಲವು. ಟೊಂಗೆಗಳನ್ನು ನೆಟ್ಟು ಹೊಸಗಿಡ ಪಡೆಯಬಹುದು
 
ಇದು ಅಂಗಳದ ಬದಿಯ ಅಲಂಕಾರದ ಗಿಡವಷ್ಟೇ ಅಲ್ಲ. ಇದು ಜಗತ್ತಿನ ಹಲವು ದೇಶಗಳು ಬಲ್ಲ ಅತ್ಯುತ್ತಮ ಔಷಧ ಗಿಡವಾಗಿದೆ. ಆಧುನಿಕ ಸಂಶೋಧನೆಗಳು ಇದರ ಅದ್ಭುತ ಔಷಧ ಗುಣವನ್ನು ಒಪ್ಪಿಕೊಳ್ಳುವ ಬಹುಕಾಲ ಮೊದಲೇ ಜಗತ್ತಿನ ಬಹು ದೇಶಗಳು ಇದನ್ನು ಮನೆಮದ್ದಿನಲ್ಲಿ ಬಳಸುತ್ತಿದ್ದವು.

    ಭಾರತದಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇದರ ಎಲೆಗಳನ್ನು ಸಿಹಿ ಮೂತ್ರ ರೋಗಕ್ಕೆ ಔಷಧವಾಗಿ ಬಳಸುತ್ತಿದ್ದಾರೆ. ಬಿಳಿಹೂವಿನ ಗಿಡವು ಔಷಧಕ್ಕೆ ಹೆಚ್ಚು ಉಪಯುಕ್ತವೆಂದು ತಿಳಿಯಲಾಗುತ್ತದೆಯಾದರೂ ಇದರ ಇತರ ಬಣ್ಣದ ಹೂವಿನ ಗಿಡಗಳು ಇದರಷ್ಟೇ ಔಷಧ ಗುಣವನ್ನು ಹೊಂದಿವೆಯೆಂಬ ಅಭಿಪ್ರಾಯಗಳಿವೆ. 

ಕ್ರಿಮಿ ಕೀಟಗಳು ಹಾಗೂ ಮಳೆಗಾಲದಲ್ಲಿ ತೊಂದರೆ ಕೊಡುವ ಹುಳಹುಪ್ಪಡಿಗಳು ಕಚ್ಚಿದ ಜಾಗದಲ್ಲಿ ಇದರ ಎಲೆಯನ್ನು ಅರೆದು ಅಲ್ಲಿ ಲೇಪಿಸಿದರೆ ಬೀಗು, ನೋವು ಕಡಿಮೆಯಾಗುತ್ತದೆ. 
 
ಪ್ರತಿ ತಿಂಗಳು ಅಧಿಕ ರಕ್ತಸ್ರಾವವಾಗುವ ಮಹಿಳೆಯರಿಗೆ ಎಲೆಯ ಕಷಾಯ ಕುಡಿಯುವುದರಿಂದ ಲಾಭವಿದೆ. ಸಿಹಿಮೂತ್ರ ರೋಗಿಗಳು ಪ್ರತಿ ದಿನ ನಾಲ್ಕಾರು ಎಲೆಗಳನ್ನು ಜಗಿದು ಅಥವಾ ಕಷಾಯ ಮಾಡಿ  ಸೇವಿಸಬಹುದಾಗಿದೆ. ಅಧಿಕ ರಕ್ತದೊತ್ತಡದವರಿಗೆ ಎಲೆಯ ಕಷಾಯ ಉತ್ತಮ. ರಕ್ತ ಕ್ಯಾನ್ಸರ್ ರೋಗವನ್ನೂ ಇದು ಹಿಡಿತಕ್ಕೆ ತರಬಲ್ಲದೆಂದು ತಿಳಿದುಬಂದಿದೆ.  ಬಸುರಿಯರು ಬಳಸದಿರುವದು ಉತ್ತಮ .ಮನೆಮದ್ದಿನ ಎಲ್ಲ ಸಂದರ್ಭಗಳಲ್ಲಿ ಎಲೆಗಳ ಬಳಕೆ ಸಾಕು.ಪ್ರಾಣಿಗಳು ಈ ಗಿಡಗಳನ್ನು ತಿನ್ನುವದಿಲ್ಲ ಆದ್ದರಿಂದ ಬೇಲಿಯ ಹೊರಗೂ ಇದನ್ನು ಬೆಳೆಸಬಹುದು.                          

No comments:

Post a Comment