ಗಾಯಕ್ಕೆ ಸಕ್ಕರೆ ರಾಮಬಾಣ
ಲಂಡನ್ (ಐ ಎ ಎನ್ ಎಸ್) ಸಿಹಿಗೆ ಅನ್ವರ್ಥವಾಗಿರುವ ಸಕ್ಕರೆ, ಗಾಯವನ್ನು ರೋಗ ನಿರೋಧಕ ಔಷಧಗಳಿಗಿಂತಲೂ ಬೇಗನೆ ವಾಸಿ ಮಾಡಬಲ್ಲದು ಎಂದರೆ ನೀವು ನಂಬುವಿರಾ?
ಹೌದು, ನಂಬಲೇ ಬೇಕು. ಗಾಯ ವಾಸಿ ಮಾಡುವ ವಿಶೇಷ ಗುಣ ಸಕ್ಕರೆಯ ಕಣಗಳಿಗಿವೆ ಎಂಬ ಅಂಶವನ್ನು ನೂತನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಆಫ್ರಿಕಾದ ಜನಪದ ಚಿಕಿತ್ಸೆ ಎಂದೇ ವಿವರಿಸಲಾಗಿರುವ ಈ ಸಕ್ಕರೆ ಚಿಕಿತ್ಸೆಯನ್ನು ವೊಲ್ಟರ್ ಹ್ಯಾಂಪನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಮೊಸಸ್ ಮುರಾಂಡು ಸಂಶೋಧನೆ ಮಾಡಿದ್ದಾರೆ. ಮುರಾಂಡು ಮೂಲತ ಜಿಂಬಾಬ್ವೆಯವರು. ಚಿಕ್ಕಂದಿನಲ್ಲಿ ಮುರಾಂಡು ಗಾಯ ಮಾಡಿಕೊಂಡಾಗ ಅವರ ತಂದೆ ಆ ಜಾಗಕ್ಕೆ ಸಕ್ಕರೆ ಹಚ್ಚಿ ವಾಸಿ ಮಾಡುತ್ತಿದ್ದರಂತೆ.
ಮುಂದೆ ಬ್ರಿಟನ್‌ಗೆ ತೆರಳಿದ್ದ ಮುರಾಂಡು ಈ ಕುರಿತು ಸಂಶೋಧನೆಯಲ್ಲಿ ತೊಡಗುವ ಮೂಲಕ ಸಕ್ಕರೆಯಲ್ಲಿ ಗಾಯ ಗುಣಪಡಿಸುವ ಚಿಕಿತ್ಸಾ ಗುಣವಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ತಮ್ಮ ಸಂಶೋಧನೆಯ ಪ್ರಯೋಗದ ಭಾಗವಾಗಿ ಮುರಾಂಡು, ಆಸ್ಪತ್ರೆಯೊಂದರ ೩೫ ರೋಗಿಗಳಲ್ಲಿ ೧೬ ಮಂದಿಗೆ ತಮ್ಮ `ಸಕ್ಕರೆ ಚಿಕಿತ್ಸೆ' ನೀಡಿ ರೋಗ ನಿರೋಧಕ ಔಷಧಿ ಬಳಸಿದ ಉಳಿದ ರೋಗಿಗಳೊಂದಿಗೆ ಹೋಲಿಸಿದಾಗ, `ಸಕ್ಕರೆ ಚಿಕಿತ್ಸೆ' ಪಡೆದ ರೋಗಿಗಳೇ ಶೀಘ್ರ ಗುಣಮುಖರಾಗಿರುವುದು ಕಂಡುಬಂದಿದೆ.
ಇದೀಗ `ಸಕ್ಕರೆ ಚಿಕಿತ್ಸೆ' ಪಡೆಯಲು ಇತ್ತೀಚೆಗೆ ಮುರಾಂಡು ಅವರನ್ನು ಭೇಟಿ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
(ಪ್ರಜಾವಾಣಿ ದೈನಿಕದಿಂದ)
ಪ್ರಿಯ ಓದುಗರೆ, ನಿಮ್ಮ ಅಜ್ಜಿಯು ಈ ಸಕ್ಕರೆ ಮದ್ದನ್ನು ನಿಮಗಾಗಿ ಬಳಸುತ್ತಿದ್ದರಲ್ಲವೆ? ಆ ದಿನಗಳ ನೆನಪು ನಿಮಗಿದ್ದರೆ ಈ ಬಗ್ಗೆ ಇಲ್ಲಿ ಬರೆಯಿರಿ.
No comments:
Post a Comment