ಹುರುಡೆ
CYPERUS BULBOSUS VAHL
Growing in the sandy plains in Kathiawar and on the Coromandal coast( guj-thegi) the tubers of which are starchy and cooked and eaten like potatoes. They are of much value in famine times.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ ರೇವೆ ಮಣ್ಣಿನ ಬತ್ತದ ಗದ್ದೆಯ ಕೊಯಿಲು ಮುಗಿದು ಗದ್ದೆಯ ಮಣ್ಣೆಲ್ಲ ಒಣಗಿದ ಬಳಿಕ ಅಲ್ಲಿ ಮತ್ತೊಂದು ಬೆಳೆ ಕೊಯ್ಲಿಗೆ ಬರುತ್ತದೆ. ಇದಕ್ಕೆ ಮನುಷ್ಯರ ಕೈಯ್ಯಿನ ನಾಟಿಯೂ ಬೇಕಿಲ್ಲ. ಕೃಷಿ ಕೆಲಸವೂ ಬೇಕಾಗಿಲ್ಲ.ಇದು ನಿಸರ್ಗಗವು ಉತ್ತಿ ಬಿತ್ತಿ ಸಿದ್ಧಗೊಳಿಸುವ ಬೆಳೆ. ಈ ಉಚಿತ ಆಹಾರ ಬೆಳೆಯೆ ಹುರುಡೆ.ಈ ಬೆಳೆಯನ್ನು ತಮ್ಮ ಆಹಾರವಾಗಿ ಸ್ವೀಕರಿಸಿದವರು ಪ್ರಾಜ್ಞರಾದ ಕಾಡುವಾಸಿಗಳು ಬಡವರು ಹಾಗೂ ದನ ಕಾಯುವ ಮಕ್ಕಳು. ಆದರೆ ಬತ್ತ ಬಿತ್ತಿ ಅಪಾರ ಧಾನ್ಯ ಬೆಳೆಯುವ ಬೆಳೆಗಾರರಿಗೆ ಇದೊಂದು ಕಳೆ.
ಹುರುಡೆಯ ಹುಲ್ಲನ್ನು ಗದ್ದೆಯ ಕಳೆಯೆಂದು ಇವರು ಗುರುತಿಸುತ್ತಾರೆ. ಗದ್ದೆಯ ಕಳೆ ಕೀಳುವಾಗ ಈ ಹುಲ್ಲನ್ನು ಕಿತ್ತು ಬೀಸಾಡುತ್ತಾರೆ. ಆದರೂ ಇವುಗಳ ಸಂತತಿ ಬತ್ತದ ಗದ್ದೆಯಲ್ಲಿ ನಿರಾತಂಕವಾಗಿ ಬೆಳೆಯುತ್ತದೆ.
ಇದರ ಎಲೆಗಳು ಉಳ್ಳಾಗಡ್ಡೆಯ ಎಲೆಗಳಂತೆ ಕೊಳವೆಯಾಕಾರದಲ್ಲಿರುತ್ತವೆ. ವಿರಲವಾಗಿ ಬೆಳೆದಿರುವ ಗಿಡಗಳ ಎಲೆಗಳು ಉಳ್ಳಾಗಡ್ಡೆ ಎಲೆಯಷ್ಟು ದಪ್ಪವಾಗಿರುತ್ತವೆ. ಹಾಗೂ ಇವುಗಳಿಗೆ ಬುಡದಲ್ಲಿ ಕಬ್ಬಿಗಿರುವಂತಹ ಒಂದೆರಡು ಗಂಟುಗಳಿರುತ್ತವೆ. ಇವು ಸುಮಾರು ಎರಡು ಅಡಿಗಳಷ್ಟು ಉದ್ದವಾಗಿ ಬೆಳೆದಿರುವದುಂಟು.ದಟ್ಟವಾಗಿ ಬೆಳೆದ ಹುರುಡೆಯ ಹುಲ್ಲು ಸುಮಾರು ಗೇಣೆತ್ತರದಲ್ಲಿದ್ದು ಕೌದಿ ಹೊಲೆಯುವ ಸೂಜಿಗಿಂತ ತುಸು ಗಡುತರವಾಗಿರುತ್ತವೆ. ಈ ಹುಲ್ಲುಗಳಿಗೆ ಬುಡದಲ್ಲಿ ಶೇಂಗಾಕಾಳಿನ ಗಾತ್ರದ ಬಟಾಟೆಯನ್ನು ಹೋಲುವ ಗಡ್ಡೆಗಳಿರುತ್ತವೆ. ಬಣ್ಣವು ಬಟಾಟೆಯಂತಿದ್ದು ಗಡ್ಡೆಗಳ ಮೊಳಕೆಗಳು ಶೇಂಗಾ ಕಾಳಿನ ಮೊಳಕೆಯಂತೆ ಕಾಣುತ್ತವೆ. ಹೂಗಳು ಗಿಡದ ಕೊಳವೆಯಂತಹ ಎಲೆಯ ತುದಿಯಲ್ಲಿ ಕಾಣುತ್ತವೆ. ಪ್ರತಿ ಹೂವಿನಲ್ಲಿ ಪರಾಗ ಕಣಗಳು ಅಪಾರ. ಗಿಡಕ್ಕೆ ತುಸು ಕೈ ಸೋಂಕಿದರೆ ಸಾಕು. ತಕ್ಷಣ ಪರಾಗ ಕಣಗಳು ಹಾರುತ್ತವೆ. ಆಗ ಚಿಕ್ಕ ಬಿಳಿ ಧೂಳಿನ ಹೊಗೆ ಹಾರಿದಂತೆ ಭಾಸವಾಗುತ್ತದೆ. ಪರಾಗಕಣಗಳು ಹಾರಿದ ಬಳಿಕ ಹೂಗಳ ಅಂದವು ಕಡಿಮೆಯಾಗುತ್ತದೆ.
ಎಪ್ರಿಲ್ ಮೇ ತಿಂಗಳ ಸುಮಾರಿಗೆ ಮನ್ಸೂನು ಮಳೆಯ ಪ್ರಾರಂಭಕ್ಕೆ ಮೊದಲು ಬೇಸಾಯಗಾರರು ಗದ್ದೆಯನ್ನು ಹೂಡಿ ಮಣ್ಣನ್ನು ಸಡಿಲುಗೊಳಿಸುತ್ತಾರೆ. ಇದು ಹುರಡಿ ಕೊಯ್ಲಿಗೆ ಸುಸಂಧಿ. ದನಕಾಯುವ ಮಕ್ಕಳು ಹಾಗೂ ರಜೆ ದೊರಕಿಸಿಕೊಂಡಿರುವ ಶಾಲಾಮಕ್ಕಳು ಕೈಯಲ್ಲೊಂದು ಗರಟೆ, ಚೂಪಾದ ಕೋಲು, ಅಥವಾ ನೀಲಿ ಕಲ್ಲಿನ ಚಿಪ್ಪಿ ಹಿಡಿದು ಗದ್ದೆಗಿಳಿಯುತ್ತಾರೆ. ಅಲ್ಲಿಯ ಮರಳನ್ನು ಕೆದರಿ ಗಡ್ಡೆಗಳನ್ನು ತಮ್ಮ ಗರಟೆಗಳಲ್ಲಿ ತುಂಬಿಕೊಳ್ಳುತ್ತಾರೆ.ಕೆಲವು ಗಡ್ಡೆಗಳನ್ನು ಹಸಿರಾಗಿ ಅಲ್ಲಿಯೇ ತಿನ್ನುತ್ತಾರೆ.
ಮನೆಯ ಚಿಕ್ಕ ದೊಡ್ಡ ಮಕ್ಕಳೆಲ್ಲ ಒಟ್ಟಾಗಿ ಗಡ್ಡೆಯನ್ನು ಆಯಲು ಹೋದಾಗ ತಾವು ತಿಂದು ಹೆಚ್ಚಾದುದನ್ನು ತಾಯಿಯ ಮಡಲಿಗೆ ಸುರಿಯುತ್ತಾರೆ. ಇವು ಅವಳ ಚಿಕ್ಕ ಮಡಕೆಯನ್ನು ತುಂಬಿಕೊಳ್ಳುತ್ತವೆ. ಇವಳು ಈ ಗಡ್ಡೆಗಳನ್ನು ತೊಳೆದು ತುಸು ಉಪ್ಪು ಮತ್ತು ನೀರು ಸೇರಿಸಿ ಬೇಯಿಸುತ್ತಾಳೆ. ಬೆಂದ ಗಡ್ಡೆಗಳು ಸಿಹಿಗೆಣಸಿನ ರುಚಿಯನ್ನು ಹೊಂದಿದ್ದು ಇವು ಮನೆಮಂದಿಗೆಲ್ಲ ಆ ದಿನದ ವಿಶೇಷ ಖಾದ್ಯವಾಗುತ್ತವೆ. ಹಸಿಗಡ್ಡೆಗಳನ್ನು ಹಂಚಿನ ಮೇಲೆ ಹುರಿದಾಗ ಅದರ ರುಚಿ ಇನ್ನೊಂದು ತೆರನಾಗಿರುತ್ತವೆ.
ಹುರುಡೆಯ ಬರಗಾಲದ ಸಮಯದಲ್ಲಿ ಬಡವರ ಕೈಗೆಟಕುವ ಆಹಾರವೆಂದು ಪ್ರಖ್ಯಾತಿಯಿದೆ. ಮೇ ತಿಂಗಳ ಹೊತ್ತಿಗೆ ಬಡವರ ಮನೆಯಲ್ಲಿ ಕಾಳುಕಡ್ಡಿಯ ಬರಗಾಲವಿರುತ್ತದೆ. ಆದ್ದರಿಂದ ಬಡವರು; ಬುಡಕಟ್ಟು ಜನರು ಕುಟುಂಬ ಸಮೇತ ಹುರುಡೆ ಆಯಲು ಹೋಗುತ್ತಾರೆ. ಹೂಟಿ ಮಾಡಿರುವದರಿಂದ ಗದ್ದೆಯ ಮೇಲ್ಮಣ್ಣು ಒಣಗಿರುತ್ತದೆ. ಹಲವಾರು ವರ್ಷಗಳಿಂದ ಈ ಗಡ್ಡೆಗಳನ್ನು ಆರಿಸಿ ಅನುಭವವಿರುವ ಈ ಬುಡಕಟ್ಟು ಕುಟುಂಬಗಳು ಮುಂಜಾನೆಯ ಗಡ್ಡೆಗಳಿಗಾಗಿ ಹೊರಡುತ್ತವೆ. ಹುರುಡೆಯ ಹುಲ್ಲು ಸುಳಿವು ಸಿಗದಂತೆ ಒಣಗಿ ಮಣ್ಣಾಗಿ ಹೋಗಿರುತ್ತವೆಯಾದರೂ ಗಡ್ಡೆಗಳನ್ನು ಹುಡುಕುವ ಕಲೆ ಇವರಿಗೆ ಗೊತ್ತಿರುತ್ತದೆ. ಈ ಹಿಂದೆ ಒಂದೊಂದು ಬಡ ಕುಟುಂಬವು ಮೂರು ನಾಲ್ಕು ಕೆ.ಜಿ.ಯಷ್ಟು ಹುರುಡೆಯನ್ನು ಆರಿಸಿ ಒಯ್ಯುಯುತ್ತಿತ್ತೆಂದು ಸ್ಥಳೀಯ ಜನ ತಿಳಿಸುತ್ತಾರೆ. ಹುರುಡೆಯು ಹೆಚ್ಚು ಪ್ರಮಾಣದಲ್ಲಿ ದೊರೆತಾಗ ಅವರು ಈ ಹಸಿ ಹುರುಡೆಯನ್ನು ತೊಳೆದು ಸುಮಾರು ನಾಲ್ಕುತಾಸು ನೆನೆಸಿದ ತುಸು ಅಕ್ಕಿಯೊದಿಗೆ ಅರೆದು (ರುಬ್ಬಿ) ಹಿಟ್ಟನ್ನು ತಯಾರಿಸಿ ದೋಸೆ ಎರೆದು ಉಣ್ಣುತ್ತಾರೆ. ಇದು ಬಡ ಬುಡಕಟ್ಟು ಜನರಿಗೆ ಮೃಷ್ಟಾನ್ನ ಭೋಜನ.
ಗದ್ದೆಗಳಲ್ಲಿ ಹುರುಡೆಗಳ ಸಂಖ್ಯೆ ಅಪಾರ. ಆದರೆ ಇವುಗಳ ಗಾತ್ರ ಕಿರಿದು ಶ್ರಮಕ್ಕೆ ತಕ್ಕ ಉತ್ಪನ್ನವಲ್ಲ. ಆದರೂ ಹುರುಡೆಯನ್ನು ಅಗೆದು ತಿನ್ನುವಲ್ಲಿ ದೋಸೆ ಮಾಡಿ ಮೆಲ್ಲುವಲ್ಲಿ ಇವರಿಗೆ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲಾದೀತೆ?
ಈ ಸಸ್ಯದ ಕುರಿತು ಬರಹದಲ್ಲಿ ದೊರೆಯುತ್ತಿರುವ ದಾಖಲೆಗಳು ಅತ್ಯಲ್ಪವಾಗಿವೆ. ನಾಡಕರ್ಣಿಯವರ
ದಲ್ಲಿ ಇದನ್ನು ಸೈಪ್ರಸ್ ಬಲ್ಬೋಸಸ್ ಎಂದು ಹೆಸರಿಸಲಾಗಿದೆ ( 424)ಅವರ ಮಾತನ್ನು ಇಲ್ಲಿ ಈ ಕೆಳಗಿನಂತೆ ಇರಿಸಲಾಗಿದೆ.
ಇತ್ತೀಚೆಗೆ ಈ ಕಾಡು ಆಹಾರವನ್ನು ಸಂಗ್ರಹಿಸಿ ತಿನ್ನುವವರು ಕಂಡುಬರುತ್ತಿಲ್ಲ. ಗದ್ದೆಯಲ್ಲಿ ಹುರುಡೆಯನ್ನು ನಾಶಪಡಿಸಲು ಪ್ರಯತ್ನಗಳು ನಡೆಯುವ ಕಾರಣ ಈ ಕಳೆಗೆ ಕುತ್ತು ಬಂದಿದೆ. ಇವುಗಳ ಬಗೆಗಿನ ಜನಜ್ಞಾನ ದೂರವಾಗುತ್ತಿದೆ. 11 ಇವು ಬೆಳೆಯದ ಹುರುಡೆ ಗಡ್ಡೆಗಳು ಎಳೆಯತನವನ್ನು ಸೂಚಿಸುವ ಸಿಪ್ಪೆಯ ಬಿಳಿ ಬಣ್ಣವನ್ನು ಗಮನಿಸಬಹುದು. ಕೊನ್ನಾರಿ ಗಡ್ಡೆಗಳ ಮೇಲಿರುವಂತೆ ಇವುಗಳ ಮೇಲೆಯೂ ಒರಟಾದ ಬೇರುಗಳನ್ನು ಕಾಣಬಹುದು. ಎಳೆಯ ಗಡ್ಡೆಗಳು ಏಳೆಯ ಸೇಂಗಾ ಕಾಳಿನ ರುಚಿಯನ್ನು ಹೊಂದಿರುತ್ತವೆ.
ಇದು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಮೂರು ಮಾರ್ಗಗಳನ್ನು ಕಂಡುಕೊಂಡಿದೆ. ಮೊದಲನೆಯದು ಗಡ್ಡೆಗಳ ಮೂಲಕ ಮೊಳಕೆಯನ್ನು ಪಡೆದು ಸಸಿಯಾಗುತ್ತದೆ. ಎರಡನೆಯದಾಗಿ
ಈ ಸಸಿಗಳು ಬಾಳೆ ಮತ್ತು ಕಬ್ಬುಗಳಂತೆ ಮರಿ (ಹಿಳ್ಳೆ)ಗಳನ್ನು ಬಿಡುತ್ತದೆ.
ಮೂರನೆಯದಾಗಿ ಬೀಜಗಳು ಮರಳಿನಲ್ಲಿ ಸೇರಿ ಅಸಂಖ್ಯಾತ ಸಸಿಗಳಾಗುತ್ತವೆ. ನೀರಿನ ಆಸರೆಯಿದ್ದರೆ ಬಹುಕಾಲ ಈ ಗಿಡ ಬದುಕುತ್ತದೆ. ಮಳೆಯ ಆಸರೆಯಲ್ಲಿ, ಬತ್ತದ ಗದ್ದೆಗಳಲ್ಲಿ ದಟ್ಟವಾಗಿ ಬೆಳೆಯುವ ಗಿಡಗಳು ಮಾರ್ಚ ಎಪ್ರಿಲ್ ತಿಂಗಳು ಪೂರ್ಣ bulbs -ಇವು ಎಳೆಯ ಸೇಂಗಾ ಕಾಳಿನ ರುಚಿ ಇದಕ್ಕಿದೆ.
No comments:
Post a Comment