Wednesday, 6 June 2012

ಸೊಪ್ಪೊಡತಿ-೩




ಸೊಪ್ಪೊಡತಿ 3
     
       ಈ ದೇವರಿಗೆ ಒಂದು ಅಪಖ್ಯಾತಿಯಿದೆ. ಇದರ ಕಾರಣವೇನೆಂಬುದು ತಿಳಿದು ಬರುವದಿಲ್ಲವೆಂದು ಹಿಂದಿನ ಬ್ಲಾಗನಲ್ಲಿ [ಸೊಪ್ಪೊಡತಿ1] ತಮಗೆ ತಿಳಿಸಿದ್ದೆ. ಅವಳಿಗಿರುವ ಅಪಖ್ಯಾತಿಗಳಲ್ಲಿ ಇವಳಿಗೆಎಷ್ಟು ಸಲ್ಲಿಸಿದರೂ ಅದು ಉಳಿಯುವದಿಲ್ಲ ಎಂಬ ನಂಬಿಕೆಯೂ ಒಂದು. ಈ ನಂಬಿಕೆಯೇ ಅವಳು ಕೃತಘ್ನಳು ಎಂದು ಭಾವಿಸುವದಕ್ಕೆ ಕಾರಣವಾಗಿರಬಹುದು. ವಾಸ್ತವಿಕ ಸಂಗತಿಯೊಂದು ತಪ್ಪು ನಂಬಿಕೆಯಾಗಿ ಹೇಗೆ ಪರಿವರ್ತನೆಯಾಗುತ್ತದೆಯೆಂಬುದಕ್ಕೆ ಇಲ್ಲಿ ಉದಾಹರಣೆ ದೊರೆಯುತ್ತದೆ. 
       ಇಲ್ಲಿನ  ವಾಸ್ತವಿಕ ಸಂಗತಿಯೆಂದರೆ ಸೊಪ್ಪೊಡತಿಗೆ ಅರ್ಪಿಸಿದ ಸೊಪ್ಪು ಕಾಲಾಂತರದಲ್ಲಿ ಗಾಳಿ ಮಳೆಗೆ ಸಿಕ್ಕು ಆ ಸ್ಥಳದಿಂದ ಕೊಚ್ಚಿಕೊಂಡು ಹೋಗಿ  ಇನ್ನೊಂದೆಡೆ ಕಾಡಿನ ಗಿಡ ಮರಗಳ ಬಳಿ ಗೊಬ್ಬರವಾಗುತ್ತದೆ.ಆದರೆ  ಸೊಪ್ಪೊಡತಿಯ ಸ್ಥಳ ಪ್ರತಿವರ್ಷ ಬರಿದಾಗುತ್ತದೆ. ಮುಂದಿನ ವರ್ಷ ಮತ್ತೆ ತುಂಬಿಕೊಳ್ಳುತ್ತದೆ.
          ಎಷ್ಟೊಂದು ಸೊಪ್ಪು ತುಂಬಿತ್ತು  ಈಗ ಬರಿದಾಯಿತು. ``ಇವಳಿಗೆ ಎಷ್ಟು ಕೊಟ್ಟರೂ  ಅಷ್ಟೆ   ಕೊಟ್ಟದ್ದನ್ನು ಉಳಿಸಿಕೊಳ್ಳುವದಿಲ್ಲ'' ಎಂಬ ತಪ್ಪು ಭಾವವು ಮುಗ್ಧ ಜನರಲ್ಲಿ ಬಲಿಯುತ್ತದೆ. ಕಾಲಕ್ರಮದಲ್ಲಿ  ಇವಳ ಈ ನಡುವಳಿಕೆಯನ್ನು  ಉಪಕಾರ ಪಡೆದು ಅದನ್ನು ನೆನಪಿಸಿಕೊಳ್ಳದ ಮನುಷ್ಯ ಸ್ವಭಾವಕ್ಕೆ ಹೋಲಿಸಿ ಜನ ರೂಪಕಗಳನ್ನು ರಚಿಸಿದರು. ಆದರೆ ಸೊಪ್ಪಡತಿಯು ಜನರು ನೀಡಿದ್ದರಲ್ಲಿ ತನಗೇನನ್ನೂ  ಉಳಿಸಿಕೊಳ್ಳದೆ ಕಾಡಿನ ಭಾಗವನ್ನು ಕಾಡಿಗೇ ಬಿಟ್ಟುಕೊಟ್ಟು ಕಾಡನ್ನು ಫಲವತ್ತಗೊಳಿಸುವ ಅಪೂರ್ವ,ಅದ್ವಿತೀಯ ಕೆಲಸ ಮಾಡುತ್ತಾಳೆಂಬುದನ್ನು ಬಹುಜನರೆತ್ತ ಬಲ್ಲರು? 







No comments:

Post a Comment